ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ

ಇನ್ನು "ಕಂಬಳ"ದ್ದೇ ಕಾರುಬಾರು!

ಹೌದು ಮಳೆಗಾಲಕ್ಕೆ ಮಲೆನಾಡು ಸಿದ್ಧವಾಗುತ್ತಿದೆ.ಮಳೆಗಾಲ ಬಂತೆಂದರೆ ಮಲೆನಾಡ ಮಂದಿಗೆ ಒಂದು ರೀತಿಯ ಖುಷಿ...ಕೆಲಸಗಳಿಗೆ ಒಂದಷ್ಟು ಬಿಡುವು...

ಧೋ ಎಂದು ಸುರಿವ ಮಳೆಯಲ್ಲಿ ಕುರುಕಲು ತಿಂಡಿ ಮೆಲ್ಲುತ್ತಾ ಸಮಯ ಕಳೆಯುವ ಮಜಾ ಇದ್ಯಲ್ಲಾ ಅದು ಮಲೆನಾಡಿಗೆ ಹೋಗಿಯೇ ಅನುಭವಿಸಬೇಕು. ಹೊಸತಾಗಿ ಮದುವೆಯಾದ ಮದುಮಕ್ಕಳು ಮನೆಗೆ ಬಂದು(ಕೊಡೆ ಅಮವಾಸ್ಯೆ) ಒಂದಷ್ಟು ಕಾಲ ನಿಲ್ಲುವುದು ಈ ಮಳೆಗಾಲದಲ್ಲಿ... ಮಲೆನಾಡಿನ ಹಲವೆಡೆಗಳಲ್ಲಿ "ಕೇರಿ"ಗಳು ಕಾಣಸಿಗುತ್ತವೆ.


ವಿವಿಧ ಕೇರಿಗಳಲ್ಲಿ ಸಾಲುಮನೆಗಳು ... ಹೊರಗಡೆ ಅಬ್ಬರದ ಮಳೆ ಸುರಿಯುತ್ತಿದ್ದರೆ ಇತ್ತ ಕೇರಿಯವರೆಲ್ಲಾ ಒಂದೇ ಮನೆಯಲ್ಲಿ ಸೇರಿ ಕಥೆಹೊಡೆಯುವುದು ಮಳೆಗಾಲದ ಮಾಮೂಲು ನೋಟ.

ಮಲೆನಾಡಿನ ಹವೆಯೇ ಹಾಗೆ...ಒಮ್ಮೆ ಮಲೆನಾಡಿಗೆ ಕಾಲಿಟ್ಟರೆ ಅಲ್ಲಿಂದ ಹೊರಬರುವುದಕ್ಕೆ ಮನಸೇ ಬರುವುದಿಲ್ಲ. ಸಮಶೀತೋಷ್ಣ ಹವೆ...ಚಳಿಗಾಲದಲ್ಲಂತೂ ಚಳಿ ಚಳಿ... ಕಂಬಳಿ ಬೇಕೇ...ಬೇಕು...ಇತ್ತ ಮಳೆಗಾಲದಲ್ಲಿ ಜಡಿಮಳೆ...ಮನೆಯೊಳಗೆ ತಣ್ಣನೆಯ ವಾತಾವರಣ... ಬಿಸಿ ಕಾಫಿ ...ಮೆಲ್ಲಲು ಒಂದಿಷ್ಟು ಕುರುಕಲು ತಿಂಡಿ ಇದ್ದರೆ ಸಮಯ ಹೋಗಿದ್ದೇ ಗೊತ್ತಾಗದು...

ಮಲೆನಾಡಿನ ಮನೆಗಳು ಇನ್ನೂ ಹಳೆಯ ಶೈಲಿಯನ್ನುಳಿಸಿಕೊಂಡಿವೆ. ಅಪವಾದಕ್ಕೆಂಬಂತೆ ಹಲವು ಮನೆಗಳು ಆಧುನಿಯತೆಯ ಸೋಗಿಗೊಳಪಟ್ಟಿದ್ದರೂ ಹಳೆಯ ಶೈಲಿಗಳನ್ನು ಪೂರ್ತಿಯಾಗಿ ಬಿಟ್ಟಿಲ್ಲ.

ಮಳೆಗಾಲದಲ್ಲಿ ಜಡಿಮಳೆಯ ಸಮಯದಲ್ಲಿ ಚಾವಡಿಯಲ್ಲಿಯೋ ಮಹಡಿ (ಮೆತ್ತಿಮೇಲೆ ಕುಳಿತು...)ಮೇಲೆ ಕಂಬಳಿ ಹಾಸಿ ಅದರ ಕುಳಿತು ಮಳೆ ನೋಡುತ್ತಾ ಮಾತುಕಥೆ ನಡೆಸುತ್ತಾ ಚಪ್ಪರಿಸಲು ಒಂದಿಷ್ಟು ಹಲಸಿನ ಸೊಳೆಯ ಅಥವಾ ಬಾಳೆಕಾಯಿಯ ಚಿಪ್ಸ್ ಇದ್ದರೆ ಈ ಪ್ರಪಂಚವೇ ಮರೆತಂತೆ...

ಮಲೆನಾಡಿನ ಪ್ರತಿಯೊಂದು ಮನೆಯಲ್ಲೂ ಮಳೆಗಾಲದಲ್ಲಿ ಈ ಚಿಪ್ಸ್ ಇದ್ದೇ ಇರುತ್ತದೆ. ಮಲೆನಾಡಿನ ಮಹಿಳೆಯರಿಗೆ ಮೇ ತಿಂಗಳು ಪೂತರ್ಿ ಬ್ಯುಸಿಯ ಸೀಸನ್. ಮನೆಯಲ್ಲಿ ಹಲಸಿನ ಮರವಿದ್ದರೆ ಸೈ...ಇಲ್ಲದಿದ್ದಲ್ಲಿ ಊರಮನೆಯಿಂದಾದರೂ ಹಲಸಿನ ಕಾಯಿ ತಂದು ಚಿಪ್ಸ್ ತಯಾರಿಸದೆ ಕೂರುವವರಲ್ಲ ಮಲೆನಾಡಿನ ಮಹಿಳೆಯರು.ತೋಟದೊಳಗಿರುವ ಬಾಳೆಗೊನೆಗಳು ಕ್ಷಣಾರ್ಧದಲ್ಲಿ ಚಿಪ್ಸ್ ಆಗಿ ಪರಿವರ್ತನೆಯಾಗುತ್ತದೆ. ಇನ್ನು ಬೇಸಿಗೆ ತುಂಬೆಲ್ಲಾ ಮಲೆನಾಡ ಮಹಿಳೆಯರು ಹಪ್ಪಳ , ಸೆಂಡಿಗೆ ತಯಾರಿಯಲ್ಲಿ ಕಳೆದುಹೋಗಿಬಿಡುತ್ತಾರೆ...

ಮಳೆಗಾಲಕ್ಕೆ ಬೇಕಾದಂತಹ ಚಿಪ್ಸ್ ಅಂದರೆ ಅಂತಿಂಥ ಚಿಪ್ಸ್ ಅಲ್ಲ. ಅದಕ್ಕೆ ಮೆಣಸಿನ ಪುಡಿ, ಇಂಗು, ಜೀರಿಗೆ ಪುಡಿ ಹಾಕಿ ಉಪ್ಪು ಬೆರೆಸಿದ ಮಸಾಲಾ ಚಿಪ್ಸ್... ಗರಮಾರಗಮ್ ಚಿಪ್ಸ್...ಬಾಯಿಗೆ ಹಾಕುವುದು ಬಿಡಿ...ನೋಡಿದರೇ ಬಾಯಲ್ಲಿ ನೀರೂರುವಂತಹ ಚಿಪ್ಸ್...ಅಡುಗೆ ಮನೆಯಲ್ಲಿ ಚಿಪ್ಸ್ ಕರಿಯತೊಡಗಿದರೆ ಇಡೀ ಊರಿಗೇ ಪರಿಮಳ... ಪರಿಮಳಕ್ಕೆ ಹೊಟ್ಟೆಯಲ್ಲಿ ಹಸಿವು ಪ್ರಾರಂಭವಾಗುತ್ತದೆ.

ಹೊರಗೆ ಧೋ ಎಂದು ಮಳೆ ಸುರಿಯುತ್ತಿದ್ದರೆ ಕಂಬಳಿ ಮೇಲೆ ಕೂತು ಹಳೆ ಪುರಾಣಗಳನ್ನು ಮತ್ತೆ ನೆನಪಿಸುತ್ತಾ "ಅಜ್ಜಿ ಕಥೆ"ಗಳು ಹೊರಬರುತ್ತವೆ. ಊರ - ಕೇರಿಯ ಆಪ್ತರು, ಮನೆ ಮಂದಿ, ನೆಂಟರಿಷ್ಟರೊಂದಿಗೆ ಸೇರಿ ಪಟ್ಟಾಂಗದಲ್ಲಿ ನಿರತರಾದರೆ ಚಿಪ್ಸ್ ಹೊಟ್ಟೆಗಿಳಿಯುವುದು ತಿಳಿಯುವುದೇ ಇಲ್ಲ.

ಮಳೆಗಾಲಕ್ಕೆ ಕನಿಷ್ಠ ಮೂರ್ನಾಲ್ಕು ಡಬ್ಬಕ್ಕಾಗುವಷ್ಟು ಚಿಪ್ಸ್ ಪ್ರತಿಯೊಂದು ಮನೆಯಲ್ಲೂ ರೆಡಿಯಿದ್ದೇ ಇರುತ್ತದೆ. ಯಾವ ಮನೆಗೆ ಹೋದರೂ ಬಿಸಿ ಬಿಸಿ ಕಾಫಿಯೊಂದಿಗೆ ಕರಿದ ಹಲಸಿನ ಸೊಳೆಯ ಮಸಾಲಾ ಚಿಪ್ಸ್ ಪ್ರತ್ಯಕ್ಷವಾಗುತ್ತದೆ. ದೊಡ್ಡ ದೊಡ್ಡ ಹಪ್ಪಳವೂ (ಕರಿದ ಅಥವಾ ಕೆಂಡದಲ್ಲಿ ಸುಟ್ಟ) ಕೆಲವೊಮ್ಮೆ ಲಭ್ಯ,.
ಮಳೆಗಾಲವೆಂದರೆ ತೋಟದ ಕೆಲಸಕ್ಕೆ ಕೊಂಚ ರೆಸ್ಟ್... ಮಲೆನಾಡ ಪುರುಷರು ಬಾಯಿಗೆ ಕವಳ ಹಾಕಿ ಇಸ್ಪೀಟ್ ಆಡುತ್ತಾ ಕೂತರೆ ಇತ್ತ ಮಹಿಳೆಯರು ಪಗಡೆಯಾಟದಲ್ಲಿ ನಿರತರಾಗುತ್ತಾರೆ... ಕೆಲವೊಂದು ಕಡೆಗಳಲ್ಲಿ ಮನೆ ಮಂದಿ, ಕುಟುಂಬಸ್ಥರು, ಆಪ್ತರು, ಊರ ಮನೆಯವರು ಸೇರಿ ಚಿಪ್ಸ್ ಕಂಬಳ, ರೋಟಿ ಕಂಬಳ, ಚಕ್ಕುಲಿ ಕಂಬಳ ನಡೆಸುವುದೂ ಉಂಟು...ಅಂತೂ ಮಳೆಗಾಲವನ್ನು ಮಲೆನಾಡಿನಲ್ಲಿ ಅನುಭವಿಸುವುದು ಒಂದು ಹೊಸ ಅನುಭವ ನೀಡುವುದರಲ್ಲಿ ಸಂದೇಹವಿಲ್ಲ...

ನಾಡೋಡಿ.

1 comments:

RAMESHA HEGADE said...

nammaneli eegagle HALASINA hannina chips ready ide
banni omme savi noodi

Post a Comment