ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಧಾರಾವಾಹಿ : ಭಾಗ - 2

ಸಾಹಿತ್ಯ

ಪಿಯುಸಿಗೆ ಸೇರುವ ಹೊತ್ತಿಗೆ ಒಂದು ನಿರ್ಧಾರಕ್ಕೆ ಬಂದವರಂತೆ ಹೇಳಿದಾಗ ಅನಿವಾರ್ಯ ಕಾರಣವೆಂಬಂತೆ ಮನಸ್ವಿತಾ ರಾಜಿಗೆ ಇಳಿಯಲೇ ಬೇಕಾಯಿತು.ಸದ್ಯ ಕಾಲೇಜಿಗೆ ಹೋಗುವುದು ಬೇಡ ಅನ್ನಲಿಲ್ಲವೆನ್ನುವುದೊಂದೆ ಸಮಾಧಾನ. ಅಂತು ಕಾರ್ಮಸ್ಗೆ ಸೇರಿದ ಮೇಲೆ ಮನೆಯಲ್ಲಿ ತನ್ನ ಓದಿಗೆ ಉತ್ತೇಜನವಿಲ್ಲವೆಂದು ತಿಳಿಯಿತು. ಆದರೂ ನಿಂತ ನೀರಾಗಲೂ ಬಯಸಲಿಲ್ಲ. ಶಕ್ತಿ ಮೀರಿ ಓದುವ ಸಾಧನೆ ಮಾಡಿದ್ದೇ ಕ್ಲಾಸಿನಲ್ಲಿಯೇ ಪ್ರಥಮಳಾಗಿ ಉತ್ತೀರ್ಣಳಾದಾಗ ಇನ್ನೂ ಹೆಚ್ಚಿನ ವ್ಯಾಸಂಗಕ್ಕೆ ತಿಲಾಂಜಲಿ ನೀಡಿ ಕೇವಲ ಡಿಗ್ರಿಯೊಂದನ್ನು ಹಿಡಿದುಕೊಂಡು ಕೆಲಸಕ್ಕೆ ಅರ್ಜಿ ಹಾಕುವ ಪ್ರಕ್ರಿಯೆ ಆರಂಭಿಸಿದಳು.


ವಿದ್ಯಾರ್ಹತೆಯಿದೆ, ಉತ್ತಮ ಶ್ರೇಣಿಯಿದೆಯನ್ನುವ ಸ್ಥೆರ್ಯ ಹೆಜ್ಜೆ ಮುಂದುವರಿಸಿದ್ದನ್ನು ಗೆಲುವಿನತ್ತ ಕೊಂಡೊಯ್ದಿತ್ತು.ಕಾಲೇಜಿನ ಮಧ್ಯಾಹ್ನದ ಬಿಡುವಿನ ವೇಳೆಗೆ ಕಂಪ್ಯೂಟರ್ ಶಿಕ್ಷಣವನ್ನು ಮುಗಿಸಿದ್ದರಿಂದ ಅದೂ ಅನುಕೂಲವೇ ಆಗಿತ್ತು. `ನಿಖಿಲ್ ಎಂಟರ್ಪ್ರೈಸಸ್' ಆರಂಭವಾಗುವ ಹೊತ್ತಿಗೆ ಸರಿಯಾಗಿ ಇವಳ ಅಪ್ಲಿಕೇಶನ್ ಕೂಡ ಅಲ್ಲಿಗೆ ತಲುಪಿತ್ತು.

ಅವಳ ವಿದ್ಯಾರ್ಹತೆ ಚುರುಕುತನ ಕಂಡು ಆ ಸಂಸ್ಥೆಯಿಂದ ಪತ್ರ ಬಂದ ಕೂಡಲೇ ಇಂಟರ್ವ್ಯೂ ಅನ್ನುವ ತೋರಿಕೆಯ ಫಾರ್ಮಾಲಿಟಿಸ್ಗೆ ಸಿದ್ದಳಿದ್ದಳು.
"ನೀವು ಎಷ್ಟು ನಿರೀಕ್ಷೆ ಮಾಡುತ್ತೀರಿ?" ಮೂವತ್ತರ ಆಸುಪಾಸಿನ `ನಿಖಿಲ್ ಎಂಟರ್ಪ್ರೈಸಸ್'ನ ಮಾಲೀಕ ಕೇಳುವಾಗ ಆ ಫೀಲ್ಡ್ನಲ್ಲಿ ಅನುಭವವಿಲ್ಲದವಳು ಮನೆಯ ಅನಿವಾರ್ಯತೆಗೆ `3 ಸಾವಿರ' ಅಂದಿದ್ದೆ ಅವನು ಸುಂದರವಾಗಿ ನಕ್ಕ.
"ಬದುಕಿನಲ್ಲಿ ಏನೂ ನಿರೀಕ್ಷೆಗಳಿಲ್ಲ ಅನ್ಸುತ್ತೆ" ಅವನ ಮಾತಿಗೆ ತುಟಿ ಕಚ್ಚಿ ಹಿಡಿದಳು. ಅಂತಹ ಬಾರೀ ಬಾರೀ ನಿರೀಕ್ಷೆಗಳನ್ನು ಉಕ್ಕರಿಸಿ ಬಂದ ನದಿಯಲ್ಲಿ ಧಾರೆ ಎರೆದು ಬಂದಿದ್ದಳು. ತಾನು ಆಸೆ ಪಟ್ಟಂತೆ ಇವತ್ತು ಕಲಿಯುತ್ತಿದ್ದರೆ ಇನ್ನೊಂದೆರಡು ವರ್ಷಗಳಲ್ಲಿ 'ಡಾಕ್ಟರ್' ಅನ್ನುವ ಹಣೆ ಪಟ್ಟಿ ಕಟ್ಟಿಕೊಂಡು ರೋಗಿಗಳ ಶುಶ್ರೂಷೆಗೆ ನಿಲ್ಲಬಹುದಿತ್ತು ಅನ್ನಿಸದಿರಲಿಲ್ಲ.

ಅವಳ ಮುಖದಲ್ಲಾದ ಬದಲಾವಣೆಗಳನ್ನು ಓದಿಕೊಂಡವರಂತೆ ಎದುರಿಗೆ ಕುಳಿತಿದ್ದವನು ಗಂಭೀರನಾದ.
"ಆರು ತಿಂಗಳು ಪ್ರೊಬೇಷನರಿ ಪೀರಿಯೆಡ್ವರೆಗೆ 3000, ಬಳಿಕ ನಿಮ್ಮ ಪರ್ಫಾರ್ಮೆನ್ಸ್ ನೋಡಿ ಹೆಚ್ಚು ಮಾಡ್ತೇವೆ. ನೀವು ಯಾವಾಗ ಜಾಯಿನ್ ಆಗ್ತೀರಿಂತ ಹೇಳಿ" ಮೇಜಿನ ಬಳಿಯಿದ್ದ ಬಝರ್ ಒತ್ತಿದಾಗ ಅಟೆಂಡರ್ ಬಂದು ನಿಂತ.
"ಸೋಮ, ರವಿರಾಜನನ್ನು ಬರೋದಿಕ್ಕೆ ಹೇಳು"
ಅಟೆಂಡರ್ ಹೊರಗೆ ಹೋದ ಬಳಿಕ ರವಿರಾಜ ಒಳಗೆ ಬಂದು ನಿಂತ.
"ರವಿರಾಜ್, ಇವ್ರು ಮನಸ್ವಿತಾಂತ ಅಕೌಂಟ್ಸ್ ಸೆಕ್ಷನಿಗೆ ಬರ್ತಾರೆ. ಅವರು ಯಾವಾಗ ಜಾಯಿನ್ ಆಗ್ತಾರೆಂತ ಕೇಳಿಕೊಂಡು... ಬೇಕಿದ್ದ ಹೆಲ್ಪ್ ಮಾಡಿ" ಅಂದು ಮನಸ್ವಿತಾಳ ಕಡೆಗೆ ನೋಡಿ ಮುಗುಳ್ನಕ್ಕ.

ಆತನ ಗಂಭೀರ ವ್ಯಕ್ತಿತ್ವದ ನಡುವೆ ಹೆಚ್ಚೇನೂ ಸಮಯ ಹಾಳು ಮಾಡದೆ ನೇರವಾಗಿ ತನ್ನ ಅಪಾಯಿಮೆಂಟ್ ಬಗ್ಗೆ ಹೇಳಿದಾಗ ಆತ 'ಜೀನಿಯಸ್' ಅನಿಸಿತು. ಮನೆಯಲ್ಲಿದ್ದು ಮಾಡೋದೇನು? ಎಂದು ಆಲೋಚಿಸಿದವಳು, "ನಾನು ಇವತ್ತೇ ಜಾಯಿನ್ ಆಗ್ತೀನಿ" ಅಂದಾಗ ಆತನ ಕಣ್ಣುಗಳಲ್ಲಿ ಆಶ್ಚರ್ಯ ಮೂಡಿತು.

"ಗುಡ್, ರವಿರಾಜ್, ನಮ್ಮ ಸಂಸ್ಥೆ ಬಗ್ಗೆ ಎಲ್ಲಾ ವಿಷಯ ಹೇಳ್ಬಿಡಿ. ಸಂಜೆ ಹೊತ್ತಿಗೆ ಒಂದು ಸಣ್ಣ ಪಾರ್ಟಿಯನ್ನು ಆರೆಂಜ್ ಮಾಡಿ ಬಿಡಿ" ಅಂದು ಅವಳಿಗೆ, "ಆಲ್ ದ ಬೆಸ್ಟ್" ಅಂದ.
ಆವತ್ತಿನದೆಲ್ಲಾ ಮುಗಿಯಿತು ಅನ್ನುವ ಹೊತ್ತಿಗೆ ಅವಳ ಬದುಕಿನಲ್ಲಿ ಹೊಸ ಅಧ್ಯಾಯವೊಂದು ಆರಂಭವಾದಂತೆ ಕಂಡಿತು. ಉದ್ಯೋಗವೆನ್ನುವುದನ್ನು ಇಷ್ಟು ಸುಲಭದಲ್ಲಿ ಗಳಿಸಿಕೊಳ್ಳುತ್ತೇನೆನ್ನುವ ಐಡಿಯಾನೇ ಅವಳಿಗೆ ಇರಲಿಲ್ಲ.

ಸಹೋದ್ಯೋಗಿಗಳ ಪರಿಚಯವಾದ ಬಳಿಕ ಕೆಲಸದ ಮೇಲೆ, ಅಲ್ಲಿಯ ವಾತಾವರಣದ ಮೇಲೆ ವಿಶ್ವಾಸ ಮೂಡಿತು. ಎಲ್ಲರೂ ಪರಿಚಿತರಂತೆ ಮಾತಾನಾಡಿದಾಗ ಇದು ಹೊಸದೊಂದು ಜಗತ್ತೇ ಅಲ್ಲವೆನಿಸಿತು.
ಸಂಜೆಯ ಹೊತ್ತು ನಿಖಿಲ್, ರವಿರಾಜನನ್ನು ಕರೆದು ಪಾರ್ಟಿಯ ಬಗ್ಗೆ ವಿಚಾರಿಸಿದಾಗ, "ಸಾರ್, ಬೋರ್ಡ್ ರೂಂನಲ್ಲಿ ಎಲ್ಲಾ ಆರೆಂಜ್ ಆಗಿದೆ" ಅಂದ.

ಸರಿಯಾಗಿ ಐದು ಗಂಟೆಗೆ ಎಲ್ಲಾ ಸ್ಟಾಫ್ಗಳು ಬೋರ್ಡ್ ರೂಂನಲ್ಲಿ ಕುಳಿತಿರುವಾಗ ನಿಖಿಲ್ ಬಂದ. ಗೌರವ ಸೂಚಿಸುವಂತೆ ಎಲ್ಲರೂ ಎದ್ದು ನಿಂತರು. ಮನಸ್ವಿತಾ ಕೂಡ ಎದ್ದು ನಿಲ್ಲದಿರಲಿಲ್ಲ. ಆ ಪಾರ್ಟಿ ಆರೆಂಜ್ ಆಗಿರುವುದು ಕೂಡ ತನಗೋಸ್ಕರವೆಂದು ಅವಳಿಗೆ ತಿಳಿದಿರಲಿಲ್ಲ. ಮೊದಲಿಗೆ ನಿಖಿಲ್ ತನ್ನ ಹೆಸರು ಹೇಳಿಕೊಂಡು ಸಂಸ್ಥೆಯ ಉದ್ದೇಶ, ಕಾರ್ಯವೈಖರಿಯ ಬಗ್ಗೆ ಮಾತನಾಡುವಾಗ ಮನಸ್ವಿತಳತ್ತ ನೋಟ ಹರಿಸಿದ. ಅವಳು ಎಲ್ಲರ ಕಣ್ಣುಗಳು ತನ್ನತ್ತಲೇ ಇರುವುದನ್ನು ಗಮನಿಸಿದವಳು ಹಿಡಿಯಂತಾಗಿ ಮುದುರಿ ಕುಳಿತಿದ್ದಳು.

ಈ ಪಾರ್ಟಿ ಆರೆಂಜ್ ಆಗಿರೋದು ಯಾರಿಗೆ? ಆತನೇಕೆ ಎಲ್ಲರನ್ನು ಉದ್ದೇಶಿಸಿ ಮಾತನಾಡದೆ ತನ್ನತ್ತಲೇ ನೋಡುತ್ತಿದ್ದಾನೆ? ಮುಜುಗರದಿಂದ ಅವನ ದೃಷ್ಟಿಯಿಂದ ತಪ್ಪಿಸಿಕೊಳ್ಳುವಂತೆ ತಲೆ ತಗ್ಗಿಸಿದಳು.
"ಮನಸ್ವಿತಾ" ತನ್ನದೇ ಹೆಸರು ಅವನ ಬಾಯಿಯಲ್ಲಿ ಧ್ವನಿಸಿದಾಗ ಪಕ್ಕನೆ ತಲೆಯೆತ್ತಿದಳು. ಮುಖ ಕೆಂಪಾಗಿತ್ತು. ಎಲ್ಲರ ನೋಟದ ಕೇಂದ್ರ ಬಿಂದು ತಾನಾದೆನೆ ಅನ್ನುವ ಅಳುಕು ತುಂಬಿತ್ತು...

ನಾಳೆಗೆ...

- ಅನು ಬೆಳ್ಳೆ

0 comments:

Post a Comment