ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಕುಪ್ಪಳ್ಳಿಯ ಬಗ್ಗೆ ಯಾರಿಗೆ ತಾನೇ ತಿಳಿದಿಲ್ಲ ಎಂದು ಅಂದುಕೊಂಡಿದ್ದೆ. ಆದರೆ ನಮ್ಮಜೊತೆಗಿದ್ದಕೆಲವರಿಗೇ ಗೊತ್ತಿರಲಿಲ್ಲ. ಕುಪ್ಪಳ್ಳಿ, ಪಶ್ಚಿಮ ಘಟ್ಟಗಳಲ್ಲಿ, ಶಿವಮೊಗ್ಗ ಜಿಲ್ಲೆಯತೀರ್ಥಹಳ್ಳಿ ತಾಲೂಕಿನಲ್ಲಿರುವ ಪುಟ್ಟ ಗ್ರಾಮ. ಈಗ ಅದೊಂದು ದೊಡ್ಡ ಗ್ರಾಮವಾಗಿದೆ.


ನಾವು ಹತ್ತುವರ್ಷ ಶಾಲೆಗಳಲ್ಲಿ ಸತತವಾಗಿ ಹಾಡಿದ ನಾಡಗೀತೆಯ ಜನಕ ಮತ್ತು ಅದೆಷ್ಟೋ ಮೊದಲು ಎನ್ನುವ ಮೈಲಿಗಲ್ಲುಗಳನ್ನ ಸಾಧಿಸಿದ ವಿಶ್ವಮಾನವ ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ(ಕುವೆಂಪು) ಅವರು ಆಡಿ, ನಲಿದು, ಬಿದ್ದು, ಎದ್ದು ಬೆಳೆದ ಸುಂದರ ಮನೆ ಮತ್ತು ಅವರ ಸ್ಪೂರ್ತಿಯ ಸೆಲೆ ಕವಿ ಶೈಲ ಅಲ್ಲಿದೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಕುಪ್ಪಳ್ಳಿಯ ಅಂದ ಚಂದವನ್ನು ಹೆಚ್ಚಿಸಿದೆ. ಕುವೆಂಪು ಅವರಮನೆ, ಕವಿ ಶೈಲ, ಕುವೆಂಪು ಜೈವಿಕ ಧಾಮ, ಕುವೆಂಪು ಜನ್ಮ ಶತಮಾನೋತ್ಸವ ಭವನ ಮತ್ತು ಕುವೆಂಪು ಅಧ್ಯಯನ ಕೇಂದ್ರ ಹೀಗೆ ಬಹಳಷ್ಟು ವಿಶೇಷ ಸ್ಥಳಗಳುಕುಪ್ಪಳ್ಳಿಯಲ್ಲಿ ಇವೆ. ಕನಿಷ್ಠ ಪಕ್ಷ ಎರಡುದಿನವಾದರೂ ಬೇಕು ಈ ಎಲ್ಲಾ ಸ್ಥಳಗಳನ್ನ ಬಹಳ ಅಚ್ಚುಕಟ್ಟಾಗಿ ನೋಡಿ ಪ್ರತಿಯೊಂದರ ವಿಶೇಷತೆ ಅರ್ಥ ಮಾಡಿಕೊಂಡು ಜೀರ್ಣವಾಗಿಸಲು... ಅಷ್ಟೊಂದಿದೆ ಅಲ್ಲಿ. ನಮ್ಮ ಕೈಯಲಿ ಇದ್ದ ಮೂರು ತಾಸು ಸಮಯದಲ್ಲಿ ಕವಿ ಮನೆ ಮತ್ತು ಕವಿ ಶೈಲ ಎರಡನ್ನು ಮಾತ್ರ ನೋಡಲು ಸಾಧ್ಯವಾಯಿತು.


ಕುವೆಂಪು ಅವರ ಮನೆಯ ಬಗ್ಗೆ ವರ್ಣನೆಗೆ ನಿಂತರೆ ನಾನೂ ಒಂದು ಪುಸ್ತಕ ಪ್ರಕಟಿಸಬೇಕಾಗುತ್ತದೆ.ಅದು ಅಷ್ಟು ಸುಂದರ, ಸರಳ ಮತ್ತು ಅಚ್ಚುಕಟ್ಟಾಗಿ ನಿರ್ಮಿಸಿದ ಮಲೆನಾಡಿನ ಒಂದು ತೊಟ್ಟಿ ಮನೆ.ಕುವೆಂಪು ಅವರ ಮಾತೆ ಹೀಗಿದೆ ಅವರ ಮನೆಯ ಬಗ್ಗೆ "ಕಾಡು ಮುತ್ತು ಕೊಡುತಲಿರುವಸೊಬಗವೀಡು ನನ್ನಮನೆ". ಅಂಥ ಕವಿಯ ಮಾತಿನ ಮುಂದೆ ನಾನೇನು ವರ್ಣಿಸಲಿ ಅಲ್ಲವೇ.? ಆ ಮನೆ ಬಹಳ ನವೀಕರಣಗೊಂಡಿದೆ. ಹಳೆಯಮರಕ್ಕೆಲ್ಲ ಹೊಸ ಲೇಪ(ಪಾಲಿಶ್) ಹಚ್ಚಲಾಗಿದೆ. ಕಂಬ ಸಾಲಿನ ಮನೆ. ಕೆಂಪು ಬಣ್ಣದ ನೆಲ.

ಮನೆಯಲ್ಲಿ ಅವರು ಮತ್ತು ಅವರ ಪೂರ್ವಜರು ಬಳಸಿದ ವಸ್ತುಗಳ ಸಂಗ್ರಹ ಜೋಡಿಸಿಡಲಾಗಿದೆ. ಅವರ ಪ್ರಶಸ್ತಿಗಳು, ಅವರಪುಸ್ತಕಗಳು, ಅವರ ಮತ್ತು ಅವರ ಕುಟುಂಬದ ಅಪರೂಪದ ಚಿತ್ರಗಳ ಪ್ರದರ್ಶನವಿದೆ. ಅವರು ಓದಲುಬಳಸುತಿದ್ದ ಕೋಣೆ , ಸೂರ್ಯೋದಯ ನೋಡಲು ಇದ್ದ ಬಾಲ್ಕನಿ ಮತ್ತು ಅಲ್ಲಿದ್ದ ಅವರ ಕುರ್ಚಿ, ಅಭ್ಯಂಜನಕ್ಕೆ ಇದ್ದ ಸುಂದರವಾದ ಬಚ್ಚಲುಮನೆ! ಎಲ್ಲವೂ ಚೆನ್ನಾಗಿವೆ. ಮುಂದೆ ಸಣ್ಣ ಜಗುಲಿ. ಅದರ ಮುಂದೆ ಒಂದುಸುಂದರ ಹಸಿರು ಹುಲ್ಲು ಹಾಸು. ಸಣ್ಣಗೆ ಕೇಳಿಸುತಿದ್ದ ಸಂಗೀತ ಮತ್ತು ಅಲ್ಲಿದ್ದ ಸಿಬ್ಬಂದಿಯ ನಡವಳಿಕೆ ನಮ್ಮ ವೀಕ್ಷಣೆಯ ಅನುಭವವನ್ನು ಇನ್ನೂ ಅದ್ಬುತವಾಗಿಸಿತ್ತು.

ಕುವೆಂಪು ಮನೆಯ ವೀಕ್ಷಣೆಯ ಮುಗಿಸಿ ಅಲ್ಲಿದ್ದ ಅತಿಥಿ ಪುಸ್ತಕದಲ್ಲಿ ನನ್ನ ಅನುಭವಗಳ ಗೀಚಿ, ಮಲೆನಾಡಿನ ಚಿತ್ರಗಳು, ಸನ್ಯಾಸಿ ಮತ್ತು ಚಿತ್ರಗಳು ಹಾಗು ಮನುಜಮತ-ವಿಶ್ವಪಥ ಪುಸ್ತಕಗಳಖರೀದಿಸಿದ ಮೇಲೆ ಮನೆಯ ಪಕ್ಕದಲ್ಲೇ ಇರುವ ಸಣ್ಣ ಕಾಫಿ ಕ್ಯಾಂಟಿನ್ ನಮ್ಮ ಕೈ ಬೀಸಿ ಕರೆಯಿತು. ಇದು ಕುವೆಂಪು ಕಾಫಿ ಕುಡಿಯುತಿದ್ದ ಜಾಗವೇನಲ್ಲ ತಪ್ಪು ಗ್ರಹಿಕೆ ಬೇಡ.. ಕಾಫಿ ಹೀರಿ ಕವಿ ಶೈಲದಕಡೆಗೆ ಹೋಗುವ ಯೋಜನೆ ಸಿದ್ದ ಪಡಿಸಿ ಸ್ವಲ್ಪ ಮಾತಿಗೆ ಕೂತೆವು.
ಕವಿ ಶೈಲ ಕುವೆಂಪು ಮನೆಯಿಂದ ೧೦-೧೫ ನಿಮಿಷ ನಡೆದರೆ ಸಿಗುವ ಸಣ್ಣ ಬೆಟ್ಟ. ಕುವೆಂಪುರವರ ಪ್ರೇರಣೆಯೇ ಈ ಜಾಗ. ಅವರ ಬಹಳಷ್ಟು ಕವಿತೆಗಳು, ಪುಸ್ತಕಗಳು ಮತ್ತು ಪ್ರಕೃತಿಯ ವರ್ಣನೆಯಗ್ರಂಥಗಳು ಇಲ್ಲಿಂದಲೇಬಂದಿವೆಯಂತೆ. ಅವರು ಮತ್ತು ಅವರ ಆತ್ಮೀಯ ಸ್ನೇಹಿತರು ಸೇರುತಿದ್ದಸ್ಥಳವೂ ಕವಿಶೈಲವೇ ಆಗಿತ್ತಂತೆ. ಅವರ ಪ್ರಿಯವಾದ ಸ್ಥಳದಲ್ಲೇ ಅವರ ಸಮಾಧಿ ಇದೆ. ಕವಿ ಶೈಲದಲ್ಲಿ ಕುವೆಂಪು ಅವರ ಸ್ನೇಹಿತರು ಹಾಗು ಕನ್ನಡದ ಶ್ರೇಷ್ಠ ಕವಿಗಳು ಬರೆದ ಹಸ್ತಾಕ್ಷರಗಳಿವೆ. ಕುಳಿತುಕೊಂಡು ಸೂರ್ಯಾಸ್ತಮಾನ ವೀಕ್ಷಿಸಲು ಸುಂದರ ಜಾಗ. ನಾವು ತೀರ್ಥಹಳ್ಳಿಯಿಂದತಂದಿದ್ದ ಮಂಡಕ್ಕಿ ಮತ್ತು ಖಾರವನ್ನು ಮೇಯುತ್ತಾ ಆ ಸುಂದರ ವಾತಾವರಣವನ್ನು ಸವಿದೆವು. ನಾನು ನನ್ನ ಕ್ಯಾಮೆರಾ ಹಿಡಿದುಕೊಂಡು ಸುತ್ತಲ ಸೌಂದರ್ಯವನ್ನ ಹಿಡಿಯಲು ಪ್ರಯತ್ನಿಸುತ್ತಿದ್ದೆ.ಕತ್ತಲಾದಂತೆ ಶ್ರೇಷ್ಠ ಕವಿಗೆ ನಮಿಸಿ ಕುಪ್ಪಳ್ಳಿಯಿಂದಹೋರಟೆವು.


ನೆನಪಿರಲಿ.
ನಿಮಗೆ ಉಪಯೋಗವಾಗುವ ವಿಷಯಗಳು.
೧. ನಿಮಗೆ ಇಂಥಹ ಸ್ಥಳಗಳಿಗೆ ಹೋಗುವ ಇಚ್ಛೆ ಇದ್ದರೆ ಮಾತ್ರ ಹೋಗಿ, ರುಚಿ ಇಲ್ಲದೇ ಹೋದರೆ ಅದು ಇಷ್ಟವಾಗದೆ ಇರಬಹುದು. ನಮ್ಮ ಜೊತೆ ಇದ್ದ ಕೆಲವರು ಅವರವರೆ ಗೊಣಗುತ್ತಿದ್ದುದು ಕೇಳಿಸಿತು...

೨. ಹೋಗುವುದಾದರೆ ಒಂದು ದಿನ ಅಲ್ಲಿ ತಂಗುವಂತೆ ಹೋಗಿ. ಬಹಳಷ್ಟು ನೋಡುವುದಿದೆ ಮತ್ತು ಅಸ್ವಾದಿಸುವುದಿದೆ.

೩. ಕುಪ್ಪಳ್ಳಿಯಲ್ಲಿ ಅತಿಥಿ ಗೃಹದಲ್ಲಿಉಳಿದುಕೊಳ್ಳಬಹುದು. ಮೊದಲೇ ಕಾಯ್ದಿರಿಸುವುದು ಉತ್ತಮ.ದೂರವಾಣಿ - ೦೮೨೬೫-೨೩೦೧೬೬

೪. ಕುಪ್ಪಳ್ಳಿಯಲ್ಲಿHome Stayಗಳು ತಲೆಯತ್ತಿವೆ, ಅಲ್ಲಿಯೂ ಉಳಿದುಕೊಳ್ಳಬಹುದು.

೪. ಬೆಂಗಳೂರಿನಿಂದಕುಪ್ಪಳ್ಳಿಗೆ KSRTC ಬಸ್ ವ್ಯವಸ್ಥೆ ಇದೆ.


ತ್ರಿಲೋಚನ ,ಬೆಂಗಳೂರು.

3 comments:

Hope5 said...

Nice article trilochan

Hope5 said...

Nice article trilochan

Basava prabhu patil said...

chanagide trilochana..:)

Post a Comment