ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಸಸ್ಯ ವೈವಿಧ್ಯದ ತಾಣವಾಗಿರುವ ನಿತ್ಯ ಹರಿದ್ವರ್ಣದ ದಟ್ಟ ಕಾನನದಿಂದಾವೃತವಾದ ಹೊಸಗುಂದದ ದಟ್ಟಡವಿಯೊಳು ಮಣ್ಣೊಳಗೆ ಹೂತು ಹೋಗಿರುವ ಶಾಸನಗಳ ಅಧ್ಯಯನದಲ್ಲಿ ಲಭ್ಯವಾದ ಅಂಶ ಅಚ್ಚರಿ ಮೂಡಿಸುತ್ತದೆ.


ಹೊಂಬುಚದ ಶ್ರೀ ಬಿಲ್ಲವೇಶ್ವರ ದಪದ್ಮಾರಾಧಕರಾಗಿದ್ದಂತಹ ವಂಶಸ್ಥರು ಹೊಸಗುಂದಕ್ಕೆ ಬಂದು ಹೊಸಗುಂದದ ಅರಸರೆಂದು ಗುರುತಿಸಿಕೊಂಡು ಇಲ್ಲಿಂದ ಸುಮಾರು 300ವರುಷ ಆಡಳಿತ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹೊಸಗುಂದದಲ್ಲಿ ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ ನ ಕೋರಿಕೆಯಂತೆ ಮಲ್ನಾಡ್ ರಿಸರ್ಚ್ ಅಕಾಡೆಮಿ ನಡೆಸಿದ ಸರ್ವೇಕ್ಷಣಾ ಕಾರ್ಯದಲ್ಲಿ ಗಂಗರ ಕಾಲದ ಕುರುಹುಗಳು ಮತ್ತು ನೂತನ ಶಿಲಾಯುಗದ ಭೂ ಅಗೆತ ಸಾಧನಗಳೂ ಪತ್ತೆಯಾಗಿವೆ.

ಈ ಅಂಶಗಳನ್ನು ವಿಶ್ಲೇಶಿಸುತ್ತಾ ಸಾಗಿದಂತೆ ಇಲ್ಲಿನ ಐತಿಹ್ಯ, ಪ್ರಾಚೀನತೆ ನವ ಶಿಲಾಯುಗಕ್ಕಿಂತಲೂ ಹಳತು ಎಂಬ ಅಂಶ ಸ್ಪಷ್ಟವಾಗುತ್ತದೆ.
ಇಲ್ಲಿ ಪತ್ತೆಯಾದ ವೀರಗಲ್ಲು ಶಾಸನವೊಂದರ ಪ್ರಕಾರ ಕ್ರಿ.ಶ.1110ರಲ್ಲಿ ಹೊಸಗುಂದ ಅರಸರು ಇಲ್ಲಿ ಆಳ್ವಿಕೆ ಮಾಡಿರುವ ಬಗ್ಗೆ ಉಲ್ಲೇಖಿಸಲ್ಪಟ್ಟಿದೆ.


ಭುಜಬಲ ಅರಸ ಹೊಸಗುಂದದ ಮೊದಲ ಶಾಸನೋಕ್ತ ಅರಸು ಎಂದು ಶಾಸನ ಹೇಳುತ್ತದೆ. ಇಲ್ಲಿ ಲಭ್ಯವಾದ ಇತರ ಶಾಸನ ಲೇಖಗಳ ಪ್ರಕಾರ ಹೊಸಗುಂದವನ್ನು ಆಳಿದ ಅರಸು ಪರಂಪರೆಗಳೆಂದರೆ ಮೊದಲನೆ ಬೊಮ್ಮರಸ (ಹೊಸಗುಂದ) ಕ್ರಿ.ಶ.1152, ಲಚ್ಚಿಯಬ್ಬರಸಿ - ಕಾಳರಸ - ಬಾಳೆಯಮ್ಮ - ಕಳೆಯಬ್ಬರಸಿ - ಬಿಯಬ್ಬರಸ / ಹೆಡವಳಗೊಂಗಣ್ಣ - ಕಲಸಿಯ ಬಾಳೆಯಮ್ಮನ ವೆಗ್ಗಡೆ, ಬೀರರಸ (ಬಿಲ್ಲವೆಗ್ಗಡೆ/ಹೊಸಗುಂದ) ಕ್ರಿ.ಶ. 1164ರಿಂದ 1194 ಎರಡನೆಯ ಕುಮಾರ ಬೊಮ್ಮರಸ(ಹೊಸಗುಂದ ಬಿಲ್ಲವೆಗ್ಗಡೆಯ ಮಗ ), ಕ್ರಿ.ಶ. 1194 - 1210-1220, ಅಳಿಯ ಬೀರರಸ /ಹೊನ್ನಲದೇವಿ. ಕ್ರಿಶ.1220 - 1229, ಬಲದೇವ 1229-1257, ಹೊನ್ನಲ ದೇವಿ, ಮೂರನೇಬೊಮ್ಮರಸ(ಅಳಿಯ ಬೀರರಸ ಮಗ) ಕ್ರಿ.ಶ.1257 - 1278, ಬೀರರಸ ಕ್ರಿ.ಶ.1278 - 1283, ತಮ್ಮರಸ ಕ್ರಿ.ಶ.1283 - 1288,ಸೊಡ್ಡಲದೇವ ಕ್ರಿ.ಶ.1288 - 1302, ಕೋಟಿ ನಾಯಕ ಕ್ರಿ.ಶ.1290-1300-1320,ಸೋಮೇನಾಯಕ ಕ್ರಿ.ಶ.1290 - 1320.

ಈ ಎಲ್ಲಾ ಲಭ್ಯ ಶಾಸನಗಳ ಅಧ್ಯಯನದ ಪ್ರಕಾರ ಇಲ್ಲಿ ಹೊಸಗುಂದ ಅರಸರ ಕಾಲ ಕ್ರಿ.ಶ.1320ರ ತನಕ ಇತ್ತೆಂದು ಖಚಿತವಾಗಿ ಹೇಳಬಹುದಾಗಿದೆ.

ಸಂಪೂರ್ಣ ಶಿಲಾಮಯವಾದ ಅತ್ಯಂತ ವಾಸ್ತು ವೈವಿಧ್ಯಗಳನ್ನೊಳಗೊಂಡ ಸೂಕ್ಷ್ಮ ಅಪರೂಪದ ಅಪೂರ್ವ ಕೆತ್ತನೆಗಳಿಂದ ಕೂಡಿದ ಹೊಸಗುಂದ ಅರಸರ ಕಾಲದಲ್ಲಿ ನಿರ್ಮಾಣಗೊಂಡ ಶ್ರೀ ಉಮಾ ಮಹೇಶ್ವರ ದೇವಾಲಯ ಅತ್ಯಂತ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಇದಲ್ಲದೆ ಶ್ರೀ ಕಂಚಿಕಾಳಮ್ಮ, ಶ್ರೀ ಪ್ರಸನ್ನ ನಾರಾಯಣ ಮತ್ತು ಶ್ರೀ ಲಕ್ಷ್ಮೀ ಗಣಪತಿ ದೇವಾಲಯಗಳು, ಶ್ರೀ ಉಮಾಮಹೇಶ್ವರ ದೇವರ ಪರಿವಾರ ದೇವರುಗಳಾದ ಶ್ರೀ ಮಹಿಷಮರ್ದಿನಿ, ಶ್ರೀ ವೀರಭದ್ರ ದೇವಾಲಯದ ಕುರುಹುಗಳು, ಮೂರ್ತಿಗಳು ಇಲ್ಲಿ ಪತ್ತೆಯಾಗಿವೆ.

ನಾಳೆ : ಖಜುರಾಹೋ...!
ಮುಂದುವರಿಯುವುದು...

ಚಿತ್ರ - ವರದಿ : ಹರೀಶ್ ಕೆ.ಆದೂರು.

1 comments:

Anonymous said...

Ashok Shettar -ಹೊಸಗುಂದದ ಅರಸು ಮನೆತನ ಹಾಗೂ ಈ ಚಿತ್ರದಲ್ಲಿರುವ ಹೊಸಗುಂದದ ಈಶ್ವರ ದೇವಾಲಯದ ಕುರಿತ ಆಸಕ್ತಿ ಇರುವವರು ನೋಡಿ. "ಹೊಸಗುಂದದ ಅರಸರು" -ರಾಜಾರಾಮ ಹೆಗಡೆ. ರಾಜಾರಾಮ ಹೆಗಡೆ ಮತ್ತು ಅಶೋಕ ಶೆಟ್ಟರ್(ಸಂ) ಮಲೆಕರ್ನಾಟಕದ ಅರಸು ಮನೆತನಗಳು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, (ಹಂಪಿ,೨೦೦೧)

Post a Comment