ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
8:03 PM

ಕಾಡುತಾವ ನೆನಪು...

Posted by ekanasu

ಅಂಕಣ

ಹೌದು...ಅದು ಬೇಡ ಬೇಡವೆಂದರೂ ಇಂದು ಮನದ ಮುಂದೆ ಕಾಣುತ್ತವೆ ... ಆದರೆ ಬೇಕೆಂದರೆ ಸಿಗದು...ಕಾರಣ ಇನ್ನು ನಾವೆಂದೂ ಆ ದಿನಗಳನ್ನು ಅನುಭವಿಸಲು ಸಾಧ್ಯವೇ ಇಲ್ಲ...ಕಾಲ ಉರುಳಿದೆ...ದಶಕಗಳು ಸಂದಿವೆ...ಆದರೂ ಅಚ್ಚಳಿದೆ ಉಳಿದಿದೆ... ನೆನಪುಗಳು...ಹೌದು ನೆನಪುಗಳ ಮಾತು ಮಧುರ...ಆ ನೆನಪುಗಳು ಎಂದೆಂದಿಗೂ ಮಧುರ ಮಧುರ...ಭಾವೆನಗಳು ಮಧುರ ...ಮಾತು ಮಧುರ... ಅನುಭವಗಳು ಮಧುರ..ಆದರೆ ಇಂದಿಗೆ ಅವೆಲ್ಲವೂ ಕೇವಲ ಕನಸು... ಮನದಲ್ಲುಳಿಯುವ ಅಚ್ಚಳಿಯದ ಕನಸು... ಕನಸುಗಾರನ ಕನಸು... ಹೌದು...ಆ ಹಳೆಯ ದಿನಗಳೇ ಹಾಗೆ...
ಇದು ಯಾಂತ್ರಿಕ ಜೀವನ... ಎಲ್ಲಿ ನೋಡಿದರಲ್ಲಿ ಕರ್ಕಶ... ಮನದಲ್ಲೂ ಹೊರಗೂ... ಎಂಬಂತೆ... ಕ್ಷಣ ಕ್ಷಣವೂ ನೆಮ್ಮದಿಯಿಲ್ಲದ ಬದುಕು... ಬದುಕಬೇಕೆಂದು ಬದುಕುವ ಬದುಕು... ಉಸಿರು ನಿಲ್ಲುವ ತನಕ ಬದುಕುವ ಚಟ.... ಹೌದು...ಇಲ್ಲಿ ಹೊರನೋಟಕ್ಕೆ ಜೀವವಿದೆ.ಆದರೆ ಜೀವಂತಿಕೆಯಿಲ್ಲ...ಎಲ್ಲವೂ ಯಾಂತ್ರೀಕೃತ... ಊಟ, ತಿಂಡಿ, ಮಾತುಕತೆ, ವೃತ್ತಿ... ದೈನಂದಿನ ಕೆಲಸ ಕಾರ್ಯ ಎಲ್ಲವೂ... ಗಡಿಯಾರದ ಮುಳ್ಳು ಹಂತ ಹಂತ ತಲುಪುತ್ತಿದ್ದಂತೆ ನಾವೂ ಒಂದೊಂದು ಕಾರ್ಯವನ್ನು ಆ ಸಮಯಕ್ಕನುಗುಣವಾಗಿ ಮಾಡುವ ರೀತಿ... ಅಲ್ಲಿ ಯಾವೊಂದು ಜೀವಂತಿಯೇ ಇಲ್ಲವೇನೋ ಎಂಬಂತಾಗುತ್ತಿದೆ.

ಬೆಳಗ್ಗೇಳುವುದೂ ಒಂದು ಯಾಂತ್ರಿಕತೆ... ಅಲರಾಂ ಬಡಿದಾಕ್ಷಣ ಬೆಡ್ ನಿಂದೇಳುವುದು...ಹರಿಬರಿಯಲ್ಲಿ ಸ್ನಾನ... ತಿಂಡಿಯ ಶಾಸ್ತ್ರ... ಕಾರೇರಿ ಹೊರಡುವ ಭರಾಟೆ... ಅಲ್ಲಿ ಅಪ್ಪ ಅಮ್ಮ ಅಣ್ಣ ತಮ್ಮ ಪತಿ ಪತ್ನಿ ಮಕ್ಕಳು ...ಮನೆ ಮನ ತುಂಬಿದ ಮಾತುಗಳಿಗೆ ಅವಕಾಶವೇ ಇಲ್ಲ... ಜೊತೆಯಾಗಿ ಕುಳಿತು ಹರಟೆಹೊಡೆಯುವ ಪ್ರವೃತ್ತಿಗೆ ಅವಕಾಶವೇ ಇಲ್ಲ...ಕಾರಣ ಸಮಯ...ಸಮಯದ ಅಭಾವ...
ಮತ್ತೆ ಅದೇ ಕಚೇರಿ...ಅದೇ ಕೆಲಸದೊತ್ತಡ...ಮಧ್ಯಾಹ್ನದ ಊಟಕ್ಕೂ ಸಿಗದ ಸಮಯ... ಕೆಲವಿಲ್ಲದಿದ್ದರೂ ಕೆಲಸವಿದ್ದಂತೆ ಒತ್ತಡದ ನಟನೆ...ಅದೂ ಒಂದು ರೀತಿಯ ಬ್ಯುಸಿ...

ಅಗತ್ಯವಿದ್ದರೂ ಇಲ್ಲದಿದ್ದರೂ ರಿಂಗಣಿಸುವ ಫೋನುಗಳು... ಕೆಲಸವಿದ್ದರೂ ಇಲ್ಲದಿದ್ದರೂ ಪರದೆಯ ಮುಂದೆ ಕುಳಿತು...ಬೇಕಾದ್ದನ್ನು ಬೇಡವಾದ್ದನ್ನು ನೋಡುವ , ನೋಡುವಂತೆ ಮಾಡುವ ಇಂದಿನ ಕಂಪ್ಯೂಟರ್... ಟಚ್ ಸ್ಕ್ರೀನ್, ಐ ಪ್ಯಾಡ್ ಭರಾಟೆ, ಇಷ್ಟವಿಲ್ಲದಿದ್ದರೂ ಇತರರೆದುರು ತಾನೇನೂ ಕಮ್ಮಿಯಿಲ್ಲ ಎಂಬಂತೆ ಬ್ಲೂ ಟೂತ್ ಸಿಕ್ಕಿಸಿಕೊಂಡು ನಡೆದಾಡುವ ಠೀವಿ... ಇತರರೆದುರು ಶೋಕೀ ಜೀವನ...ಇದುವೇ ಇಂದಿನ ಜೀವನವೆಂದಾಗಿದೆ.ಡ್ರೈವರ್ ತನ್ನ ಪಾಡಿಗೆ ತಾನು ಗಾಡಿ ಓಡಿಸುತ್ತಾ ಇರುವಾಗ ಉದ್ದದ ಕಾರಿನ ಹಿಂದಿನ ಸೀಟಲ್ಲಿ ಕುಳಿತು ಠೀವಿಯಿಂದ ಹೊರ ನೋಡುತ್ತಾ ಹೋಗುವ ಮಂದಿಯೆಷ್ಟು... !

ಹೌದು...ಮತ್ತೆ ನೆನಪಾಗುತ್ತದೆ ಹಳೆಯ ನೆನಪುಗಳು...
ಶುಕ್ರವಾರ ಬಂದಾಕ್ಷಣ ಸಂಜೆಯಾಗುವುದನ್ನೇ ಕಾಯುವ ಮನಸ್ಸು... ಶನಿವಾರ ಭಾನುವಾರದ ರಜೆ ಸವಿಯುವ ಭರಾಟೆ...ಗೆಳೆಯ ಗೆಳತಿಯರಲ್ಲಿ ರಜೆಯ ಮಜಾ ವರ್ಣಿಸುವ ಸೊಗಸು... ರಜೆಯ ದಿನಗಳಲ್ಲಿ ಅಜ್ಜನ ಮನೆಯ ಪಯಣ... ನೆಂಟರಿಷ್ಟರೊಂದಿಗೆ ಕಳೆದ ದಿನಗಳು... ಮನೆಮಂದಿಯೊಂದಿಗೆ ಆಚರಿಸಿ ಹಬ್ಬ ಹರಿದಿನ...ಸಹ ಭೋಜನ, ತೋಟದಲ್ಲೊಂದಷ್ಟು ಸುತ್ತಾಟ... ಕೆಲಸ... ಗುಡ್ಡೆ ಕಾಡು ಮೇಡು ಸುತ್ತಿನ ಸಂತಸದ ಕ್ಷಣ, ಮಳೆಗಾಲದಲ್ಲಿ ಹರಿದು ಬರುವ ಮಳೆನೀರಿಗೆ ತಡೆಯೊಡ್ಡುವ ವ್ಯರ್ಥ ಪ್ರಯತ್ನ... ಪುಸ್ತಕ ಹರಿದು ದೋಣಿ ಮಾಡಿ ಪೆಟ್ಟುತಿಂದ ಆ ಕ್ಷಣ...ಶಾಲೆಯ ಬಿಸಿಯೂಟ...ಬಿಸಿಯೂಟದ ತಯಾರಿ... ಲೆಕ್ಕದ ಮಾಸ್ಟರರ ಪೆಟ್ಟಿನ ರುಚಿ, ಸ್ವಾತಂತ್ರ್ಯೋತ್ಸವದ ಸಂಭ್ರಮದ ಆಚರಣೆ... ವಾರ್ಷಿಕ ರಜೆಯ ಆಚರಣೆ ಛೇ...ಇದೆಲ್ಲ ಇಂದು ಮತ್ತೆ ಬೇಕೆಂದರೆ ಸಿಗಲು ಸಾಧ್ಯವೇ...?
ಗತಕಾಲದ ಅನುಭವಗಳು ಇಂದು ಕೇವಲ ನೆನಪು.. ಕಾಡುವ ನೆನಪು...

ಕನಸು

0 comments:

Post a Comment