ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಇವರು ಅಂತಿಂಥ ಕಲಾವಿದನಲ್ಲ... "ಕಲೆಯನ್ನು" ಬಂಡವಾಳಮಾಡಿಕೊಳ್ಳಲೂ ಇಲ್ಲ. ತನ್ಮೂಲಕ ಸಮಾಜಕ್ಕೆ, ಪರಿಚಯವಾಗಲೂ ಇಲ್ಲ. ಅಷ್ಟೇಕೇ ತನ್ನ ಕಲೆಯನ್ನೇ ಮುಂದಿಟ್ಟುಕೊಂಡು ಪ್ರಶಸ್ತಿ, ಸನ್ಮಾನಗಳ ಹಿಂದೆ ಹೋದವರೂ ಅಲ್ಲ... ಆಕಾರಣಕ್ಕಾಗಿಯೇ ಅವರಿನ್ನೂ ಎಲೆಮರೆಯ ಕಾಯಿಯಂತೆ ಉಳಿದುಕೊಂಡಿದ್ದಾರೆ. ತಾನಾಯಿತು...ತನ್ನ ಕೆಲಸವಾಯಿತು ಎಂಬಂತೆ...ಇವರದ್ದು ಸಣ್ಣ ಸಾಧನೆಯಲ್ಲ. ಇವರಿಗೆ ಕಲೆ ರಕ್ತಗತವಾಗಿ ಬಂದದ್ದು ಎಂದರೆ ತಪ್ಪಾಗಲಾರದು.

ತನಗೊಲಿದ ಕಲೆಯನ್ನು ಸಮರ್ಥವಾಗಿ ದುಡಿಸಿಕೊಂಡಿದ್ದಾರೆ. ವಿಶಾಲವಾದ ಮನೆ, ಮನೆ ಮುಂದೆ ಒಂದಷ್ಟು ಹೂಗಿಡ, ಕೃಷಿ, ಜೊತೆಗೆ ಸಣ್ಣ ಮೆಸ್ ... ಈ ಎಲ್ಲಾ ಜವಾಬ್ದಾರಿಗಳೊಂದಿಗೆ ತನಗೆ ಅಂಟಿಕೊಂಡು ಬಂದಿದ್ದ ಕಲೆಯನ್ನು ಪೋಷಿಸುತ್ತಿದ್ದಾರೆ.ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಎಂಬಲ್ಲಿರುವ ಮಹಾಬಲ ಗಿರಿ ಈ ಉತ್ಸಾಹೀ ಕಲಾವಿದ.ಉಳ್ಳೂರು - ಸಾಗರದಲ್ಲಿ ಗಿರಿಯಣ್ಣ ಎಂದೇ ಖ್ಯಾತಿ. ನಾರಿಕೇಳಫಲ ಅಂದರೆ ತೆಂಗಿನ ಕಾಯಿ ಇವರ ಕೈಯಲ್ಲಿ ವಿವಿಧ ರೂಪ ಪಡೆದುಕೊಳ್ಳುತ್ತದೆ. ಕೈಯಲ್ಲೊಂದು ಪುಟ್ಟ ಚಾಕು ಹಿಡಿದುಕೊಂಡು ಕೆತ್ತುತ್ತಾ ಹೋದಂತೆ ಅಲ್ಲಿ ಶ್ರೀ ಗಣೇಶನ ಮೂರ್ತಿ ನಿರ್ಮಾಣವಾಗುತ್ತದೆ, ಗಾಂಧೀ ತಾತನ ಮೂರು ಮಂಗಗಳು, ಕಲಶ, ಬಾತುಕೋಳಿ, ಪೆನ್ ಸ್ಟ್ಯಾಂಡ್, ವ್ಯಕ್ತಿರೂಪ, ಗಂಢ ಭೇರುಂಡ, ಆನೆ, ಪಕ್ಷಿ ಹೀಗೆ ಹಲವು ರೂಪಗಳು ಇಡೀ ತೆಂಗಿನ ಕಾಯಿಯಲ್ಲಿ ಮೂಡುತ್ತವೆ. ಕೆತ್ತನೆಯ ಮೂಲಕವೇ ತೆಂಗಿನಕಾಯಿ ಹಲವು ಆಕೃತಿಗಳಲ್ಲಿ ಶೋಭಿಸುತ್ತದೆ.ಅತ್ಯಂತ ನಾಜೂಕಿನ ಈ ಕೆತ್ತನೆಗಳು ಅಷ್ಟೇ ಆಕರ್ಷಕ. ಹವ್ಯಕ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಮಹಾಬಲ ಗಿರಿ ಕಳೆದ ಹತ್ತು ವರುಷಗಳಿಂದ ಇಂತಹ ಹವ್ಯಾಸ ರೂಪಿಸಿಕೊಂಡು ಬಂದಿದ್ದಾರೆ. ಹವ್ಯಕ ಸಮುದಾಯದ ಮದುವೆಯ ಸಂದರ್ಭದಲ್ಲಿ "ಕನ್ಯಾವರ್ತನ" ಕಾರ್ಯಕ್ರಮಕ್ಕೆ ನೀಡುವ ಕಾಯಿಗಳಲ್ಲಿ ಈ ರೀತಿಯ ಅಚ್ಚರಿಯ ಕೆತ್ತನೆಗಳನ್ನು ಮೂಡಿಸಿ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಸುಮಾರು 200ಕ್ಕೂ ಅಧಿಕ ವೈವಿಧ್ಯಮಯ ಆಕಾರಗಳನ್ನೊಳಗೊಂಡ ಕನ್ಯಾವರ್ತನಾ ಕೆತ್ತನೆ ಕಾಯಿಗಳನ್ನು ಇವರು ರೂಪಿಸಿದ್ದಾರೆ."ಯಾವುದೇ ಕೆಲಸ ಮಾಡಬೇಕಾದರೂ ಮನಸ್ಸು ಮುಖ್ಯ, ಶ್ರದ್ಧೆಯಿದ್ದಲ್ಲಿ ಕೆಲಸಗಳನ್ನು ಚೊಕ್ಕವಾಗಿ ಮಾಡಬಹುದು" ಎಂಬುದು ಗಿರಿ ಅವರ ಅಂತರಾಳದ ಮಾತು.

ಸರಳ ವ್ಯಕ್ತಿತ್ವದ ಮಹಾಬಲ ಗಿರಿ ಅವರಿಗೆ ಈ ಕಲಾಕೃತಿಗಳನ್ನು ಇತರರಿಗೂ ತಿಳಿಸುವ ಇರಾದೆಯಿದೆ. ಇದಕ್ಕೊಂದು ಶಾಸ್ತ್ರೀಯ ರೂಪು ನೀಡಬೇಕೆಂಬ ಮಹತ್ವಾಕಾಂಕ್ಷೆಯಿದೆ. ಆಸಕ್ತರು ಬಂದರೆ ಈಗಾಗಲೇ ಇವರ ಸಂಗ್ರಹದಲ್ಲಿರುವ ಹಲವು ಕಲಾಕೃತಿಗಳನ್ನು ಸಂತಸದಿಂದ ತೋರಿಸುತ್ತಾರೆ. ಕಲಾಕೃತಿಗಳ ಕಲಾ ಪ್ರದರ್ಶನ ನಡೆಸುವ ಬಗೆಗೂ ಚಿಂತನೆ ನಡೆಸಿದ್ದಾರೆ.

- ಹರೀಶ್ ಕೆ.ಆದೂರು

1 comments:

Shankara Bhat said...

ಸಮಾವರ್ತನೆ : ಇದು ಮದುವೆಗೆ ಮುಂಚೆ ಗಂಡಿನ ಮನೆಯಲ್ಲಿ ನಡೆಯುವ ಕಾರ್ಯಕ್ರಮ.ಕನ್ಯಾರ್ಥನೆಯ ತೆಂಗಿನ ಕಾಯಿ=O.K.
"ಕನ್ಯಾವರ್ತನ"=????.

Post a Comment