ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಎಲ್ಲಿ ನೋಡಿದರಲ್ಲಿ ಹಚ್ಚ ಹಸಿರು... ದೂರದಲ್ಲಿ ಸುಮಧುರ ನಾದ ನಿನಾದ... ಜೀರುಂಡೆಗಳ ಝೇಂಕಾರ... ಕಾಡ ಹಕ್ಕಿಗಳ ಕಲರವ... ಕಣ್ಣು ಹಾಯಿಸಿದಷ್ಟುದ್ದಕ್ಕೂ ಹಸಿರೇ ಹಸಿರು...


ಮಾಲಿನ್ಯಕ್ಕೆ ಅವಕಾಶವಿಲ್ಲ... ಸಮೃದ್ಧ ತಂಗಾಳಿ... ಸಹಸ್ರ ಸಸ್ಯಗಳೊಳಗಿಂದ ಹಾದು ಬರುವ ಔಷಧಿಯುಕ್ತ ನಿರುಮ್ಮಳ ಗಾಳಿ...ಮನಕ್ಕೆ ಮುದ...ದೇಹಕ್ಕೆ ಸುಖ... ನೆಮ್ಮದಿಗೊಂದು ನೆಲೆ...
ಅಲ್ಲೊಂದು ಅವ್ಯಕ್ತ ಭಾವನೆ ಮೂಡುತ್ತದೆ.

ಬೇಡ ಬೇಡವೆಂದರೂ ಏನೋ ಒಂದು ರೀತಿಯ ಬದಲಾವಣೆ ದೇಹದಲ್ಲಾಗುತ್ತದೆ. ಅವ್ಯಕ್ತ ಶಕ್ತಿಯೆಡೆಗೆ ಸಾಗಿದ ಅನುಭವ... ದಟ್ಟ ಕಾನನದ ಮಧ್ಯೆ ಒಂದಷ್ಟು ಪ್ರದೇಶ ವಿರಳವಾಗಿದೆ. ಹೇರಳವಾಗಿ ಗಗನಚುಂಬಿ ಮರಗಳ ರಾಶಿಯ ಮಧ್ಯೆ ಪುರಾತನ ದೇಗುಲಗಳು ನಿಂತಿವೆ. ನೋಡುತ್ತಲೇ ಮನಸ್ಸು ಒಂದು ಬಾರಿ ವಿಚಲಿತವಾಗುತ್ತದೆ. ಮತ್ತೆ ವಾಸ್ತವದತ್ತ ಸಾಗುತ್ತದೆ. ಇದು ಅನುಭವದ ಮಾತು...


ಶಕ್ತಿಕೇಂದ್ರದೊಳಗೆ ಪ್ರವೇಶಿಸಿದಂತೆ ಮನಸ್ಸು ವಾಸ್ತವವನ್ನು ಮರೆಯುತ್ತದೆ. ಅಲ್ಲಿ ದೈವೀ ಶಕ್ತಿಯ ಸಾನಿಧ್ಯದಲ್ಲಿ ಲೀನವಾಗುತ್ತದೆ. ಭಾರವಾದ ಮನಸ್ಸಿನೊಳಗೆ ಹಗುರವಾದ ಭಾವನೆಗಳು ಮೂಡುತ್ತವೆ. ಕಲ್ಮಶಗಳು ದೂರವಾಗಿ ಮನದಲ್ಲೊಂದು ಹೊಸ ಕಾಂತಿ ರೂಪುಗೊಳ್ಳುತ್ತದೆ. ಅಂತಹ ವಾತಾವರಣ,ಅಂತಹ ಶಕ್ತಿ ಆ ಶಕ್ತಿ ಕೇಂದ್ರದ್ದು...

ಹೌದು..ಇದು ಪ್ರಾಪ್ರವಾಗಿದ್ದು ಸಂಸ್ಕೃತಿಯ ಪುನರುತ್ಥಾನಕ್ಕೊಂದು ಹೊಸ ಹೆಜ್ಜೆ ಮೂಡಿಸಿದ ಆ ಪುಣ್ಯ ಕ್ಷೇತ್ರದಲ್ಲಿ...
ಅದು ಮಲೆನಾಡಿನ ತಪ್ಪಲು... ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಮೈಚಾಚಿನಿಂತ ಸಮೃದ್ಧ ಭೂಮಿ. ಶಿವಮೊಗ್ಗ ಜಿಲ್ಲೆಯ ಸಾಗರದ ಪೇಟೆಯಿಂದ ಕೇವಲ 16ಕಿಲೋಮೀಟರ್ ದೂರದಲ್ಲಿರುವ ರಮ್ಯ ತಾಣ.

ಇಂದಿನ ಹಾಳು ಹಂಪಿಯನ್ನೇ ಹೋಲುವಂತಹ ಐತಿಹ್ಯಗಳ ಬೀಡು. ಹಲವು ರಾಜಮನೆತನಗಳು ಆಳ್ವಿಕೆ ನಡೆಸಿದ ಶಕ್ತಿ ಸಾಮರ್ಥ್ಯದ ಸ್ಥಳ. ಹಲವು ಸತ್ಯಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡ ಅನಘ್ಯ ಕಣಿ... ಸಂಶೋಧನೆಗೆ - ಅಧ್ಯಯನಕ್ಕೆ ಹೇಳಿ ಮಾಡಿಸಿದಂತಹ ಪ್ರದೇಶ. ಐತಿಹಾಸಿಕ ಮತ್ತು ಧಾರ್ಮಿಕ ಈ ಎರಡೂ ಅಂಶಗಳಿಂದ ಪ್ರಸಿದ್ಧಿ ಪಡೆದಿದೆ.

ಇಲ್ಲಿರುವ ಒಂದೊಂದು ಕಲ್ಲೂ ಒಂದೊಂದು ಕಥೆ ಹೇಳುತ್ತದೆ. ಒಂದೊಂದು ಮರಕ್ಕೂ ನೂರಾರು ವರುಷಗಳ ಇತಿಹಾಸವಿದೆ. ಪ್ರತಿಯೊಂದು ಕಣಕಣವೂ ಅಧ್ಯಯನಕ್ಕೆ ಯೋಗ್ಯವಾದಂತಿದೆ. ಅಷ್ಟೊಂದು ಮಹತ್ವಪೂರ್ಣ, ಸಾಧನೆಯ ಸಾಧಕರ ಇತಿಹಾಸವನ್ನೊಳಗೊಂಡ ಪ್ರದೇಶ "ಹೊಸಗುಂದ".ಅರಸುಮನೆತನವೊಂದು ಈ ಗ್ರಾಮವನ್ನೇ ರಾಜಧಾನಿಯನ್ನಾಗಿಸಿಕೊಂಡು 300ವರುಷಗಳ ಕಾಲ ಆಳ್ವಿಕೆ ನಡೆಸಿದ್ದಕ್ಕೆ ದಾಖಲೆಗಳು ಲಭ್ಯವಾಗಿದೆ. ಇಲ್ಲಿನ ದೇವಾಲಯಗಳ ಸಮುಚ್ಛಯ, ಲಭ್ಯವಿರುವ ಐತಿಹ್ಯಗಳನ್ನು ಸಾರುವ ಶಿಲಾಲೇಖಗಳು, ವೀರಕಲ್ಲುಗಳು, ಗುಡಿ ಗೋಪುರಗಳು ಒಂದೊಂದು ಇತಿಹಾಸವನ್ನು ಬಿಚ್ಚಿಡುತ್ತದೆ. ಆದರೆ ಅವೆಲ್ಲವೂ ಕಾಲಗರ್ಭದೊಳು ಹುದುಗಹೊರಟಂತಿದೆ. ಅಳಿದುಳಿದ ಅವಶೇಶಗಳು ಗತವೈಭವವನ್ನು ಸಾರಿಹೇಳುತ್ತವೆ.

ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿ ತಾಣ ಈ ಕನಸು.ಕಾಂ ಸದಾ ಹೊಸ ಹೊಸ ವಿಚಾರಗಳೊಂದಿಗೆ ನಮ್ಮ ಓದುಗರಿಗೆ ಕೇವಲ ಮಂಗಳೂರನ್ನಷ್ಟೇ ಅಲ್ಲ ಬದಲಾಗಿ ಸಮಗ್ರ ಕರ್ನಾಟಕ, ಭಾರತದ ದರ್ಶನ ಮಾಡಿಸಬೇಕೆಂಬ ಚಿಂತನೆ ಹೊಂದಿದೆ. ಇದರ ಫಲವಾಗಿ ಹೊಸ ಹೊಸ ಶೋಧಕಾರ್ಯಗಳಲ್ಲಿ ನಮ್ಮ ತಂಡ ನಿರತವಾಗುತ್ತದೆ. ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯ ಹಳೆಯ ದೇಗುಲಗಳತ್ತ ಚಿತ್ತ ನೆಟ್ಟ ನಮ್ಮ ತಂಡಕ್ಕೆ ದೊರಕಿದ್ದು "ಹೊಸಗುಂದದ" ಐತಿಹಾಸಿಕ ಸ್ಥಳ.ಇಂದಿನಿಂದ ಸರಣಿಯಾಗಿ ಈ ಲೇಖನ ಈ ಕನಸು.ಕಾಂ ಮೂಲಕ ಪ್ರಪಂಚದಾದ್ಯಂತ ಇರುವ ಓದುಗರಿಗೆ ಲಭ್ಯವಾಗಲಿದೆ.

- ಸಂ.


ಚಿತ್ರ - ಲೇಖನ : ಹರೀಶ್ ಕೆ.ಆದೂರು.
- ನಾಳೆಗೆ...

0 comments:

Post a Comment