ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ
ಕುರುಕ್ಷೇತ್ರದ ರಣರಂಗ ತುಂಬಿತುಳುಕುತ್ತಿತ್ತು. ಸುತ್ತಲೂ ಅಕ್ಷೋಹಿಣಿ ಸೇನೆ. ಅರ್ಜುನನಿಗೆ ಸುತ್ತಲಿದ್ದವರೆಲ್ಲರೂ ಬಂಧು ಬಳಗಗಳೇ. ಆದರೂ ಅವರೆಲ್ಲರೂ ಶತ್ರುಗಳು. ತನ್ನ ಅಜ್ಜನೊಡನೆ, ಗುರುವಿನೊಡನೆ ಕಾದಾಡಬೇಕಾದ ಅನಿವಾರ್ಯತೆ ಆತನಿಗೆ. ಇದ್ದಕ್ಕಿದ್ದಂತೆ ಅರ್ಜುನ ಮಂಕಾಗಿಬಿಟ್ಟ. ತನ್ನ ಗಾಂಢೀವವನ್ನೇ ಕೆಳಗೆ ಹಾಕಿಬಿಟ್ಟ.


ಸಾರಥಿಯಾದರೋ ಕೃಷ್ಣ. ಆತ ಧರ್ಮವನ್ನು , ಧರ್ಮಯುದ್ದದ ಅನಿವಾರ್ಯತೆಯನ್ನು, ಸೃಷ್ಟ್ಟಿ ರಹಸ್ಯವನ್ನು ಅರ್ಜುನನಿಗೆ ತಿಳಿಹೇಳಿದ. ಅನಂತರ ಕುರುಕ್ಷೇತ್ರ ಇತಿಹಾಸಕ್ಕೆ ಸಾಕ್ಷಿಯಾಯಿತು. ಯುದ್ಧದ ಈ ಪೂರ್ವರಂಗ ಮಹಾಭಾರತದಷ್ಟೇ ಪ್ರಮುಖ, ಖ್ಯಾತ. ಸಂಪೂರ್ಣ ಮಹಾಭಾರತದ ತಿರುಳಿರುವುದೇ ಈ ಸನ್ನಿವೇಷದಲ್ಲಿ. ಶ್ರೇಷ್ಠ ಮಹಾಕಾವ್ಯವೆಂದೂ ಅವತಾರಿ ಪುರುಷನ ಪವಿತ್ರವಾದ ಸಂದರ್ಭವೆಂದೂ ಮಹಾಯುಗವೊಂದರ ಮಹಾಸಂದರ್ಭವೆಂದೂ ಕರೆಯುವ ಸನ್ನಿವೇಷವನ್ನು ಅಣಿಗೊಳಿಸಿದ್ದು ಕೃಷ್ಣಾರ್ಜುನರ ಈ ಸಂದರ್ಭ. ಇದರಿಂದ ಅರ್ಜುನ ನಿರಂತರ ಲೋಕಾಪವಾದದಿಂದ ಬಳಲುವುದರಿಂದ ತಪ್ಪಿಸಿಕೊಂಡ. ಧರ್ಮದ ಶ್ರೇಷ್ಠತೆ ಸಾರಥಿಯೊಬ್ಬನ ಮಾತಿನಿಂದ ಇನ್ನಷ್ಟು ಹೆಚ್ಚಿತು. ಲೋಕದಲ್ಲಿ ನೀತಿ ಮತ್ತು ಮೌಲ್ಯಗಳು ಉಳಿಯುವವು ಎಂಬುದನ್ನು ಸಾರಥಿಯ ಸ್ಥಾನದಲ್ಲಿದ್ದ ಕೃಷ್ಣ ಸಾರಿ ಹೇಳಿದ್ದ. ಕೃಷ್ಣ ಅರ್ಜುನನ ಕಣ್ಣನ್ನು ತೆರೆದ. ಮುಂದೆ ಯುದ್ಧದುದ್ದಕ್ಕೂ ಕೃಷ್ಣ ಅರ್ಜುನನನ್ನು ನಿಮಿತ್ತನಾಗಿಟ್ಟುಕೊಂಡ. ಕೃಷ್ಣನಿಂದ ಅರ್ಜುನನ ಗಾಂಡೀವಕ್ಕೂ ತೋಳಿಗೂ ಬಲ ಬಂದಂತಾಯಿತು. ಆತನ ಕಣ್ಣುಗಳಿಗೆ ಲೋಕವನ್ನು ನೋಡುವ ಹೊಸ ದೃಷ್ಟಿಯೊಂದು ಗೋಚರವಾಯಿತು. ಯುದ್ಧ ಮುಗಿಯುವವರೆಗೂ ಕೃಷ್ಣ ಅರ್ಜುನನ ಕೈಬಿಡಲೇ ಇಲ್ಲ. ಮಹಾಮಹಾ ಸಾಮ್ರಾಟರನ್ನು ಕೊಲ್ಲಿಸಿದ. ಹಲವು ದುರುಳರಿಗೆ ಸ್ವತಃ ತಾನೇ ಜೀವನದ ತಪ್ಪನ್ನು ಅರಿಕೆ ಮಾಡಿಕೊಟ್ಟ. ತಾನೆಂದಿಗೂ ಕುರುಕ್ಷೇತ್ರದಲ್ಲಿ ಶಸ್ತ್ರ ಹಿಡಿಯಲಿಲ್ಲ. ಆದರೆ ಅರ್ಜುನನ ಬಾಣ ಕೃಷ್ಣನ ಅಣತಿಯಂತೆ ಸಾಗುತ್ತಿತ್ತು. ರಣರಂಗದಲ್ಲಿ ಕೇವಲ ಶಸ್ತ್ರವೊಂದೇ ಪ್ರಮುಖವಲ್ಲ, ಶಸ್ತ್ರದಿಂದಲೇ ಗೆಲುವಲ್ಲ ಎಂಬುದನ್ನು ತೋರಿಸಿಕೊಟ್ಟ. ಶಸ್ತ್ರದೊಟ್ಟಿಗೆ ಶಾಸ್ತ್ರವನ್ನೂ ಜೊತೆಗಿಟ್ಟ. ಹಾಗಾಗಿ ಬಲಾಢ್ಯ ಸೇನೆಯೆದುರು ಸಣ್ಣ ಸೇನೆಯ ಪಾಂಡವರು ಗೆದ್ದರು. ಆ ಗೆಲುವು ಶಸ್ತ್ರಕ್ಕೂ ಶಾಸ್ತ್ರಕ್ಕೂ ಇದ್ದ ತಾದಾತ್ಮ್ಯದ ಫಲವಲ್ಲದೆ ಇನ್ನೇನು?ಸಾರಥಿಗೂ ಶಸ್ತ್ರಧಾರಿಗೂ ಇದ್ದ ಹೊಂದಾಣಿಕೆಯಲ್ಲದೆ ಮತ್ತೇನು? ಆದ್ದರಿಂದಲೇ ಕೌರವರು ಭೀಮಾರ್ಜುನರಿಗಿಂತಲೂ ಕೃಷ್ಣನತ್ತಲೇ ಒಂದು ಕಣ್ಣಿಟ್ಟಿದ್ದರು.
ಪುರಾಣಗಳಲ್ಲಿ ಮಾತ್ರವಲ್ಲ, ದೇಶದ ಇತಿಹಾಸದಲ್ಲಿ ಕೂಡ ಇಂಥ ಪ್ರಸಂಗಗಳು ಅಲ್ಲಲ್ಲಿ ಗೋಚರವಾಗುತ್ತವೆ. ಶಸ್ತ್ರ ಹಿಡಿಯಲು ಪ್ರೇರೇಪಿಸಿದ ಶಾಸ್ತ್ರದ ಮನಸ್ಸುಗಳು, ಧರ್ಮಸಂಸ್ಥಾಪನೆ ಮಾಡಿದ ಶಸ್ತ್ರ- ಶಾಸ್ತ್ರದ ಸಮ್ಮಿಳಿತಗಳು ಇಲ್ಲದ ಭಾರತದ ಇತಿಹಾಸವೇ ಇಲ್ಲ. ಅಂಥ ಸಮ್ಮಿಳಿತಗಳು ಅಖಂಡ ಭಾರತದಲ್ಲಿ ವಿಶಾಲ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿತ್ತು. ಸವಾಲುಗಳನ್ನು ಮೆಟ್ಟಿ ವಿಜಯನಗರವನ್ನು ನಿಲ್ಲಿಸಿತ್ತು. ಧರ್ಮದ ಉದ್ದಾರಕ್ಕಾಗಿಯೇ ಮರಾಠ ಮಂಡಲವನ್ನು ಸೃಷ್ಟಿ ಮಾಡಿತ್ತು. ಈ ಎಲ್ಲವೂ ನೂರಾರು ವರ್ಷಗಳ ಕಾಲ ಸುವರ್ಣ ಯುಗವನ್ನು ಕಂಡವು. ಅಲ್ಲೆಲ್ಲಾ ಅರ್ಜುನನಂಥಾ ಶಸ್ತ್ರಧಾರಿಯೂ ಕೃಷ್ಣನಂಥಾ ಶಾಸ್ತ್ರ ಕೋವಿದ ಸಾರಥಿಗಳೂ ಇದ್ದಿದ್ದು ವಿಶೇಷ. ಭಾರತದ ಎಲ್ಲೇ ನೋಡಿದರೂ ಕೇವಲ ಕತ್ತಿಯ ಬಲದಿಂದ ಸುವರ್ಣಯುಗದ ಸಾಮ್ರಾಜ್ಯಗಳು ಸ್ಥಾಪನೆಯಾಗಿರುವುದನ್ನು ಕಾಣಲಾರೆವು. ಆದರೆ ಎಲ್ಲೆಲ್ಲಿ ಕ್ಷಾತ್ರತೇಜಸ್ಸಿನ ಸಂನ್ಯಾಸಿಗಳಿದ್ದರೋ ಅಲ್ಲೆಲ್ಲಾ ರಾಮರಾಜ್ಯವನ್ನು ನೆನಪಿಸುವ ಸಾಮ್ರಾಜ್ಯಗಳು ನಿರ್ಮಾಣವಾದುದನ್ನು ಕಾಣಬಹುದು.
ಇದು ಪ್ರಜಾಪ್ರಭುತ್ವದ ಕಾಲ. ಪ್ರಜಾಪ್ರಭುತ್ವವೆಂದ ಮಾತ್ರಕ್ಕೆ ಶಸ್ತ್ರಬಲದ ಆವಶ್ಯಕತೆಯೇ ಇಲ್ಲವೆಂದೂ ಅರ್ಥವಲ್ಲ. ಹಾಗಾಗಿ ಪ್ರಜಾಪ್ರಭುತ್ವದಲ್ಲೂ ಕೂಡ ಸೈನ್ಯವನ್ನು ಪ್ರಮುಖ ಅಂಗವೆಂದೇ ಪರಿಗಣಿಸಲಾಗುತ್ತದೆ. ಅಲ್ಲದೆ ಇಂದಿನ ಆಧುನಿಕದಲ್ಲಂತೂ ಸೈನ್ಯದ ಕಾರ್ಯ ಮತ್ತು ಪ್ರಸ್ತುತತೆಗೆ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ನಿಜ, ಸೈನ್ಯ ಇಂದು ಧರ್ಮರಕ್ಷಣೆ ಮಾಡುವುದಿಲ್ಲ, ಸಾಂಸ್ಕೃತಿಕ ಆಕ್ರಮಣವನ್ನೂ ಅದು ತಡೆಯಲಾಗುವುದಿಲ್ಲ. ಸೇನೆ ವ್ಯಕ್ತಿನಿರ್ಮಾಣವನ್ನಂತೂ ಮಾಡುವುದಿಲ್ಲ. ಆರ್ಥಿಕ ಆಕ್ರಮಣದ ಮುಂದೆ ಸೈನ್ಯಕ್ಕೆ ಕೈಕಟ್ಟಿ ಕುಳಿತಿರುವುದೊಂದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಸೇನೆಯ ಆವಶ್ಯಕತೆಯ ಹೊಸ ಆಯಾಮಗಳೇಕ ಇಂದು ತೆರೆದುಕೊಂಡಿವೆ. ಸ್ವತಂತ್ರ ಭಾರತಕ್ಕೆ ಅದರ ಅನುಭವವೂ ಆಗಿದೆ. ಹೊಸ ತುರ್ತುಗಳು ಬಂದಿರುವಂತೆಯೇ ಹೊಸ ಕೊರತೆಗಳೂ ಕೂಡ ನಮ್ಮ ಸೈನ್ಯದಲ್ಲಿ ಕಂಡುಬರುತ್ತಲೇ ಇದೆ. ಜೊತೆಗೆ ಶಸ್ತ್ರವೂ ಶಾಸ್ತ್ರವೂ ಯಾವ ಕಾಲಕ್ಕೂ ಪ್ರಸ್ತುತ ಎಂಬುದೂ ಕೂಡ ಅನುಭವಕ್ಕೆ ಬರುತ್ತಿದೆ. ಇಂಥದ್ದೇ ಹೊತ್ತಿನಲ್ಲಿ ಭಾರತೀಯ ಸೇನೆಯ ಬಗ್ಗೆ ಕೆಲವು ದಿನಗಳ ಹಿಂದೆ ವಿಪರೀತ ಚರ್ಚೆಗಳೆದ್ದಿದ್ದವು.
ಕೆಲ ತಿಂಗಳ ಹಿಂದೆ ಸೇನಾ ಮುಖ್ಯಸ್ಥರ ಜನ್ಮ ದಿನದ ಮತ್ತು ಟ್ರಕ್ ಖರೀದಿಯಲ್ಲಿ ನಡೆದಿದೆಯೆನ್ನಲಾದ ಹಗರಣದ ಬಗ್ಗೆ ವಿಪರೀತವಾಗಿ ಚರ್ಚೆಗಳಾದವು. ಮಾಧ್ಯಮಗಳು ಅವುಗಳನ್ನು ಸಾಮಾನ್ಯನಿಗೆ ಮುಟ್ಟಿಸಿದ್ದವು. ಇಷ್ಟರವರೆಗೆ ಯಾವುದನ್ನು ಪ್ರಶ್ನಾತೀತ ಎಂದು ಭಾವಿಸಲಾಗಿತ್ತೋ ಯಾವುದನ್ನು ಅತಿ ಪವಿತ್ರ ಎಂದುಕೊಳ್ಳಲಾಗಿತ್ತೋ ಯಾವುದನ್ನು ಜನರು ದೇಶದ ಪಾಲಿನ ಅರ್ಜುನ ಎಂದುಕೊಂಡಿದ್ದರೋ ಅದರ ಬಗ್ಗೆ ಜನ ನೊಂದುಕೊಂಡರು. ಇದಕ್ಕೂ ಮೊದಲೂ ಇಂಥ ಹಗರಣಗಳ ವಾಸನೆಗಳು ಇದ್ದವಾದರೂ ಈ ಪರಿಯಲ್ಲಿ ಜನರನ್ನು ಅದು ಮುಟ್ಟಿರಲಿಲ್ಲ. ಮತ್ತು ಈ ಬಾರಿ ಮಾಧ್ಯಮಗಳೂ ಕೂಡ ಮೈಚಳಿ ಬಿಟ್ಟು ಸೇನೆಯನ್ನು ತರಾಟೆಗೆ ತೆಗೆದುಕೊಂಡಿದ್ದವು.``ಸೇನೆಯಲ್ಲೇ ಹೀಗಾದರೆ!?'' ಎಂದು ಪ್ರಜ್ಞಾವಂತರು ನಿಟ್ಟುಸಿರು ಬಿಟ್ಟರು. ಕೆಲವು ಬುದ್ಧಿಜೀವಿಗಳಂತೂ `` ಇನ್ನು ಭಾರತೀಯ ತೋಪುಗಳು ಸಿಡಿಯುವುದೇ ಸಂದೇಹ'' ಎಂಬರ್ಥದಲ್ಲಿ ಮಾತಾಡಿಬಿಟ್ಟರು.
ಸೈನ್ಯದ ಹಗರಣಗಳು, ಆಂತರಿಕ ಸರ್ವಾಧಿಕಾರಿ ಪ್ರವೃತ್ತಿ, ಒಳಜಗಳಗಳು, ಲಾಭಿಗಳು ಏನೇ ಇರಲಿ ಮೊದಲು ಸಾರಥಿಯನ್ನು ಹೊಣೆ ಮಾಡಬೇಕಲ್ಲದೆ ಸೈನ್ಯವನ್ನೇ ನಿಂದಿಸುವುದು ಎಷ್ಟರಮಟ್ಟಿಗೆ ಸರಿ? ಸೇನಾ ನಾಯಕನೇ ಸರಿ ಇಲ್ಲ ಎಂಬುದು ಸಾಧಾರಣ ಜವಾನನ ಮನಸ್ಸಿಗೆ ಬಂದು ಆತನ ಮನಸ್ಸು ಕುಗ್ಗುವುದು ಒಂದೆಡೆಯಾದರೆ ಸೇನಾ ನಾಯಕರಲ್ಲೇ ಸುಳ್ಳಿನ ಜಾಲರಿಗೆ ಬೀಳುವ ಮನಸ್ಸಾದುದಕ್ಕೆ ಯಾರು ಕಾರಣ? ಸರಕಾರವೇ ಸುಳ್ಳಿನ ಮಂಟಪದಲ್ಲಿ ಕೂತಿರುವಾಗ ಜನ್ಮ ದಿನಾಂಕದ ಸಂಗತಿಗೆ ಸಮಜಾಯಿಷಿಗಳ ಕೊರತೆಯಿದೆಯೇ? ಆದರೆ ಚರ್ಚೆಯ ಹೊತ್ತಲ್ಲಿ ಯಾರೂ ಸಾರಥಿಯ ಪಾತ್ರವನ್ನು ವಿಮರ್ಶಿಸಲೇ ಇಲ್ಲ. ಎಲ್ಲರೂ ಧನುರ್ಧಾರಿಗಳನ್ನೇ ಜಾಡಿಸಿದರು. ಆದರೆ ಭಾರತೀಯ ಸೈನ್ಯವನ್ನು ವಿಮರ್ಶಿಸಬೇಕೆಂದರೆ ಭಾರತದ ಸರಕಾರವನ್ನು ಅದರಿಂದ ಹೊರತಾಗಿ ಇಡಲು ಸಾಧ್ಯವೇ ಇಲ್ಲ. ಏಕೆಂದರೆ ಭಾರತೀಯ ಸೇನೆಗೆ ಸರಕಾರವೇ ಸಾರಥಿ. ಈ ಸಾರಥಿಯಾದರೋ ಮಾಡಿದ್ದೇನನ್ನು ? ಹಿಂದೊಮ್ಮೆ ಗಡಿಯಲ್ಲಿ ಬಂದೂಕಿನ ಗುರಿ ಇಟ್ಟು ಹೊಂಚುಹಾಕುತ್ತಿದ್ದ ಸೈನ್ಯವನ್ನು ಏಕಾಏಕಿ ಹಿಂದಕ್ಕೆ ಕರೆಸಿಕೊಂಡಿದ್ದು ಇದೇ ಸಾರಥಿ! ಗಡಿಯ ಪರಿಜ್ಞಾನವೇ ಇಲ್ಲದೆ ವಿಚಿತ್ರವಾಗಿ ಕಾಗದ ಪತ್ರಗಳನ್ನು ಮಂಡಿಸಿ ಯೋಧರನ್ನು ಅಪಮಾನಿಸಿದ್ದು ಇದೇ ಸಾರಥಿ. ` ನಮಗೆ ಮದ್ದು ಗುಂಡುಗಳನ್ನಾದರೂ ಕೊಡಿ' ಎಂದವರಿಗೆ `ಸುಮ್ನಿರಿ' ಎಂದಿದ್ದು ಇದೇ ಸಾರಥಿ. ನಮಗೆ ಇಂತಿಂಥ ವಿಮಾನ ಕೊಡಿ ಎಂದ ಯೋಧರಿಗೆ ` ಇದರಲ್ಲೇ ಅಡ್ಜೆಸ್ಟ್ ಮಾಡಿಕೊಳ್ಳಿ' ಎಂದು ಸರಳತೆಯ ಪಾಠ ಹೇಳಿದ್ದು ಇದೇ ಸಾರಥಿ. ` ಇಂಥವರಿಂದ ನಮಗೆ ಅಪಾಯ ಕಟ್ಟಿಟ್ಟ ಬುತ್ತಿ' ಎಂದಾಗ ` ಹೇಳಿದಷ್ಟು ಮಾಡಿಕೊಂಡು ಬಿದ್ದಿರಿ' ಎಂದಿದ್ದು ಇದೇ ಸಾರಥಿ. ಒಟ್ಟು ನಮ್ಮ ಸರಕಾರ ಸಾರಥಿ ಎಂಬ ಪದಕ್ಕೇ ಅವಮಾನವಾಗುವಂತೆ ಸೈನ್ಯದೊಡನೆ ನಡೆದುಕೊಂಡಿತು. ಹಾಗಾದರೆ ಹೊಣೆ ಮಾಡಬೇಕಾದುದು ಯಾರನ್ನು ? ಶಸ್ತ್ರಧಾರಿಯನ್ನೋ, ಸಾರಥಿಯನ್ನೋ? ಸೈನ್ಯದ ಬಗ್ಗೆ ಚರ್ಚೆಯಾಗುತ್ತಿರುವ ಹೊತ್ತಿನಲ್ಲಿ 60ರ ದಶಕದಲ್ಲಿ ಸುದ್ಧಿಯಾದ `ತಿಮ್ಮಯ್ಯ ಎಪಿಸೋಡ್' ನೆನಪಾಗುತ್ತದೆ. ಆ ಪ್ರಸಂಗ ಸರಕಾರ ಮತ್ತು ಸೈನ್ಯದ ನಡುವಿನ ತಾಕಲಾಟಗಳಿಂದ ದೇಶವ್ಯಾಪಿ ಚರ್ಚೆಯಾಗಿತ್ತು. `` ಚೀನಾ ದೇಶದ ನಂಬರ್ ಒಂದು ಶತ್ರುದೇಶ'' ಎಂದ ತಿಮ್ಮಯ್ಯನವರನ್ನು ರಕ್ಷಣಾ ಸಚಿವ ಕೃಷ್ಣ ಮೆನನ್ನರು `` ಈತನಿಗೆ ತಲೆಕೆಟ್ಟಿದೆ. ಬ್ರಿಟಿಷ್ ಕಾಲದ ಮನುಷ್ಯ'' ಎಂದು ಹೀಗಳೆದಿದ್ದರು. ಹೀಗೆ ಕೃಷ್ಣ ಮೆನನ್, ನೆಹರೂ ಮತ್ತು ಅಂದು ಜನರಲ್ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಮೆ. ಜ. ಕೌಲ್ ಮುಂತಾದವರು ಸ್ವಹಿತಾಸಕ್ತಿಯಿಂದ ದೇಶ ಹಿತವನ್ನು ಬಲಿಕೊಟ್ಟೇಬಿಟ್ಟಿದ್ದರು. ನಮ್ಮ ಸೈನ್ಯ ಚೀನಾ ಗಡಿಯಲ್ಲಿ ಹೆಸರುಗತ್ತೆಗಳ ಮೇಲೆ ಸರಕು ಸರಂಜಾಮು ಸಾಗಿಸುತ್ತಿದ್ದಾಗಲೂ ನಮ್ಮ `ಸಾರಥಿ' ಸೈನ್ಯಕ್ಕೆ ಟ್ರಕ್ ಒಂದನ್ನು ಕೂಡಾ ಮಂಜೂರು ಮಾಡಲಿಲ್ಲ. ಚಳಿಯಲ್ಲಿ ಸಾಯುತ್ತಿದ್ದ ಯೋಧರಿಗೆ ಕೈಗವಸು ಕೂಡ ಕೊಡಲಿಲ್ಲ. ಈ `ಎಪಿಸೋಡ್' ನಿಂದ ನೊಂದ ತಿಮ್ಮಯ್ಯನವರೊಂದಿಗೆ ನೌಕಾಮುಖ್ಯಸ್ಥರು ಮತ್ತು ವಾಯುಪಡೆಯ ಮುಖ್ಯಸ್ಥರು ಕೂಡ ರಾಜೀನಾಮೆಯನ್ನು ಕೊಟ್ಟಿದ್ದರು. ಇಂಥ ಮನಸ್ಸು ನೋಯಿಸಿದ ಹಲವು ಉದಾಹರಣೆಗಳು ನಮ್ಮ ಸೈನ್ಯದಲ್ಲಿ ಸಾಕಷ್ಟಿವೆ. ಹಾಗಾದರೆ ತಪ್ಪಿತಸ್ಥರು ಯಾರು?
ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸೈನ್ಯ ಇರುವುದೇ ಹಾಗೆ. ಅಥವಾ ಸೇನೆಯನ್ನು ಎಲ್ಲಿಡಬೇಕೋ ಅಲ್ಲೇ ಇಡಲಾಗುತ್ತದೆ ಎಂಬುದು ಕಹಿಯಾದರೂ ಸತ್ಯ. ಕಾರ್ಯಾಂಗದ ದೌರ್ಬಲ್ಯವನ್ನೂ ನ್ಯಾಯಾಂಗದ ವಿಳಂಬವನ್ನೂ ಕಣ್ಣ ಮುಂದಿಟ್ಟುಕೊಂಡು ಸೇನೆಗೆ ಪರಮಾಧಿಕಾರವನ್ನು ಕೊಡುವ ಕೆಲಸವನ್ನು ಯಾರೂ ಮಾಡಲಿಲ್ಲ. ಹಾಗಾಗಿ ಶಸ್ತ್ರಧಾರಿ ಮತ್ತು ಸಾರಥಿಯ ತಾದಾತ್ಮ್ಯಕ್ಕೆ ವಾತಾವರಣ ಸೃಷ್ಟಿಯಾಗಲೇ ಇಲ್ಲ. ಹೀಗಾಗಿ ಎಲ್ಲೆಲ್ಲೂ ಎಡವಟ್ಟುಗಳೇ ಕಂಡುಬರತೊಡಗಿದವು. ಬಹುತೇಕ ರಕ್ಷಣಾ ಬಜೆಟ್ಗಳನ್ನು ಗಡಿ ಎಲ್ಲೆಲ್ಲಿದೆ ಎಂದು ತಿಳಿಯದವರೇ ಮಂಡಿಸಿದರು. ಆಂಥಲ್ಲಿ ಜೀಪುಹಗರಣಗಳು, ಟ್ರಕ್ ಹಗರಣಗಳು ನಡೆಯದೇ ಇನ್ನೇನಾದೀತು? ಇಂದು ನಮ್ಮಲ್ಲಿ ಸೈನ್ಯದ ಬಗ್ಗೆ ಹೆಮ್ಮೆ ಪಡಲು ಕಾರಣಗಳು ಹಲವಾರು ಇರಬಹುದು. ಅದಕ್ಕೆಲ್ಲಾ ನಮ್ಮ ಅಪ್ರತಿಮ ಯೋಧರು ಕಾರಣವೇ ಹೊರತು ಸಾರಥಿಯ ಸ್ಥಾನದಲ್ಲಿರುವ ಸರಕಾರವಲ್ಲ.
ಕಳೆದ ವಾರ ಬೆಂಗಳೂರಿನಲ್ಲಿ ಲೆ.ಜ(ನಿ.) ಸಂಪತ್ ಕುಮಾರ್ ಅವರು ಮಾತನಾಡುತ್ತಾ ಸೈನ್ಯ ಮತ್ತು ಸರಕಾರಗಳ ನಡುವಣ ಹಲವು ಗಂಭೀರ ಸಂಗತಿಗಳನ್ನು ಬಿಚ್ಚಿಡುತ್ತಿದ್ದರು. ಅಂದು 95ಸಾವಿರ ಪಾಕ್ ಯುದ್ಧ ಖೈದಿಗಳನ್ನು ಸೆರೆಹಿಡಿದರೂ ಇಂದಿಗೂ ಮರೆಯಾಗದ ಬಾಂಗ್ಲಾಭೀತಿಯನ್ನು, ಸೈನ್ಯ ಸರಕಾರದ ಬಗ್ಗೆ ಎಷ್ಟೇ ನಂಬಿಕೆಯನ್ನು ವ್ಯಕ್ತಪಡಿಸಿದರೂ ಇನ್ನೂ ಸರಕಾರಕ್ಕೆ ಬಾರದ ಸೈನ್ಯದ ಮೇಲಿನ ನಂಬಿಕೆಯನ್ನು , ಭ್ರಷ್ಟ ರೂ ಖರೀದಿಸಲ್ಟಟ್ಟವರೂ ಆದ ಪತ್ರಕರ್ತರನೇಕರು ಸೇನೆಯನ್ನು ತೆಗಳುವ ಪರಿಯನ್ನು, ರಾಜಕಾರಣಿಗಳಿಂದ ನಿರ್ಧರಿಸಲ್ಪಡುತ್ತಿರುವ ಸುರಕ್ಷಾ ಸಂಗತಿಗಳನ್ನು, ವಿಶೇಷಾಧಿಕಾರವನ್ನು ಹಲ್ಲಿಲ್ಲದ ಹಾವು ಮಾಡಲು ಪ್ರಯತ್ನಿಸುತ್ತಿರುವ ತುಷ್ಟೀಕರಣ ನೀತಿಯನ್ನು, ರಾಜಕೀಯ ಪ್ರಣಾಳಿಕೆಗೆ ತಕ್ಕಂತೆ ಸೈನ್ಯ ತನ್ನ ನಡೆಗಳಲ್ಲಿ ಮಾಡಿಕೊಳ್ಳಬೇಕಾದ ಬದಲಾವಣೆಯನ್ನು ಎಳೆಎಳೆಯಾಗಿ ತೆರೆದಿಡುತ್ತಿದ್ದರು. ಅವರ ವೇದನೆಯ ಮಾತುಗಳನ್ನು, ಸರಕಾರದ ನಡೆಯನ್ನು ಕೇಳುತ್ತಿದ್ದರೆ ಕುರುಕ್ಷೇತ್ರದಲ್ಲಿ ಸಾಕ್ಷಾತ್ ಕೃಷ್ಣನೇ `` ಈ ಯುದ್ದದಿಂದ ಏನಾಗಬೇಕಿದೆ ಅರ್ಜುನಾ, ಬಾ ಕೌರವರಿಲ್ಲದ ರಾಜ್ಯವನ್ನು ಹುಡುಕಿ ಪಗಡೆ ಆಡೋಣ'' ಎಂದು ಹೇಳಿದಂತೆನಿಸುತ್ತದೆ.
ಇನ್ನು ಸೇನೆಯ ಆವಶ್ಯಕತೆಗಳನ್ನಂತೂ ಸಾರಥಿ ತಲೆಕೆಡಿಸಿಕೊಂಡಿಲ್ಲ. ನಮ್ಮ ಹೆಚ್ಎ ಎಲ್ ಎಂಬ ಏಕರೆಗಟ್ಟಲೆಯ ಹೆಮ್ಮೆಗಿನ್ನೂ ಜೆಟ್ ಫೈಟರನ್ನು ತಯಾರಿಸಲು ಸಾಧ್ಯವೇ ಆಗಿಲ್ಲ. ನಮ್ಮ ಜಲಾಂತರ್ಗಾಮಿಗಳು ಮತ್ತು ಅತ್ಯಾಧುನಿಕ ಯುದ್ಧ ವಿಮಾನಗಳಿಗೆ ವಿದೇಶವನ್ನೇ ಅವಲಂಭಿಸಬೇಕಾದ ಸ್ಥಿತಿ. ಎಷ್ಟೋ ವರ್ಷಗಳ ಪರಿಶ್ರಮದಿಂದ ತಯಾರಿಸಲಾದ ಐಎನ್ ಎಸ್ ವಿಕ್ರಾಂತ್ ಈಗ ಮುದಿಯಾದ ಜಹಜು. ಮುಂದಿನ ಐಎನ್ಎಸ್ ಗಳೆಲ್ಲಾ ರಷ್ಯಾ ತಂತ್ರಜ್ಞಾನದವುಗಳು, ಮದರಾಸಿನ ಆವಾಡಿ ಎಂಬಲ್ಲಿದ್ದ ಸರಕಾರದ ಕಾರ್ಖಾನೆಯಲ್ಲೀಗ ರಾಯಲ್ ಎನ್ಫೀಲ್ಢ್ ಮೋಟಾರು ಬೈಕುಗಳೂ ತಯಾರಾಗುತ್ತಿಲ್ಲ. ಒಂದೊಮ್ಮೆ ಇಲ್ಲಿಂದಲೇ ಟ್ಯಾಂಕರ್ಗಳನ್ನು ತಯಾರಿಸಲಾಗುತ್ತು. ಇಲ್ಲಿ ತಯಾರಿಸಿದರೆ ಕಮಿಷನ್ ಗೆ ಕತ್ತರಿ ಬೀಳುವುದರಿಂದ ಈಗ ಅದೂ ವಿದೇಶದಿಂದ ಆಮದಾಗುವ ಸರಕು. ಇವೆಲ್ಲಕ್ಕೂ ಇತಿಹಾಸವನ್ನು ತಿಳಿದು ಸೈನ್ಯವನ್ನು ಹೊಣೆ ಮಾಡಲಾಗುವುದಿಲ್ಲ. ಆದರೆ ಇಂದು ಎಲ್ಲರೂ ಕಂಡೆಕ್ಟರನನ್ನೇ ಬೊಟ್ಟು ಮಾಡುತ್ತಿದ್ದಾರೆ. ಡ್ರೈವರನೇ ಕುಡಿದಿದ್ದರೆ ಮಾಡುವುದೇನನ್ನು?

- ಸಂತೋಷ್ ತಮ್ಮಯ್ಯ
ಪತ್ರಕರ್ತ

1 comments:

Anonymous said...

Nice article

Post a Comment