ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಅದು ಸರಿ ಸುಮಾರು 25ವರುಷಗಳ ಹಿಂದೆ...ಕಾಸರಗೋಡು ಜಿಲ್ಲೆಯ ಗ್ರಾಮೀಣ ಪ್ರದೇಶ ಆದೂರು. ನನ್ನ ಅಕ್ಕ ಅರುಣ ಮತ್ತು ನಾನು ಅದೇ ಆದೂರಿನ ಶಾಲೆಗೆ ಜೊತೆಗೆ ಹೋಗೋದು. ಅಕ್ಕನದ್ದು ಮೇಲಿನ ಶಾಲೆ.ಅಂದರೆ ನಾನು ಪ್ರೈಮರಿ.ಅಕ್ಕ ಹೈಸ್ಕೂಲು. ಹೈಸ್ಕೂಲು ಕಟ್ಟಡ ನಮ್ಮ ಶಾಲಾ ಕಟ್ಟಡಕ್ಕಿಂತ ತುಸು ಮೇಲ್ಭಾಗದಲ್ಲಿ ಇರೋದು.ಆ ಕಾರಣಕ್ಕಾಗಿ ಮೇಲಿನ ಶಾಲೆ ಎಂದೇ ಹೆಸರು.ಮತ್ತು ಖ್ಯಾತಿ. ನಾವಿದ್ದದ್ದು ನಮ್ಮ ಕ್ಲಾಸಿದ್ದದ್ದು ಪೊಲೀಸ್ ಸ್ಟೇಷನ್ ಬಳಿಯ ಹಳೆಯ ಶಾಲಾ ಕಟ್ಟಡ. ಸರಕಾರಿ ಶಾಲೆ. ಹೊರಗಡೆ ವೀರೋಜಿ ಮಾಸ್ಟರ್ ಅವರ ನೀಲ ಬಣ್ಣದ ಲ್ಯಾಂಬಿ.

ವೀರೋಜಿ ಮಾಸ್ಟ್ರು ಅಂದ್ರೆ ನಮಗೆಲ್ಲ ಭಯ. ಬರುವಾಗಲೇ ಬೆತ್ತ ಕೈಯಲ್ಲಿರುತ್ತದೆ. ಅಂತಿಂಥ ಬೆತ್ತ ಅದಲ್ಲ. ನಾಗರ ಬೆತ್ತ.ಅದರ ರುಚಿ ನೋಡುವುದೂ ಬೇಡ...ನೆನೆಸಿಕೊಂಡ್ರೆ ಚಡ್ಡಿ ಒದ್ದೆಯಾಗುತ್ತಿತ್ತು. ಆದರೆ ನಾನು ಒಂದೇ ಒಂದು ಬಾರಿಯೂ ಅದರ ರುಚಿ ನೋಡಿರಲಿಲ್ಲ. ಅವರ ಮಗ ಕಿಶೋರ ನನ್ನದೇ ಬೆಂಚ್ ಮೇಟ್... ಅವನ ಕೈಗೆ ಯಾವತ್ತೂ ಚಡಿಕ್...ಚಡಿಕ್... ಎರಡೆರಡು ಚಡ್ಡಿಯ ಹಿಂಭಾಗಕ್ಕೆ ... ಆ ಸದ್ದು ಇಂದಿಗೂ ನೆನಪಿನಲ್ಲಿದೆ...ಹಸಿ ಹಸಿ ನೆನಪು ಮರುಕಳಿಸುತ್ತಿದೆ...

ವೀರೋಜಿ ಮಾಸ್ಟ್ರು ಸದಾ ಶುಭ್ರವಾದ ಬಿಳಿಯಂಗಿ, ಬಿಳಿ ಪಂಚೆಯಲ್ಲಿ ಬರುವವರು. 11ಗಂಟೆಗೆ ಮೇಲಿನ ಶಾಲೆಯಿಂದ ವೀರೋಜಿ ಮಾಸ್ಟ್ರಿಗೆ ಚಹಾ ಮತ್ತು ನ್ಯೂಸ್ ಪೇಪರ್ ತುಂಡಲ್ಲಿ ಕಟ್ಟಿದ ಮೂರು ಚಕ್ಕುಲಿ ಬರುತ್ತಿತ್ತು.ಮಳೆಗಾಲ ಆ ಚಕ್ಕುಲಿ ಪೊಟ್ಟಣ ಅವರ ಮಗನ ಕೈ ಸೇರುತ್ತಿತ್ತು. ಚಹಾ ಮೇಲಿನ ಶಾಲೆಯಿಂದ ಕೆಳಗೆ ಬರುತ್ತಿದ್ದಂತೆಯೇ ತಣ್ಣಗಾಗಿರುತ್ತಿತ್ತು. ಭರ್ರನೇ ಒಂದೇ ಗುಟುಕಿಗೆ ಖಾಲಿಯಾಗುತ್ತಿತ್ತು. ವೀರೋಜಿ ಮಾಸ್ಟ್ರೂ ನನ್ನಪ್ಪನೂ ಜೋಸ್ತಿಗಳು.ನನ್ನಪ್ಪ ಅಡೂರು ಶಾಲೆಯ ಮಾಸ್ಟ್ರು.


ವೀರೋಜಿಯವರು ಅದೇ ಪಕ್ಕದ ಊರಿನಿಂದ ಬರುತ್ತಿದ್ದರು. ಹಾಗಾಗಿ ಪ್ರತಿನಿತ್ಯ ಅವರಿಬ್ಬರು ಮಾತನಾಡುತ್ತಿದ್ದರು.ಆದರೂ ಶಾಲೆಗೆ ಬಂದಾಗ ಅಪ್ಪನ ಬಗ್ಗೆ ಒಂದೆರಡು ವಿಷಯ ನನ್ನತ್ರ ಮಾತನಾಡದೆ ಅವರಿಗೆ ಸಮಾಧಾನವರಿತ್ತಿರಲಿಲ್ಲ. ಲೆಕ್ಕದ ಮಾಸ್ಟ್ರು ಎಂದೇ ವೀರೋಜಿಯವರು ಪ್ರಸಿದ್ಧಿ ಪಡೆದಿದ್ದರು. ನನಗಂತೂ ಅತ್ಯಂತ ಅಚ್ಚುಮೆಚ್ಚಿನ ಮೇಸ್ಟ್ರು ವೀರೋಜಿ. ಇಂದು ಅವರ ಸಂಪರ್ಕವೇ ಇಲ್ಲ....ಎಷ್ಟೋ ವರುಷದಿಂದ ಅವರೆಲ್ಲಿದ್ದಾರೆ...ಹೇಗಿದ್ದಾರೆ...ಏನಾಗಿದ್ದಾರೆ ಒಂದೂ ತಿಳಿಯದು..


ಇಂದು ಜೂನ್ ತಿಂಗಳ ಒಂದನೇ ತಾರೀಕು ... ನಾನಾಗ ಪ್ರೈಮರಿಯಲ್ಲಿರುವಾಗ ಜೂನ್ ಒಂದನೇ ತಾರೀಕೆಂದರೆ ಅದು ಮಳೆಯ ಆರಂಭದ ದಿನ...ಮುಂಗಾರು ಮಳೆ ಬಂದೇ ಬರುತ್ತಿತ್ತು. ಬೆಳಗ್ಗೆ ಏಳುವಾಗಲೇ ಜಿಟಿ ಜಿಟಿ ಮಳೆ... ಆ ಮಳೆಯಲ್ಲಿಯೇ ನಾನೂ ಅಕ್ಕನೂ ಕೊಡೆ ಹಿಡಿದುಕೊಂಡು ಹೋಗುವುದು...ಅರುಣಕ್ಕ ನನ್ನ ಕೈ ಹಿಡಿದುಕೊಂಡು ಹೋಗುವುದು... ಕೊಡೆಯ ಕಡ್ಡಿಯಿಂದ ಬೀಳುವ ನೀರು ನಮ್ಮಿಬ್ಬರ ಕೈ ತೋಯಿಸುತ್ತಿತ್ತು... ರಸ್ತೆಯ ಅಂಚಿನಲ್ಲಿದ್ದ ಮಳೆ ನೀರನ್ನು ಕಾಲಲ್ಲಿ ಚಿಮ್ಮಿಸುತ್ತಾ ರಸ್ತೆಯಲ್ಲಿ ಹರಿದು ಬರುವ ನೀರಿನಲ್ಲಿ ಆಟವಾಡುತ್ತಾ ಶಾಲೆಗೆ ಹೋಗುವುದು...


ಮಧ್ಯಾಹ್ನಕ್ಕೆ ಬುತ್ತಿ. ನನ್ನ ಬುತ್ತಿಯಲ್ಲಿ ಅಮ್ಮ ಹಾಕಿಕೊಟ್ಟ ಕುಚ್ಚಲಕ್ಕಿ ಅನ್ನ...ಎರಡು ಮಿಡಿ ಉಪ್ಪಿನ ಕಾಯಿ. ಒಂದು ನನಗೆ ಇನ್ನೊಂದು ನಮ್ಮ ಟೀಚರ್ ಗೆ .ಅದು ಕುಸುಮಾ ಟೀಚರ್. ಅವರಿಗೆ ನನ್ನ ಬುತ್ತಿಯಲ್ಲಿರುವ ಮಿಡಿ ಉಪ್ಪಿನಕಾಯಿ ಇಲ್ಲದೆ ಊಟವೇ ಸೇರದು... ಅವರಿಗೆ ನಾನಂದ್ರೆ ಅತೀವ ಪ್ರೀತಿ. ಪ್ರತೀ ಶುಕ್ರವಾರ ಮಧ್ಯಾಹ್ನ ಊಟಕ್ಕೆ ಕುಸುಮಾ ಟೀಚರ್ ನಮ್ಮಮನೆಗೆ ಬಂದೇ ಬರುತ್ತಿದ್ದರು. ಶಾಲೆಯಿಂದ ಅಬ್ಬಬ್ಬಾ ಅಂದರೆ ಒಂದು ಕಿಲೋ ಮೀಟರ್ ದೂರದಲ್ಲಿ ನಮ್ಮ ಮನೆ. ಶುಕ್ರವಾರ ಕೇರಳದಲ್ಲಿ 12.30ಕ್ಕೆ ಶಾಲೆ ಬಿಟ್ಟರೆ 2.30ಕ್ಕೆ ಮತ್ತೆ ಆರಂಭ. ಶನಿವಾರ , ಭಾನುವಾರ ಪೂರ್ತಿ ರಜೆ.

ಮಳೆಗಾಲದಲ್ಲಿ ಮಧ್ಯಾಹ್ನ ಶಾಲೆಯ ನೀಲಿಬಣ್ಣದ ಪೇಂಟ್ ಹೊಡೆದ ಕಿಟಿಕಿಯ ಬದಿಯಲ್ಲಿ ಕೂತು ಹಂಚಿನ ಮಾಡಿಂದ ಹನಿ ಹನಿ ಜಿನುಗುವ ನೀರ ಹನಿಗಳನ್ನು ನೋಡುತ್ತಾ ಅಮ್ಮ ಕಟ್ಟಿಕೊಟ್ಟ ಬುತ್ತಿ ಊಟಮಾಡುತ್ತಿದ್ದುದು ಇಂದಿಗೂ ನೆನಪಿಗೆ ಬರುತ್ತದೆ. ಆ ದಿನಗಳು ಇಂದು ಕೇವಲ ನೆನಪು ಮಾತ್ರ. ಅಂದಿನ ಪ್ರತಿಯೊಂದು ಘಟನೆಗಳೂ ಇಂದಿಗೂ ಹಸಿ ಹಸಿಯಾಗಿಯೇ ಉಳಿದುಕೊಂಡಿವೆ...

ಅಂದಿನಂತೆ ಹಸಿರು ಮರಗಳು, ಸಾಲು ಮರಗಳು ಇಂದಿಲ್ಲ...ಆದೂರು ಎಂಬ ಊರು ಮೊದಲಿನಂತೆ ಇಂದಿಲ್ಲ... ಬದಲಾವಣೆಯ ಗಾಳಿ ಬೀಸಿದೆ... ಶಾಲೆಯಲ್ಲಿಯೂ ಅಂತಹ ಪ್ರೀತಿಯ ಶಿಕ್ಷಕರು ಇಂದಿಲ್ಲ...ಎಲ್ಲವೂ ಬದಲಾಗಿದೆ. ಇಂದು ಜೂನ್ ತಿಂಗಳ ಒಂದನೇ ತಾರೀಕಿಗೆ ಮಳೆಯೂ ಇಲ್ಲ... ಆ ಪ್ರೀತಿಯ ವಾತಾವರಣವೇ ಇಂದು ಮರೆಯಾಗಿದೆ. ಕೇವಲ 25 ವರುಷದಲ್ಲಿ ನಾನು ಕಂಡಂತಹ ಬದಲಾವಣೆ ನನಗೇ ಬೇಸರ ತಂದಿದೆ....ಎಷ್ಟೆಂದರೆ ಜೀವನವೇ ಬೇಡ ಎಂಬಷ್ಟರ ಮಟ್ಟಿಗೆ!

- ಎಚ್.ಕೆ.

2 comments:

Shankara Bhat said...

ಆ ಪ್ರೀತಿಯ ವಾತಾವರಣವೇ ಇಂದು ಮರೆಯಾಗಿದೆ. ಕೇವಲ 25 ವರುಷದಲ್ಲಿ ನಾನು ಕಂಡಂತಹ ಬದಲಾವಣೆ ನನಗೇ ಬೇಸರ ತಂದಿದೆ....ಎಷ್ಟೆಂದರೆ ಜೀವನವೇ ಬೇಡ ಎಂಬಷ್ಟರ ಮಟ್ಟಿಗೆ!!!!?????????.
ಜಗವೆನ್ನ ಮುದ್ದಿಸಸದೇಕೆಂದು ಕೊರಗದಿರು|
ಮಗುವು ಪೆತ್ತರ್ಗೆ ನೀಂ,ಲೋಕಕೆ ಸ್ಪರ್ಧಿ||
ಹೆಗಲಹೊರೆ ಹುಟ್ಟಿದರ್ಗೆಲ್ಲ ಮಿರುತಿರೆ,ನಿನ್ನ|
ರಗಳೆಗಾರಿಗೆ ಬಿಡುವೋ ?-ಮಂಕುತಿಮ್ಮ||

Shankara Bhat said...

ಪೋಟೋಗಳು ತುಂಬಾ ಚೆನ್ನಾಗಿವೆ.

Post a Comment