ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನೆನಪುಳಿದ ಇಂದಿನ ಕಥೆ : ಭಾಗ - 4

ಆಹ್ಹ! ಬಳೆಗಳು! ಹಬ್ಬದ ಗುಡಿಯ ನಕ್ಷತ್ರಗಳು! ಕೊಳವೆ ಕೊಳವೆಗಳಲ್ಲಿ ಇಳಿಜಾರಾಗಿ ಮಲಗಿ ಆಕಾಶ ನೋಡುತ್ತಿವೆ! ಮಧ್ಯೆ ಯಜಮಾನ್ತಿ, ಬಳೆಗಾರ್ತಿ ಸೇಸಿ! ರಾಧಚಿಕ್ಕಿ ಮತ್ತು ಬೇಬಿಯಕ್ಕ ಆಗಲೇ ಅವಳ ಅಂಗಡಿಯತ್ತ ಹೊರಟೇಬಿಟ್ಟಿದ್ದಾರೆ! ನಮ್ಮನ್ನ ಬಿಟ್ಟೇ! ಒಳ್ಳೇ ಜನ. ನಾವೆಲ್ಲಾದರೂ ಈಗ ಕಳೆದು ಹೋದರೆ? ನಡೆ ನಡೆ... ಅವರನ್ನು ಸೇರಿಕೊಳ್ಳುವ.
ಯಾರದೋ ಮುಂಗೈಯನ್ನು ಆಚೊತ್ತಿ ಈಚೊತ್ತಿ ಬಳೆ ಮುಂದೆ ಮುಂದೆ ಸರಿಸುತ್ತ, ಬಾಯಲ್ಲಿ ಎಲೆ ಅಡಿಕೆ ಜಗಿಯುತ್ತ, ನಸುನಗೆಯ ತುಟಿಗೀಟು ಉದ್ದ ಎಳೆಯುತ್ತಾ ಮುಚ್ಚಿದ ಬಾಯಲ್ಲೇ ಕರೆದಳು ಸೇಸಿ. ಸೋಣೆ ತಿಂಗಳಲ್ಲಿ ಹೆಗಲಿಗೆ ಚೀಲವನ್ನು ನೇತುಹಾಕಿಕೊಂಡು ಮನೆ ಮನೆಗೆ ಬಂದು ಬಳೆ ಇಡುವವಳು ಇವಳೇ. ಕಿವಿಗೆ ಬೆಂಡೋಲೆ. ದೊಡ್ಡ ಹಣೆಹುಂಡು. ಮುತ್ತಿನ ಮುಗುಲು ಸರಪಣಿ. ಮೂಗಿಗೆ ದೊಡ್ಡ ಉದ್ದ ಕೆಂಪು ಹರಳಿನ ಬುಲಾಕು.

ಬುಲಾಕಿನ ಬುಡದ ಹನಿಮುತ್ತಿನ ಥರಥರ ಕಂಪನವೆಂದರೆ... ಸಂತೋಷ ಎಲ್ಲಿಡುವುದೆಂದು ತಿಳಿಯದ ಸಡಗರದ ವಿಮಾನ ಚಿಟ್ಟೆಯ ರೆಕ್ಕೆಕಂಪನದಂತೆ. ಅದನ್ನೇ ನೋಡುತ್ತಾ ನಿಂತರೆ ವರ್ಷಗಟ್ಟಲೆ ನಿಂತಲ್ಲೇ ಇರಬಹುದು! ಸೇಸಿ ಎಂದರೇನು, ಪಟ್ಟದರಸಿ, ಅವಳನ್ನು ಬಳೆಗಾರ್ತಿ ಎಂದು ಯಾರು ಹೇಳುತ್ತಾರೆ?
ಹಾಗಾದರೆ ಬಳೆಗಾರ್ತಿ ಹೇಗಿರುತ್ತಾಳೆ?
ದಡ್ಡೆ. ಮಾತೇ ಅರ್ಥವಾಗುವುದಿಲ್ಲವಾ ಯಂತ ಕತೆ?

`ಯೇ, ಬೇರೆ ಅಂಗ್ಡಿಗ್ ಹೋಪನಾ. ಜಾತ್ರೆಗ್ ಬಂದೂ ಅವ್ಳ್ ಹತ್ರವೇ ಯಾಕೆ?' ಆದರೆ ಲೆಚ್ಚರ್ ಬೇಬಿಯಕ್ಕ ಬಿಡಬೇಕಲ್ಲ. ಅದನ್ನಲ್ಲೇ ಕಟ್ಟುಮಾಡಿಯಾಯಿತು-ಬೇಡ ಬೇಡ. ಬೇರೆ ಕಡೆ ಬೇಡ.ಸೇಸಿ ಮೋಸ ಮಾಡುವುದಿಲ್ಲ. ಬೇರೆ ಕಡೆಮೋಸ ಮಾಡಿದರೆ ನಮಗೆ ತಿಳಿಯುತ್ತದೆಯೇ? ಎಲ್ಲ ಟೊಪ್ಪಿ ಹಾಕಲಿಕ್ಕೇ ಕಾದು ಕುಳಿತಿರುತ್ತವೆ.

`ಹಂಗರ್ ನೀವೆಲ್ಲ ಅಲ್ಲಿಗೇ ಹೋಯ್ನಿ. ನಾನೊಬ್ಳೆ ಬ್ಯಾರೆ ಹೋತೆ'.
`ಹ್ವೋತ್ ಅಂಬ್ರ್ ಹ್ವೋತ್! ಅಮ್ಮಂಗ್ ಹೇಳಿಕೊಡ್ತೆ ಕಾಣ್. ನಿತ್ಕೋ ಸುಮ್ನೆ.'
...ಗೊತ್ತೇ? ಜಾತ್ರೆಗೆ ಹುಡುಗರಂತೆ ಹೆಣ್ಣು ಮಕ್ಕಳು ಒಬ್ಬೊಬ್ಬರೇ ಬರುವುದು ತಿರುಗುವುದು ಎಲ್ಲ ಕಷ್ಟ. ಹಡೆ ಹುಡುಗರ ಹಿಂಡು ಹಿಂಡು ಬರುತ್ತದೆ. ಹಡೆ ತಿರುಗಲೆಂದೇ ಬರುತ್ತವೆ ಅವು. ಬೇರೆ ಕೆಲಸವೇ ಇಲ್ಲ. ಹುಡುಗಿಯರು ಅಂತಾದರೆ ಸಾಕು. ಅವಕ್ಕೆ ಏನಾಗುತ್ತದೆ ಅಂತ! ಹುಟ್ಟಾ ಮರದ ಮೇಲಿನ ಪ್ರಾಣಿಗಳಂತೆ ಹಲ್ಲುಕಿಸಿಯುತ್ತವೆ. ಖ್ಞೇ... ಕೂಗು ಹಾಕುತ್ತವೆ. ಪ್ಞೀ...ಸಿಳ್ಳು ಬೇರೆ! ಬರೀ ಪಳ್ದಿಗಳು. ಪ್ರತಿಯಾಗಿ ನಾವೂ ಸಿಳ್ಳು ಹೊಡೆದರೆ?ರಾಧಚಿಕ್ಕಿ ಏನೂ ಹೇಳುವುದೇ ಇಲ್ಲವೆಂಬ ಹಾಗೆ ಬಿಸಬಿಸನೆ ನಡೆದಳು. ಬೇಬಿಯಕ್ಕನೂ ಕೈ ಬೀಸಿ ಕಾಲುಬೀಸಿ ತಲೆಯೆತ್ತಿ ಡೋಂಟ್ `ಖೇ'ರಿನಂತೆ ನಡೆದಳು. ಅವುಗಳೆದುರು ಹೀಗೆಯೇ ನಡೆಯಬೇಕು. ಅವು ಸಿಳ್ಳು ಹೊಡೆಯುತ್ತವೆ ಅಂತ ನಾವೂ ಹೊಡೆದರೆ ನಮ್ಮನ್ನೂ ಹಡೆಗಳ ಸಾಲಿಗೆ ಸೇರಿಸಿಬಡುತ್ತಾರೆ ಅಷ್ಟೇ..`ಸೇರ್ತಯಾ?'


`ಇಲ್ಲಪ್ಪ, ಇಲ್ಲೆ ಇಲ್ಲೆ'
`ನಾವ್ ಆಚಿ ಈಚಿ ಕಾಣ್ದೆ ಕೆಪ್ರ್ ಹಾಂಗ್ ಹೋದ್ರೆ ಅವ್ ಯಂತ ಮಾಡ್ತೋ ಗ್ವೊರ್ಟ್? ಕೂಗಿ ಕೂಗಿ ಧೂಳ್ ನುಂಗಿ ಸಾಕಾಯಿ ಮನಿಗ್ ಸಾಯ್ತೊ'
... ಅಲ್ಲ, ಈಗ ಮತ್ತೇನಲ್ಲ.- ಒಂದೇ. ಕಣ್ಣಿಗೆ ಕಾಣದ ಹೆಸರಿಲ್ಲದ ಆ ದೇವರ ಹಕ್ಕಿ ಉಂಟಲ್ಲ, ಅದಕ್ಕೆ ಬುದ್ದಿಯೇ ಇಲ್ಲವಾ ಏನು?ಈ ಹಡೆಗಳ ಮನೆಗೂ ಜಾತ್ರೆಯ ಒಸಗೆ ಕೊಡಬೇಕಾದರೆ...!
ಸೇಸಿ ಕಣ್ಣಿನಲ್ಲಿಯೇ ಕರೆದಳು. `ತಕಣಿ... ಬಳಿ ತಕಣಿ. ಆರ್ಸ್ ಕಣಿ.' ಎಂಬುದನ್ನು ಎಲೆಗೆಂಪು ನಗೆಯ ಮುಖಬೀಸಿಲ್ಲಿಯೇ ತಿಳಿಸಿದಳು. ಬಳೆ ಇಡುತ್ತ ಇಡುತ್ತ ಒಂದು ಕೈಯಿಂದ ಯಾರಿಗೋ `ಸಪ್ಟಿಪಿನ್ನು'ಕೊಟ್ಟಳು. ಯಾರಿಗೋ ಪರ್ಸ್ ಬೇಕಾಯಿತು. ಅಂಗಡಿಯ ಆಚೆ ತುದಿಯಲ್ಲಿ ಮತ್ತೊಬ್ಬರಿಗೆ ಬಳೆ ಇಡುತ್ತಿದ್ದ ಗಂಡಸಿನೊಡನೆ ಅದನ್ನು ಕೊಡಲು ಹೇಳಿದಳು.

ಸಾವಧಾನದ ಸೇಸಿ. ಅಂಥಾ ಜಾತ್ರೆಯ ಗದ್ದಲದಲ್ಲಿಯೂ ಮನೆಗೆ ಬಂದು ಬಳೆ ಇಡುವಾಗಿನ ಸಮಾಧಾನವನ್ನು ಕಾಪಾಡಿಕೊಂಡೇ ಇದ್ದಾಳೆ; ನಡು ನಡುವೆ ತಾಂಬೂಲದ ರಸವನ್ನು ಕುಳಿತಲ್ಲೇ ಹಿಂದೆ ನಲಕ್ಕೆ ಪಚಕ್ಕ ಉಗಿಯುತ್ತ! ಗಡಿಬಿಡಿಯ ಗುರುತೇ ಇಲ್ಲದವಳಂತೆ! ಪಸರ್್ ಮಾರಿ ಬಂದ ದುಡ್ಡಿಗೆ ಚಿಲ್ಲರೆ ವಾಪಾಸು ಕೊಟ್ಟಳು. ಕಣ್ಕಡಕು ಬಳೆ ಕಂಡುಹಿಡಿಯಲು ನಡುಬೆರಳು ಹೆಬ್ಬೆರಳು ನಡುವೆ ಬಳೆ ಹಿಡಿದು ಚಿಟಿಕ್ ಚಿಟಿಕ್ ಹಾರಿಸುತ್ತಾ ಬಳೆ ಇಡುತ್ತಾಳೆ. ಸದ್ದು ಕೊಟಕ್ ಎಂದರೆ ಕಣ್ಕಡುಕು, ಎಸೆಯುತ್ತಾಳೆ... ಛೇ...ಇದೆಂತದು? ಸೇಸಿಯನ್ನು ನೋಡಲಿಕ್ಕೆ ಬಂದದ್ದೋ ಜಾತ್ರೆಗೋ? ಬಳೆ ತೆಗೆದುಕೊಳ್ಳಲಿಕ್ಕೋ...
ಆ ಬಳೆ ಈ ಬಳೆ ಈ ಬಳೆ ಆ ಬಳೆ... ಮೊದಲು ನನಗೆ. ನಿನಗಲ್ಲ ನನಗೆ, ನನಗೆ ಎಲ್ಲರಿಗೂ ಇಡುವ ಎನ್ನುವಳು ಸೇಸಿ... ಆದರೆ ಇಷ್ಟು ಜನರಿಗೂ ಅವಳೊಬ್ಬಳಿಂದ ಬೇಗ ಸಾಧ್ಯವಿಲ್ಲ. ಅಂಗಡಿಯ ಆಚೆ ಈಚೆ ತುದಿಯಲ್ಲಿ ಅವಳ ಬಳಗದ ಕೆಲ ಗಂಡಸರೂ ಇದ್ದಾರೆ.ಅವರ ಹತ್ತಿರ ಬಳೆ ಇಡಿಸಿಕೊಳ್ಳುವವರು ಯಾರು? ರಾಧಚಿಕ್ಕಿ ಬೇಬಿಯಕ್ಕನಿಗೆ ಸೇಸಿಯೇ ಇಟ್ಟರೆ, ಉಳಿದವರಿಗೆ ಅವರು! ನಯವಾಗಿ ನೋವಾಗದಂತೆ ಮೆಲ್ಲ ಮೆಲ್ಲನೆ ಬಳೆ ಸರಿಸಿ ಇಡುವುದರಲ್ಲಿ ಗಂಡಸರೇ ಹುಶಾರಂತೆ! ಮಾಲ್ತಕ್ಕನ ಕೈಯನ್ನು ಅವನು ಗುಬ್ಬಚ್ಚಿ ಮರಿಯನ್ನು ಹಿಡಿದುಕೊಂಡಂತೆ ಹಿಡಿದುಕೊಂಡಿದ್ದಾನೆ. ಬಳೆ ಏರಿಸುತ್ತಿದ್ದಾನೆ... ತೊಡುವವರ ಮುಖ ನೋಡದೆ... ! ಅವನಿಗೆ ಕೈ ಮಾತ್ರ ಲೆಕ್ಕ...ಮುಖವಲ್ಲ! ದೃಷ್ಟಿಯೆಲ್ಲ ಅಂಗಡಿಯ ಆಸುಪಾಸಿನಲ್ಲಿ ಕಾವಲು...ಮೀಸೆ ಧೂಮ, ಕೈ ತುಂಬ ರೋಮ ರೋಮ,...ಬೆರಳ ಗಂಡಿನಲ್ಲಿಯೂ!ಯ್ಯಬ!

ಬಳೆಯಂಗಡಿಯಲ್ಲೊಂದು ಹುಡುಗರಿರುವುದಿಲ್ಲ...ಬರೇ ಹುಡುಗಿಯರಿರುವುದಿಲ್ಲ... ಬರೀ ಹೆಂಗಸರು. ಅಯ್ಯಬ್ಬ ಅನಿಸುತ್ತದೆ ಅಲ್ಲ...?
ಎಲ್ಲರದ್ದೂ ದೊಡ್ಡ `ಹೂಂ'.(ಯಾಕೆ `ಊಹೂಂ' ನಂತೆ ಕೇಳಿತೋ ಅಂದ ಹಾಗೆ ಅವೆಲ್ಲ ಎಲ್ಲಿ ಆ ಸಿಂಗಳೀಕಗಳು...?)
ಕಾಣುತ್ತವಲ್ಲ ಅಲ್ಲಿ... - ಸೋಡ್ತಿ ಅಂಗಡಿಯಲ್ಲಿ ನಿಂತು , ಬಳೆ ಅಂಗಡಿಯನ್ನೇ ಕಾಣುತ್ತಿವೆ...!
ಅಗ ಅಗ!
`ಹೈತ್! ಅವ್ ಕಾಂಬ್ ದಾ ನೀನಾ? ತಿರ್ಗ್ ತಿಯಾ ಇಲ್ಯಾ ಈಚೆ'

- ವೈದೇಹಿ.
ಚಿತ್ರ: ಆದೂರು.

0 comments:

Post a Comment