ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಇನ್ನೂ ಚಳಿಯ ಚುಂಬನಕ್ಕೆ ಬ್ರೇಕ್ ಬಿದ್ದಿರಲಿಲ್ಲ... ಸೂರ್ಯ ಏಳುವುದಕ್ಕೂ ಮೊದಲೇ ನನ್ನ ಬೈಕ್ ಟರ್ರ್...ನೆ ಸದ್ದುಮಾಡುತ್ತಾ ಆ ಕಾಡನ್ನೇ ಇಬ್ಬಾಗಮಾಡಿ ಸಾಗಿದ ಹೊಂಡಗಳಿಂದಾವೃತವಾದ ಕರ್ರಗಿನ ಡಾಂಬರು ರಸ್ತೆಯಲ್ಲಿ ಸಾಗಿಯಾಗಿತ್ತು...

ಹೆಬ್ರಿಯ ಕಾಡನ್ನು ಇನ್ನೂ ಮಸುಕು ಮಸುಕಾಗಿದ್ದ ಮಬ್ಬು ಬೆಳಕಲ್ಲೇ ಸಾಗಿದೆ. ಹೀರೋಹೊಂಡಾ ಪ್ಯಾಶನ್ ಫ್ರೋ ಬೈಕ್ ...ಹೆಡ್ ಲೈಟ್ ಪ್ರಖರವಾಗಿಯೇ ಇತ್ತು... ಹೆಬ್ರಿಯಿಂದ ಕೊಂಚ ಮುಂದೆ ಸಾಗುತ್ತಿದ್ದಂತೆಯೇ ಬೈಕ್ ನ ಹೆಡ್ ಲೈಟ್ ಬೆಳಕಿಗೆ ಕ್ಷಣಕಾಲ ಸ್ಥಂಭೀಭೂತವಾಗಿ ಲೈಟ್ ಡಿಮ್ ಮಾಡುತ್ತಲೇ ಛಂಗನೆ ನೆಗೆದು ಪರಾರಿಯಾದ ಪ್ರಾಣಿಯೊಂದನ್ನೇ "ಏನಿರಬಹುದೆಂದು" ಊಹಿಸುತ್ತಾ ಸಾಗುವಾಗಲೇ ಹಳೆಯ ಗೆಳೆಯ ಶೆಣೈ ಅವರ ನೆನಪಾಯಿತು.


ಹೆಬ್ರಿ ಎಂದಾಗ ತಕ್ಷಣ ನೆನಪಾಗುವುದೇ ನಕ್ಸಲ್...ಹೌದು..ನಕ್ಸಲ್ ಪ್ರದೇಶವಾಗಿದ್ದರಿಂದ ಆ ಭಾಗದಲ್ಲಿ ರಾತ್ರಿವೇಳೆ ಸಂಚರಿಸುವುದು ತುಸು ಡೇಂಜರ್ . ಬೆಳಕು ಹರಿಯುವ ಸಮಯವಾಗಿತ್ತು. ಬೇಗನೇ ಎದ್ದು ಅಮ್ಮ ಮಾಡಿಕೊಟ್ಟ ನೀರುದೋಸೆ ಬಿಸಿ ಬಿಸಿ ಚಹಾ ಹೀರಿ ಹೊರಟಿದ್ದಾಗಿದ್ದರೂ ನೂರಾರು ಕಿಲೋಮೀಟರ್ ಸಾಗಿದ್ದರಿಂದಾಗಿ ಹೊಟ್ಟೆ ಚುರ್ ಗುಟ್ಟುತ್ತಿತ್ತು.

ತನ್ನಿಂದ ತಾನಾಗಿಯೇ ಶೆಣೈ ಅವರ ಶ್ರೀ ಸತ್ಯನಾರಾಯಣ ಹೋಟೆಲ್ ಮುಂದೆ ನನ್ನ ಬೈಕ್ ನಿಂತಿತ್ತು. ಅ ಸ್ಥಳಕ್ಕೆ ತಲುಪುವಾಗ ತನ್ನಷ್ಟಕ್ಕೆ ಬೈಕ್ ಹೊಟೇಲ್ ಮುಂದೆ ಸಾಗುತ್ತದೆ!ಯಾವಾಗಲೂ ಕೃಷ್ಣಣ್ಣನ ಕ್ವಾಲಿಸ್ಸೋ, ನಮ್ಮ ಮಾರುತಿಯಲ್ಲೋ ಸಾಗುವುದು ರೂಢಿ. ಈ ಬಾರಿ ಬೈಕ್ ಪ್ರಯಾಣ ಮಾಡಿದರೆ ಹೇಗೆ ಎಂಬ ಚಿಂತೆಯಿಂದ ಬೈಕೇರಿದ್ದೆ...ಶೆಣೈ ಅವರಿಗೂ ಆಶ್ಚರ್ಯ..."ಏನ್ ಸಾರ್ ಇವತ್ತು ಬೈಕ್ ತಂದಿದ್ದೀರಲ್ಲಾ...ಈ ಚಳಿಯಲ್ಲಿ... ಅದೂ ಒಬ್ಬರೇ ಬಂದಿದ್ದೀರಾ...ಬಿಸಿ ಬಿಸಿ ನೀರುದೋಸೆ ತಿನ್ನಿ ...ಬನ್ನಿ" ಎಂದರು.ಶೆಣೈ ಅವರಿಗೆ ಚೆನ್ನಾಗಿ ತಿಳಿದಿದೆ. ನಾನು ನೀರುದೋಸೆ ಬಿಟ್ಟರೆ ಗೋಳಿಬಜೆ ಮಾತ್ರ ತಿನ್ನುತ್ತೇನೆಂದು. ಹಾಗೆಯೇ ಡಬ್ಬಲ್ ಪ್ಲೇಟ್ ನೀರುದೋಸೆ. ಜೊತೆಗೆ ಬಿಸಿ ಬಿಸಿ ಗೋಳಿಬಜೆ ಚಟ್ನಿ... "ಚಹಾ ತರುತ್ತೇನೆ... ತಿನ್ತಾ ಇರಿ... "ಎಂದು ಶೆಣೈ ಚಹಾ ತರಲು ಹೋದರು.

ಶೆಣೈ ಅವರ ಬಗ್ಗೆ ಒಂದಷ್ಟು ಹೇಳಲೇ ಬೇಕು. ಪುಟ್ಟ ಹೊಟೇಲ್. ಮನೆಯ ಮುಂಭಾಗವನ್ನು ಹೊಟೇಲ್ ಆಗಿ ಪರಿವತರ್ಿಸಿದ್ದಾರೆ. ಇನ್ನೂ ಹಳೆಯ ಶೈಲಿಯನ್ನು ಉಳಿಸಿಕೊಂಡಿದ್ದಾರೆ. ಮುಂಭಾಗದಲ್ಲಿ ಹಂಚಿನ ಮಾಡು. ಅದೊಂದು ಹಾಲ್ ಇದ್ದಂತೆ.ಅಲ್ಲಿ ಹಳೆಯ ಶೈಲಿಯ ಟೇಬಲ್ಲುಗಳು. ಬೆಂಚುಗಳು. ಚಹಾ, ಕಾಫಿ , ನೀರುದೋಸೆ, ಗೋಳಿಬಜೆ ಇಲ್ಲಿಯ ಅತ್ಯಂತ ಫೇಮಸ್ ತಿಂಡಿ. ಹೊರಭಾಗದಿಂದ ಬರುವವರು ಹೆಚ್ಚಾಗಿ ಇಡ್ಲಿ ಒಡೆಯನ್ನೇ ಅಪೇಕ್ಷಿಸುತ್ತಾರೆ. ಹಾಗಾಗಿ ಅದೂ ಲಭ್ಯ...ಆದರೆ ದಕ್ಷಿಣ ಕನ್ನಡದ ಮಂದಿ ಹೆಚ್ಚಾಗಿ ನೀರುದೋಸೆಗೆ ಮೊರೆಹೋಗುತ್ತಿದ್ದಾರೆ. ಆದರೆ ಇತ್ತೀಚೆಗೆ ಘಟ್ಟದ ಮೇಲಿನವರೂ ನೀರುದೋಸೆಯ ರುಚಿಗೆ ಮಾರುಹೋಗಿದ್ದಾರಂತೆ.ಇದು ಶೆಣೈ ನನ್ನತ್ರ ಹೇಳಿದ ಮಾತು.

ಕಾವಲಿಗೆಗೆ ಎಣ್ಣೆ ಸುರಿದು ಝ್ಯೋಂ ಎಂದು ಎರಡುಸುತ್ತು ಸೌಟು ತಿರುಗಿತೆಂದರೆ ಬಿಸಿ ಬಿಸಿ ನೀರುದೋಸೆ ರೆಡಿ...ಅದಕ್ಕೆ ಸೂಜಿ ಮೆಣಸು ಹಾಕಿ ಮಾಡಿದ ಬಿಳಿ ಚಟ್ನಿ... ಹೊರಭಾಗದಲ್ಲಿ ಮೆದುವಾಗಿದ್ದ ಚಳಿಗೆ ಅದೊಂದು ಒಳ್ಳೆಯ ಕಾಂಬಿನೇಷನ್. ನಾನು ಹೋದರೆ ಶೆಣೈ ಕೇಳದೆಯೇ ಡಬ್ಬಲ್ ಚಹಾ ತಂದಿಡುತ್ತಾರೆ. "ಅದೂ ಮುಂಜಾನೆ ಡಬ್ಬಲ್ ಚಹಾ ಬೇಕೇ ಬೇಕು...ಬೈಕ್ ಸವಾರಿ ಬೇರೆ ಅಲ್ಲವೇ..." ಎಂದು ಶೆಣೈ ಹೇಳಿದರು. ಈಗೀಗ ಶೆಣೈ ಅವರು ಕರಿದ ಕುರುಕಲು ತಿಂಡಿ, ಡ್ರೈ ಫ್ರೂಟ್ಸ್,ಒಣಗಿಸಿದ ನೆಲ್ಲಿಕಾಯಿ...ಜ್ಯೂಸ್ ಎಸೆನ್ಸ್ ಇವೆಲ್ಲ ಮಾರುತ್ತಿದ್ದಾರೆ. ಸಜ್ಜನ ವ್ಯಕ್ತಿ. ಉತ್ತಮ ಗುಣಮಟ್ಟದ ತಿಂಡಿ ನೀಡುತ್ತಾರೆ. ಹಾಗಾಗಿ ಹೊಟೇಲ್ ಗೆ ಬರುವವರ ಸಂಖ್ಯೆ ಏರಿಕೆಯಾಗುತ್ತಿದೆ. ಶೆಣೈ ಅವರ ಕೈಗೆ ನೂರರ ನೋಟೊಂದನ್ನಿಟ್ಟು ಚಿಲ್ಲರೆ ಪಡೆದು ಮತ್ತೆ ಸವಾರಿ ಮುಂದುವರಿಸಿದೆ.


ಸೋಮೇಶ್ವರ ತಲುಪಿದೊಡನೆ ರಸ್ತೆ ಬದಿಯಲ್ಲಿರುವ ಗಣೇಶನ ಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸದಿದ್ದರೆ ಮನಸಿಗ್ಯಾಗೋ ನೆಮ್ಮದಿಯಿಲ್ಲ... ಅದನ್ನೇ ಮಾಡಿದೆ. ಅಲ್ಲಿಂದ ಕೊಂಚ ಮುಂದುವರಿದರೆ ಘಾಟಿ ಆರಂಭ. ಅದು ಆಗುಂಬೆ ಘಾಟಿ. ಘಾಟಿ ಹತ್ತಿದರೆ ಆಗುಂಬೆ ಊರು, ಸ್ವಲ್ಪ ದೂರದಲ್ಲಿ ತೀರ್ಥಹಳ್ಳಿ . ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ವ್ಯಾಪ್ತಿಗೊಳಪಡುವ ಪ್ರದೇಶ ಈ ಆಗುಂಬೆ. ಆಗುಂಬೆ ಘಾಟಿ ಪ್ರದೇಶದಿಂದ ಹತ್ತಿರದಲ್ಲಿ ಸಿಗುವ ದೊಡ್ಡ ಪಟ್ಟಣವೆಂದರೆ ತೀರ್ಥಹಳ್ಳಿ. ಆಗುಂಬೆ ನಿಸರ್ಗ ಸೌಂದರ್ಯದ ಖಣಿ.


ಇದು ಕರ್ನಾಟಕದ ಚಿರಾಪುಂಜಿ ಎಂದೇ ಖ್ಯಾತಿ ಪಡೆದಿದೆ. ಈ ಆಗುಂಬೆಯಲ್ಲಿ ಮಳೆ ಜಾಸ್ತಿ. ಇದೊಂದು ಅದ್ಭುತ ರಮ್ಯ ತಾಣ. ನಿಸರ್ಗಾ ಸಕ್ತರಿಗೆ ಹೇಳಿ ಮಾಡಿಸಿದ ಸ್ಥಳ. ಅದ್ಭುತವಾದಂತಹ ನಿಸರ್ಗ ಸೌಂದರ್ಯವನ್ನೊಳಗೊಂಡ ಆಗುಂಬೆಯಲ್ಲಿ ಭಾರತದ ಏಕೈಕ ಶಾಶ್ವತ ಹರಿದ್ವರ್ಣವನ ಸಂಶೋಧನಾ ಕೇಂದ್ರವಿದೆ. ರೋಮುಲಸ್ ವಿಟೆಕರ್ ಎಂಬ ಉರಗತಜ್ಞ ಈ ಆಗುಂಬೆಯನ್ನು ಕಾಳಿಂಗ ಸರ್ಪಗಳ ರಾಜಧಾನಿ ಎಂದೇ ಕರೆದಿದ್ದಾರೆ.ಹೌದು ಆಗುಂಬೆಯಲ್ಲಿ ಹೇರಳ ಸಸ್ಯರಾಶಿಯಿದೆ. ಕಾಡ ಗರ್ಭವನ್ನು ಸೀಳಿ ಹೆದ್ದಾರಿ ನಿ ಸಲಾಗಿದೆ. ಅದೂ ಘಾಟಿರಸ್ತೆ. 14ತಿರುವುಗಳು...ಕ್ಲಿಷ್ಟಕರವಾದಂತಹ ತಿರುವುಗಳಲ್ಲಿ ಗಾಡಿ ಓಡಿಸುವುದೇ ಒಂದು ಮಜಾ. ಈ ಘಟ್ಟಪ್ರದೇಶದಲ್ಲಿ ರಸ್ತೆ ನಿರ್ಮಿಸಿದ್ದು ಒಂದು ಅಚ್ಚರಿಯೇ... ಒಂದೊಂದು ತಿರುವು ದಾಟುವುದೂ ಒಂದೊಂದು ಅಚ್ಚರಿ... ದಟ್ಟಅಡವಿಯಲ್ಲಿ ಕಲ್ಲುಬಂಡೆಗಳಿಂದಾವೃತವಾದ ಪ್ರದೇಶದಲ್ಲಿ ನಿರ್ಮಾಣಗೊಂಡ ರಸ್ತೆ...

ರಸ್ತೆಯ ಸುರಕ್ಷತೆಗಾಗಿ ಅಲ್ಲೇ ದೊರಕಿದ ಬಂಡಗೆಳನ್ನೊಡೆದು ಬದಿಕಟ್ಟಿ ಶಾಶ್ವತ ಗೋಡೆ ನಿರ್ಮಿಸಿ ಸುರಕ್ಷತೆಯ ಕ್ರಮ ಕೈಗೊಂಡಿರುವುದನ್ನು ನೋಡಿದರೆ ಹಿರಿಯರ ಅನುಭವವನ್ನು ಇಂದಿಗೂ ನೆನಪಿಸಿಕೊಡುತ್ತದೆ. ರಸ್ತೆಯ ಇಕ್ಕಡೆಗಳಲ್ಲಿರುವ ಕಾಡಮರಗಳಲ್ಲವಿತು ಕುಳಿತು ಸದ್ದುಮಾಡುವ ಜೀರುಂಡೆಗಳು, ಅಲ್ಲಲ್ಲಿ ಮರದ ಮೇಲೆ ಚೇಷ್ಟೆ ನಡೆಸುವ ಕೋತಿ, ಮುಜುಗಳು... ಅಪರೂಪದ ಹಕ್ಕಿಗಳು, ಸಣ್ಣಪುಟ್ಟ ಪ್ರಾಣಿಗಳು ಇಲ್ಲಿ ಕಾಣಸಿಗುತ್ತವೆ.

ಒಂದೊಂದು ತಿರುವುಗಳಲ್ಲಿ ಕೊಂಚ ಹೊತ್ತು ನಿಂತು ನಿಸರ್ಗ ಸೌಂದರ್ಯವನ್ನು ಆಸ್ವಾದಿಸಿದರೆ ಅದೊಂದು ಅಮೋಘ ಅನುಭವ ನೀಡುತ್ತದೆ. ಹಲವು ವರ್ಣಗಳಿಂದ ಕಂಗೊಳಿಸುತ್ತಿರುವ ಸಸ್ಯರಾಶಿ. ಒಂದಕ್ಕೊಂದು ಭಿನ್ನ ವಿಭಿನ್ನ ರೀತಿಯಲ್ಲಿ ಮೈತಳೆದು ನಿಂತಂತಹ ಸಸ್ಯಸಂಪತ್ತು. ಘೋರ ಕಾನನ. ಕಡಿದಾದ ದಟ್ಟ ಅಡವಿ...ಭಯ, ಅಚ್ಚರಿ, ರೋಮಾಂಚನ, ಅದ್ಭುತ...ಇವೆಲ್ಲ ಅನುಭವ ಏಕಕಾಲಕ್ಕೆ ಲಭ್ಯ.


ಹೌದು ಆಗುಂಬೆಯ ನಿಸರ್ಗ ಸೌಂದರ್ಯಗಳನ್ನು ಮಾತುಗಳಲ್ಲಿ ಹೇಳಲು ಸಾಧ್ಯವಿಲ್ಲ. ಪದಗಳಲ್ಲಿ ಕಟ್ಟಿಕೊಡಲು ಅಸಾಧ್ಯ...ಕುಂಚದಲ್ಲಿ ಚಿತ್ರಿಸಲು ಕಷ್ಟ... ಈ ರೀತಿಯ ಅನುಭವ ...ಸೂರ್ಯೋದಯ, ಸೂರ್ಯಾಸ್ಥದ ಅಮೋಘ ದೃಶ್ಯಕಾವ್ಯ ಆಸ್ವಾದನೆ ಈ ಘಾಟಿಯಲ್ಲಾಗುತ್ತದೆ. ಮಂಜುಮುಸುಕಿದ ಹಾದಿಯಲ್ಲಿ, ಕಣಿವೆಗಳನ್ನು ನೋಡುತ್ತಾ ನೋಡುತ್ತಾ ಎಚ್ಚರದ ಚಾಲನೆಯ ಮೂಲಕ ಘಟ್ಟ ಏರಿದಾಗ ಆಗುವ ಅಪರಿಮಿತವಾದ ಆನಂದ...
ಹೌದು ಆಗ ನೆನಪಾಗುವುದು...ಆಗುಂಬೆಯಾ ... ಪ್ರೇಮ ಸಂಜೆಯಾ... ಮರೆಯಲಾರೆ ಓ...ಗೆಳತಿಯೇ.. ಓ ಗೆಳತಿಯೇ...


ನೀವೂ ಬನ್ನಿ...

ಆಗುಂಬೆ ನಿಸರ್ಗ ಕಾವ್ಯ. ಈ ಆಗುಂಬೆಯ ದೃಶ್ಯಕಾವ್ಯದ ಸವಿ ಪ್ರತಿಯೊಬ್ಬರೂ ಸವಿಯಲೇ ಬೇಕು. ರಾಜಧಾನಿ ಬೆಂಗಳೂರಿನಿಂದ 380 ಕಿಲೋ ಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ಬರುವ ಯಾತ್ರಿಗಳು ವಯಾ ಹಾಸನ, ಚಿಕ್ಕಮಗಳೂರು, ಬಾಳೆಹೊನ್ನೂರು, ಜೈಪುರ , ಶೃಂಗೇರಿ, ಆಗುಂಬೆ ಈ ರೀತಿಯಾಗಿಯೂ ತಲುಪಬಹುದು. ಅಥವಾ ಬೆಂಗಳೂರಿನಿಂದ ಮಂಗಳೂರು, ಉಡುಪಿ, ಹೆಬ್ರಿ ಆಗುಂಬೆ, ಅಥವಾ ಮಂಗಳೂರು, ಮೂಡಬಿದಿರೆ, ಕಾರ್ಕಳ, ಹೆಬ್ರಿ , ಆಗುಂಬೆ ಈ ದಾರಿಯಾಗಿಯೂ ತಲುಪಬಹುದಾಗಿದೆ. ಆಗುಂಬೆ ಘಾಟಿಯ ನಿಜವಾದ ಸವಿ ಸವಿಯಲು ದ್ವಿಚಕ್ರ ವಾಹನ ಪ್ರಯಾಣವೇ ಉತ್ತಮ.

- ಹರೀಶ್ ಕೆ.ಆದೂರು

2 comments:

Amaresh Nayak said...

Nisarga Ramya tana tumba channagide,
Sir, danyavadagalu..
Amaresh Nayaka Jalahalli.
Dist.Raichur.

Amaresh Nayak said...

Nisarga Ramya tana tumba channagide,
Sir, danyavadagalu..
Amaresh Nayaka Jalahalli.
Dist.Raichur.

Post a Comment