ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಇದು ನೀವು ನಂಬಲೇ ಬೇಕು...

ಡಬ್...ಕ್ರೇ...... ವಾಹನದ ನಿರಂತರ ಸಂಚಾರದಿಂದಾಗಿ ಕಪ್ಪೆದ್ದು ಹೋಗಿದ್ದ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ಸಿನ ಚಕ್ರದ ಅಚ್ಚು ಅಷ್ಟುದ್ದಕ್ಕೆ ಕಂಡುಬರುತ್ತಿತ್ತು. ಅದು ಒತ್ತಡದ ಬ್ರೇಕ್ ಗೆ ಬಸ್ಸಿನ ಚಕ್ರ ರಸ್ತೆಗೆ ಒತ್ತಿಹಿಡಿದಾಗ ಉಂಟಾದ ಗುರುತು.


ಸೂರ್ಯಮುಳುಗಿ ಗಂಟೆ ಒಂದು ಕಳೆದಿತ್ತು. ಸಾಗರದ ಬ್ರಾಹ್ಮಣ ಮನೆತನದ ಹೆಗಡೆಯವರು ಸೈಕಲ್ ತಳ್ಳಿಕೊಂಡು ಮನೆಯಕಡೆ ಬರುತ್ತಿದ್ದರು. ರಾಂಗ್ ಸೈಡಿನಿಂದ ಬಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ವಿನಾಕಾರಣ ಹೆಗಡೆಯವರ ಮೇಲೆರಗಿ ಸೈಕಲ್ಲೂ ಸೇರಿದಂತೆ ಹೆಗಡೆಯವರನ್ನು ಬಲಿತೆಗೆದುಕೊಂಡಿತು... ಬಸ್ಸು ನಿಲ್ಲಲಿಲ್ಲ...ಹಿಟ್ ಅಂಡ್ ರನ್... ಅಕ್ಷರಶಃ ಅದು ನೈಜ ಸಾವಲ್ಲ...ಕೊಲೆ... ಕೊಲೆ...

ಆದರೆ ಆ ಕೇಸು ಹಾಗೆ ಉಳಿಯಲಿಲ್ಲ... ಅದಕ್ಕೆ ಬೇಕಾದ ಸಾಕ್ಷ್ಯಾಧಾರಗಳು ಇಲ್ಲದೆಯೇ ಕೇಸು ಬಿದ್ದುಹೋಯಿತು...ಹೆಗಡೆಯವರ ಕುಟುಂಬದ ಒಂದು ಕೊಂಡಿ ಕಳಚಿಕೊಂಡಿತು...ಇದು ನಡೆದದ್ದು 1988ರಲ್ಲಿ... ಹೌದು...ಅದಕ್ಕಿಂತಲೂ ಹಿಂದೆಯೇ ಅದೇ ರಸ್ತೆಯಲ್ಲಿ ನೂರಾರು ಜೀವಗಳು ವಿಲವಿಲನೆ ಒದ್ದಾಗಿ ಜೀವಬಿಟ್ಟಿವೆ. ನೆತ್ತರು ಚೆಲ್ಲಿವೆ... ಕರ್ರಗಿನ ಡಾಂಬರು ರಸ್ತೆಯಲ್ಲಿದ್ದ ಜವರಾಯ ಹಲವು ಜೀವಗಳ ರಕ್ತಕುಡಿದುಬಿಟ್ಟಿದ್ದಾನೆ... ಅಲ್ಲಿಂದ ರಕ್ತ ದೋಕುಳಿಯ ಪಯಣ ಆ ಹಾದಿಯಲ್ಲಿ ಹೆಚ್ಚಿದೆ...

ಇದು ಅಂತಿಂಥ ರಸ್ತೆಯಲ್ಲ...ಕಟ್ಟುಕಥೆಯಂತೂ ಅಲ್ಲವೇ ಅಲ್ಲ...ಇದೊಂದು ನಂಬಿಕೆ, ವೈಜ್ಞಾನಿಕ ಹಿನ್ನಲೆಯನ್ನೊಳಗೊಂಡ ವಿಶ್ಲೇಷಣಾತ್ಮಕ ಘಟನೆಗಳ ಗುಚ್ಛ... ಭಾರತ ಬಹುಮುಖೀ ವ್ಯಕ್ತಿತ್ವದ ರಾಷ್ಟ್ರ.ಇಲ್ಲಿ ದೇವರು, ದೈವಗಳು, ಭೂತಗಳು, ಆತ್ಮಗಳು, ಹೀಗೆ ನಂಬಿಕೆಗಳಿಗೆ ಮಹತ್ವವಿದೆ. ಅದರಲ್ಲಿ ಜಾತಿ,ಮತ , ಪಂಗಡ, ಎಂಬ ಭೇದಗಳಿಲ್ಲ... ಪ್ರತಿಯೊಬ್ಬರೂ ಒಂದಿಲ್ಲೊಂದು ನಂಬಿಕೆಗಳಿಗೆ ಒಳಪಟ್ಟಿರುತ್ತಾರೆ. ಇಂತಹ ನಂಬಿಕೆಗಳು ಇದೆಲ್ಲಾ ಹೌದು ಎಂಬುದನ್ನು , ಇವುಗಳ ಮಹತ್ವಗಳನ್ನು ಎತ್ತಿಹಿಡಿಯುತ್ತವೆ.ಇಲ್ಲಿ ಆದದ್ದೂ ಅದೇ...

ಆತ ಸ್ಥಳೀಯ ಕಾಲೇಜೊಂದರ ಉಪನ್ಯಾಸಕ. ನೋಡಲು ಸ್ಪುರದ್ರೂತಿ. ದಿನಾ ಓಡಾಡುವ ರಸ್ತೆ. ಆಗತಾನೇ ತನ್ನ ಹಳೆಯ ಮೊಬೈಕ್ ಮಾರಿ ಹೊಸ ಹೀರೋಹೋಂಡಾ ಬೈಕ್ ಖರೀದಿಸಿದ್ದರು. ತಿಂಗಳೊಂದರೊಳಗೇ ಎರಡು ಬಾರಿ ಆ ರಸ್ತೆಯಲ್ಲಿ ಬಿದ್ದು ಕೈಮುರಿದುಕೊಂಡರು. ಜೀವಕ್ಕಪಾಯವಾಗಿಲ್ಲ.ನಾನು ಬದುಕಿದ್ದೇ ವಿಚಿತ್ರ ಎಂದು ಇಂದಿಗೂ ನೆನಪಿಸಿಕೊಳ್ಳುತ್ತಾರೆ.


ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಲಾರಿಯೊಂದು ಢಿಕ್ಕಿಹೊಡೆದು ಸಾವು ಸಂಭವಿಸಿತು. ಇದಾಗಿ ದಿನ ಕಳೆಯುವುದರೊಳಗೆ ಇದೇ ರಸ್ತೆಯಲ್ಲಿ ನವದಂಪತಿಗಳು ಪಯಣಿಸುತ್ತಿದ್ದ ಕಾರೊಂದು ಟಿಪ್ಪರ್ ಲಾರಿಗೆ ಡಿಕ್ಕಿಹೊಡೆದು ದಾರುಣ ಸಾವು ಸಂಭವಿಸಿದೆ. ರಸ್ತೆಯುದ್ದಕ್ಕೂ ನೆತ್ತರ ಕೋಡಿ ಹರಿದಿದೆ... ಇದಾಗಿ ವರುಷ ಇನ್ನೂ ಉರುಳಿಲ್ಲ...

ಘನ ವಾಹನಗಳ ಮುಖಾಮುಖಿಗೆ 6ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಸವಾರರ ಅಪಮೃತ್ಯು ಮಾಮೂಲಿ...ಟಿಂಬರ್ ಹೇರಿಕೊಂಡು ಸಾಗುತ್ತಿದ್ದ ಲಾರಿ ಕುಗ್ವೆ ಕ್ರಾಸ್ ಬಳಿ ಸೇತುವೆಗೆ ಗುದ್ದಿ ನದಿಗೆ ಹಾರಿತು... ಅಕೇಶ್ಯಾ ದಿಮ್ಮಿಗಳನ್ನು ಹೇರಿಸಾಗುತ್ತಿದ್ದ ಲಾರಿಯದು... ಬಿದ್ದ ರಭಸಕ್ಕೆ ಲಾರಿಯ ಬಾನೆಟ್ ಹಾರಿಹೋಗಿತ್ತು. ಒಳಗಿದ್ದವರ ಸ್ಥಿತಿ ನೀವೇ ಊಹಿಸಿ...

ಸಮಾನವಾದ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿದ್ದ ಅಟೋರಿಕ್ಷಾವೊಂದು ಎಲ್ಲರು ನೋಡುತ್ತಿದ್ದಂತೆಯೇ ಪಲ್ಟಿಹೊಡೆಯಿತು.ವ್ಯಕ್ತಿಯೊಬ್ಬರ ಕಾಲಿಗೆ ಬಲವಾದ ಏಟು ಬಿದ್ದಿತು. ಹೀಗೆ ಒಂದರಮೇಲೊಂದರಂತೆ ನಿರಂತರ ಅಪಘಾತಗಳು... ಮಾಧ್ಯಮದಲ್ಲಂತೂ ಈ ರಸ್ತೆಯ ಅಫಘಾತದ ಸುದ್ದಿ ತಪ್ಪಿದ ದಿನವೇ ಇಲ್ಲ... ಈ ರಸ್ತೆಯಲ್ಲಿ ಸಾವು ದಿನ ನಿತ್ಯದ ಪಾಡು ಎಂಬಂತಾಗಿತ್ತು...

ಹೌದು...ಇದೆಲ್ಲಾ ನಡೆಯುತ್ತಿರುವುದು ಸಾಗರದಿಂದ ಜೋಗಕ್ಕೆ ಸಾಗುವ ಮುಖ್ಯರಸ್ತೆಯಲ್ಲಿ. ಸಾಗರ ಪೇಟೆಯಿಂದ ಕೊಂಚ ದೂರ ಕ್ರಮಿಸುತ್ತಲೇ ಸಿಗುವ ಶ್ರೀರಾಮ ಮಂದಿರ (ರೈಲ್ವೇ ಕ್ರಾಸಿಂಗ್ ) ನಿಂದ ಮುಂದುವರಿದು ಎಲ್.ಬಿ.ಕಾಲೇಜು ರಸ್ತೆ, ಹಾಗೂ ಅಲ್ಲೇ ತುಸು ಮುಂದೆ ಈ ಎಲ್ಲಾ ಆಕ್ಸಿಡೆಂಟ್ ಗಳಿಗೆ ಸ್ಥಳನಿಗಧಿಯಾಗಿದ್ದು.!

ಅಲ್ಲಿ ಜವರಾಯ ಕಾದು ಕುಳಿತಿರುತ್ತಿದ್ದ... ವಾಹನ ಪ್ರಯಾಣಿಕರಿಗೆ ಅದೊಂದು ಸವಾಲಿನ ಹಾದಿಯಾಗಿತ್ತು...
ಇಲ್ಲಿಗೇ ಮುಗಿದಿಲ್ಲ... ಸಾಗರ ಗ್ರಾಮಾಂತರ ಠಾಣಾ ವ್ಯಾಪ್ತಿಗೊಳಪಟ್ಟ ಮುಂಡಿಗೆ ಹಳ್ಳ ಇನ್ನೊಂದು ಅಪಘಾತದ ಸ್ಥಳ... ಇಲ್ಲೂ ನಿರಂತರ ರಕ್ತದೋಕುಳಿ... ಅಂತೂ ಈ ಭಾಗದ ಜನತೆಗೆ ನೆಮ್ಮದಿಯಿಲ್ಲ...ಈ ರಸ್ತೆಯಲ್ಲಿ ಸಾಗದೆ ವಿಧಿಯಿಲ್ಲ...

ಯಾಕೆ ಹೀಗೆ... ಇದಕ್ಕೆಲ್ಲಾ ಕಾರಣವಾದರೂ ಏನು... ಇಷ್ಟೊಂದು ಅಪಘಾತಗಳು, ಇಷ್ಟೊಂದು ಸಾವು , ನೋವು... ರಕ್ತದೋಕುಳಿಗೆ ಕಾರಣ ಏನಿರಬಹುದು ಎಂಬ ಚಿಂತನೆ ಜನತೆಯಲ್ಲಿ ಮೂಡಿತು...ಹೌದು... ಅದಕ್ಕೆ ಉತ್ತರವಾಗಿ ದೊರಕಿದ್ದೇ "ಭಂಗಿ ಭೂತಪ್ಪ"
ಭಂಗಿ ಭೂತಪ್ಪ ಹೆಸರೇ ವಿಚಿತ್ರ... ಸಾಗರದ ಪೇಟೆಯಿಂದ ಜೋಗ ರಸ್ತೆಯಲ್ಲಿ ಸಾಗುವಾಗ ಇಂದಿಗೂ ಕಾಣಸಿಗುವ ಸಣ್ಣ ಕಟ್ಟೆಯೇ ಈ ಭಂಗಿ ಭೂತಪ್ಪನ ಆವಾಸ ಸ್ಥಾನ. ಕಟ್ಟೆಯೊಳಗೆ ಹೆಡೆಯೆತ್ತಿದ ನಾಗದ ಕಲ್ಲೊಂದಿದೆ. ಆ ಭಂಗಿ ಭೂತಪ್ಪನ ಕಟ್ಟೆಗೆ ಭಂಗಿಗಳ ನೈವೇದ್ಯ...


ಏನಚ್ಚರಿ... ಅಲ್ಲೊಂದು ಕಟ್ಟೆ ನಿರ್ಮಿಸಿ ಭೂತಪ್ಪನಿಗೆ ನಿತ್ಯ ಭಂಗಿ ಸೇವೆ ನೀಡಲಾರಂಭಿಸಿದ್ದೇ ದಿನ ನಿತ್ಯ ನಡೆಯುತ್ತಿದ್ದ ಅಪಘಾತಗಳಿಗೆ ಕೊಂಚ ಬ್ರೇಕ್ ಬಿದ್ದಂತಾಗಿದೆ. ಇಂದಿಗೂ ಈ ರಸ್ತೆಯಲ್ಲಿ ಸಾಗುವ ಮಂದಿ ಭೂತಪ್ಪನಿಗೆ ನಮಸ್ಕರಿಸಿ ಭಂಗಿ ಸೇವೆ ನೀಡಿ ಮುಂದುವರಿಯುವುದು ವಾಡಿಕೆ ...ಇಲ್ಲದಿದ್ದಲ್ಲಿ ಅಪಘಾತಗಳು ನಿರಂತರ ನಡೆಯುತ್ತದೆ.

ಇದು ನಂಬಿಕೆಯೊಂದರ ಹಿಂದಿರುವ ಸತ್ಯ. ಪೊಲೀಸ್ ಪೇದೆಯೊಬ್ಬರ ನೈಜ ಅನುಭವ... ಆ ಪೇದೆ ಬೈಕ್ ರೈಡ್ ಮಾಡೋದ್ರಲ್ಲಿ ಎತ್ತಿದ ಕೈ. ರಿಪೇರಿಯೂ ಗೊತ್ತು. ಅದೊಂದು ದಿನ ಪಾರ್ಟಿ ಗೆ ಹೋಗಿದ್ದರಂತೆ. ಮದ್ಯಸೇವನೆಯ ಚಟ ಅವರಿಗಿಲ್ಲ. ಆದರೆ ನಾನ್ ವೆಜ್ ಎಂದರೆ ಪಂಚಪ್ರಾಣ. ಅವರಲ್ಲಿದ್ದುದು ಬುಲೆಟ್ ಬೈಕ್. ಪಾರ್ಟಿಮುಗಿಸಿ ಮನೆಯವರಿಗೊಂದಷ್ಟು ನಾನ್ ವೆಬ್ ಕರಿಯನ್ನು ಕಟ್ಟಿಸಿಕೊಂಡು ಬುಲೆಟ್ ಬಾಕ್ಸನಲ್ಲಿಟ್ಟು ಅದೇ ರಸ್ತೆಯಲ್ಲಿ ಸಾಗಿಬರುತ್ತಿದ್ದರು. ಅವರೊಂದಿಗೆ ನಾಲ್ಕಾರು ವಾಹನಗಳಲ್ಲಿ ಗೆಳೆಯರೆಲ್ಲಾ ಸಾಗಿಬರುತ್ತಿದ್ದರಂತೆ. ಗಂಟೆ ಹನ್ನೆರಡು ಕಳೆದಿತ್ತು... ಇದ್ದಕ್ಕಿದಂತೆ ಬುಲೆಟ್ ಆಫ್. ಎಲ್ಲರೂ ತಮ್ಮ ತಮ್ಮ ವಾಹನ ಬದಿಗಿರಿಸಿ ಬುಲೆಟ್ ಸ್ಟಾರ್ಟ್ ಮಾಡಲು ಸಹಕರಿಸತೊಡಗಿದರು.
ಏನು ಮಾಡಿದರೂ ಬುಲೆಟ್ ಚಾಲೂ ಆಗಲಿಲ್ಲ... ವಿಧಿಯಿಲ್ಲದೆ ಬುಲೆಟ್ ತಳ್ಳುತ್ತಲೇ ಪ್ರಯಾಣ ಮುಂದುವರಿಸಿದರು. ಸುಮಾರು ಒಂದು ಕಿಲೋಮೀಟರ್ ಕಳೆಯುತ್ತಲೇ ಮತ್ತೆ ಬುಲೆಟ್ ಸ್ಟಾರ್ಟ್ ಮಾಡಲು ಪ್ರಯತ್ನಿಸಿದರು. ಒಂದೇ ಕಿಕ್ ನಲ್ಲಿ ಬುಲೆಟ್ ಸ್ಟಾರ್ಟ್ ...ಏನಚ್ಚರಿ... ಬುಲೆಟ್ ಆಫ್ ಆಗಿದ್ದು ಅದೇ ಭೂತದ ಸ್ಥಳದಲ್ಲಂತೆ. ಅವರು ಮಾಂಸದೂಟವನ್ನು ಕೊಂಡೊಯ್ದಿದ್ದೇ ಬೈಕ್ ಆಫ್ ಆಗಲು ಕಾರಣವಂತೆ... ಅದಾದ ನಂತರ ಇಂದಿನ ತನಕ ಒಂದೇ ಒಂದು ದಿನವೂ ತಮ್ಮ ವಾಹನದಲ್ಲಿ ಮಾಂಸದೂಟವನ್ನು ಆ ರಸ್ತೆಯಲ್ಲಿ ಕೊಂಡೊಯ್ದೇ ಇಲ್ಲವಂತೆ...!ಎಲ್ಲ ಭೂತಪ್ಪನ ಮಹಿಮೆ ಎನ್ನುತ್ತಾರೆ ಪೊಲೀಸ್ ಪೇದೆ...

-ಸಾಹಿತ್ಯ : ಎಚ್.ಕೆ.
ಚಿತ್ರ - ಗ್ರಾಫಿಕ್ಸ್ : ನಾಡೋಡಿ.

2 comments:

Anonymous said...

its true and nice report
-divyanayak

ದೀಪ್ತಿ said...

ಿದೊಂದು ನಂಬಲಸಾಧ್ಯವಾದ ವಿಷಯ...ಮನುಷ್ಯ ೆಷ್ಟೇ ಮುಂದುವರೆದರೂ ದೇವರು ದೈವದ ಮುಂದೆ ತಲೆ ಭಾಗಲೇ ಬೇಕು..ನಿಜಕ್ಕೂ ಇದೊಂದು ಅಚ್ಚರಿಯೇ ಸರಿ.

Post a Comment