ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ನಿರ್ಲಕ್ಷ್ಯಕ್ಕೆ ಇನ್ನೊಂದು ಹೆಸರು ಎಂದರೆ ಕಾವೇರಿ ನಿಸರ್ಗಧಾಮ ಎಂದು ಗಟ್ಟಿಯಾಗಿ ಸ್ಪಷ್ಟವಾಗಿ ಹೇಳಬಹುದು. ಪ್ರವಾಸಿಗರಿಂದ ನಿಗದಿತ ಶುಲ್ಕದಲ್ಲಿ ಒಂದಾಣೆಯೂ ಬಿಡದೆ ವಸೂಲು ಮಾಡುವ ಇಲಾಖೆ ಕಾವೇರಿ ನಿಸರ್ಗಧಾಮವನ್ನು ಮಾತ್ರ ಅತ್ಯಂತ ನಿರ್ಲಕ್ಷ್ಯಿಸಿದೆ.


1989ರಲ್ಲಿ ಅರಣ್ಯ ಸಂರಕ್ಷಣಾಧಿಕಾರಿ ಆರ್.ಕೆ.ತೋರ್ವೆ ಮತ್ತು ವಲಯಾರಣ್ಯಾಧಿಕಾರಿ ಟಿ.ಎನ್.ನಾರಾಯಣ ಅವರ ಸತತ ಪ್ರಯತ್ನದ ಫಲವಾಗಿ ರೂಪುಗೊಂಡ ಈ ನಿಸರ್ಗಧಾಮ ಇಂದು ವಿಶಾದದ ಛಾಯೆ ಮೂಡಿಸುತ್ತದೆ.ವರ್ಷದುದ್ದಕ್ಕೂ ಪ್ರವಾಸಿಗರಿಂದ ತುಂಬಿತುಳುಕುವ ಈ ನಿಸರ್ಗಧಾಮಕ್ಕೆ ತುರ್ತು ಕಾಯಕಲ್ಪ ಆಗಬೇಕಾಗಿದೆ. ಕಾವೇರಿ ನದೀ ತೀರದಲ್ಲಿ 65 ಎಕ್ಕರೆಗಳ ಪೈಕಿ ಸುಮಾರು 15 ಎಕ್ಕರೆಗಳಷ್ಟು ಪ್ರದೇಶದಲ್ಲಿ ನಿಸರ್ಗಧಾಮದ ವಿವಿಧ ಚಟುವಟಿಕೆಗಳು ನಡೆಯುತ್ತಿದೆ.
ಮಂದಗಮನೆಯಾಗಿ ಹರಿಯುವ ಕಾವೇರಿ ನದಿಯನ್ನು ತೂಗು ಸೇತುವೆಯ ಮೂಲಕ ಹಾದು ಹೋದಾಗ ನಿಸರ್ಗಧಾಮದ ಕರಾಳಮುಖದ ದರ್ಶನವಾಗುತ್ತದೆ. ವಿವಿಧ ಜಾತಿಯ ವೃಕ್ಷಸಂಕುಲ...ಜೊತೆ ಜೊತೆಗೆ ಬಿದಿರ ಮೆಳೆಗಳಿಂದ ಒಂದೊಮ್ಮೆ ಕಂಗೊಳಿಸುತ್ತಿದ್ದ ಕಾವೇರಿ ನಿಸರ್ಗಧಾಮ ಇಂದು ಕರಾಳ ನಿಸರ್ಗಧಾಮವಾಗಿ ಪರಿವರ್ತನೆಗೊಂಡಿದೆ.


ಪ್ರವಾಸಿಗರ ಅತಿಬುದ್ದಿವಂತಿಕೆಗೆ ಒಂದಷ್ಟು ಪ್ರದೇಶಗಳು ನಲುಗಿಹೋದರೆ ಅಧಿಕಾರಿ ವಲಯದ ನಿರ್ಲಕ್ಷ್ಯಕ್ಕೆ ಬಹುಪಾಲು ನಿಸರ್ಗಧಾಮ ತುತ್ತಾಗಿದೆ. ನಿಸರ್ಗಧಾಮದ ತುಂಬೆಲ್ಲಾ ಬೆಳೆದು ನಿಂತಿರುವ ಬಿದಿರ ಮೆಳೆಗಳು ಇದೀಗ ತಮ್ಮ ಆಯಸ್ಸುಪೂರ್ತಿಯಾಗಿ ಒಣಗಿಹೋಗಿವೆ. ಹಲವು ಬಿದಿರ ಮೆಳೆಗಳು ಅಲ್ಲೇ ಮುರಿದುಬಿದ್ದುಕೊಂಡಿವೆ.

ಈ ಬಿದಿರ ಮೆಳೆಗಳ ವಿಲೇವಾರಿ ಮಾಡುವ ಗೋಜಿಗೂ ಸಂಬಂಧಿತ ಇಲಾಖೆ ಮುಂದಾಗಿಲ್ಲ. ಬಿದಿರ ಮೆಳೆಗಳ ಮೇಲೆಲ್ಲಾ ಪ್ರವಾಸಿಗರ ಕೈ ಚಳಕ ಗೋಚರವಾಗುತ್ತದೆ. ಪ್ಲಾಸ್ಟಿಕ್ ಚೀಲ, ಬಾಟಲಿಗಳು ಯತೇಚ್ಛವಾಗಿ ನಿಸರ್ಗಧಾಮದಲ್ಲಿ ಅಲ್ಲಲ್ಲಿ ಕಂಡುಬರುತ್ತವೆ.
ಪ್ರವಾಸಿಗರು ನಿಸರ್ಗಧಾಮದ ತುಂಬೆಲ್ಲಾ ಶಾಸನ ಬರೆದು ಹೋಗಿದ್ದಾರೆ. ನಿಸರ್ಗಧಾಮದಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯಿದ್ದದ್ದೇ ಆದಲ್ಲಿ ಇದನ್ನು ಸರಿಪಡಿಸಬಹುದಾಗಿತ್ತು.

ಕಾಲ ಮಿಂಚಿ ಹೋಗುತ್ತಿದೆ. ಸಂಬಂಧಿತ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ. ಇತಿಹಾಸದಲ್ಲಿ ಹುದುಗಿ ಹೋಗುವ ಮೊದಲು ಇದಕ್ಕೊಂದು ಕಾಯಕಲ್ಪ ನೀಡುವ ಕಾರ್ಯಕ್ಕೆ ಸಂಬಂಧಿತ ಇಲಾಖೆಗಳು ಮುಂದಾಗಬೇಕಾಗಿದೆ.

- ನಾಡೋಡಿ.

0 comments:

Post a Comment