ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ರಾಜ್ಯ - ರಾಷ್ಟ್ರ
ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ಮೇ.12ಮತ್ತು 13ರಂದು ನಡೆಯಲಿರುವ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗಮೇಳದಲ್ಲಿ ಭಾಗವಹಿಸಲು 135ಪ್ರತಿಷ್ಠಿತ ಕಂಪೆನಿಗಳು ಅಧಿಕೃತ ನೋಂದಾವಣೆ ಮಾಡಿದ್ದು, ರಾಜ್ಯ,ಹೊರರಾಜ್ಯ,ಹೊರದೇಶಗಳ ಒಟ್ಟು 9ಸಾವಿರ ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ.

ಹೆಚ್ಚುವರಿಯಾಗಿ 35ರಿಂದ 40 ಕಂಪೆನಿಗಳು ಭಾಗವಹಿಸುವ ನಿರೀಕ್ಷೆ ಹೊಂದಲಾಗಿದೆ. ಈ ಬಾರಿ ಹೆಚ್ಚಿನ ಕಂಪೆನಿಗಳು ಶ್ರೇಷ್ಠದರ್ಜೆಯ ಉದ್ಯೋಗಾವಕಾಶವನ್ನು ಉದ್ಯೋಗಾಕಾಂಕ್ಷಿಗಳಿಗೆ ತೆರೆದಿಡುತ್ತಿದ್ದು ಬೃಹತ್ ಪ್ರಮಾಣದ ಉದ್ಯೋಗಾವಕಾಶಗಳು ಈ ಮೇಳದ ಮೂಲಕ ಪ್ರಾಪ್ತವಾಗಲಿದೆ ಎಂದು ಆಳ್ವಾಸ್ ಎಜುಕೇಷನ್ ಫೌಂಡೇಷನ್ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿ.ಇ, ಬಿ.ಟೆಕ್, ಎಂಬಿ.ಎ,ಸ್ನಾತಕೋತ್ತರಪದವಿ, ಪದವಿ, ಡಿಪ್ಲೋಮಾ, ಪದವಿಪೂರ್ವ, ಐ.ಟಿ.ಐ, ಜೆ.ಒ.ಸಿ ಹೀಗೆ ವಿವಿಧ ವಿದ್ಯಾರ್ಹತೆಗಳನ್ನು ಹೊಂದಿರುವ ಉದ್ಯೋಗಾಕಾಂಕ್ಷಿಗಳಿಗೆ ಈ ಉದ್ಯೋಗಮೇಳ ಮುಕ್ತ ಅವಕಾಶವನ್ನು ಒದಗಿಸಿಕೊಡುತ್ತಿದೆ.

ಅಪೇಕ್ಷೆಗೆ ತಕ್ಕಂತೆ ಕಂಪೆನಿಗಳು

ಈಗಾಗಲೇ ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿದ ಉದ್ಯೋಗಾಕಾಂಕ್ಷಿಗಳ ಪೈಕಿ ಅತ್ಯಧಿಕ ಸಂಖ್ಯೆಯ ಅಭ್ಯರ್ಥಿಗಳು ಐಟಿ, ಐ.ಟಿ.ಇ.ಎಸ್ ಕಂಪೆನಿಗಳನ್ನು ಅಪೇಕ್ಷಿಸಿದ್ದಾರೆ. ಇದಕ್ಕನುಗುಣವಾಗಿ ಈ ಬಾರಿಯ ಉದ್ಯೋಗಮೇಳದಲ್ಲಿ 30ಕ್ಕೂ ಮೇಲ್ಪಟ್ಟು ಹೆಸರಾಂತ ಐಟಿ, ಐ.ಟಿ.ಇ.ಎಸ್ ಕಂಪೆನಿಗಳು ಭಾಗವಹಿಸುತ್ತಿರುವುದು ಹರ್ಷ ತಂದಿದೆ. ಅದರಲ್ಲೂ 17ಕ್ಕೂ ಅಧಿಕ ಕಂಪೆನಿಗಳು ಬಿ.ಇ.ವಿದ್ಯಾರ್ಹತೆಗಳನ್ನೇ ಅಪೇಕ್ಷಿಸಿದ್ದು ಗಮನಾರ್ಹವಾದುದು.

ಸುಮಾರು 20ರಷ್ಟು ಬೃಹತ್ ಪ್ರಮಾಣದ ಉತ್ಪಾದನಾ ಕಂಪೆನಿಗಳು ಉದ್ಯೋಗಮೇಳದಲ್ಲಿ ಭಾಗವಹಿಸುತ್ತಿವೆ. ಈ ಕಂಪೆನಿಗಳು ಮುಖ್ಯವಾಗಿ ಐ.ಟಿ.ಐ, ಡಿಪ್ಲೋಮಾ, ಜೆ.ಒ.ಸಿ ವಿದ್ಯಾರ್ಹತೆಗಳನ್ನು ಅಪೇಕ್ಷಿಸಿದ್ದು ಈ ವಿದ್ಯಾರ್ಹತೆಯುಳ್ಳ ಅಭ್ಯರ್ಥಿಗಳಿಗೆ ಇದೊಂದು ಉತ್ತಮ ಅವಕಾಶವಾಗಲಿದೆ.

ಇಂಜಿನಿಯರಿಂಗ್,ಎಂಬಿ.ಎ,ಸ್ನಾತಕೋತ್ತರ, ಪದವಿ,ಡಿಪ್ಲೋಮಾ, ಪದವಿಪೂರ್ವ ಹೊಂದಿದ ಅಭ್ಯರ್ಥಿಗಳಿಗಾಗಿ ರೀಟೈಲ್ ಇಂಡಸ್ಟ್ರಿಗಳು ಈ ಮೇಳದಲ್ಲಿ ಭಾಗವಹಿಸುತ್ತಿವೆ. ಪ್ರತಿಷ್ಠಿತ 20ಕ್ಕೂ ಮೇಲ್ಪಟ್ಟು ಕಂಪೆನಿಗಳು ಈ ವಿಭಾಗದಲ್ಲಿ ನೋಂದಾಯಿಸಿರುತ್ತಾರೆ.
ಮಾಧ್ಯಮ ಕ್ಷೇತ್ರವೂ ಈ ಬಾರಿಯ ಉದ್ಯೋಗಮೇಳದಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ. ಸುಮಾರು 8 ಮಾಧ್ಯಮ ಸಂಸ್ಥೆಗಳು ಈ ವಿಭಾಗದಲ್ಲಿ ನೋಂದಾವಣೆ ಕೈಗೊಂಡಿದ್ದು ಬಿ.ಇ,ಎಂ.ಬಿ.ಎ, ಎಂ.ಸಿ.ಜೆ, ಎಂ.ಎ ಜರ್ನಲಿಸಂ, ಬಿ.ಎ.ಜರ್ನಲಿಸಂ ಪದವಿ ಹೊಂದಿದವರು ಭಾಗವಹಿಸಬಹುದು.

600 ನರ್ಸಿಂಗ್ ಉದ್ಯೋಗಗಳು...
ವೈದ್ಯಕೀಯ ಆಧಾರಿತ ನರ್ಸಿಂಗ್ ಕ್ಷೇತ್ರದ ಉದ್ಯೋಗಾಕಾಂಕ್ಷಿಗಳಿಗೆ ವಿಫುಲ ಉದ್ಯೋಗಾವಕಾಶಗಳು ಈ ಮೇಳದ ಮೂಲಕ ಲಭ್ಯವಾಗಲಿದೆ.
ಐ ಫೇನ್ ಗ್ಲೋಬಲ್ ಇಂಡಿಯಾ ಪ್ರೈ.ಲಿ. ಎಂಬ ಸಂಸ್ಥೆ ನರ್ಸಿಂಗ್ ಪದವೀಧರರಿಗೆ ಬೃಹತ್ ಪ್ರಮಾಣದ ಉದ್ಯೋಗಾವಕಾಶವನ್ನು ಒದಗಿಸಿಕೊಡುತ್ತಿದೆ. ಈ ಸಂಸ್ಥೆಯಲ್ಲಿ 600 ಉದ್ಯೋಗಾವಕಾಶಗಳು ಲಭ್ಯವಿದ್ದು ಬಿ.ಎಸ್.ಇ ನರ್ಸಿಂಗ್ ಹಾಗೂ ನರ್ಸಿಂಗ್ ಡಿಪ್ಲೋಮಾ ಆದಂತಹ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಅಷ್ಟೇ ಅಲ್ಲದೆ ಬಿ.ಎಸ್.ಡಬ್ಲ್ಯು, ಎಂ.ಎಸ್.ಡಬ್ಲ್ಯು ಹಾಗೂ ಪದವಿ ಆದಂತಹ ಅಭ್ಯರ್ಥಿಗಳಿಗೆ ಎನ್.ಜಿ.ಒ ಸಂಸ್ಥೆಗಳಲ್ಲಿ ಉದ್ಯೋಗ ಲಭ್ಯವಾಗಲಿದೆ.

ಉಳಿದಂತೆ ಬ್ಯಾಂಕಿಂಗ್, ಹಾಸ್ಪಿಟಲ್, ನರ್ಸಿಂಗ್, ಹಾಸ್ಪಿಟಾಲಿಟಿ, ಬಿ.ಪಿ.ಒ, ಕೆ.ಪಿ.ಒ, ಶೈಕ್ಷಣಿಕ ರಂಗ, ಎನ್.ಜಿ.ಒ, ಆಯ್ದ ಪ್ರಮಾಣಿತ ಕನ್ಸಲ್ಟೆನ್ಸಿ ಗಳು ಉದ್ಯೋಗಮೇಳದಲ್ಲಿ ಭಾಗವಹಿಸುತ್ತಿವೆ.

ಐ.ಬಿ.ಎಂ ಇಂಡಿಯಾ ಪ್ರೈ.ಲಿ, ಹನಿವೆಲ್, ಆಸ್ಟ್ರಿಕ್ಸ್ ಟೆಕ್ನಾಲಜೀಸ್ ಪ್ರೈ.ಲಿ, ವಿಪ್ರೋ, ವೋಲ್ವೋ,ಟಿ.ವಿ.ಎಸ್ ಮೋಟಾರ್ ಕಂಪೆನಿ,ಟಫೆ, ಎನ್.ಎಂ.ಸಿ.ಹೆಲ್ತ್ ಕೇರ್, ತಾಜ್ ವಿವಾಂಟ, ಐ.ಟಿ.ಸಿ, ಎಸ್ಸೆ, ದ ಇಂಡಿಯನ್ ಆರ್ಮಿ, ಎಲ್ ಎಂಡ್ ಟಿ, ಸುಝ್ಲೋನ್, ವೊಕಾರ್ಡ್ , ಸ್ನೈಡರ್ ,ವೇದಾಂತ ಗ್ರೂಫ್, ಅಲ್ ಕಾರ್ಗೋ, ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳು "ಆಳ್ವಾಸ್ ಪ್ರಗತಿ 2012"ರ ಮೂಲಕ ಒಂದೇ ಸೂರಿನಡಿ ಉದ್ಯೋಗಾಕಾಂಕ್ಷಿಗಳಿಗೆ ಲಭ್ಯವಾಗುತ್ತಿರುವುದು ಗಮನಾರ್ಹ.

ವಿಕಲಚೇತನರಿಗೆ ವಿಶೇಷ ಅವಕಾಶ

ಉದ್ಯೋಗಮೇಳದಲ್ಲಿ ವಿಕಲ ಚೇತನರಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ವಿಪ್ರೋ ಹಾಗೂ ವಿಂದ್ಯ ಇನ್ಫೋಟೆಕ್ ಎಂಬ ಎರಡು ಸಂಸ್ಥೆಗಳು ಕೇವಲ ವಿಕಲ ಚೇತನರಿಗೆ ಆದ್ಯತೆ ನೀಡುತ್ತಿದೆ. ಆ ಮೂಲಕ ವಿಕಲ ಚೇತನರನ್ನು ಮುಖ್ಯವಾಹಿನಿಗೆ ಕೊಂಡೊಯ್ಯುವ ಕಾರ್ಯ ಉದ್ಯೋಗಮೇಳದ ಮೂಲಕ ನಡೆಸಲಾಗುತ್ತದೆ.ಆನ್ ಲೈನ್ ಮೂಲಕ ಹೆಸರು ನೋಂದಾಯಿಸಿ.
ಉದ್ಯೋಗಮೇಳದಲ್ಲಿ ಭಾಗವಹಿಸುವವರಿಗೆ ಹೆಸರು ನೋಂದಾವಣೆಗೆ ಇನ್ನೂ ಕಾಲಾವಕಾಶವಿದ್ದು ಆದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಆನ್ ಲೈನ್ ಮೂಲಕ ಹೆಸರು ನೋಂದಾಯಿಸಲು ಅವಕಾಶವಿದೆ. ಆನ್ ಲೈನ್ ಮೂಲಕ ನೋಂದಾವಣೆ ಮಾಡಿದಲ್ಲಿ ಅರ್ಭರ್ಥಿಯ ವಿದ್ಯಾರ್ಹತೆಗೆ ಅನುಗುಣವಾಗಿ ಸುಲಭವಾಗಿ ಅರ್ಹತಾ ಕ್ಷೇತ್ರವನ್ನು ಗುರುತಿಸಲು ಅನುಕೂಲವಾಗುತ್ತದೆ. ಉದ್ಯೋಗಮೇಳ ನಡೆಯುವ ಸಂದರ್ಭದಲ್ಲಿ ಭಾವಚಿತ್ರ,ಸ್ವ ವಿವರ,ಸೂಕ್ತ ದಾಖಲೆಗಳೊಂದಿಗೆ ಸ್ಥಳದಲ್ಲೇ ನೋಂದಾವಣೆ ಮಾಡಬಹುದು. ಅರ್ಭರ್ಥಿಗಳಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಕಲರ್ ಕೋಡಿಂಗ್ ವ್ಯವಸ್ಥೆಯ ಮೂಲಕ ಸಂದರ್ಶನಗಳಲ್ಲಿ ಭಾಗವಹಿಸಲು ವ್ಯವಸ್ಥೆಗೊಳಿಸಲಾಗುತ್ತದೆ.ವ್ಯವಸ್ಥೆ ಪೂರ್ಣ

ಉದ್ಯೋಗಮೇಳವನ್ನು ಅತ್ಯಂತ ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ನಡೆಸುವ ಬಗ್ಗೆ ಈಗಾಗಲೇ ವ್ಯವಸ್ಥೆಗೊಳಿಸಲಾಗಿದೆ. ಅವರವರ ವಿದ್ಯಾರ್ಹತೆಗೆ ಅನುಗುಣವಾದಂತಹ ಕಂಪೆನಿಗಳಲ್ಲಿ ಉದ್ಯೋಗಾಕಾಂಕ್ಷಿಗಳು ಸಂದರ್ಶನಕ್ಕೆ ಭಾಗವಹಿಸಲು ಬೇಕಾದಂತಹ ವ್ಯವಸ್ಥೆಯನ್ನು ಆಳ್ವಾಸ್ ಸಂಸ್ಥೆ ರೂಪಿಸುತ್ತಿದೆ. ಉದ್ಯೋಗಮೇಳದಲ್ಲಿ ಭಾಗವಹಿಸುವ ಉದ್ಯೋಗಾಕಾಂಕ್ಷಿಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ.ಮೂಡಬಿದಿರೆಯ ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದಲ್ಲಿ ಈ ಉದ್ಯೋಗಮೇಳ ನಡೆಯಲಿದ್ದು , ಇಲ್ಲಿರುವ ಪದವಿ, ಪದವಿಪೂರ್ವ ಹಾಗೂ ಸ್ನಾತಕೋತ್ತರ ಕಾಲೇಜು ಕಟ್ಟಡದಲ್ಲಿ ಈ ಮೇಳ ನಡೆಯಲಿದೆ . ನೋಂದಣಿಗಾಗಿ ಅತ್ಯಂತ ವ್ಯವಸ್ಥಿತವಾದ ನೋಂದಣಿ ಸಮಿತಿ ರಚನೆಯಾಗಿದೆ. ಪ್ರತೀ ಹಂತದಲ್ಲೂ ಉದ್ಯೋಗಾಕಾಂಕ್ಷಿಗಳಿಗೆ ಮಾರ್ಗದರ್ಶನ ನೀಡಲು ಅಲ್ಲಲ್ಲಿ ಹೆಲ್ಪ್ ಡೆಸ್ಕ್ ರೂಪಿಸಲಾಗಿದೆ ಎಂದು ಆಳ್ವಾಸ್ ಸಮೂಹ ಸಂಸ್ಥೆಗಳ ಟ್ರಸ್ಟಿ ವಿವೇಕ್ ಆಳ್ವ ತಿಳಿಸಿದರು.

ಇನ್ಫೋಸಿಸ್ ಭಾಗವಹಿಸುತ್ತಿಲ್ಲ

ಉದ್ಯೋಗಮೇಳದಲ್ಲಿ ಇನ್ಫೋಸಿಸ್ ಸಂಸ್ಥೆ ಈ ಬಾರಿ ಭಾಗವಹಿಸುತ್ತಿಲ್ಲ. ಈ ಮೊದಲು ಇನ್ಫೋಸಿಸ್ ಸಂಸ್ಥೆ ಭಾಗವಹಿಸುವ ಬಗ್ಗೆ ಮಾಹಿತಿ ನೀಡಲಾಗಿತ್ತಾದರೂ ಇದೀಗ ಸಂಸ್ಥೆಯಲ್ಲಿಯೇ ಪ್ರಮುಖ ಕಾರ್ಯಕ್ರಮವಿದ್ದ ಹಿನ್ನಲೆಯಲ್ಲಿ ಭಾಗವಹಿಸಲಾಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಉದ್ಘಾಟನೆ
ಎರಡು ದಿನಗಳ ಉದ್ಯೋಗಮೇಳವನ್ನು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಉದ್ಘಾಟಿಸಿ ಸರ್ವಾಧ್ಯಕ್ಷತೆ ವಹಿಸಲಿದ್ದಾರೆ. ರಾಜೀವಗಾಂಧಿ ವಿ.ವಿ.ಯ ಮಾಜಿ ಉಪಕುಲಪತಿ ರಮಾನಂದ ಶೆಟ್ಟಿ, ಬಂಜಾರ ಗ್ರೂಪ್ ಆಫ್ ಹೋಟೆಲ್ನ ಮಾಲಕರಾದ ಪ್ರಕಾಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


* ಎಸ್.ಎಸ್.ಎಲ್.ಸಿ.ಯಿಂದ ಪ್ರಾರಂಭಗೊಂಡು ಸ್ನಾತಕೋತ್ತರ ಪದವಿಯ ತನಕ ಶೇ.70ಕ್ಕಿಂತಲೂ ಅಧಿಕ ಅಂಕ ಪಡೆದ 1,510 ಮಂದಿ ಹೆಸರು ನೋಂದಾಯಿಸಿದ್ದಾರೆ.
* ತಮಿಳ್ನಾಡಿನ 428 ಮಂದಿ ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿದ್ದಾರೆ.
* ಉದ್ಯೋಗಮೇಳದಲ್ಲಿ ಭಾಗವಹಿಸಲಿಚ್ಛಿಸುವವರಿಗೆ ಆನ್ ಲೈನ್ ಮೂಲಕ ನೋಂದಾವಣೆಗೆ ಅವಕಾಶ ಕಲ್ಪಿಸಲಾಗಿದೆ. www.alvaspragati.com ಆಳ್ವಾಸ್ ಪ್ರಗತಿ.ಕಾಂ ಲಾಗ್ ಇನ್ ಮಾಡುವ ಮೂಲಕ ಅರ್ಜಿ ಸಲ್ಲಿಸಲಬಹದು.
* ಇ ಮೇಲ್ (placement.alvas@gmail.com) ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.
* ದೂರವಾಣಿ ಮೂಲಕ ನೋಂದಾಯಿಸಲಿಚ್ಛಿಸುವವರು ದೂರವಾಣಿ ಸಂಖ್ಯೆ : 08258 - 237104 (ಜಥಣ 237)/7353756207 ಸಂಪರ್ಕಿಸಬಹುದು.
* ಉದ್ಯೋಗಮೇಳ ಸಂಪೂರ್ಣವಾಗಿ ಉಚಿತವಾಗಿರುತ್ತದೆ.
* ಉದ್ಯೋಗಮೇಳದಲ್ಲಿ ಭಾಗವಹಿಸಲಿಚ್ಛಿಸುವ ಉದ್ಯೋಗಾಕಾಂಕ್ಷಿಗಳು ಸ್ವ ಪರಿಚಯ, ಅಂಕಪಟ್ಟಿಗಳ ಝೆರಾಕ್ಸ್ ಪ್ರತಿ, ಭಾವಚಿತ್ರ ಹಾಗೂ ಇತರೆ ದಾಖಲೆಗಳ ಐದು ಪ್ರತಿಗಳನ್ನು ತರಬೇಕಾಗುತ್ತದೆ.
ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಎಜುಕೇಷನ್ ಫೌಂಡೇಷನ್ ಮಾಧ್ಯಮ ಸಂಪರ್ಕಾಧಿಕಾರಿ ಹಾಗೂ ಉಪನ್ಯಾಸಕ ಹರೀಶ್ ಕೆ.ಆದೂರು, ಸೀನಿಯರ್ ಪ್ಲೇಸ್ ಮೆಂಟ್ ಆಫೀಸರ್ ಅಮಿತ್ ಶೆಟ್ಟಿ, ಉದ್ಯೋಗಮೇಳದ ಕೋ ಆರ್ಡಿನೇಟರ್ ರುಚಿರ್ ಆನಂದ್ ಉಪಸ್ತಿತರಿದ್ದರು.
ಮಂಗಳೂರಿನ ಮೊಟ್ಟಮೊದಲ ಕನ್ನಡ ಅಂತರ್ಜಾಲ ಸುದ್ದಿತಾಣ ಈ ಕನಸು.ಕಾಂ ಆಳ್ವಾಸ್ ಪ್ರಗತಿ ಬೃಹತ್ ಉದ್ಯೋಗಮೇಳದ ಪ್ರಧಾನ ಮಾಧ್ಯಮ ಸಹಭಾಗಿತ್ವಹೊಂದಿದೆ.

0 comments:

Post a Comment