ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ


ಎಲ್ಲಿ ಭೂರಮೆ ದೇವ ಸನ್ನಿಧಿ ಬಯಸಿ ಬಿಮ್ಮನೆ ಬಂದಳೋ
ಎಲ್ಲಿ ಮೋಹನ ಗಿರಿಯ ಬೆರಗಿನ ರೂಪಿನಿಂದಲಿ ನಿಂದಳೋ
ಎಲ್ಲಿ ಮುಗಿಲಲಿ ಮಿಂಚಿನೋಲ್ ಹಾವೇರಿ ಹೊಳೆ ಹೊಳೆ ಹೊಳೆವಳೋ


ಎಲ್ಲಿ ನೆಲವನು ತಣಿಸಿ ಜನಮನ ಹೊಲದ ಕಳೆ ಕಳೆ ಕಳೆವಲೋ
ಅಲ್ಲೆ ಆ ಕಡೆ ನೋಡಲಾ
ಅಲ್ಲೆ ಕೊಡಗರ ನಾಡಲಾ
ಅಲ್ಲೆ ಕೊಡಗರ ಬೀಡಲಾ

ಕವಿಯ ಕಲ್ಪನೆ ಭೂ ರಮನೆಯ ತಾಜಾತನ, ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಹಸಿರ ಐಸಿರಿಯೊಂದಿಗೆ, ಅದಮ್ಯ ಪ್ರಕೃತಿ ಸೌಂದರ್ಯದೊಂದಿಗೆ ಅನಘ್ರ್ಯ ಸಾಂಸ್ಕೃತಿಕ ವೈವಿಧ್ಯಗಳೊಂದಿಗೆ ನೆಲೆನಿಂತ ಜಿಲ್ಲೆ ಕೊಡಗು.


ಕೊಡಗು ಒಂದು ಸಾಂಸ್ಕೃತಿಕ ರಾಜಧಾನಿ.ಇಲ್ಲಿನ ಸಂಸ್ಕೃತಿ - ಸಂಸ್ಕಾರ ,ಕೊಡವರ ಭಾಷೆ, ಆಚಾರ ವಿಚಾರ , ಆತಿಥ್ಯ, ಉಡುಗೆ - ತೊಡುಗೆ, ಎಲ್ಲವೂ ಭಿನ್ನ ವಿಭಿನ್ನ. ಕೊಡವರಲ್ಲಿ ಅನೇಕರು ಇಂದಿಗೂ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿದ್ದಾರೆ.
ಕೊಡಗು ಉತ್ತಮ ಪ್ರಕೃತಿ ಸೌಂದರ್ಯವನ್ನೊಳಗೊಂಡ ಪ್ರದೇಶ.

ಸಮಶೀತೋಷ್ಣವಾದ ವಾತಾವರಣ. ಮನಕ್ಕೆ ಮುದ ನೀಡುವ ಹವೆ. ಕೊಡಗಿನ ತುಂಬೆಲ್ಲಾ ವೀರತ್ವ, ಶೂರತ್ವ, ಶೌರ್ಯ, ಸಾಹಸೀ ಪ್ರವೃತ್ತಿಗಳು ಕಾಣಸಿಗುತ್ತವೆ. ಎಲ್ಲೆಂದರಲ್ಲಿ ಹಳೆಯ ನೆನಪುಗಳನ್ನು ಮತ್ತೆ ನೆನಪಿಸುವ ಸ್ಮಾರಕಗಳು, ಪುರಾವೆಗಳು ಇಂದಿಗೂ ಕಾಣಸಿಗುತ್ತವೆ.
ಕೊಡಗಿನ ವೀರರ ಸಾಧನೆಗಳಿಗೆ ಸಾಕ್ಷಿಯಾಗುವ ಹಲವು ದಾಖಲೆಗಳು ಕಂಡುಬರುತ್ತವೆ.


ಸುಂದರ ನಾಡು ಕೊಡಗನ್ನು ಆಳಿದವರು ಅನೇಕರು. ಗಂಗ, ಕೊಂಗಾಳ್ವ, ಚೆಂಗಾಳ್ವ, ಹೊಯ್ಸಳ, ವಿಜಯನಗರ, ಬೇಲೂರು ನಾಯಕರು, ತದನಂತರದ ದಿನಗಳಲ್ಲಿ ಕೊಡಗಿನ ವೀರ ನಾಯಕರು ಈ ನಾಡನ್ನಾಳಿದರು. ಸ್ವಾತಂತ್ರ್ಯದ ತನಕ ಬ್ರಿಟಿಷ್ ಅಧಿಕಾರಕ್ಕೆ ಈ ಪ್ರದೇಶ ಒಳಪಟ್ಟಿತ್ತು.

ಕೊಡಗಿನ ವೀರ ನಾಯಕರು, ಕೊಡಗಿನ ಸಾಂಸ್ಕೃತಿಕ ಐಸಿರಿ, ಪ್ರಾಮುಖ್ಯತೆ, ಪ್ರಾಚೀನತೆಯನ್ನು ಒಂದೇ ಸೂರಿನಡಿ ಕಟ್ಟಿಕೊಡುವ ತನ್ಮೂಲಕ ಕೊಡಗಿನ ಬಗೆಗಿನ ಒಂದು ಸ್ಥೂಲ ಚಿತ್ರಣ ದೊರಕುವಂತೆ ಮಾಡುವ ಉತ್ತಮ ಪ್ರಯತ್ನವಾಗಿದೆ. ಅದುವೇ ಸರ್ಕಾರಿ ವಸ್ತು ಸಂಗ್ರಹಾಲಯ. ಮಡಿಕೇರಿಯ ಕೋಟೆ ಆವರಣದಲ್ಲಿ ಈ ಸರಕಾರಿ ವಸ್ತು ಸಂಗ್ರಹಾಲಯವಿದೆ.


ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ಇಲಾಖೆ ಆಶ್ರಯದಲ್ಲಿ ಇದನ್ನು 1971ರಲ್ಲಿ ಸ್ಥಾಪಿಸಲಾಗಿದೆ. 150ವರುಷಗಳ ಹಿಂದಿನ ರೋಮನ್ ಗೋಥಿಕ್ ಶೈಲಿಯ ಚರ್ಚ್ ಒಂದರಲ್ಲಿ ಈ ಸಂಗ್ರಹಾಲಯ ರೂಪಿಸಲ್ಪಟ್ಟಿದೆ. ಪ್ರವೇಶ ಧ್ವಾರದ ಮೇಲೆ ಎತ್ತರದ ಕಮಾನು , ವಿಶಾಲವಾದ ಸಭಾಂಗಣ, ಪಾರದರ್ಶಕ ಗಾಜಿನ ಕಿಟಿಕಿಗಳು, ಹಳೆಯ ಬರಹಗಳು, ಚಿತ್ರಗಳು, ವಿಭಿನ್ನ ವಾಸ್ತು ವೈಭವದೊಂದಿಗೆ ಈ ಕಟ್ಟಡವೂ ಒಂದು ನೋಡುವಂತಹ ಐತಿಹಾಸಿಕ ಮಹತ್ವವನ್ನು ಒಳಗೊಂಡಿದೆ.


ಈ ವಸ್ತು ಸಂಗ್ರಹಾಲಯದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರು ನೀಡಿದ ಹಲವು ವಸ್ತುಗಳನ್ನು ಜತನದಿಂದ ಕಾಪಿಡಲಾಗಿದೆ. ನೇಪಾಳದ ಕಂಚಿನ ವಿಗ್ರಹಗಳು, ಆಸ್ಟ್ರೇಲಿಯಾ, ಮೊರಾಕೋ ದೇಶದ ವಸ್ತುಗಳು ಈ ಸಂಗ್ರಹಾಲಯದಲ್ಲಿದೆ.


ಈ ವಸ್ತುಸಂಗ್ರಹಾಲಯದಲ್ಲಿ ಜೈನ ತೀರ್ಥಂಕರರ ಕಲ್ಲಿನ ವಿಗ್ರಹಗಳು, ಕಂಚಿನ ವಿಗ್ರಹಗಳು, ಹಿಂದೂ ಸಂಪ್ರದಾಯಕ್ಕೊಳಪಡುವ ವಿಗ್ರಹಗಳು, ದೊರೆ ರಾಜೇಂದ್ರನ ಕಾಲದ ಒಡಿಕತ್ತಿಗಳು, ಕಳೆದ ಶತಮಾನಕ್ಕೆ ಸೇರಿದ ಕೋವಿಗಳು, ಯುದ್ಧಗತ್ತಿಗಳು, ಜಾನಪದ ಕಂಚಿನ ವಿಗ್ರಹಗಳು, ವೀರಕಲ್ಲುಗಳು, ಫಿರಂಗಿಗಳು ಇವೆ.ಒಟ್ಟಿನಲ್ಲಿ ಮಡಿಕೇರಿಗೆ ಹೋದರೆ ಒಂದು ಬಾರಿ ಈ ವಸ್ತು ಸಂಗ್ರಹಾಲಯ ನೋಡಲೇ ಬೇಕು.
ಸಂಗ್ರಹಾಲಯದಲ್ಲಿರುವ ಕ್ರಿ.ಶ.12 - 15ನೇ ಶತಮಾನದ ಸಂದರ್ಭದ ಅತ್ಯಂತ ಕುಸುರಿ ಕೆತ್ತನೆಗಳನ್ನೊಳಗೊಂಡ ತೀರ್ಥಂಕರರ ಹಾಗೂ ಇತರ ದೇವ ದೇವತೆಗಳ ವಿಗ್ರಹ ನೋಡುಗರನ್ನು ಮೋಡಿ ಮಾಡುತ್ತವೆ. ಈ ಪೈಕಿ ಕೆಲವೊಂದು ಭಗ್ನ ವಿಗ್ರಹಗಳೂ ಇವೆ.


ಕೊಡವರು ವೀರರು ಶೂರರು ಎಂಬ ಮಾತು ಜನಜನಿತ.ಇದಕ್ಕೆ ಸಾಕ್ಷಿ ಇಲ್ಲಿರುವ ವೀರಕಲ್ಲುಗಳು. ಕೊಡಗಿನ ವೀರರ ಕಥೆಗಳನ್ನು ಸಾರಿ ಹೇಳುವ ವೀರಕಲ್ಲುಗಳು ಈ ಜಿಲ್ಲೆಯಿಂದಲೇ ಸಂಗ್ರಹಿಸಿ ಸಂಗ್ರಹಾಲಯದಲ್ಲಿ ಕಾಪಿಡಲಾಗಿದೆ. ಉಮಾ ಮಹೇಶನ ಲೋಹದ ವಿಗ್ರಹ ಅದ್ಭುತಕುಸುರಿ ಕೆತ್ತನೆಗಳಿಂದ ಕೂಡಿದ್ದು ರೋಮಾಂಚನ ಮೂಡಿಸುತ್ತದೆ.ಕೊಡಗಿನ ಪ್ರಮುಖ ಆಕರ್ಷಣೀಯ ಆಯುಧಗಳಾದ ಒಡಿಕತ್ತಿ ಪೀಚೆಕತ್ತಿ(ಪೀಶಕತ್ತಿ), ಉದ್ದನೆಯ ಖಡ್ಗಳು, ಖಡ್ಗದ ಒರೆಗಳು, ಲೋಹದ ಕತ್ತಿ, ಚೂರಿ, ಏಕ ಕೊಳವೆ, ದ್ವಿ ಕೊಳವೆ ಕೋವಿಗಳು, ಪಿಸ್ತೂಲ್, ಫಿರಂಗಿ ಗುಂಡುಗಳು, ಕಂಚಿನ ಫಿರಂಗಿ ಇವೆಲ್ಲವನ್ನೂ ಇಲ್ಲಿ ಕಾಣಬಹುದಾಗಿದೆ.
ಸರಕಾರಿ ರಜಾ ದಿನ, ಸೋಮವಾರ ಮತ್ತು ಎರಡನೇ ಶನಿವಾರ ಹೊರತು ಪಡಿಸಿದಂತೆ ಉಳಿದೆಲ್ಲಾ ದಿನಗಳಲ್ಲಿ ಬೆಳಗ್ಗೆ 10ರಿಂದ ಸಂಜೆ 5.30ರ ತನಕ ಈ ಸಂಗ್ರಹಾಲಯ ತೆರೆದಿರುತ್ತದೆ.


ಇಲ್ಲಿ ಎಲ್ಲವೂ ಸರಿಯಿಲ್ಲ...

ಇಷ್ಟೆಲ್ಲಾ ಇರುವಾಗ ಇಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನೂ ಒಪ್ಪಬೇಕಾಗುತ್ತದೆ. ಈ ವಸ್ತು ಸಂಗ್ರಹಾಲಯವು ಕೋಟೆ ಆವರಣದಲ್ಲಿದೆ. ಸಂಗ್ರಹಾಲಯದ ಹಿಂಭಾಗದಲ್ಲಿರು ಕೋಟೆ ಶಿಥಿಲವಾಗುತ್ತಿದೆ. ಅಲ್ಲಿ ಕಸದ ರಾಶಿ, ಹಳೆಯ ಬಾಟಲಿಗಳು ಬೇಕಾ ಬಿಟ್ಟಿ ಬಿದ್ದುಕೊಂಡಿವೆ. ಕೋಟೆಗೆ ಭದ್ರತೆ ಇಲ್ಲದಾಗಿದೆ.ವಸ್ತು ಸಂಗ್ರಹಾಲಯದ ಹಿಂಭಾಗದಲ್ಲೇ ಇರುವ ಈ ಕೋಟೆಯ ರಕ್ಷಣೆ ಆಗಲೇ ಬೇಕಾಗಿದೆ. ಅದು ಆದಲ್ಲಿ ಅದೂ ಒಂದು ವೀಕ್ಷಣಾ ಪ್ರದೇಶವಾಗಿ ಬದಲಾಗುವುದರಲ್ಲಿ ಸಂದೇಹವಿಲ್ಲ.
ವಸ್ತು ಸಂಗ್ರಹಾಲಯದ ಪ್ರವೇಶ ಧ್ವಾರದ ಬಲಭಾಗದಲ್ಲೇ ಅನೇಕ ವೀರಕಲ್ಲುಗಳು ಬುಡಮೇಲಾಗಿ ಬಿದ್ದಿವೆ. ಮಳೆ ಬಿಸಿಲಿನಿಂದ ಇವು ನಲುಗುತ್ತಿವೆ. ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಇದರತ್ತ ಗಮನ ಹರಿಸಬೇಕಾಗಿದೆ.

-ಹರೀಶ್ ಕೆ.ಆದೂರು

0 comments:

Post a Comment