ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಮಳೆಗಾಲ ಶುರುವಾಗಿದೆ. ಎಲ್ಲೆಲ್ಲೂ ನೀರು ... ನೀರು, ಜೊತೆಗೆ ಜೀವದ್ ಮೀನ್.... ಜೀವದ್ ಮೀನು....ಈ ಕೂಗು.
ಕರಾವಳಿ ತೀರದವರು ಶಿವಮೊಗ್ಗಕ್ಕೆ ಬಂದಾಗ ಈ ಕೂಗು ಕೇಳಿದರೆ ಆಶ್ಚರ್ಯಗೊಳ್ಳುತ್ತಾರೆ. ಯಾಕೆಂದರೆ ಕರಾವಳಿ ತೀರದಲ್ಲಿ ಜೀವಂತ ಮೀನು ಸಂಗ್ರಹಿಸುವವರು ವಿರಳ. ಯಾಕೆಂದರೆ ಅಲ್ಲಿ ಸಾಗರದಿಂದ ಮೀನು ತರುತ್ತಾರೆ. ರಾಶಿ ರಾಶಿ ಮೀನು ತರುವುದರಿಂದ ಎಲ್ಲಾ ಮೀನುಗಳು ಸತ್ತು ಹೋಗಿರುತ್ತವೆ. ಮತ್ತು ಮಾರುಕಟ್ಟೆಗೆ ತಲುಪುವ ಹೊತ್ತಿಗೆ ಅವುಗಳು ಸತ್ತು ಮೂರು ದಿನಗಳಾಗುವುದರಿಂದ ವಾತಾವರಣ ತುಂಬಾ ಘಮ ಘಮ.


ಬಂಗುಡೆ, ಭೂತಾಯಿ, ಸಿಗಡಿ, ಮರುವೋಳು ಇತ್ಯಾದಿ ಮೀನುಗಳು ಕರಾವಳಿ ಪ್ರದೇಶದಲ್ಲಿ ಭಾರಿ ಡಿಮಾಂಡ್. ಮೊದಲು ಕೆ.ಎಸ್.ಆರ್.ಟಿ.ಸಿ. ಬಸ್ನಲ್ಲಿ ಇತ್ತಲ್ಲ. ಆ ಥರಹದ ಹಾರನ್ಗಳನ್ನು ಅಳವಡಿಸಿಕೊಂಡು ಸೈಕಲ್ಗಳಲ್ಲಿ ಮನೆ ಮನೆಗೆ ಮೀನು ಮಾರುತ್ತಾರೆ. ಆ ಹಾರನ್ ಶಬ್ದ ಕೇಳಿಸಿತೆಂದರೆ ಮೂರು ಹೊತ್ತು ಪೂಜೆ ಮಾಡುವ ಅರ್ಚಕನ ಮನೆಯ ಅಡಿಗೆಮನೆಯಲ್ಲಿ ಮೊಸರಿಗೆ ಕಾಯುತ್ತಿರುವ ಬೆಕ್ಕು ಕೂಡ ಠಣ್ಣನೆ ಜಿಗಿದು ರಸ್ತೆಗೆ ಧಾವಿಸಿ ಆತನ ಹಿಂದೆ ಮುಂದೆ ತಿರುಗುತ್ತದೆ. ಕೊನೆಗೆ ಒಂದು ಸಣ್ಣ ಮೀನನ್ನಾದರೂ ತಿಂದೇ ಒಳಗೆ ಬರುತ್ತದೆ.

ಆದರೆ ಶಿವಮೊಗ್ಗ ಆಸುಪಾಸು ಊಟಕ್ಕೆ ಜೀವಂತ ಮೀನುಗಳೇ ದೊರೆಯುತ್ತವೆ. ಆಗಷ್ಟೇ ಹಿಡಿದ ಮೀನನ್ನು ಬುಟ್ಟಿಯಲ್ಲಿ ನೀರಿನ ಸಮೇತ ತುಂಬಿಕೊಂಡು ಬೀದಿಯಲ್ಲಿ ಮಾರಾಟ ಮಾಡುತ್ತಾರೆ. ಹೊಳೆಮೀನು ಮತ್ತು ಕೆರೆ ಮೀನು ಇಲ್ಲಿ ಹೆಚ್ಚಾಗಿ ಲಭ್ಯವಾಗುತ್ತಿವೆ. ತುಂಗಾ ನದಿಯ ದಡದಲ್ಲಿ, ಅದಕ್ಕೆ ನಿರ್ಮಿಸಲಾದ ಸಣ್ಣ ಸಣ್ಣ ಚಾನಲ್ಗಳಲ್ಲಿ, ನೀರು ನಿಲ್ಲುವ ಸಣ್ಣ ಹೊಂಡಗಳಲ್ಲಿ, ಗದ್ದೆ ಬದುವಿನ ಪಕ್ಕದ ನೀರೋಣಿಗಳಲ್ಲಿ ಮೀನು ಹಿಡಿಯುತ್ತಾರೆ.

ಹೊಳೆ, ಕೆರೆಯಲ್ಲಿ ಬಲೆ ಹಾಕಿ ಮೀನು ಹಿಡಿಯುವುದು ಕಮರ್ಶಿಯಲ್ ವಿಧಾನವಾದರೆ, ಸಣ್ಣ ಸಣ್ಣ ನೀರಿನ ಆಶ್ರಯಗಳಲ್ಲಿ ಗಾಳ ಹಾಕಿ ಮೀನು ಹಿಡಿಯುವುದು ಡೊಮೆಸ್ಟಿಕ್ ಪರ್ಪಸ್. ಅಂದರೆ ಮನೆ ಉಪಯೋಗಕ್ಕೆ. ದೊಡ್ಡ ಮೀನು ಒಂದೇ ಸಿಕ್ಕಿದರೂ ಸಾಕು. ಅವತ್ತಿಗೆ ತರಕಾರಿ ಚಿಂತೆ ಇಲ್ಲ. ಸ್ವಲ್ಪ ಖಾರ ಖಾರವಾಗಿ ನೆಂಚಿಕೊಳ್ಳಲು ಒಂದರೆಡು ಸಣ್ಣ ಸಣ್ಣ ಮೀನು ಫ್ರೈ ಆಗಿ ರೆಡಿಯಾದವೆಂದರೆ ಸ್ವರ್ಗಕ್ಕೆ ಕಿಚ್ಚ್ಚು ಹಚ್ಚೆಂದ ಸರ್ವಜ್ಞ.


ಗಾಳದಲ್ಲಿ ಮೀನು ಹಿಡಿಯಲು ಸಾಕಷ್ಟು ತಾಳ್ಮೆ ಬೇಕು. ಉದ್ದನೆಯ ಕೋಲಿಗೆ ನೈಲಾನ್ ದಾರ, ಅದಕ್ಕೆಂದೇ ವಿಶೇಷವಾಗಿ ತಯಾರಿಸಲಾದ ಕಬ್ಬಿಣದ ತಂತಿಯ ಕೊಂಡಿ. ಮಳೆಗಾಲದಲ್ಲೇ ಸಂಪದ್ಭರಿತವಾಗಿ ಸೃಷ್ಟಿಯಾಗುವ ಎರೆಹುಳ. ಜೀವಂತ ಎರೆಹುಳದ ದೇಹದ ಒಳಗಡೆ ಕೊಂಡಿಯನ್ನು ತೂರಿಸಲಾಗುತ್ತದೆ. ಅದು ವಿಲ ವಿಲ ಒದ್ದಾಡುತ್ತಾ ಮೀನಿಗೆ ಆಹಾರವಾಗುವ ಸಮಯವನ್ನು ಕಾಯುತ್ತಿರುತ್ತದೆ. ಕೊಂಡಿಯನ್ನು ಹಾಗೂ ದಾರವನ್ನು ಉದ್ದನೆಯ ದೊಣ್ಣೆಗೆ ಕಟ್ಟಲಾಗಿರುತ್ತದೆ. ಗಾಳ ಸಿದ್ದ.


ಕೊಂಡಿ ಸಮೇತ ದಾರವನ್ನು ನೀರಿನಲ್ಲಿ ಮುಳುಗಿಸಿ ಕೋಲು ಕೈಯಲ್ಲಿ ಹಿಡಿದುಕೊಂಡು ತಾಳ್ಮೆಯಿಂದ ಕಾಯಬೇಕು. ಕೆಲವೊಮ್ಮೆ ಅದೃಷ್ಟವಂತ ಮೀನು ಎರೆಹುಳವನ್ನು ಕಚ್ಚಿಕೊಂಡು ಹೋಗಿರುತ್ತದೆ. ಸ್ವಲ್ಪ ಆಸೆಬುರುಕ ಮೀನು ಎರೆಹುಳವನ್ನು ಇಡಿಯಾಗಿ ತಿನ್ನಲು ಹೋಗಿ ತನ್ನ ಬಾಯನ್ನು ಕೊಂಡಿಯೊಳಗೆ ಸಿಲುಕಿಸಿಕೊಳ್ಳುತ್ತದೆ. ಗಾಳ ಭಾರವೆನಿಸುತ್ತಿದ್ದಂತೆ ಮೇಲೆಳೆದುಕೊಂಡರೆ ಗಾಳಕ್ಕೆ ಸಿಕ್ಕಿದ ಮೀನು ಸಿದ್ದ. ಆಸೆ ತೋರಿಸಿ ಬಲಿ ತೆಗೆದುಕೊಳ್ಳುವುದರಿಂದ ಇಂದು ವ್ಯಾವಹಾರಿಕವಾಗಿಯು ಈ ಮಾತು ಪ್ರಚಲಿತದಲ್ಲಿದೆ. ಚಿಟ್ ಫಂಡ್ ಕಂಪನಿಗಳು ಹೆಚ್ಚಿನ ಬಡ್ಡಿ ತೋರಿಸಿ ಆಮೇಲೆ ಪರಾರಿಯಾದಾಗ, ಯುವಕರು ಯುವತಿಯರನ್ನು ಪ್ರಣಯದಾಟಕ್ಕೆ ಬಳಸಿ ಮಾಯವಾದಾಗ ಬಲಿಪಶುಗಳನ್ನು ಗಾಳಕ್ಕೆ ಸಿಕ್ಕಿದ ಮೀನು ಎನ್ನಲಾಗುತ್ತದೆ.

ಮಾಂಸಾಹಾರಿಗಳಿಗೆ ಸುಲಭವಾಗಿ ಹಾಗೂ ಸದ್ಯದ ಮಟ್ಟಿಗೆ ಇತರೇ ಮಾಂಸಗಳಿಗಿಂತ ಕಡಿಮೆ ದರದಲ್ಲಿ ದೊರೆಯುವುದು ಮೀನು ಮಾತ್ರ. ಹಾಗಾಗಿ ಇದಕ್ಕೆ ಎವರ್ ಗ್ರೀನ್ ಮಾರ್ಕೆಟ್ ಇದೆ.ಸಣ್ಣನೆ ಮಳೆ ಸುರಿಯುತ್ತಿರುವ ಸಂದರ್ಭವಿದು. ಕೆಲವು ಸಣ್ಣ ಪುಟ್ಟ ಹಣ್ಣಿನ ವ್ಯಾಪಾರಿಗಳು, ಕೂಲಿ ಕಾರ್ಮಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು, ನಿರುದ್ಯೋಗಿಗಳು ಮೀನು ಹಿಡಿಯುತ್ತಾ ಟೈಂ ಪಾಸ್ ಮಾಡುತ್ತಾರೆ. ಅಕ್ಕಪಕ್ಕದ ಮನೆಯವರಿಗೆ ಕೊಡುತ್ತಾರೆ. ಸಾಧ್ಯವಾದರೆ ಒಂದಿಷ್ಟು ಚಿಲ್ಲರೆ ಕಾಸು ಮಾಡುತ್ತಾರೆ. ಆದರೆ ಚಿಕ್ಕ ಚಿಕ್ಕ ಹುಡುಗರು ಇದೇ ಹವ್ಯಾಸಕ್ಕೆ ಬಿದ್ದು ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿ ಅಬ್ಬೇಪಾರಿಗಳಾಗುತ್ತಿರುವುದು ಬೇಸರದ ವಿಷಯ.

ಏಕತಾನತೆಯನ್ನು ಹೋಗಲಾಡಿಸುವ, ತಾಳ್ಮೆಯನ್ನು ಉದ್ದೀಪನಗೊಳಿಸುವ ಮೀನು ಹಿಡಿಯುವ ಹವ್ಯಾಸ ಆಹಾರ ಸರಪಣಿಯ ಒಂದು ಭಾಗವೂ ಹೌದು. ಸಣ್ಣ ಸಣ್ಣ ಹುಳುಗಳನ್ನು ಎರೆಹುಳು ತಿನ್ನುತ್ತದೆ, ಆ ಎರೆಹುಳುವನ್ನು ಮೀನು ತಿನ್ನುತ್ತದೆ. ಮೀನನ್ನು ಮನುಷ್ಯ ತಿನ್ನುತ್ತಾನೆ.

"ಕೃಷ್ಣ'',ಬನಾರಿ

0 comments:

Post a Comment