ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ನೆನಪುಳಿದ ಇಂದಿನ ಕಥೆ - 2

ನಾನು ಪುಗ್ಗೆ ಕೊಂಡೆನು. ಅವಳು ಗಿಣಿಕೊಂಡಳು. ಇವಳು ಟರ್ರ ಟರ್ರ ಟರ್ರ ಆಟಿಕೆ ಕೊಂಡಳು. ಅದು ಆಗಲೇ ಅವಳ ಕೈಯಲ್ಲಿ ತಿರುಗಲು ಸುರುವಾಗಿಯೂ ಆಯಿತು. ಥು. ಈ ಪುಗ್ಗೆಗಿಂತ ಅದನ್ನೇ ತೆಗೆದುಕೊಳ್ಳಬಹುದಿತ್ತು...


ಈ ಗಿಣಿಯ ಬದಲು ಪುಗ್ಗೆ ತೆಗೆದುಕೊಳ್ಳಬಹುದಿತ್ತು... ನಿನ್ನ ಪುಗ್ಗೆ ನನಗೂ ಕೊಡುತ್ತಿಯ? ಊದಿ ಕೊಡುತ್ತೇನೆ. ಹೂಂ.ನಿನ್ನ ಗಿಣಿ ಸ್ವಲ್ಪ ನೋಡುವ, ಈಗ ವಾಪಸು ಕೊಟ್ಟೆ. `ಚಿಕ್ಕಿ , ಚಿಕ್ಕಿ , ನಂಗೊಂದು ಕಾಗ್ದದ್ ಹೂ ಬೇಕಿದಿತ್ '. `ಏನ್ಯೇನ್ ಕಾಗದ್ದ್ ಹೂಗ? ಶ್ಶಿ. ಅದನ್ನೆಲ್ಲ ನಾವ್ ಮುಡುಕಾಗ.'
(ಯಾಕೆ?)
`ಮುಡಿತ್ತಿಲ್ಲೆ. ದೇವ್ರ್ ಪಟಕಿಡ್ತೋ.'
`ಯೇನ್ ಬೇಡ. ಬತ್ರಿಯಾ ಇಲ್ಯಾ ಸುಮ್ನೆ.'
ಉ ಹುಂ. ಉಹೂಮ್ ಬರುವುದಿಲ್ಲ.ಅದು ಬೇಕೇ ಬೇಕು. ಬೇಕೆಂದರೆ ಬೇಕೇ... ಥೈಥಕ ಥೈ...
ಹಳದಿ ಹೂವು ಕೈಗೆ ಸಿಕ್ಕಿತು. ಸುನೆರಿ ದಳದ ಹೂವು. ಪಟಪಟ ಕಣ್ಣು ಹೊಡೆದಂತೆ ಮಿನುಗುತ್ತಿದೆ. ಎಷ್ಟು ಚಂದ!
... ಹಾಗಾದರೆ ನನಗೂ ಬೇಕು! ಅವಳಿಗೆ ಮಾತ್ರವಾ? ಥಕಥೈಥೈ
ಆಯಿತು.ಅಷ್ಟೆಲ್ಲ ದರ್ಶನ ಬೇಡ. ಇಕ ನಿಂಗೂ!...ಕೆಂಪು....ಹೂ!


ಇದು ಚಂದವಾ ಅದಾ?... ಅವಳು ಮುಡಿದೇ ಬಿಟ್ಟಳು!
`ಹಯ್ಯ! ದೇವರಿಗೆ ಗೋಂಟ ಹಾಕಿದ್ದಾ! ಥೇಟ್ ಮರ್ಳಿ ಹಾಂಗೆ ಕಾಣತ್ತಲೆ ಈಗ ಹೆಣ್ಣ್ !'
ನಿನ್ನ ಕೈಯಲ್ಲಿ ಇನ್ನು ಎಷ್ಟುಂಟು? ನನ್ನ ಹತ್ತಿರ ಇಷ್ಟುಂಟು. ನಿನ್ನ ಹತ್ತಿರ? ಇನ್ನೂ ಎಷ್ಟೆಲ್ಲ ತೆಗೆದುಕೊಳ್ಳಬೇಕು! ಕೈಯಲ್ಲಿರುವುದು ಏನೇನೂ ಸಾಲದು.

`ದುಡ್ಡು ಕಳೀಬೇಡಿ , ಗಟ್ಟಿ ಹಿಡ್ಕಣ್ಣಿ.ಕಳ್ರಿದ್ದೋ..'
ಯೇ.ಅಲ್ಲಿ ನೋಡಾ...ನೋಡು. ನಮ್ಮ ರಮಾ ಟೀಚರು! `ಚೌಲಿ' ತೆಗೆದುಕೊಳ್ಳುತ್ತಿದ್ದಾರೆ. ಚೌಲಿಗೆ ಕೈಕೊಟ್ಟು ನಿಂತು ರಮಾ ಟೀಚರು ಶಾಲೆಯಲ್ಲಿ ಕಾಣುವ ರಮಾ ಟೀಚರಿಗಿಂತ ಎಷ್ಟು ಬೇರೆ ಕಾಣುತ್ತಾರೆ. ! ಆದರೆ ಟೀಚರಿಗೂ `ಚೌಲಿ'ಬೇಕೇ.?! ಒಂದು ಕ್ಷಣ ತಡಿ. ನೋಡುವ , ಅವರು ಏನೆಲ್ಲಕೊಳ್ಳುತ್ತಾರೆ ಅಂತ. ಅಕ ಅಕ! ಟೀಚರು ಕೂಡಾ ಕ್ಲಿಪ್ಪು, ಪರ್ಸು , ರಿಬ್ಬನ್ನು , ಮುಳ್ಳು ತೆಗೆದುಕೊಂಡರು! ಹೋ! ಚೌಲಿಯವಳು ನಮ್ಮ ಟೀಚರ ಹತ್ತಿರ ಚರ್ಚೆ ಮಾಡುವುದು ಯಾಕಂತ! ಅವಳಿಗೆ ಅವರು ಟೀಚರು ಎಂದು ಗೊತ್ತಿಲ್ಲವೇ? ಛೆ? ನಾನೆಲ್ಲಾದರೂ ಅಂಡಗಿ ಇಟ್ಟರೆ ರಮಾ ಟೀಚರಿಗೆ ಚೌಲಿಯನ್ನು ದುಡ್ಡೇ ತೆಗೆದುಕೊಳ್ಳದೇ ಕೊಡುತ್ತೇನೆ. ಟೀಚರು ಎಂದರೆ ಯಾರು? ದೇವರೇ.

ನಮಸ್ಕಾರ ಟೀಚರ್!
ನಮಸ್ಕಾರ, ಏನು, ಎಲ್ಲರೂ ಬಂದಿದ್ದೀರೋ? ಕೈ ಕೈ ಹಿಡಿದುಕೊಂಡು ಜಾಗ್ರತೆ ಹೋಗಿ ಮತ್ತೆ.
ಆಯ್ತು ಟೀಚರ್.
ಕ್ಷಣದಲ್ಲಿ ಟೀಚರ್ ಆದ ರಮಾ ಮತ್ತೆ ಚೌಲಿಗೆ ಕೈಕೊಟ್ಟು ಬೇರೆಯಾಗಿ ಬಿಟ್ಟರು...!

ಜಾತ್ರೆಗೆ ಈ ವರ್ಷವೂ `ಒಂದೂವರೆ ರುಪಾಯಿ ಅಂಗಡಿ' ಬಂದಿದೆ. ಅದು ಬಾರದೆ ಜಾತ್ರೆಯುಂಟೇ? ಈ ಅಂಗಡಿಯಲ್ಲಿ ಏನು ತೆಗೆದುಕೊಂಡರೂ ಅದರ ಬೆಲೆ ಒಂದೂವರೆ ರುಪಾಯಿ! ಸಾಬೂನು ಪೆಟ್ಟಿಗೆಗೂ, ಎಲ್ಯುಮಿನಿಯಂ ಪಾತ್ರೆಗೂ, ಜರಡಿಗೂ ...ಚೂರಿಗೂ! ರಾಧಚಿಕ್ಕಿ ಈ ಅಂಗಡಿ ಮುಂದೆ ನಿಂತಳೆಂದರೆ ನಿಂತಳೆಂದೇ...

ರಾಧ ಚಿಕ್ಕಿ ರಾಧಚಿಕ್ಕಿ...

ಹೇಗೆ ಕರೆದರೂ ರಾಧಚಿಕ್ಕಿಗೆ ಎಚ್ಚರವಿಲ್ಲ! ಆಕೆ ಅಂಗಡಿ ಇಡೀ ಕಣ್ಣಾಡಿಸುತ್ತಿದ್ದಾಳೆ.ಹಾಗಾದರೆ ಅವಳಿಗೆ ಏನು ಬೇಕಾಗಿದೆ? ಅವಳ ದೃಷ್ಟಿಯನ್ನೇ ಹಿಂಬಾಲಿಸಿದರೆ ಆ ದೃಷ್ಟಿ ಎಲ್ಲಾದರೂ ಒಂದು ಕಡೆ ನಿಂತರಲ್ಲವೇ!
ರಾಧ ಚಿಕ್ಕಿ ರಾಧಚಿಕ್ಕಿ, ಎಲ್ಲದಕ್ಕೂ ಒಂದೇದರ. ಅದು ಹೇಗೆ?
ರಾಧಚಿಕ್ಕಿ ಎಚ್ಚರ ಬಂದ ಹಾಗಿದೆ. ಪ್ರಶ್ನೆ ಕೇಳಿದ ಸುಮನಕ್ಕನನ್ನೇ ನೋಡುತ್ತ ನಿಂತಳು!


ಆಕೆ ಸುಮನಕ್ಕನನ್ನು ನೋಡುತ್ತಿದ್ದರೂ ಸುಮನಕ್ಕನನ್ನು ನೋಡುತ್ತಿಲ್ಲ! ಅವಳ ಕಣ್ಣಿನಲ್ಲಿ ಆ ಅಂಗಡಿಯ ಯಾವುದೋ ಒಂದು ವಸ್ತುವೇ ನೆಲೆಸಿದೆ. ಮತ್ತೆ ಅದೇ ಪ್ರಶ್ನೆ ಕಿವಿಗೆ ಬಿದ್ದ ಹಾಗಾದಾಗ ಪೂರ್ತಿ ಎಚ್ಚರಗೊಂಡಳು. ಮತ್ತೆ ವಿವರಿಸಿದಳು. ಏನಂತೆ ಗೊತ್ತೇ? ಅದೆಲ್ಲ ಮಾರಾಟಗಾರರ ಹಿಕಡಿಯಂತೆ. ಕಡಿಮೆ ದರದ ಹೆಚ್ಚು ದರದ ಸಾಮಾನುಗಳನ್ನೆಲ್ಲ ಬೆರೆಸಿಟ್ಟು ಮರುಳು ಜನರನ್ನು ಮರುಳು ಮಾಡುವುದಂತೆ! ರಾಧಚಿಕ್ಕಿ ಒಂದು ಸ್ಟೀಲು ಬಟ್ಟಲು ಮತ್ತು ಒಂದು ಎಂಟಾಣೆ ಬೆಲೆಯ ಸಾಬೂನು ಪೆಟ್ಟಿಗೆಯ ಉದಾಹರಣೆ ಕೊಟ್ಟು ಪಿಸುಪಿಸುವಾಗಿ ವಿವರಿಸಿದಳು.

ಆದರೆ ತಾನು ಹಾಗೆಲ್ಲ ಹೆಡ್ಡು ಬೀಳುವವಳಲ್ಲ. ಪ್ರತೀ ಜಾತ್ರೆಯಲ್ಲೂ ಅವನಿಗೆ ಲಾಸ್ ಆಗುವಂತೆ ಮಾರಾಟಮಾಡುವವಳು. ತನಗೆ ಟೊಪ್ಪಿ ಹಾಕುವವರು ಇನ್ನೊಂದು ಸಲ ಹುಟ್ಟಿಬರಬೇಕು ಎಂದಳು. ಆಕೆಯ ಹುಡುಕಾಟ ಮುಗಿಯುವ ಲಕ್ಷಣವಿಲ್ಲ. ಹೋಗುವ ನಾವು. ಅವಳು ಇಲ್ಲಿಯೇ ಕುಳಿತುಕೊಳ್ಳಲಿ. ಬೇಕಾದರೆ ಚಾಪೆ ಹಾಕಿಕೊಂಡು. !

`ರಾಧಚಿಕ್ಕಿ, ನಾವೊಂಚೂರ್ ಮುಂದೆ ಹೋತೋ...'
`ಹೂಂ...ಈಗಬಂದೆ...ನಾನೂ..ಜಾಗ್ರತೆ...?'
ಜಾತ್ರೆ ಮತ್ತು ಜಾಗ್ರತೆ ಅಕ್ಕ ತಂಗಿಯರೋ ಏನು! ಜಾತ್ರೆ ಎಂದವರು ಜಾಗ್ರತೆ ಎನ್ನದೇ ಇರುವುದಿಲ್ಲ!...
ಹಾಗೇನಿಲ್ಲ. ನನ್ನ ಕೇಳಿದರೆ ಜಾತ್ರೆ ಮತ್ತು ಜಾಗ್ರತೆ ಅಂದರೆ ಕಳ್ಳ ಮತ್ತು ಪೊಲೀಸ್.
ಯಾಕೆ ಕೇಳುತ್ತಿಯ? ಜಾತ್ರೆಯಲ್ಲಿ ...(ಅಯ್ಯ ಯಾರೂ ಕೇಳಿಲ್ಲ ಈಗ ಯಾಕೆ ಅಂತ... ನಾವು ಇವರನ್ನು ಬಿಟ್ಟು ಮುಂದೆ ಹೋಗುವ ಬಾರ ಸುಮನಕ್ಕ)

`ಏ... ಸುಮನಕ್ಕ, ಐಸ್ ಕ್ಯಾಂಡಿ! ತಕಂಬನ?'
`ಹಾಂಗೆಲ್ಲ ತಿಂಬುಕಾಗ, ಶಙ್ಙನ್ ಮಾಸ್ಟ್ರು ಹೇಳಿದ್ದಲ್ಲ? ರಸ್ತೆ ಬದೀದ್ ಜಾತ್ರೆಗೀತ್ರೆದ್ ಯಂತದೂ ತಿಂಬುಕಾಗ ಅಂತೆಳಿ? ಕ್ರಿಮಿಗಿಮಿಯೆಲ್ಲ ಅದ್ರ್ ಮೇಲೆ ಕೂತಿರ್ತೋ ಅಂಬ್ರ್...ತಿಂದ್ರ್ ಹೇಳಿ ಕೊಡ್ತೆ ಕಾಣ್...
ಈ ಸುಮನಕ್ಕ ಭಯಂಕರ ಜೋರು ಮತ್ತು ಸ್ಟ್ರಿಕ್ಟ್ !ಇವಳೊಟ್ಟಿಗೆ ಬಂದರೆ ಸುಖವಿಲ್ಲ....


`ಆ ಬೊಂಬೈ ಮಿಠಾಯಿ ಆರೂ ತಿಂಬೋ...ಬಾರಾ...'
`ಶ್ಶೀ...ಬೊಂಬೈ ಮಿಠಾಯಿ ಎಂತದು! ಅದರ ಕಲರ್ ಗೊತ್ತಿತಾ? ಅಷ್ಟ್ ಕೆಟ್ಟದ್ . ಹಟ್ಯೊಳ್ಗ್ ಹೋದ್ರ್ ಕೊರಿತ್ತು.ತಿಂದ್ರ್ ವಾಂತಿ ಹೊರ್ಕಡೆ ಸುರವಾತ್ತ್. ಅದನ್ನ್ ಜನ್ಮಕ್ ತಿಂಬುಕಾಗ!'
ಬಾಯಲ್ಲಿ ನೀರೂರಿದರೆ ನುಂಗಿದರಾಯಿತು. ಗುಟಕ್...ಅರ್ಧ ಆಣೆಗೆ ಎಷ್ಟು ದೊಡ್ಡ ಹೂವಿನಂತೆ ಅರಳಿ ಕೈಗಿ ಸಿಗುವ ಮಿಠಾಯಿ, ಡಬ್ಬಿಯೊಳಗಿಂದಲೇ ಕರೆಯುವ ಮಿಠಾಯಿ. ಗಂಟೆ ಬಾರಿಸುತ್ತಿದೆ, ತಿನ್ನುತ್ತ ಜನ ದಾಟುತ್ತಿದ್ದಾರೆ. .. ಇವರಿಗೆಲ್ಲ ಬುದ್ದಿ ಇಲ್ಲ. ಆ ಗುಲಾಬಿ ಬಣ್ಣ ಹೊಟ್ಟೆ ಕೊರೆದು ಒಟ್ಟೆ ಮಾಡುತ್ತದೆ. ಹೊರ್ಕಡೆ ಸುರುವಾಗುತ್ತದೆ... ಇವರು ಯಾರಿಗೂ ಹೇಳುವವರೇ ಇಲ್ಲ, ಪಾಪ...ಗುಟ್ ಕ್ .

ಅದೇನದು ಟೆಂಟಿನ ಮೇಲೆ ಚಿತ್ರ! `ಹಾವಿನ ದೇಹಾ...ಹುಡುಗಿಯ ಮುಖಾ...!'

ನೋಡುತ್ತಾ ನಿಂತರೆ ಚಿತ್ರದ ಹುಡುಗಿ ನಮ್ಮನ್ನೇ ದುಃಖದಿಂದ ನೋಡಿದ ಹಾಗಾಗಿ ತಳಮಳವಾಗುತ್ತದೆ. ಆದರೂ ಒಳಗೆ ಹೋಗಿ ನೋಡುವನ? ಮೈಕಿನಲ್ಲಿ ಇನ್ನೂ ಜೋರಾಗಿ ಮತ್ತೂ ಜೋರಾಗಿ ಕೂಗುತ್ತಾ ಇದ್ದಾರೆ... `ಹಾವಿನ ದೇಹಾ...ಹುಡುಗಿಯ ಮುಖಾ... ವಿಚಿತ್ರ ಸಂಗತಿ... ನೋಡಲು ಬನ್ನಿರೀ... ಬನ್ನಿರೀ...
ಟಿಕೇಟು ಎಷ್ಟೋ...
ಯಾಕೆ ನಿನಗೆ? ಅಲ್ಲಿಗೆಲ್ಲ ಹೋಗುವುದು ಬೇಡ. ಬರೀ ಗಂಡಸರ ನಿಗ್ಗು. ನೋಡುವ ಆಸೆಗೇನು ನೂರು ಇರುತ್ತದೆ.
`ಪೂರೈಸುಕ್ ಅಪ್ದ ಹೋಪ್ದ...? ಅವ ಹೋಯ್ಲಿ...ಅವಹುಡ್ಗ. ನೀನ್ ಹುಡ್ ಗ್ನಾ..?
ಹಪ್ಪೋರೆ ಉಡಾಪೆ! ಅಷ್ಟು ಬೇಕಿದ್ರೆ ಮನೀಗ್ ಬಂದ್ ಮೇಲೆ ಕೇಣಿ. ಎಲ್ಲ ಹೇಳ್ತ... ಇಷ್ಟಕ್ಕೂ ಹುಡ್ಗೇರ್ ಅಂಥಲ್ಲೆಲ್ಲ ಹೋರೆ ಅವು ಕದ್ದ್ ಹಾವಿನ ಮೈ ತೊಡ್ಸಿ ಬಿಡ್ತೋ.ಹೀಂಗೇ ಯಾವ್ದಾದ್ರೂ ಜಾತ್ರಿಯಗ್ ತಂದ್ ತೋರ್ಸಿ ದುಡ್ ಮಾಡ್ತೋ...ಹೋತ್ರಿಯಾ ಕಾಂಬ್ಕೆ?'
`...ಇಲ್ಲೆ ಇಲ್ಲೆ...'
`ಚಿಕ್ಕೀ , ನನ್ನ್ ಕೈ ಹಿಡ್ಕೋ... ಮುಂದ್ ಹೋಬೆಡ.' ಈ ಟೆಂಟ್ ಎಷ್ಟು ಉದ್ದವಪ್ಪ! ಎಷ್ಟು ಹೆಜ್ಜೆ ಹಾಕಿದರೂ ಮುಗಿಯುವುದಿಲ್ಲ.
ಹಾವಿನ ಹುಡುಗಿಯನ್ನು ನೋಡಿ ಬಂದ ಹುಡುಗರು ಎಷ್ಟು ಶೂರರಂತೆ ಕಾಣುತ್ತಾರೆ!
ನೋಡುವ ಮೊದಲು ಅವರು ಇವರಂತಿರಲಿಲ್ಲ!
ಕೇಳು ಕೇಳು ಇವರೊಡನೆ , ಅದೆಲ್ಲ ಹೇಗೆ, ಹೇಳಿಯಾರು.
ನೀ ಕೇಳು
ಇಲ್ಲ ಇಲ್ಲ ನಾ ಕೇಳುವುದಿಲ್ಲ. ನೀ ಕೇಳು.
ಉಹುಂ ನಾ ಕೇಳುವುದಿಲ್ಲಪ್ಪ. ತಮಾಷೆ ಮಾಡಿಸಿಕೊಳ್ಳಲಿಕ್ಕ?
ತಮಾಷೆ ಮಾಡಲಿಕ್ಕೇನುಂಟು?
ನಮಗೆ ಅದು ಗೊತ್ತಿಲ್ಲವಲ್ಲ! ನೀನು ಹುಶಾರು. ಕೇಳು ಮೆಲ್ಲ.ನೋಡುವ
ಅವಳು ಹುಟ್ಟಿದ್ದೇ ಹಾಗಂತೆ ಹೌದಾನಾ?
ಅಲ್ಲ, ಹಾಗೆ ಹುಟ್ಟಿದ್ದಲ್ಲ. ನಿನಗೆ ಯಾರು ಹೇಳಿದರು...?ಅದೆಲ್ಲ ಒಂದು ಟ್ರಿಕ್. ಅದನ್ನ ಹೀಗೆ ಮಾಡುತ್ತಾರೆ...
ಅವರು ವರ್ಣಿಸಿದ ಹಾಗೂ ಇನ್ನಷ್ಟು ಮತ್ತಷ್ಟು ತಿಳಿಯುವುದಿಲ್ಲ. ಅವರು ಚರ್ಚಿಸಿದ ಹಾಗೂ ಛೆ ಇನ್ನೂ ಯಂತದೂ ಅರ್ಧವಾಗುವುದಿಲ್ಲ. ಬದಲು , ಇದ್ದಕ್ಕಿದ್ದಂತೆ ನಮ್ಮ ದೇಹವೂ ಹಾವು, ಮೀನು ತಿಮಿಂಗಿಲವಾಗಿಬಿಟ್ಟಿದೆ!...ಹೀಗೆ ಹೇಳಿದಂತಾಯಿತೆ? ಕೇಳಲಿಕ್ಕೆ ಹೋಗುವುದೇ ಬೇಡವಿತ್ತು. ಯಾಕಾದರೂ ಬೇಕಿತ್ತು...ನಮಗೆ?
ನೀನು ಇಷ್ಟು ಪುಕ್ಕಿ ಅಂತ ಗೊತ್ತಿರಲಿಲ್ಲ.
ಪುಕ್ಕಿ ನಾನಲ್ಲ ನೀನು
ಹ್ಹೇ ನೀನು
ನಾನಂತೆ ! ನೀನು
ನೀನು ನೀನು
ನೀನೆಷ್ಟು ಹೇಳುತ್ತಿಯೋ ಅದಕ್ಕಿಂತ ಒಂದು ಹೆಚ್ಚು ನೀನು.
ವೆ ವೆ ವೆ
...

... ಕಣ್ಮುಚ್ಚಿದರೂ ತೆರೆದರೂ ಅದೇ ಹಾವಿನ ಹುಡುಗಿಯದೇ ಚಿತ್ರ. ಅವಳು `ಇಲ್ಲಿಂದ ಬಿಡಿಸಿ ಪಾರು ಮಾಡಿ ' ಎನ್ನುತ್ತಿರುವ ಹಾಗೆ... ನಾವು ಬಿಡಿಸಲಿಲ್ಲವಲ್ಲಾ...! ಅವಳು ರಾತ್ರಿಯಲ್ಲಿ ಈಗಲೂ ಹಬ್ಬದ ಗುಡಿಯಲ್ಲಿ... ಹಾವಿನ ದೇಹದಲ್ಲಿ...ಅಯ್ಯೋ...
`ಯಾರದು ಮರ್ಕುದ್ ? ನಿದ್ದಿ ಮಾಡುದ್ ಬಿಟ್ಕಂಡ್ ?'
`...'
`ಈಗ ಮರ್ಕುದೆಂತದಾ. ನಾವ್ ಹ್ಯಾಂಗಾರೂ ಟೆಂಟಿನ ಹಿಂಬದಿಗ್ ಹೋಯಿ ಅವಳನ್ ಬಿಡ್ಸಿ ಬಿಡ್ಕಿತ್.'
`ಹೋಯ್ಲಿ ಬಿಡ್.ಮನೆಗ್ ಬಂದಾಯ್ತಲೆ.'
`ಅಲ್ಲ...ಅವ್ಳ್ ನಿಜ್ ವಾಗ್ಲೂ ಹುಟ್ಟಿದ್ದೇ ಹಾಂಗಂಬ್ರಲೇ...!'
`ಅಲ್ಲ ಅಂದ್ನಲ್ಲೆ ಅಣ್ಣಯ್ಯ...'
`...ಹುಂ...'
`ಅಯ್ಯಪ್ಪ ...ಮಾತಾಬೇಡಿ. ನಂಗ್ ಹೆದ್ರಿಕ್ ಆತ್ತ್.'
`ರಾಮರಾಮ ಅನ್. ಹೆದ್ರಿಕೆ ಎಲ್ಲ ಹೋಯಿ ಸಾಪ್ ನಿದ್ದೆ ಬತ್ತ್.'

- ವೈದೇಹಿ.
ಚಿತ್ರ: ಆದೂರು.

0 comments:

Post a Comment