ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನುಡಿಚಿತ್ರ
ಇದು ಕೇವಲ ಹತ್ತಾರು ಕಂಬಗಳ ಕಥೆಯಲ್ಲ...ಬದಲಾಗಿ ಅದೊಂದು ಜೀವಂತಿಗೆ ತವರು.ಅಲ್ಲಿ ಆಟವಿದೆ.ಪಾಠವಿದೆ...ಸಂಭ್ರಮವಿದೆ...ಸಂಸ್ಕೃತಿಯಿದೆ...ಬಾಲ್ಯದ ನೆನಪುಗಳ ಬುತ್ತಿಯಿದೆ.ಹಲವು ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ಸಮ್ಮಿಲನಕ್ಕೊಂದು ವೇದಿಕೆಯಿದೆ...ಆದರೆ ಇಂದಿನ ಬದಲಾವಣೆಯ ಕಾಲಘಟ್ಟದಲ್ಲಿ ಇದು ನಶಿಸುವ ಭೀತಿಯನ್ನೆದುರಿಸುತ್ತಿದೆ. ಜಾಗತೀಕರಣದ ಬಿಸಿಗೆ ಈ ಅನರ್ಘ್ಯ ಸಂಸ್ಕೃತಿ ನಶಿಸುತ್ತಿದೆ...


ಬಾಯಿಗೆ ಕವಳ ಹಾಕ್ಕೊಂಡು ತಲೆಗೊಂದು ರುಮಾಲು ಸುತ್ತಿಕೊಂಡು ಅಂಗಳಕ್ಕಿದರೆಂದರೆ ಆ ಕೆಲ್ಸ ಮುಗಿದೇ ಹೋಯ್ತು...ಎಂಬಂತೆ. ಹೌದು...ಉತ್ತರ ಕನ್ನಡದ ಬಹುತೇಕ ಕಡೆಗಳಲ್ಲಿ ಶ್ರಮ ಜೀವಿಗಳಿದ್ದಾರೆ.ತಮ್ಮ ಕೆಲಸಗಳನ್ನು ಚೊಕ್ಕವಾಗಿ ಪೂರೈಸಿ, ಆ ನಂತರ ಹರಟೆ ಹೊಡೆಯುವುದೋ, ಅಥವಾ ಯಕ್ಷಗಾನ, ಕೃಷಿ, ಪತ್ರಿಕೆ ಹೀಗೆ ಹಲವು ವಿಚಾರಗಳತ್ತ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮಂದಿಯನ್ನು ಕಾಣಬಹುದು.


ಉತ್ತರ ಕನ್ನಡ ಜಿಲ್ಲೆಯಲ್ಲಿ ಕೃಷಿಗೆ ಪ್ರಾಧಾನ್ಯತೆ. ಆ ಭಾಗದ ಯಾವುದೇ ಮನೆಗಳಿಗೆ ಹೋದರೂ ಅಡಿಕೆಯ ಮಾತು ಬರದೆ ಮಾತು ಮುಗಿಯುವುದೆಂದೇ ಇಲ್ಲ. ಎಲ್ಲರ ಮನೆಯಲ್ಲೂ ಕೃಷಿ ಇದ್ದೇ ಇದೆ...ಈ ಬಾರಿ ಫಸಲು ಹೇಂಗೆ ? ತೋಟದ ಕೆಲ್ಸ ಮುಗೀತಾ...? ಈ ರೀತಿ ಒಂದಿಲ್ಲೊಂದು ಮಾತು ಇದ್ದೇ ಇದೆ.

ಸೆಪ್ಟೆಂಬರ್ - ಅಕ್ಟೋಬರ್,ಇನ್ನೇನು ಮಳೆಗಾಲ ಮುಗಿದು ಚಳಿಗಾಲ ಕಾಲಿಡಬೇಕು,ಸಾಗರ,ಶಿರಸಿ,ಹೊಸನಗರ,ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೃಷಿ ಚಟುವಟಿಕೆ ಭರದಿಂದ ಶುರುವಾಗುತ್ತದೆ.ಅಡಿಕೆ ಬೆಳೆಗಾರರಿಗೆ ಅದು ಅತ್ಯಂತ ಬ್ಯುಸಿ ದಿನಗಳು.ಈ ಭಾಗಗಳಲ್ಲಿ ಅಡಿಕೆ ಸುಗ್ಗಿಯ ಕೆಲಸ ಮನೆ ಮುಂದೆ ಹಾಕುವ ಅಡಿಕೆ ಮರದ ಚಪ್ಪರದಿಂದ ಶುರು.
ಹೋಯ್... ಎಂತ ಮಾರಾಯಾ...ಇನ್ನೂ ಚಪ್ಪರ ಕೆಲ್ಸ ಶುರುವಾಗಿಲ್ಲೆ...ಈ ರೀತಿಯ ಮಾತು ಈ ಭಾಗದಲ್ಲಂತೂ ಸರ್ವೇ ಸಾಮಾನ್ಯ... ದಕ್ಷಿಣ ಕನ್ನಡ , ಕಾಸರಗೋಡು ಭಾಗಗಳಿಂದ ಹೋದ ಮಂದಿಗೆ ಈ ಚಪ್ಪರ ಒಂದು ಕುತೂಹಲದ ವಿಷಯ...

ಏನಿದು ಅಡಿಕೆ ಚಪ್ಪರ?
ಈಗಿನ ಕಾಲದ ಮನೆಗಳು ಟೆರೇಸ್ ಹೊಂದಿರುವುದು ಸಾಮಾನ್ಯ.ಆದರೆ ಮಲೆನಾಡಿನ ಹಳ್ಳಿಯ ಹೆಂಚಿನಮನೆಗಳಲ್ಲಿ ಅಡಿಕೆ ಸುಗ್ಗಿಯ ಸಮಯದಲ್ಲಿ ವಿಶಿಷ್ಟ ಬಹುಪಯೋಗಿ ಟೆರೇಸ್ ರೂಪುಗೊಳ್ಳುತ್ತದೆ.ಮನೆಯ ಮುಂದಿನ ಅಂಗಳದಲ್ಲಿ ಲಂಬವಾಗಿ ಹಾಕಿದ ದೊಡ್ಡ ಕಲ್ಲಿನ/ಮರದ ಕಂಬಗಳ ಮೇಲೆ ಮೊದಲು ದಪ್ಪ ಮರದ ಅಡ್ಡ ತೊಲೆಯನ್ನು ಕೂರಿಸುತ್ತಾರೆ.ಅದರ ಮೇಲೆ ಒಂದೊಂದಾಗಿ ಅಡಿಕೆ ಮರದ ದಬ್ಬೆಯನ್ನು ಒಪ್ಪವಾಗಿ ಜೋಡಿಸಿ ಇಟ್ಟು ಅಡಿಕೆ ಹಾಳೆಯ ನಾರಿನಿಂದ ಮುಖ್ಯ ಕಂಬಕ್ಕೂ ಅಡ್ಡ ಇರುವ ದಬ್ಬೆಗೂ ಸೇರಿಸಿ ಬಿಗಿಯಾಗಿ ಕಟ್ಟುತ್ತಾರೆ.


ಹೀಗೆ ಕಟ್ಟಿದ ಅಡಿಕೆ ಚಪ್ಪರ ಬಹು ಉಪಯೋಗಿ.ಕೊನೆ ಕೊಯಿಲು ಅಥವಾ ಅಡಿಕೆ ಸುಗ್ಗಿಯಂದು ಬೇಯಿಸಿದ ಅಡಿಕೆಗಳನ್ನು ಬಿಸಿಲಿಗೆ ಹಾಕಿ ಒಣಗಿಸಲು ಈ ಚಪ್ಪರ ಉಪಯೋಗಿಸುತ್ತಾರೆ.ಕೊಯಿಲು ಮುಗಿಯುತ್ತಿದ್ದಂತೆ ಮಳೆಗಾಲಕ್ಕಾಗಿ ಧಾನ್ಯ,ಕಾಳು-ಬೇಳೆಗಳನ್ನು ಈ ಚಪ್ಪರದ ಮೇಲೆ ಒಣಗಿಸಿ ಸಂಗ್ರಹಿಸಿಡುತ್ತಾರೆ.ಎಲ್ಲಕ್ಕಿಂತ ಹೆಚ್ಚಾಗಿ ಬಿರು ಬೇಸಿಗೆಯಲ್ಲೂ ಮನೆಯ ಎದುರುಗಡೆ,ಒಳಗಡೆ ತಂಪನ್ನು ಕಾಯ್ದಿಡುವುದು ಈ ಅಟ್ಟಣಿಗೆಯ ವಿಶೇಷ.

ಮಕ್ಕಳಿಗೆ ಅಂಗಳದಲ್ಲಿ ಕಂಬದಾಟ ಆಡಲು ಈ ಚಪ್ಪರದ ಅಡಿಯ ಕಂಬವೇ ಬೇಕು.ಅಷ್ಟೇ ಅಲ್ಲ ಇಲ್ಲಿ ಏನೇ ವಿಶೇಷ ಕಾರ್ಯಕ್ರಮಕ್ಕೆ ಕೂಡ ಈ ಚಪ್ಪರ ಉಪಯೋಗಿಸಲ್ಪಡುತ್ತದೆ.ಶಾಮಿಯಾನದ ಗೊಡವೆಯಿಲ್ಲದೆ ಅಲ್ಪ ಸ್ವಲ್ಪ ಮಾರ್ಪಾಡಿನೊಂದಿಗೆ ಇದೇ ಅಡಿಕೆ ಚಪ್ಪರ ಅಲಂಕೃತಗೊಂಡು ಕಾರ್ಯಕ್ರಮಗಳಿಗೆ ಮೆರುಗು ನೀಡುತ್ತದೆ.ಮದುವೆ-ಹಬ್ಬ,ಉಪನಯನ ಏನೇ ಇರಲಿ ಈ ಚಪ್ಪರ ಮಲ್ಟಿಪರ್ಪಸ್ ಹಾಲ್ಗಳಿಗೇನೂ ಕಡಿಮೆ ಇಲ್ಲದಂತೆ ಜನೋಪಯೋಗಿಯಾಗಿದೆ.

- ಸೌಮ್ಯ ಹರೀಶ್.
ಉಪಸಂಪಾದಕರು,ಈ ಕನಸು.ಕಾಂ.

0 comments:

Post a Comment