ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಹೊಸಂಗಡಿ ಗ್ರಾಮಪಂಚಾಯತ್ ಗೆ ಜ್ಞಾನೋದಯ!
ಬಿಸಿಯಾಗದೆ ಬೆಣ್ಣೆ ಕರಗದು...ಹೀಗಾಯಿತು ರಾಜ್ಯಪ್ರಶಸ್ತಿ ಪುರಸ್ಕೃತ ಪಂಚಾಯತ್ ನ ಕಥೆ!

ವಿಶೇಷ ವರದಿ

ವೇಣೂರು: ಬಿಸಿಯಾಗದೆ ಬೆಣ್ಣೆ ಕರಗದು ಎಂಬ ಗಾದೆ ಮಾತೊಂದಿದೆ. ಇದು ಅಕ್ಷರಶಃ ಹೊಸಂಗಡಿ ಗ್ರಾಮ ಪಂಚಾಯತ್ ಗೆ ಹಾಗೂ ಅದರ ಅಧ್ಯಕ್ಷರು, ಅಭಿವೃದ್ಧಿ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಅನ್ವಯವಾಗುತ್ತದೆ. ಕಳೆದ ಎರಡು ತಿಂಗಳ ಹಿಂದೆ ಈ ಕನಸು.ಕಾಂ ಹೊಸಂಗಡಿ ಗ್ರಾಮದಲ್ಲಾಗುತ್ತಿರುವ ಮಂಗಗಳ ಹಾವಳಿ, ಇದರಿಂದುಟಾಗುತ್ತಿರುವ ನಷ್ಟ...ಕೃಷಿಕರ ಗೋಳು ಇವೆಲ್ಲವನ್ನು ಅಧ್ಯಯನ ನಡೆಸಿ ಸಮಗ್ರ ವರದಿ ಸಹಿತ ಮನವಿಯನ್ನು ಪಂಚಾಯತ್ ಗೆ ಸಲ್ಲಿಸಿತ್ತು. ರಿಜಿಸ್ಟರ್ಡ ಪೋಸ್ಟ್ ಮೂಲಕ ಈ ಮನವಿ ನೀಡಲಾಗಿತ್ತು. ಆದರೆ ಇದರ ಸ್ವೀಕೃತಿ ಕುರಿತು ಯಾವೊಂದು ಮಾಹಿತಿಯನ್ನೂ ಹೊಸಂಗಡಿ ಗ್ರಾಮ ಪಂಚಾಯತ್ ನೀಡಿರಲಿಲ್ಲ.ಅಷ್ಟೇ ಏಕೆ ಮನವಿ ವಿಚಾರವಾಗಿ ಯಾವುದೇ ಮರು ಉತ್ತರವನ್ನೂ ಪಂಚಾಯತ್ ಕೊಟ್ಟಿರಲಿಲ್ಲ...

ಬಿಸಿ ಮುಟ್ಟಿಸಿದ ಮರು ಮನವಿ
ಪಂಚಾಯತ್ ನ ಉದಾಸೀನ ಧೋರಣೆಯನ್ನು ಖಂಡಿಸಿ ಮೇ.6 ಶನಿವಾರ ಮರು ಮನವಿಯನ್ನು ರಿಜಿಸ್ಟರ್ಡ್ ಅಂಚೆ ಮೂಲಕ ರವಾನಿಸಿತ್ತು. ವಾರದೊಳಗೆ ಲಿಖಿತ ಉತ್ತರ ನೀಡದಿದ್ದಲ್ಲಿ ಕಾನೂನು ರೀತ್ಯಾ ಹೋರಾಟ ನಡೆಸುತ್ತೇವೆ ಎಂಬುದನ್ನು ಮನವಿಯಲ್ಲಿ ಸ್ಪಷ್ಟ ಪಡಿಸಲಾಗಿತ್ತು.ಶನಿವಾರ ಅಂಚೆಮೂಲಕ ಕಳುಹಿಸಿದ ವರದಿ ಸೋಮವಾರ ಪಂಚಾಯತ್ ಕಚೇರಿ ತಲುಪಿರಬೇಕು.ಸೋಮವಾರ ರಾತ್ರಿ ಈ ಕುರಿತು ಸಮಗ್ರ ವರದಿಯನ್ನು "ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸದ ಹೊಸಂಗಡಿ ಗ್ರಾಮಪಂಚಾಯತ್"ಶೀರ್ಷಿಕೆಯಲ್ಲಿ ಈ ಕನಸು.ಕಾಂ ಪ್ರಕಟಿಸಿತ್ತು. ಅದರಲ್ಲಿ ಅಧ್ಯಕ್ಷರಿಗೆ ಹಾಗೂ ಅಭಿವೃದ್ಧಿ ಅಧಿಕಾರಿಗಳಿಗೆ ಈ ಕನಸು.ಕಾಂ ಕಳುಹಿಸಿದ ಮರುಮನವಿಯನ್ನೂ ಪ್ರಕಟಿಸಲಾಗಿತ್ತು. ಇದಾಗಿ ದಿನವೊಂದು ಉರುಳುವ ಮೊದಲೇ ಪಂಚಾಯತ್ ಅಧಿಕಾರಿಗಳು ಚುರುಕಾಗಿದ್ದಾರೆ.! ಎರಡು ತಿಂಗಳ ಕಾಲ ಮೌನವಾಗಿದ್ದ ಅಧಿಕಾರಿಗಳು / ಅಧ್ಯಕ್ಷರು ಎದ್ದೋ ಬಿದ್ದೋ ಎಂಬಂತೆ ಗಾಭರಿಗೊಂಡು ಮನವಿಗೆ ಸ್ಪಂದಿಸಿದ್ದಾರೆ. ಅಷ್ಟೇ ಏಕೆ... ಪಂಚಾಯತ್ ಜವಾನನ ಮೂಲಕ ಈ ಕನಸು.ಕಾಂ ಕಚೇರಿಗೆ ಮನವಿಗೆ ಸ್ಪಂದಿಸಿದ ಲಿಖಿತ ಉತ್ತರವನ್ನು ಕೊಟ್ಟುಕೊಳುಹಿಸಿದ್ದಾರೆ! ಹೇಗಿದೆ ನೋಡಿ ಪಂಚಾಯತ್ ಧೋರಣೆ...!

1.ಕಳೆದ ಎರಡು ತಿಂಗಳುಗಳಿಂದ ಮನವಿಗೆಯನ್ನು ಮೂಲೆಗುಂಪು ಮಾಡಿದ್ದ ಹೊಸಂಗಡಿ ಗ್ರಾಮಪಂಚಾಯತ್ ಅಧ್ಯಕ್ಷರು/ ಸಿಬ್ಬಂಧಿಗಳು "ಕಾನೂನು ರೀತ್ಯಾ ಹೋರಾಟ"ಎಂದಾಕ್ಷಣ ಎಚ್ಚೆತ್ತುಕೊಂಡರೇ...?
2.ಈ ಮೊದಲೇ ಮನವಿಗೆ ಸ್ಪಂದಿಸಿದ್ದರೆ ಮಾಧ್ಯಮದ ಮುಂದೆ ಮಾನ ಕಳೆದುಕೊಳ್ಳಬೇಕಾಗುತ್ತಿತ್ತೇ...?
3.ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರ ಒಳಿತಾಗಿ ನೀಡಿದ ಮನವಿಗೆ ಹೊಸಂಗಡಿ ಗ್ರಾಮ ಪಂಚಾಯತ್ ಸ್ಪಂದಿಸಲು ಎರಡು ತಿಂಗಳುಗಳು ಹಾಗೂ ಮರುಮನವಿ ನೀಡುವಂತಹ ಸ್ಥಿತಿ ಬಂದೊದಗಿತು.ಇದು ಮಾಧ್ಯಮವೊಂದರ ಸ್ಥಿತಿಯಾದರೆ ಈ ಗ್ರಾಮಸ್ಥರ ಸ್ಥಿತಿ ಹೇಗಿದ್ದೀತು...? ಗ್ರಾಮಸ್ಥರ ನೋವಿಗೆ ಈ ಪಂಚಾಯತ್ ಎಷ್ಟರ ಮಟ್ಟಿಗೆ ಕಾಳಜಿ ವಹಿಸೀತು...?
4. ಈ ಬಗ್ಗೆ "ಮುಂದಿನ ದಿನ" ನಾವುಗಳು ನಿಮ್ಮ ಹೋರಾಟಕ್ಕೆ ಬೆಂಬಲಕ್ಕೆ ನಿಂತು ಹಾಗೂ ಗ್ರಾಮಪಂಚಾಯತ್ ವತಿಯಿಂದ ಕ್ರಮ ಕೈಗೊಳ್ಳುವುದಾಗಿ ಪಂಚಾಯತ್ ಪ್ರತಿಕ್ರಿಯಿಸಿದೆ. ಮುಂದಿನ ದಿನ ಎಂದರೆ ಯಾವಾಗ...?ಅದಕ್ಕೊಂದು ಕಾಲಮಿತಿಯಿಲ್ಲವೇ...? ಮೊಣಕೈಗೆ ತುಪ್ಪ ಸವರುವ ಕಾರ್ಯ ಮಾಡಿ ನುಣುಚಿಕೊಳ್ಳುವ ಬುದ್ದಿ ಪಂಚಾಯತ್ ತೋರಿಸುವುದು ಸರಿಯಲ್ಲ.

ಪಂಚಾಯತ್ ನೀಡಿದ ಪ್ರತಿಕ್ರಿಯೆಯಲ್ಲೇನಿದೆ...?

ಕ್ರಮಾಂಕ ನಂಬ್ರ : 23/2012 - 13, ದಿನಾಂಕ 8/5/2012

ರಿಗೆ,

ಹರೀಶ್ ಕೆ.ಆದೂರು (ಸಂಪಾದಕರು)
ಟೀಂ ಈ ಕನಸು
ಮಂಗಳೂರು.

ಮಾನ್ಯರೇ,

ವಿಷಯ : ಜನಪರ ಹೋರಾಟದ ಕುರಿತು.

ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ತಾವುಗಳು ನಮ್ಮ ಗ್ರಾಮ ಪಂಚಾಯತು ಹೊಸಂಗಡಿ "ಜನಪರ ಹೋರಾಟದ" ಎಂಬ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿರುವುದು ತುಂಬಾ ಸಂತೋಷಕರವಾದ ವಿಷಯ ಹಾಗೂ ನಮ್ಮ ಗ್ರಾಮಪಂಚಾಯತ್ ಉಪಾಧ್ಯಕ್ಷರು ಹಾಗೂ ಸದಸ್ಯರು ಹಾಗೂ ಸಮಸ್ತ ಗ್ರಾಮಸ್ಥರ ವತಿಯಿಂದ ಅಭಿನಂದನೆ ಈ ಮೂಲಕ ಸಲ್ಲಿಸುತ್ತಿದ್ದೇನೆ.

ಜನಪರ ಹೋರಾಟದ ಕಾರ್ಯಕ್ರಮದಡಿ ತಾವುಗಳು ಈಗಾಗಲೇ ಸನ್ಮಾನ್ಯ ಡಿ.ವಿ.ಸದಾನಂದ ಗೌಡ ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ರಾಜ್ಯ ಸರ್ಕಾರ, ನಮ್ಮ ಗ್ರಾಮಪಂಚಾಯತ್ ನ ಮಂಗಗಳ ಅತಿಯಾದ ಕಾಟದಿಂದ ಕೃಷಿಕರು ಯಾವ ರೀತಿ ತೊಂದರೆಗೊಳಗಾಗಿದ್ದಾರೆ ಈ ಬಗ್ಗೆ ಮಾಹಿತಿಯನ್ನು ನೀಡಿರುವಿರಿ. ಈ ಬಗ್ಗೆ ಕಳೆದ ಸಾಮಾನ್ಯ ಚರ್ಚಿಸಿದ್ದು ಈ ಬಗ್ಗೆ ಮುಂದಿನ ದಿನ ನಾವುಗಳು ನಿಮ್ಮ ಹೋರಾಟಕ್ಕೆ ಬೆಂಬಲಕ್ಕೆ ನಿಂತು ಹಾಗೂ ಗ್ರಾಮಪಂಚಾಯತ್ ವತಿಯಿಂದ ಕ್ರಮ ಕೈಗೊಳ್ಳುವುದಾಗಿ ಈ ಮೂಲಕ ತಮ್ಮ ಅವಗಾಹನೆಗೆ ತರುತ್ತೇವೆ.

ಅಧ್ಯಕ್ಷರು
ಗ್ರಾಮಪಂಚಾಯತ್
ಹೊಸಂಗಡಿ , ಬೆಳ್ತಂಗಡಿ.

ಹೊಸಂಗಡಿ ಗ್ರಾಮಪಂಚಾಯತ್ ಅಧ್ಯಕ್ಷರ ಹೆಸರಿನಲ್ಲಿ ಈ ಕನಸು.ಕಾಂ ಕಚೇರಿಗೆ ಬಂದ ಪತ್ರದ ಪ್ರತಿ.ಈ ಕನಸು.ಕಾಂ ಜನಪರ ಧ್ವನಿ ಎತ್ತಿದೆ. ಇದು ಇಲ್ಲಿಗೇ ಕೊನೆಗೊಳ್ಳುವುದಿಲ್ಲ.ಕೇವಲ ಆರಂಭಮಾತ್ರ. ಹೊಸಂಗಡಿ ಗ್ರಾಮ ಪಂಚಾಯತ್ ಇದನ್ನು ಅತ್ಯಂತ ಲಘುವಾಗಿ ಪರಿಗಣಿಸಿದ್ದು ಸರಿಯಲ್ಲ. ಹಾರಿಕೆಯ ಉತ್ತರಗಳಿಗೆ ಈ ಕನಸು.ಕಾಂ ಬಗ್ಗುವುದಿಲ್ಲ.ಜನತೆಯ ಸಮಸ್ಯೆಗೆ ಸೂಕ್ತ ಸ್ಪಂದನೆ ನೀಡುವುದು ಪಂಚಾಯತ್ ನ ಕರ್ತವ್ಯ ಎಂಬುದನ್ನು ಪಂಚಾಯತ್ ಅರಿಯಲೇ ಬೇಕು.

2 comments:

Anonymous said...

Congratulations sir.. for the success going of Janapara Horata...
-Darshan Bm Kmt

Anonymous said...

ಇನ್ನು ಪ್ರಶಸ್ತಿ ಕೊಟ್ಟವರಿಗೆ ಯಾವಾಗ ಜ್ನಾನೋದಯವಾಗುತ್ತೋ ಗೊತ್ತಿಲ್ಲ!.
-Lokesh Bannuru ·

Post a Comment