ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...


ವಿಶೇಷ ವರದಿ

ಅಗ್ರಹಾರ...ಇನ್ನಷ್ಟು ಮಾಹಿತಿ

ಹಿಂದೆ ಅಂತದ್ದೊಂದು ಕಾಲವಿತ್ತು.ಆಳುವ ರಾಜ ಧರ್ಮಿಷ್ಠ ಹಾಗು ಧರ್ಮ ಸಹಿಷ್ಣುವೂ ಆಗಿದ್ದಲ್ಲಿ ದಾನ ಅಥವಾ ಉಂಬಳಿಯಾಗಿ ಒಂದಷ್ಟು ಭೂಮಿಯನ್ನು ದೇವಸ್ಥಾನ ಹಾಗೂ ಅದನ್ನು ನೋಡಿಕೊಳ್ಳುವ ಮಂದಿಗೆ ಬಿಟ್ಟು ಕೊಡುತ್ತಿದ್ದರು. ವೇದಾಧ್ಯಯನ ಮಾಡಿರುವ ಪಂಡಿತ ಪರಂಪರೆಯ ಜನಗಳಿಗೂ ಈ ಜಾಗ ಕೊಡಮಾಡಲ್ಪಟ್ಟಿತ್ತು...ಅಗ್ರಹಾರ ರೂಪುಗೊಂಡ ಹಿನ್ನಲೆಯನ್ನು ಕೆದಕಿದಾಗ ಈ ಅಂಶ ಬೆಳಕಿಗೆ ಬರುತ್ತದೆ. ಈ ರೀತಿ ನಿಧಾನವಾಗಿ ಅಗ್ರಹಾರ ವ್ಯವಸ್ಥೆ ಗಟ್ಟಿಯಾಗಿ ಬೇರೂರಲು ಕಾರಣವಾಯಿತು.ಆದರೆ ಅಗ್ರಹಾರ ವ್ಯವಸ್ಥೆ ಇಂದು ಕಣ್ಮರೆಯಾಗತೊಡಗಿದೆ. ಅಗ್ರಹಾರ ವ್ಯವಸ್ಥೆಯ ಹಾಗೂ ಆ ಸಂಪ್ರದಾಯ ವಿರೋಧಿಸುವ ವ್ಯವಸ್ಥಿತ ಪಂಗಡಗಳು ಅಗ್ರಹಾರ ಹಾಗೂ ಬ್ರಾಹ್ಮಣಶಾಹಿತ್ವ ವ್ಯವಸ್ಥೆಯನ್ನು ನಿರಂತರವಾಗಿ ವಿರೋಧಿಸುತ್ತಾ ಠೀಕಿಸುತ್ತಾ ಬಂದಿದ್ದಾರೆ. ಇಷ್ಟೇ ಅಲ್ಲದೆ ಆಧುನಿಕ ವ್ಯವಸ್ಥೆಗಳಿಗೆ ಅನುಗುಣವಾಗಿ, ಬಂಡವಾಳ ಶಾಹಿಗಳ ನಿರಂತರ ದಬ್ಬಾಳಿಕೆಯ ಪ್ರಭಾವದಿಂದ, ಭೂ ಕಬಳಿಕೆಯ ಹಾಗೂ ಇಂದಿನ ಆಧುನಿಕ ಕಾರ್ಪೋರೇಟ್ ವ್ಯವಸ್ಥೆಗಳ ಸೋಂಕಿನಿಂದಾಗಿ ಅಗ್ರಹಾರಗಳು ರೂಪಕಳೆದುಕೊಳ್ಳತೊಡಗಿದವು.

ಕಾಲ ಬದಲಾದಂತೆ ಅಗ್ರಹಾರ ವ್ಯವಸ್ಥೆಯಲ್ಲೂ ಬದಲಾವಣೆಗಳು ಆಧುನಿಕತೆಯ ಪ್ರಭಾವಗಳು ಕಾಣತೊಡಗಿದವು.ಆದರೆ ಇಂದಿಗೂ ಹಳೆಯ ದೇವಸ್ಥಾನದ ಸುತ್ತಲಿರುವ ಪ್ರದೇಶ ಅಗ್ರಹಾರವೇ ಆಗಿದೆ.ಇಂದು ಗೋಕರ್ಣ,ಮೈಸೂರು ಇತ್ಯಾದಿ ಪ್ರವಾಸಿ ಕ್ಷೇತ್ರಗಳಲ್ಲಿ ಅಗ್ರಹಾರಗಳು ಇಂದಿಗೂ ಕಾಣಸಿಗುತ್ತವೆಯಾದರೂ ಹಲವು ಬದಲಾವಣೆಗಳು ಈ ಅಗ್ರಹಾರ ವ್ಯವಸ್ಥೆಯೊಳಗೆ ಸೇರಿಹೋಗಿವೆ.

ಇತಿಹಾಸವನ್ನು ಅಭ್ಯಸಿಸಿದಾಗ, ಅಗ್ರಹಾರಗಳು ಭಾರತೀಯ ನಗರ ವ್ಯವಸ್ಥೆಯ ಪ್ರಮುಖ ಲಕ್ಷಣವೇ ಆಗಿವೆ ಎಂಬ ಪ್ರಮುಖ ಅಂಶಗಳು ಗೋಚರವಾಗುತ್ತವೆ. ತಮಿಳು ನಾಡು,ಕೇರಳ ಮತ್ತು ಕರ್ನಾಟಕದಲ್ಲಿ ಮಾತ್ರ ಕಂಡು ಬರುವ ಅಗ್ರಹಾರಗಳು ಪಾರಂಪರಿಕ ತಮಿಳು ಬ್ರಾಹ್ಮಣರಿಂದ ಬಂದ ಕೊಡುಗೆಯಾಗಿದೆ. ವಿಶಿಷ್ಟ ದೇವಸ್ಥಾನ ವಾಸ್ತುಶಿಲ್ಪಗಳಿಗೆ ಹೆಸರಾದ ತಮಿಳು ನಾಡಿನಲ್ಲಿ ಅಗ್ರಹಾರಗಳು ತನ್ನದೇ ಆದ ಶೈಲಿಯಲ್ಲಿ ರೂಪು ತಳೆದಿದ್ದವು .ಕೇರಳದ ತಿರುವನಂತಪುರ,ಅತ್ಯಂತ ಹೆಸರುವಾಸಿಯಾದ ತೀರ್ಥಕ್ಷೇತ್ರ ಮಧುರೈ ಮುಂತಾದ ಧಾರ್ಮಿಕ ಪ್ರವಾಸಿ ಕ್ಷೇತ್ರಗಳಲ್ಲಿರುವ ಅಗ್ರಹಾರಗಳ ವಾಸ್ತು ವೈಭವವೂ ವಿಭಿನ್ನವಾಗಿವೆ.

ಪ್ರಮುಖವಾಗಿ ತಮಿಳು ಬ್ರಾಹ್ಮಣರು ನೆಲೆಸಿದ್ದ ಪ್ರದೇಶದ ಬೀದಿ, ಮನೆ ಬಾಗಿಲುಗಳು ಸುಂದರ ರಂಗೋಲಿಗಳಿಂದ ಕಂಗೊಳಿಸುತ್ತಿತ್ತು.
ಈ ಅಗ್ರಹಾರಗಳ ಇನ್ನೊಂದು ಪ್ರಮುಖ ಲಕ್ಷಣವೆಂದರೆ ಮನೆಗಳು ಮತ್ತು ಬಾಗಿಲುಗಳು ಕೆಂಪು,ಬಿಳಿ ಬಣ್ಣಗಳಿಂದ ಅಲಂಕರಿಸಿರುವುದು.ಇಲ್ಲಿ ಕೆಂಪು ರಕ್ತವನ್ನು,ಬಿಳಿ ಹಾಲನ್ನು ಸಂಕೇತಿಸುತ್ತದೆ.ಇದು ಒಟ್ಟಾರೆ ಆತ್ಮದ ಸಂಕೇತವಾಗಿದ್ದು ಗೋಡೆಗಳ ಮೇಲಿನ ಈ ಬಣ್ಣದ ಚಿತ್ರಗಳು ಆತ್ಮ ಪರಮಾತ್ಮನಲ್ಲಿ ಶರಣಾದದ್ದನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ. ಬಿಳಿ ಮತ್ತು ಕೆಂಪು ಬಣ್ಣವನ್ನು ಹೊಂದಿದ ವಿಶಿಷ್ಟ ಸಂಕೇತಗಳನ್ನು ಹಾಗೂ ರಂಗೋಲಿಗಳನ್ನೊಳಗೊಂಡ ಮನೆ ಬ್ರಾಹ್ಮಣರ ಮನೆ ಎಂಬುದು ನಿರ್ಧರಿತವಾಗುತ್ತಿತ್ತು.

ಮೂಲ ಅಗ್ರಹಾರ

ಅಗ್ರಹಾರದ ಮೂಲವನ್ನು ಕೆದಕುತ್ತಾ ಸಾಗಿದರೆ ಅಲ್ಲೊಂದು ಅಚ್ಚರಿ ಕಾಣಸಿಗುತ್ತದೆ. ಅಗ್ರಹಾರ ಇದ್ದಲ್ಲಿ ಶಿವ ಅಥವಾ ಇತರೆ ದೇವಸ್ಥಾನವೊಂದು ಇದ್ದೇ ಇದೆ ಎಂಬ ಅಂಶ ಪೂರ್ವ ನಿರ್ಧರಿತ. ಈ ಅಗ್ರಹಾರಗಳನ್ನು ಮೂಲದಲ್ಲಿ ಕಟ್ಟಿದವರು ತಮಿಳುನಾಡಿನ ತಮಿಜಕೋಂ ಎಂಬ ಪಂಗಡಕ್ಕೆ ಸೇರಿದ ಬ್ರಾಹ್ಮಣರು.ಮಕರಕರ ನದಿಯ ತೀರದಲ್ಲಿ ವಾಸವಾಗಿದ್ದ ಈ ಜನಾಂಗದವರು ಜೀವಿಸುತ್ತಿದ್ದ ಅಗ್ರಹಾರದ ಮನೆಗಳ ಗೋಡೆಗಳು ಒಂದಕ್ಕೊಂದು ತಾಗಿದಂತೆ ಕಟ್ಟಲ್ಪಡುತ್ತಿತ್ತು.


ಈ ಗುಂಪು ಗುಂಪಾದ ಮನೆಗಳ ಈ ಅಗ್ರಹಾರದ ಮೇಲ್ತುದಿಯಲ್ಲಿ ಶಿವ ದೇವಾಲಯ ಕಂಡುಬರುತ್ತದೆ. ಈ ಅಗ್ರಹಾರಗಳು ತಮ್ಮದೇ ಆದ ವಿಶಿಷ್ಟ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ.ಪ್ರತಿಯೊಂದು ಮನೆಯೂ ಎದುರಿನ ರಸ್ತೆಗೆ ತೆರೆದು ಕೊಂಡಂತೆ ಕಟ್ಟಲ್ಪಟ್ಟಿರುತ್ತದೆ.
ಮನೆಯ ಮುಂಭಾಗದಲ್ಲಿ ಸ್ವಾಗತ ಕೊಠಡಿಗಳು,ಅದರೊಳಗೆ ವಾಸ್ತವ್ಯಕ್ಕನುಕೂಲಕರ ರೀತಿಯ ಕೊಠಡಿ ಹಾಗೂ ಹಿಂಭಾಗದಲ್ಲಿ ಅಡುಗೆ ಮನೆ, ಹಾಗೂ ಹೊರಾಂಗಣ, ನಾಲ್ಕು ಸೂತ್ರದ ಮನೆಯಾದರೆ ಮಧ್ಯಭಾಗದಲ್ಲಿ ತೆರೆದುಕೊಂಡಂತೆ ಕಟ್ಟಲ್ಪಡುತ್ತಿತ್ತು. ಸ್ವಾಗತ ಕೊಠಡಿಗಳು ಅಂದರೆ ಎದುರಿನ ಬೀದಿಗೆ ತೆರೆದುಕೊಂಡಂತೆ ಕಟ್ಟಲಾಗುತ್ತಿತ್ತು. ಹೆಚ್ಚಾಗಿ ಜಾತಿ ಮರದ ಕಲಾತ್ಮಕ ಬೃಹತ್ ಕಂಬಗಳನ್ನು ಹೊಂದಿರುತ್ತಿತ್ತು. ಗೋಡೆಗಳಲ್ಲಿ ಹಾಗೂ ಎದುರುಭಾಗದಲ್ಲಿ ರಂಗೋಲಿಗಳಿಂದ ಅಲಂಕೃತವಾಗಿರುತ್ತಿತ್ತು.

ದುರದೃಷ್ಟವಶಾತ್ ಇಂದು ಇಂತಹ ಅಗ್ರಹಾರಗಳು ನಶಿಸಿಹೋಗುತ್ತಿವೆ. ಆ ಪ್ರದೇಶದಲ್ಲಿ ಕಾಂಕ್ರೀಟ್ ಕಟ್ಟಡಗಳು, ಬಹುಮಹಡಿ ಕಟ್ಟಡಗಳು ತಲೆಯೆತ್ತುತ್ತಿವೆ. ಪಾರಂಪರಿಕ ಸಂಪ್ರದಾಯಗಳು ಇಂದು ಮೂಲೆಗುಂಪಾಗುತ್ತಿದೆ. ಒಂದರ್ಥದಲ್ಲಿ ಸಂಸ್ಕೃತಿಯನ್ನು ನಾವೇ ನಮ್ಮ ಕೈಯಾರೆ ಹೊಸಕಿ ಹಾಕುತ್ತಿದ್ದೇವೆ...

- ಸೌಮ್ಯ ಆದೂರು.
ಚಿತ್ರಗಳು: ಅಂತರ್ಜಾಲ

0 comments:

Post a Comment