ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದ್ವಿತೀಯ ದಿನವೂ ಉತ್ತಮ ಪ್ರತಿಕ್ರಿಯೆ...
ಮೂಡಬಿದಿರೆ: ಹೋಬಳಿ ಪ್ರದೇಶ ಮೂಡಬಿದಿರೆಯಲ್ಲಿ ಕಳೆದೆರಡು ದಿನಗಳಿಂದ ಆಳ್ವಾಸ್ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ "ಆಳ್ವಾಸ್ ಪ್ರಗತಿ 2012 ಬೃಹತ್ ಉದ್ಯೋಗಮೇಳದ ದ್ವಿತೀಯ ದಿನವೂ ಉತ್ತಮ ಪ್ರತಿಕ್ರಿಯೆ ಮೂಡಿಬಂದಿದೆ. ಮೂರನೇ ವರುಷದ ಈ ಉದ್ಯೋಗಮೇಳದಲ್ಲಿ ರಾಜ್ಯ ಹೊರರಾಜ್ಯ, ಹೊರರಾಷ್ಟ್ರಗಳಿಂದ ಬೃಹತ್ ಸಂಖ್ಯೆಯ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದು ಅವರವರ ಅರ್ಹತೆಗೆ ತಕ್ಕಂತೆ ಉದ್ಯೋಗಗಳು ಲಭ್ಯವಾಗಿದೆ. ಒಟ್ಟು ಎರಡು ದಿನಗಳ ಕಾಲ ನಡೆದ ಉದ್ಯೋಗಮೇಳದಲ್ಲಿ ರಾಜ್ಯ, ರಾಷ್ಟ್ರ,ಹೊರರಾಷ್ಟ್ರಗಳಿಂದ ಸುಮಾರು 15ಸಾವಿರಕ್ಕೂ ಮೇಲ್ಪಟ್ಟ ಉದ್ಯೋಗಾಕಾಂಕ್ಷಿಗಳು ಭಾಗವಹಿಸಿದ್ದರು.

ಉತ್ತಮ ವ್ಯವಸ್ಥೆ

ಈ ಬಾರಿ ಅತ್ಯಂತ ಪಾರದರ್ಶಕ ರೀತಿಯಲ್ಲಿ ಉದ್ಯೋಗಮೇಳವನ್ನು ಆಯೋಜಿಸಲಾಗಿತ್ತು. ಭಾಗವಹಿಸಿದ ಕಂಪೆನಿಗಳು, ಅವುಗಳಲ್ಲಿ ಲಭ್ಯವಿರುವ ಉದ್ಯೋಗ, ಅರ್ಹತೆಗಳು, ಆಯ್ಕೆ ಪ್ರಕ್ರಿಯೆ ಹೀಗೆ ಪ್ರತಿಯೊಂದು ಹಂತಗಳನ್ನೂ ಬೃಹತ್ ಎಸ್.ಸಿ.ಡಿ ಮೂಲಕ ಉದ್ಯೋಮೇಳ ನಡೆಯುವ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಪ್ರದರ್ಶಿಸಲಾಗುತ್ತಿತ್ತು. ನೋಂದಣಿ, ಉದ್ಯೋಗಪೂರ್ವ ಮಾಹಿತಿ ತರಬೇತಿ, ಸ್ವಯಂ ಸೇವಕರ ನಗುಮುಖದ ಸೇವೆ, ಸಂದರ್ಶನಕ್ಕೆ ಬೇಕಾದಂತಹ ವ್ಯವಸ್ಥೆ, ಅವಕಾಶಗಳು ಹೀಗೆ ಪ್ರತಿಯೊಂದು ವಿಚಾರಗಳ ಬಗೆಗೂ ಮುತುವರ್ಜಿ ವಹಿಸಿ ಕಾರ್ಯನಿರ್ವಹಿಸಲಾಗಿತ್ತು.

ನರ್ಸಿಂಗ್ ಕ್ಷೇತ್ರದಲ್ಲಿ ಬರಪೂರ ಉದ್ಯೋಗ

ನರ್ಸಿಂಗ್ ಕ್ಷೇತ್ರದಲ್ಲಿ ಬೃಹತ್ ಸಂಖ್ಯೆಯ ಉದ್ಯೋಗಾವಕಾಶಗಳು ಉದ್ಯೋಗಾಕಾಂಕ್ಷಿಗಳಿಗಾಗಿ ಲಭ್ಯವಾಗಿತ್ತು. ವಿವಿದೆಡೆಗಳಿಂದ ನರ್ಸಿಂಗ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಆಸಕ್ತ ಉದ್ಯೋಗಕಾಂಕ್ಷಿಗಳು ಆಗಮಿಸಿದ್ದು ಹೆಚ್ಚಿನ ಸಂಖ್ಯೆಯ ಉದ್ಯೋಗ ಇವರುಗಳಿಗೆ ಲಭ್ಯವಾಗಿದೆ.
ಬಿ.ಇ, ಬಿ.ಟೆಕ್, ಎಂಬಿ.ಎ,ಸ್ನಾತಕೋತ್ತರ ಪದವಿ, ಪದವಿ,ಡಿಪ್ಲೋಮಾ, ಪದವಿಪೂರ್ವ,ಐ.ಟಿ.ಐ, ಜೆ.ಒ.ಸಿ ಹೀಗೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಈ ಉದ್ಯೋಗಮೇಳ ಮುಕ್ತ ಅವಕಾಶವನ್ನು ಒದಗಿಸಿಕೊಟ್ಟಿದೆ. ಐ.ಟಿ.ಐ,ಜೆ.ಒ.ಸಿ., ಡಿಪ್ಲೋಮಾ ವಿದ್ಯಾರ್ಹತೆಗಳನ್ನು ಹೊಂದಿದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗಾವಕಾಶಗಳಿದ್ದವು.ಐ.ಟಿ, ರೀಟೈಲ್ ಇಂಡಸ್ಟ್ರಿಗಳು ,ಮಾಧ್ಯಮ ಕ್ಷೇತ್ರ, ವೈದ್ಯಕೀಯ ಆಧಾರಿತ ನರ್ಸಿಂಗ್ ಕ್ಷೇತ್ರ, ಎನ್.ಜಿ.ಒ ಸಂಸ್ಥೆ ,ಬ್ಯಾಂಕಿಂಗ್, ಹಾಸ್ಪಿಟಲ್, ಹಾಸ್ಪಿಟಾಲಿಟಿ, ಬಿ.ಪಿ.ಒ, ಕೆ.ಪಿ.ಒ, ಶೈಕ್ಷಣಿಕ ರಂಗ, ಆಯ್ದ ಪ್ರಮಾಣಿತ ಕನ್ಸಲ್ಟೆನ್ಸಿ ಸಂಸ್ಥೆಗಳು ಈ ಮೇಳದಲ್ಲಿ ಭಾಗವಹಿಸಿದ್ದವು.ಎರಿಯರ್ ಇಂಡಿಯಾ ಪ್ರೈ.ಲಿ, ಐ.ಬಿ.ಎಂ ಇಂಡಿಯಾ ಪ್ರೈ.ಲಿ, ಹನಿವೆಲ್, ಆಸ್ಟ್ರಿಕ್ಸ್ ಟೆಕ್ನಾಲಜೀಸ್ ಪ್ರೈ.ಲಿ, ವಿಪ್ರೋ, ವೋಲ್ವೋ,ಟಿ.ವಿ.ಎಸ್ ಮೋಟಾರ್ ಕಂಪೆನಿ,ಟಫೆ, ಎನ್.ಎಂ.ಸಿ.ಹೆಲ್ತ್ ಕೇರ್, ತಾಜ್ ವಿವಾಂಟ, ಐ.ಟಿ.ಸಿ, ಎಸ್ಸೆ, ದ ಇಂಡಿಯನ್ ಆರ್ಮಿ ಯು.ಎ.ಇ ಎಕ್ಸೇಂಜ್, ಅಲ್ ಕಾರ್ಗೋ , ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು "ಆಳ್ವಾಸ್ ಪ್ರಗತಿ 2012"ರ ಮೂಲಕ ಒಂದೇ ಸೂರಿನಡಿ ಒಟ್ಟಾಗಿ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗನೀಡುವ ಕಾರ್ಯ ನಡೆಸಿದವು.


ಮಂದಹಾಸ ಬೀರಿದ ಕಂಪೆನಿಗಳು

ಭಾಗವಹಿಸಿದ ನೂರಕ್ಕೂ ಮಿಕ್ಕಿದ ಕಂಪೆನಿಗಳ ಮುಖ್ಯಸ್ಥರ ಮುಖದಲ್ಲಿ ಮಂದಹಾಸವಿತ್ತು. ನಮ್ಮ ನಿರೀಕ್ಷೆಗೂ ಮೀರಿದ ಅನುಭವ ಈ ಉದ್ಯೋಗಮೇಳದಲ್ಲಿ ಪ್ರಾಪ್ತವಾಗಿದೆ ಎಂಬ ಅಭಿಪ್ರಾಯ ಪ್ರತಿಯೊಂದು ಕಂಪೆನಿಯವರಿಂದ ಕೇಳಿಬಂತು.

ನಮ್ಮ ಅಪೇಕ್ಷೆಗೆ ತಕ್ಕಂತೆ ಉದ್ಯೋಗಾಕಾಂಕ್ಷಿಗಳು ದೊರಕಿದ್ದಾರೆ, ಅಚ್ಚುಕಟ್ಟಾದ ವ್ಯವಸ್ಥೆ ಈ ಉದ್ಯೋಗಮೇಳದಲ್ಲಿ ಲಭ್ಯವಾಗಿದೆ ಅದಕ್ಕಿಂತಲೂ ಶಿಸ್ತು, ಸಮಯ ಪ್ರಜ್ಞೆ, ವ್ಯವಸ್ಥೆಗಳು ಮೆಚ್ಚತಕ್ಕಂತಹುದು ಎಂಬುದು ಒಟ್ಟಾರೆ ಅಭಿಪ್ರಾಯವಾಗಿತ್ತು.

ಇವರು ಹೀಗಂದರು...

" ಆಳ್ವಾಸ್ ಪ್ರಗತಿ ಉದ್ಯೋಗಮೇಳ ವಿದ್ಯಾರ್ಥಿಗಳ ಆಶಾದಾಯ ಬದುಕಿಗೊಂದು ಅಡಿಪಾಯ. ಯಾವ ಸಂಸ್ಥೆಯೂ ಮಾಡದಂತಹ ರೀತಿಯಲ್ಲಿ ಅಚ್ಚುಕಟ್ಟಾಗಿ ಪ್ರತಿಯೊಂದು ವ್ಯವಸ್ಥೆಗಳೂ ಮೂಡಿಬಂದಿವೆ. ಕೇವಲ ಮೂಡಬಿದಿರೆಯಷ್ಟೇ ಅಲ್ಲದೆ ರಾಜ್ಯದಾದ್ಯಂತ ವಿದ್ಯಾರ್ಥಿಗಳು ಮೇಳದಲ್ಲಿ ಭಾಗವಹಿಸಿದ್ದರಿಂದಾಗಿ ನಮ್ಮ ಅಪೇಕ್ಷೆಗೆ ಬೇಕಾದ ರೀತಿಯ ಅಭ್ಯರ್ಥಿಗಳ ಆಯ್ಕೆ ಸುಲಭವಾಯಿತು. ಇದೊಂದು ನೆನಪಿಡುವಂತಹ ಉದ್ಯೋಗಮೇಳವಾಗಿದೆ. "
ಪ್ರಸನ್ನ
- ವಿನ್ ಮೆನ್ ಸಾಫ್ಟ್ ವೇರ್
ರಿಕ್ರೂಟ್ ಮೆಂಟ್ ಕಾರ್ಡಿನೇಟರ್


" ನಮ್ಮ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಲಭ್ಯವಾಯಿತು. ಇದು ಖುಷಿಕೊಟ್ಟಿತು. ವಿವಿಧ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿದ ಭಾರತದಾದ್ಯಂತದಿಂದ ಬಂದಂತಹ ವಿದ್ಯಾರ್ಥಿಗಳು ಅದಕ್ಕಿಂತ ಮಿಗಿಲಾಗಿ "ಪ್ರತಿಭೆ"ಗಳು ನಮಗೆ ಇಲ್ಲಿ ಸಿಕ್ಕಿವೆ. ಅದು ಸಂತೋಷದ ವಿಷಯ. ನಿರಂತರ ಆಳ್ವಾಸ್ ನಡೆಸುವ ಉದ್ಯೋಗಮೇಳದಲ್ಲಿ ನಮ್ಮ ಸಂಸ್ಥೆ ಭಾಗವಹಿಸುತ್ತದೆ.
ಸಂದೀಪಾ ಸ್ಯಾಮುವೆಲ್
ಟಾಟಾ ಹನಿವೆಲ್ ಸೊಲ್ಯುಶನ್ ಪ್ರೈ.ಲಿ

ಉದ್ಯೋಗ ತೃಪ್ತಿಕೊಟ್ಟಿದೆ
" ನನಗೆ ಈ ಮೇಳದಲ್ಲಿ ಉದ್ಯೋಗ ಸಿಗುತ್ತದೆ ಎಂಬ ನಂಬಿಕೆ ನನಗಿರಲಿಲ್ಲ. ಇದೀಗ ವೇದಾಂತ ಫೌಂಡೇಷನ್ ಇದರ ಕರ್ನಾಟಕ ಬ್ರಾಂಚ್ ನ ಚೀಫ್ ಕೋ - ಆರ್ಡಿನೇಟರ್ ಹುದ್ದೆಗೆ ನನ್ನನ್ನು ಆಯ್ಕೆಮಾಡಿದ್ದಾರೆ. ಅಪಾರ ಸಂತೋಷವಾಗುತ್ತಿದೆ. ನಾನು ಕಲಿತ ಸಂಸ್ಥೆಯಲ್ಲಿಯೇ ನಡೆದ ಉದ್ಯೋಗಮೇಳದಲ್ಲಿ ಈ ಆಯ್ಕೆ ನಡೆದದ್ದು ನನ್ನ ಭಾಗ್ಯ.
-ಶುಭಕರ ಅಂಚನ್
ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಈ ಕನಸು.ಕಾಂ ಆಳ್ವಾಸ್ ಪ್ರಗತಿ 2012ರ ಮಾಧ್ಯಮ ಸಹಭಾಗಿತ್ವ ವಹಿಸಿಕೊಂಡಿತ್ತು.

0 comments:

Post a Comment