ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:44 PM

ಇದು ಕಲೆಯ ತವರು...

Posted by ekanasu

ಭಾಗ - 1
ಆತಿಥ್ಯಕ್ಕೆ ಹೆಸರಾದ ಮಲೆನಾಡು ಜನಪದ ಕಲೆಗಳ ತವರೂ ಹೌದು.ಮಲೆನಾಡಿನ ಯಾವುದೇ ಮನೆಗೆ ಭೇಟಿ ನೀಡಿ ಅಲ್ಲೊಂದು ಕಲೆಯ ಪರಿಚಯ ನಿಮಗಾಗದೇ ಇರುವುದಿಲ್ಲ.


ರಂಗೋಲಿಯೋ,ಹತ್ತಿಯ ವಿವಿಧ ಹಾರಗಳೋ,ಹಸೆ ಚಿತ್ರವೋ ಯಾವುದೂ ಅಲ್ಲದಿದ್ದರೆ ಗೋಡೆಗೆ ತೂಗು ಹಾಕಿದ ಭತ್ತದ ತೆನೆಯ ನೇಯ್ಗೆ ನಿಮ್ಮ ಕಣ್ಣಿಗೆ ಕಾಣಿಸದೇ ಇರುವುದಿಲ್ಲ.ಹೌದು....ಮಲೆನಾಡಿನ ಜನಕ್ಕೆ ಮನೆ ಶೃಂಗರಿಸುವುದು ಅವರ ಜೀವನದ ಒಂದು ಭಾಗ.ಏನೂ ಅಲ್ಲದಿದ್ದರೂ ಮನೇ ಮುಂದಿನ ಪುಟ್ಟ ಜಾಗದಲ್ಲೇ ಹೂದೋಟ ಮಾಡುವ ಶೃಂಗಾರ ಪ್ರಿಯರು.

ಯುಗಾದಿಯನ್ನು ಮುಂದಿಟ್ಟುಕೊಂಡು ಟೀಂ ಈ ಕನಸು ಮಲೆನಾಡ ತವರು ಸಾಗರಕ್ಕೆ ಭೇಟಿಯಿತ್ತಾಗ ನಮ್ಮ ಚಿತ್ತ ಸೆಳೆದಿದ್ದು "ಚಿತ್ರ ಸಿರಿ"ಯತ್ತ.ಭತ್ತದ ತೆನೆಗಳ ಸಹಜ ಸೌಂದರ್ಯಕ್ಕೆ ಮೆರುಗು ಕೊಟ್ಟು ಅದನ್ನು ಜಗತ್ತಿನಾದ್ಯಂತ ಜನಗಳಿಗೆ ತಲುಪಿಸುವ ಕಾರ್ಯ ಹೊತ್ತ ಸಾಗರ ತಾಲ್ಲೂಕಿನ ಶಿರವಂತೆಯ ಚಂದ್ರಶೇಖರ್ ಅವರ ಮನೆ.

ಮನೆ ಒಳ ಹೊಕ್ಕೊಡನೇ ವಿವಿಧ ರೀತಿಯ ಭತ್ತದ ತೆನೆಯಿಂದ ಮಾಡಿದ ಕಲಾಕೃತಿಗಳು,ಹಸೆ ಚಿತ್ತಾರಗಳೂ ಕಣ್ಮನ ಸೆಳೆಯುತ್ತವೆ.ಚಂದ್ರಶೇಖರ್ ಅವರ ಅಭಿಪ್ರಾಯದಲ್ಲಿ ಈ ಎಲ್ಲಾ ಕಲೆಗಳು ಮಲೆನಾಡಿನ ಹೆಣ್ಣು ಮಕ್ಕಳ ಬಿಡುವಿನ ವೇಳೆಯಲ್ಲಿ ಅವಿರ್ಭವಿಸಿದ್ದು.ಅಲಂಕಾರಕ್ಕೆ ಮನೆಯಲ್ಲಿರುವ ವಸ್ತುಗಳನ್ನೇ ಉಪಯೋಗಿಸಿಕೊಂಡು ಈ ರೀತಿಯ ಕಲಾಕೃತಿಗಳನ್ನು ಮಾಡುವುದು ಅಂದಿನ ಹೆಣ್ಣು ಮಕ್ಕಳ ದೈನಂದಿನ ಚಟುವಟಿಕೆಯಲ್ಲೊಂದಾಗಿತ್ತು.


ಮದುವೆ,ಹಬ್ಬದ ಸಂಧರ್ಭದಲ್ಲಿ ಹೊಸ ಭತ್ತದ ತೆನೆಯನ್ನು ಪೂಜಿಸಿ ಮನೆಗೆ ತಂದು ಪ್ರಸಾದವನ್ನು ಬಾವಿ,ವಾಸ್ತು ಬಾಗಿಲು,ಕಡೆಗೋಲು,ಮುಂತಾದ ಕಡೆಗಳಲ್ಲಿ ಕಟ್ಟುವುದು ಒಂದು ಪದ್ಧತಿ.ಉಳಿದಿರುವ ತೆನೆಯನ್ನು ಹಿಂದೆ ಮನೆಯ ಅಲಂಕಾರಕ್ಕೆ ಉಪಯೋಗಿಸುತ್ತಿದ್ದರು.ಅರಳಿ ಎಲೆ,ಗುಬ್ಬಿಗೂಡು ಮುಂತಾದವು ಸಾಮಾನ್ಯವಾಗಿ ಕಂಡು ಬರುತ್ತಿದ್ದ ತೆನೆಯ ಆಕೃತಿಗಳು.


ಆದರೆ ಇತ್ತೀಚಿನ ದಿನಗಳಲ್ಲಿ ಈ ರೀತಿಯ ಒಂದು ಅದ್ಭುತ ಕಲೆ ಮರೆಯಾಗುತ್ತಿರುವುದಂತೂ ಸತ್ಯ.ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಚಂದ್ರಶೇಖರ್ ಅವರು ಬಹಳಷ್ಟು ಕೆಲಸವನ್ನು ಮಾಡುತ್ತಿದ್ದು ಸ್ವತಃ ತಾವೇ ನೇಯ್ಗೆಯಲ್ಲಿ ನಿರತರಾಗಿದ್ದಾರೆ.ನೇಯ್ಗೆಗೆ ಅವರು ಸಾವಯವ ತಳಿಯನ್ನೇ ಆದ್ಯತೆ ನೀಡುತ್ತಿರುವುದು ಸಹಾ ಶ್ಲಾಘನೀಯ ವಿಷಯ.ಇದಕ್ಕೆ ಸಾಮಾನ್ಯವಾಗಿ ಬಂಗಾರ ಕಡ್ಡಿ,ಪದ್ಮರೇಖ,ರತ್ನ ಚೂಡ,ಗಂಧ ಸಾಲೆ,ಪರಿಮಳ ಸಣ್ಣಕ್ಕಿ ಭತ್ತದ ತಳಿಗಳು ಶೇಷ್ಠವಾದವುಗಳು.ಎಂಟು ವಿಧದ ಭತ್ತದ ತೋರಣವನ್ನು ನೇಯುವ ನೈಪುಣ್ಯತೆ ಚಂದ್ರಶೇಖರ್ ಅವರದು.ಈ ಕಲೆಯನ್ನು ಉಳಿಸಿ ಬೆಳೆಸುವ ಸಲುವಾಗಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ.ಈಗಾಗಲೇ ಸುಮಾರು 25ರಷ್ಟು ಮಂದಿಗೆ ಈ ಕಲೆಯನ್ನು ಕಲಿಸಿದ್ದಾರೆ. ಅವರೆಲ್ಲಾ ಕಲೆಯನ್ನು ಉದ್ಯಮವನ್ನಾಗಿ ರೂಪಿಸಿದ್ದಾರಂತೆ.

ಚಂದ್ರಶೇಖರ್ ಅವರ ಸಾಧನೆ ಇಷ್ಟಕ್ಕೇ ಮುಗಿದಿಲ್ಲ...ಕಲೆಯ ಕುರಿತಾದ ಹತ್ತು ಹಲವು ವಿಚಾರಗಳು ಇನ್ನೂ ಇವೆ. ಅವೆಲ್ಲಾ ಮುಂದಿನ ಲೇಖನಗಳಲ್ಲಿ ಮೂಡಿಬರಲಿವೆ...ಅಲ್ಲಿಯ ತನಕ ಕೊಂಚ ಬಿಡುವು...

- ಸೌಮ್ಯ ಆದೂರು.
ಟೀಂ ಈ ಕನಸು ಜೊತೆ.

0 comments:

Post a Comment