ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಕಥೆ

ಲೆಚ್ಚರ ಬೇಬಿಯಕ್ಕನೇನು ಲೆಕ್ಚರ್ರ್ ಅಲ್ಲ.ಮಾತೆತ್ತಿದರೆ ಭಾಷಣ ಕೊಡುತ್ತಾಳೆ ಆದ್ದರಿಂದ ಅವಳಿಗೆ ಆ ಹೆಸರು.ಅವಳ ಭಾಷಣ ಎಷ್ಟು ಅರ್ಥವಾಯಿತು ಎಷ್ಟು ಆಗಲಿಲ್ಲ ಎಷ್ಟು ಬೇಕು ಎಷ್ಟು ಬೇಡ ಅವೆಲ್ಲ ಬೇಡ.ಒಟ್ಟು ಕೇಳುವುದಪ್ಪ.ಹಬ್ಬದ ಗುಡಿಯಲ್ಲಿಯೂ ನಡೆ ನಡೆಯುತ್ತ ಅವಳು ಭಾಷಣ ಮಾಡುವವಳೇ.ನಾವು ಕೇಳಿದಂತೆ ಮಾಡುವವರೇ.ಎಷ್ಟೊತ್ತಿಗೇ ಕಂಡರೂ ಅವಳ ಕಣ್ಣು ಅರ್ಧ ತೆರೆದುಕೊಂಡು ಅರ್ಧ ಒಳಮುಖವಾಗಿಯೇ ಇರುತ್ತದೆ.ಮೇಲೆ ನೋಡುತ್ತಾ ಭೂಮಿ ನೋಡುತ್ತಾ ಆಕೆ ಯೋಚಿಸೀ ಮಾತಾಡುವಾಗ ಆಕಾಶ ಭೂಮಿ ಅಷ್ಟದಿಕ್ಕುಗಳೂ ಅವಳಿಗೆ ಗುಟ್ಟಾಗಿ ಏನೋ ಸಂಜ್ಞೆ ಕಳಿಸಿರುತ್ತವೋ ಅಂತ ಸಂಶಯ ಬರುತಿರುತ್ತದೆ.ಈಗಲೂ ಅವಳಿದ್ದಿದ್ದರೆ ಎಂತಹ ಭಾಷಣ ಮಾಡುತ್ತಿದ್ದಳೂ....
ಇದೊಂದು ಸ್ಯಾಂಪಲ್.


ವರ್ಷ ವರ್ಷೇ ಜಾತ್ರೆಗೆ ಬಿಡದೆ ಹೋಗುತ್ತೀರಿ.ಏನೆಲ್ಲಾ ಫ್ಯಾಷನ್ ಕಲಿಸುವುದೂ ಹರಡಿಸುವುದೂ ಜಾತ್ರೆಯ ಒಂದು ಕೆಲಸವೇ ಆಗಿತ್ತಲ್ಲ.ಹಿಂದೆಲ್ಲಾ ಸಿನೆಮಾ ಎಲ್ಲಿತ್ತು?ಜಡೆ ಹಾಕಿ ಅಂಬಡೆ ಕಟ್ಟುವವರಿಗೆ ರಿಂಗು ನೆಟ್ಟು ತಂದಿಟ್ಟು,ಅದು ಹೊಸತು ಅಂತ ಒಬ್ಬರು ಕೊಂಡು.ಅವರು ಕೊಂಡರೆಂದು ಮತ್ತೊಬ್ಬರು ಕೊಂಡು,ಅದು ಸಾರ್ವತ್ರಿಕವಾಗಿ....ಇದೆಲ್ಲಾ ಅಲ್ಲಿಗೆ ಮುಗಿಯುತ್ತದೆಯೇ?ದುಡ್ಡು ಕೊಟ್ಟು ಕೊಂಡದ್ದಕ್ಕೆ,ಗೋಂಟು ಮಂಡೆ ಇರಲಿ,ಚಟ್ಟೆ ಮಂಡೆ ಇರಲಿ,ರಿಂಗು'ಕಟ್ಟಿ ಕೂದಲು ಸುತ್ತಿ ನೆಟ್ಟು ಹಾಕಿ ತುರುಬು ಕಟ್ಟುವುದೇ ಒಂದು ಕಟ್ಟು ಕಟ್ಟಳೆಯಂತೆ ಆಯಿತೆ?ಮುಂದಿನ ಸಲ ಜಾತ್ರೆಗೆ ಗೆಜ್ಜೆ ಮುಳ್ಳುಗಳು ಬಂದವೆಂದು ಅವನ್ನೂ ಕೊಂಡು ಕುತ್ತಿಕೊಳ್ಳುವುದೇ.

ಜಾತ್ರೆಗೆ ಪರವೂರಿಂದ ಬಂದ ಹೆಂಗಸರ ತುರುಬು ನೋಡಿ ತಾವೂ ಸೈಡಲ್ಲಿ ಅರ್ಧ ವೃತ್ತಾಕಾರವಾಗಿ ಹೂವು ಮುಡಿಯುವುದೇ.ಒಟ್ಟು ಕೊನೆಗೆ 'ನಾರದ ತುರುಬು' ಕಟ್ಟಿಕೊಂಡು 'ಇದು ಎಲ್ಲಿಂದಾ ಬಂತು ಈ"ಕ್ವೊನೇರಿ"!"ಎಂಬ ಅಡ್ಡ ನಗೆಗೆ ಬಲಿಯಾಗಲೇ ಬೇಕಾದರೂ ಚಿಂತಿಲ್ಲ!ಆಸೆ ಪಟ್ಟರೂ ಕೂಡ ಯಾರಿಗೂ ನಿನ್ನೆಯ ಹಾಗೆ ಇರಲಿಕ್ಕೆ ಸಾಧ್ಯವಿಲ್ಲವಲ್ಲ!ಇವತ್ತಿನ ಹಾಗೆ,ಇನ್ನೂ ಕೇಳಿದರೆ ನಾಳೆಯ ಹಾಗೆ ಇರಬೇಕು!ಎಂತಹ ಕಷ್ಟ ಕಂಡಿರ?

ಕೈಗಾರಿಕಾ ಕ್ರಾಂತಿಗೀತಿ ಅಂತೆಲ್ಲ ಹೇಳುತ್ತಾರಲ್ಲ,ಅದರ ವಾಸನೆ ಮೊದಲು ಹೊಡೆಯುವುದೇ ಜಾತ್ರೆಯಲ್ಲಿ.ಹೆಚ್ಚಿಗೆ ಬೇಡ.ಕ್ರಾಂತಿ ತಿಳಿಯಲು ಒಂದು ಬಳೆಯಂಗಡಿಯೇ ಸಾಕು.ಬಳೆಯಂಗಡಿಯೆಂದರೆ ಬಳೆಯಂಗಡಿ ಮಾತ್ರ ಆಗಿರುವುದಿಲ್ಲವಲ್ಲ.ಅದರಲ್ಲಿ ಇಲ್ಲದೆಲ್ಲ ಇರುತ್ತದೆ.ಸದ್ಯ ಒಂದು ರಿಬ್ಬನನ್ನೇ ತೆಗೆದುಕೊಳ್ಳುವ.ಕೇವಲ ರಿಬ್ಬನಿನಲ್ಲಿಯೇ ಎಷ್ಟೆಲ್ಲಾ ಬಗೆಯ ಕ್ರಾಂತಿಯಾಗಿಬಿಟ್ಟಿತು!ಅದನ್ನೇ ಎಲ್ಲದಕ್ಕೂ ಹೊಂದಿಸಿ ನೋಡಿ,ಬೃಹತ್ ಕ್ರಾಂತಿ ತಿಳಿಯುತ್ತದೆ!

'ಯಾಕೆ'?

ಹಿಂದೆಲ್ಲ ಜಡೆಗೆ ಬಾಳೆನಾರು ಸುತ್ತಿಕೊಳ್ಳುತ್ತಿದ್ದರು.ಅದಾದರೂ ಹೇಗೆ,ಜಡೆಯನ್ನು ಬಿಗೀಯಾಗಿ ಬುಡದವರೆಗೂ ಚೂಪು ನೇಯ್ದು ಬಾಳೆಯ ನಾರನ್ನು ಬಿಗಿದು ಬಿಟ್ಟರೆ ಮತ್ತೆ ಮಾರನೆಯ ದಿನ ಬಿಚ್ಚುವವರೆಗೂ ಅದು ಅತ್ತಿತ್ತಾಗಲಿಕ್ಕಿಲ್ಲ.ಮೈ ಬಗ್ಗಿ ಕೆಲಸ ಮಾಡುವ ಯುಗವದು.ಜಡೆ ಗಿಲಿಗಿಲಿಯಾದರೆ ಬೀಸಾಗಿ ಕೆಲಸ ಮಾಡಲು ಕಷ್ಟ.ಎಣ್ಣೆ ಹಾಕಿ ಒಪ್ಪ ತೀಡಿ ಬಿಗಿದು ಕಟ್ಟಿದೆವೆಂದರೆ ಅದೇ ಒಂದು ಶಕ್ತಿ ಬಂದ ಹಾಗೆ!
ಅಮ್ಮ ಮುಟ್ಟಾದಾಗಲಂತೂ ನಮ್ಮ ಜಡೆಗೆ ಬಾಳೆ ನಾರೇ. ನೂಲಿನ
ವಸ್ತು ಯಾವುದೇ ಇರಲಿ.ಮುಟ್ಟಾದವರು ಮುಟ್ಟುವಂತಿಲ್ಲ.

'ಯಾಕೆ?'
ಪ್ಲಾಸ್ಟಿಕ್ಕು ನೈಲಾನು ಮುಟ್ಟಬಹುದು.
ಯಾಕೆ?

ಯಾಕೆ ಅಂತೆ!ಪ್ಲಾಸ್ಟಿಕ್ಕು ನೈಲಾನು ಇನ್ನೂ ಬಂದೇ ಇರಲಿಲ್ಲವಲ್ಲ.ಹತ್ತಿ ವಸ್ತು ಮುಟ್ಟುವಮತಿರಲಿಲ್ಲವಾದ್ದರಿಂದ ಅಮ್ಮನ ಹತ್ತಿರ ಜಡೆ ಕಟ್ಟಿಕೊಳ್ಳಲು ಬಂದರೆ ಮೈಮೇಲೆ ಅಂಗಿ ಇರಬಾರದು.'ಅಂಗಿ ತೆಗಿ.ಅಮ್ಮನೆದ್ರ್ ಯಂತ ನಾಚ್ಗೆ?'ನಾವಾ?ಅಲ್ಲೇನು ಅಮ್ಮ ಒಬ್ಬಲೇ ಇರುವುದಾ,ಉಳಿದವರೆಲ್ಲ ನೋಡುವುದಿಲ್ಲವ,ಹೊರ ಜಗಲಿಯ ಮೇಲೆ ಕುಳಿತು ಜಡೆ ಕಟ್ಟುತ್ತಿದ್ದರೆ?ನಾವು ಅಂಗಿ ಹಾಕಿಕೊಂಡೇ ಕುಳಿತುಕೊಳ್ಳುವುದು.ಆಮೇಲೆ 'ನಾವೂ ಮುಟ್ಟು,ಚಂಬು ಕೊಡೀ ...ಅಂತೆಲ್ಲ ನಾಟಕ ಕೂಗುವುದು,ನಗುವುದು!ಬೈಸಿಕೊಳ್ಳುವುದು,ಅಬ್ಬಾ!...ಅಂತೂ ಆ ಘಟ್ಟ ದಾಟಿದೆವಲ್ಲ.ಪಶ್ಚಿಮ ಗಟ್ಟದ ಪೂರ್ವ ಘಟ್ಟ!

...(!...?)
ನಿಧಾನವಾಗಿ ಬಾಳೇ ನಾರು ಮರೆಯಾದದ್ದೇ ನನಗೆ ತಿಳಿಯಲಿಲ್ಲ.ತಿಳಿಯುವಾಗ ಎಲ್ಲೆಲ್ಲಿಯೂ ರಿಬ್ಬನ್ ಬಂದಿತ್ತು.ಎಷ್ಟೆಷ್ಟು ಬಣ್ಣದ ರಿಬ್ಬನು!ಸಣ್ಣಗೆ ಹೊಳೆಯುವ ರಿಬ್ಬನು.ಎರಡೂ ಜಡೆಯನ್ನು ಎತ್ತಿ ಆಚೆ ಕಿವಿಯ ಮೇಲೆ ರಿಬ್ಬನು ಗೊಂಡೆ ಕಟ್ಟಿ ಬಿಟ್ಟರೆಂದರೆ ಚಂದದಲ್ಲಿ ನಮ್ಮನ್ನು ಮೀರಿಸುವವರಾರು?ಆಗೆಲ್ಲ ಜಾತ್ರೆಗೆ ಹೋದರೆ ರಿಬ್ಬನಿನದೇ ಗಿರ.ಆದರೆ ಅದರ ಹಣೆ ಬರಹ ಗೊತ್ತೆ?ಜೋರಾಗೆ ಎಳೆದರೆ ತುಂಡಾಗುವುದು.ಕಗ್ಗಂಟು ಆದರಂತೂ ಮರುದಿನ ಬಿಚ್ಚಲೂ ಆಗದೆ ಅಳುವುದೇ ಒಂದು ಕಾರ್ಯಕ್ರಮ.

ರಿಬ್ಬನಿನ ಗೊಂಡೆ ಬರೀ ಎರಡೆಸಳು ಇದ್ದರೆ ಸಿಂಪಲ್ ಆಯಿತು.ಅದರಲ್ಲೇ ಆರೆಸಳು ಎಂಟೆಸಳು ಎಲ್ಲ ಮಾಡಲಿಕ್ಕೆ ಬರುತ್ತದೆ;ನಾಲ್ಕೆಳೆ ಎಂಟೆಳೆ ಜಡೆಯಂತೆ.ಹಾಗೆ ಮಾಡಿದರೆ ಅದು ಜಡೆಯ ಮೇಲೆ ಈಗ ಅರಳಿದ ಹೂವಿನಂತೆ ನಿಲ್ಲುತ್ತದೆ.ಆದರೆ ಅದನ್ನು ಕಟ್ಟಲು ಮೂರು ಕೈ ಬೇಕು.ಮೂರನೇ ಕೈಯನ್ನು ಎಲ್ಲಿಂದ ತರುವುದು/ಅಂಥಲ್ಲಿ ಬಾಯನ್ನೇ ಕೈಯಾಗಿ ಉಪಯೋಗಿಸುತ್ತಾರೆ.ಬಾಯಲ್ಲಿ ಒಂದೆಳೆ ಕಚ್ಚಿ ಕೊಂಡರನಾ,ಒಂದು ಕೈಯಿಂದ ಹೂವಿನ ನಡುವಿನಲ್ಲಿ ಒತ್ತಿ ಹಿಡಿದು ಕೊಂಡರನಾ,ಇನ್ನೊಂದು ಬದಿಯ ರಿಬ್ಬನನು ಇನ್ನೊಂದು ಕೈಯಲ್ಲಿ ಹಿಡಿದು ಬಿಗೀ ಎಳೆದರನಾ...ಠಪಾರ್!ಇಷ್ಟರವರೆಗೆ ಒಂದಿದ್ದರೆ ಈಗ ಎರಡು ರಿಬ್ಬನು!ಬಾಯಿ ಬಾಯಿಯಲ್ಲ,ತುಂಡು ರಿಬ್ಬನು ನೇತಾಡಿ,ಸೊಂಡಿಲು!ಈಗಾಗಲೇ ಕಟ್ಟಿದ್ದು ಬಿಚ್ಚಲು ಒಂದು ಗಂಟೆ ಬೇಕಾಗಿ,ಶಾಲೆ ತಪ್ಪಿ ಹೋಗಿ....

ಈ ಎಲ್ಲಾ ಸಂಕಟ ಕಷ್ಟ ಅದು ಹೇಗೆ ರಿಬ್ಬನು ಮಾಡುವವರಿಗೆ ತಿಳಿಯುತ್ತದೋ.ಮರುವರ್ಷ ಜಾತ್ರೆಗೆ ಹೋದಾಗ ನಮ್ಮ ಕಂಗನ್ ಸ್ಟೋರ್ಸಿನ ಬಳೆಗಾರ ಕಣ್ಣಯ್ಯನ ಅಂಗಡಿಯಲ್ಲಿ ಹೊಸ ಬಗೆಯ ರಿಬ್ಬನುಗಳು ರೂಂಯ್ಯ ಗಾಳಿಗೆ ಬಳುಕುತ್ತಿವೆ!ಕಣ್ಣಯ್ಯ ಹೊಸ ರಿಬ್ಬನಿನ ಗುಣಗಾನ ಮಾಡುತ್ತಿದ್ದಾನೆ.ಎಷ್ಟು ಎಳೆದರೂ ತುಂಡಾಗುವುದಿಲ್ಲ.ಇದು ಪ್ಲಾಸ್ಟಿಕ್,ಪ್ಲಾಸ್ಟಿಕ್ ರಿಬ್ಬನು!ಅಂತೆಲ್ಲ ಹೇಳುತ್ತಿದ್ದಾನೆ.ಓಹೋ.ಹಾಗೆಂದ ಮೇಲೆ ತೆಗೆದು ಕೊಳ್ಳದೇ ಕಳೆಯದು.

ಆದರೆ ಅವ ನುಡಿದದ್ದು ಸುಳ್ಳೆಂದು ನಮಗೆ ನಮ್ಮಿಂದಲೇ ಗೊತ್ತಾಯಿತು.ತುಂಡಾಗದೇ ಇರುವ ವಸ್ತುವೇ ಇಲ್ಲ ಎನ್ನುತ್ತಾರಲ್ಲ,ಇದು ತುಂಡಾಗುವುದಿಲ್ಲ ಎಂದರೆ ಹೇಗೆ?ಮನೆ ಸೇರಿದೊಡನೆ ರಾಧಕ್ಕನೂ ನಾನೂ ಒಂದು ರಿಬ್ಬನಿನ ಆಚೆ ತುದಿ ಹಿಡಿದು ಜೋರಾಗಿ ಎಳೆದೆವು.ಅದು ಪಟಾರ್ ಅಂತು!ನಾವು ಒಮ್ಮೆ ಜೋಲಿ ಹೊಡೆದು ಆಧರಿಸಿ ನಿಂತೆವು.ನಕ್ಕೂ ನಕ್ಕೂ ಇಟ್ಟೆವು.ಕ್ಷಣದಲ್ಲೇ-ಯಾರದು? ಈಗಷ್ಟೇ ತಂದ ರಿಬ್ಬನನ್ನು ತುಂಡು ಮಾಡಿದ್ದು!ಬಿಂಬಲಡರು ತಂದೆ ಈಗ!ಸತ್ಯ ಹೇಳಿ.ನಾನಲ್ಲ ನಾನಲ್ಲ ನಾನಲ್ಲ.-ಹಾಗಾದರೆ ಯಾರು,ಭೂತ ಬಂತೆ?ದೊಡಮ ನಮಗಿಬ್ಬರಿಗಷ್ಟೇ ಅಲ್ಲ ಎಲ್ಲರಿಗೂ ಒಂದೊಂದು ಬಾರಿಸಿದ್ದೇ!ದೊಡಮ ಅಂದರೆ ದೊಡಮ!

ಪ್ಲಾಸ್ಟಿಕ್ ರಿಬ್ಬನೂ ತುಂಡಾಗುತ್ತದೆ ಅಂತಾಯಿತು.ಆದರೆ ಅದನ್ನು ಅಷ್ಟು ಜೋರಾಗಿ ತುಂಡು ಮಾಡಿಯೇ ಬ್ರಿಬ ಸಂಕಲ್ಪದಿಂದ,ಎಳೆದರೆ ಮಾತ್ರ,ಬಾಯಲ್ಲಿ ಕಚ್ಚಿ ಎಳೆದರಲ್ಲತುಂಡಾಗುವುದಿಲ್ಲ.ದೋಷವೆಂದರೆ,ಒಂದು-ಅದರ ವಾಸನೆ.ಮೂಸುತ್ತ ಮೂಸುತ್ತ ಅದೇ ಒಂದು ಹಿತ ಅಂತ ಮಾಡಿಕೊಂಡೆವಾದರೂ ಎರಡನೆಯದಾಗಿ ಎರಗಿದ್ದು ಆಘಾತಕರ ಸುದ್ದಿ!ರಾಧಕ್ಕನಿಗೆ ಅವಳ ದೋಸ್ತಿ ಹೇಳಿದಳು-ಬಾಯಲ್ಲಿ ಕಚ್ಚಬಾರದು ಅದನ್ನು.ಅದನ್ನೆಲ್ಲ ಹಾವಿನ ಚರ್ಮದಲ್ಲಿ ಮಾಡುತ್ತಾರಂತೇ!-ಅಂತ
'ಅಂಯಮ!ಹಾಂವು!'

ಹೂಂ.ಅದಕ್ಕೇ ಒನ್ನಮುನೆ ವಾಸನೆ.ಪಾಪ ಯಾವ ಹಾವೋ.ಹಾಗಾದರೆ ಅಷ್ಟಪ್ಪ ಎಷ್ಟಪ್ಪ ಹಾವು ಬೇಕಾಯಿತು! ಒಂದು ಹಾವಿನಲ್ಲೇ ಸುಮಾರು ರಿಬ್ಬನು ಮಾಡುತ್ತಾರೆ ಎಂದಳು ಆ ದೋಸ್ತಿ!ಇವತ್ತಿಗೂ ಅದು ಸತ್ಯವೋ ಸುಳ್ಳೋ ನನಗೆ ಗೊತ್ತಿಲ್ಲ.ಅವಳಂತೂ ಬರೀ ಅಮ್ಟಾಡಿ ಗಜೆಟ್.ಆದರೂ ಹಾವು ಎಂದ ಮೇಲೆ!ಅಮ್ಮನಿಗೆ ಹೇಳಬೇಕು ಅಂತ ಯೋಚಿಸುತ್ತ ಕಟ್ಟಿದ ರಿಬ್ಬನನ್ನು ಮುಟ್ಟಿಕೊಳ್ಳುತ್ತ ಬರುವಾಗ ಅದು ಎಲ್ಲೋ ಬಿದ್ದೇ ಹೋಯಿತು!ತಿಳಿಯಲೇ ಇಲ್ಲ!ಎಷ್ಟು ಹುಡುಕಿದರೂ ಸಿಗಲಿಲ್ಲ.ಅಮ್ಮ ಬೈಯಲು ಬಂದಾಗ ಎಡೆಯಲ್ಲಿಯೇ ಅದು ಹಾವಿನ ಚರ್ಮದ್ದಂತೆ ಅಮ್ಮ,ಊರೆಲ್ಲ ಸುದ್ದಿ ಎಂದೆ.ಅಮ್ಮ ಹಾಂ!ಅಂತ ನಿಂತೇಬಿಟ್ಟಳು...ಆವತ್ತು ರಾತ್ರಿ ಮಲಗಿದರೂ ಕಣ್ಣ ಮುಂದೆ ಅದೇ ರಿಬ್ಬನು.ರಿಬ್ಬನಾಗಿ ಅಲ್ಲ,ಹಾವಾಗಿ.

ಎದ್ದ ಮೇಲೆ ರಿಬ್ಬನು ರಿಬ್ಬನೇ,ಹಾವಲ್ಲ ಎಂದುಕೊಂಡರೂ ಒಳಗೇ ಒಂದು ಬಗೆಯ ಹೀಕರಣೆ.ಅಸಹ್ಯ ಕರುಣೆ ಹೆದರಿಕೆಗಳೆಲ್ಲ ಒಟ್ಟು ಬೆರೆತುಕೊಂಡರೆ ಹೇಗಿರುತ್ತದೆ ಹೇಳಿ,ಹಾಗೆ.ಇದೂ ಕೂಡ ರಿಬ್ಬನು ಮಾಡುವವರಿಗೆ ಹೇಗೆ ತಲುಪಿತೋ ಆಶ್ಚರ್ಯವಪ್ಪ.ಇನ್ನೊಂದು ಸಲ ಜಾತ್ರೆಗೆ ಹೋಗಿ ನೋಡಿದರೆ ಕಂಗನ್ ಸ್ಟೋರ್ಸಿನ ಕಣ್ಣಯ್ಯ ನೈಲಾನ್ ರಿಬ್ಬನು ಬಂದಿದೆ ತೆಗೆದು ಕೊಳ್ಳುವುದಿಲ್ಲವಾ ಎಂದ!
'ತಡಿ ತಡಿ ಬೇಬ್ಯಕ್ಕ.ಬಳೆಯಂಗಡಿಗೆ ಕಂಗನ್ ಸ್ಟೋರ್ಸಂದೇ ಯಾಕ್ ಕರಿತ್ರ್?'

ತಡಿ.ಮಧ್ಯ ಮಾತಾಡಬೇಡ.ನೈಲಾನು ರಿಬ್ಬನು ಕೇವಲ ಜಡೆ ಕಟ್ಟಿಕೊಳ್ಳಲು ಮಾತ್ರವಲ್ಲ.ಶಾಲೆಯಲ್ಲಿ ಕ್ರಾಫ್ಟ್ ಕ್ಲಾಸಿಗೂ ಬಂತು.ನೈಲಾನ್ ರಿಬ್ಬನಿನ ಹೂದಂಡೆ.ಎರಡು ಜಡೆಗಳ ನಡುವೆ ಉದ್ದಕೆ ಸೇತುವೆಯಂತೆ,ಜಗಳದ ನಡುವಿನ ರಾಜಿಯಂತೆ,ಮುಡಿದುಕೊಳ್ಳುವ ದಂಡೆ.ಹಳದಿ ಬಣ್ಣದ ರಿಬ್ಬನಿನಿಂದ ಮಾಡಬೇಕು.ನಡುನಡುವೆ ತಿಳಿ ಹಸಿರು ಬಣ್ಣದ ನೂಲಿನಿಂದ ಬೊಟ್ಟು ಕಟ್ಟಬೇಕು.ನಿಮ್ಮನ್ನೆಲ್ಲ ದೂರ ನಿಲ್ಲಿಸಿ ಯಾವ ಹೂ ಹೇಳಿ ಎನ್ನಬೇಕು.ನೀವು ಅದನ್ನು ಸೇವೋತಿಗೆ ದಂಡೆ ಎನ್ನದಿದ್ದರೆ ನನ್ನನ್ನು ಚಿಟಿಕೆ ಹಾಕಿ ಕರೆಯಿರಿ.ಕಿತ್ತಳೆ ಬಣ್ಣದ್ದಂತೂ ಥೇಟ್ ಅಬ್ಬಲಿಗೆ ದಂಡೆಯೇ,ಅಲ್ಲ ಎನ್ನುವ ಹಾಗೆಯೇ ಇಲ್ಲ.

'ಅದ್ರ ಬದ್ಲ್ ಅಬ್ಲಿಗೇನೆ ಮುಡಿಲಕ್ಕಲೆ.ಹಿತ್ಲಗ್ ಎಷ್ಟು ಬೇಕಾರು ಆತ್ತ್'
ಛೆ ಅದು ಬೇರೆ.ಇದು ಬೇರೆಯೇ.ಅದು ದೇವರು ಮಾಡಿದ್ದು.ಇದು ನಾವು!
ಹೀಗೆ ನೈಲಾನು ರಿಬ್ಬನು ಜಡೆಗೆ ಹೂವಿಗೆ ಎಲ್ಲದಕ್ಕೂ ಆಯಿತು.ಮುಟ್ಟಾದವರೂ ಮುಟ್ಟಬಹುದು,ಮಡಿಯವರೂ ಅಂತಾಯಿತು.ಇಷ್ಟಾದರೂ,ಬದಲಾಯಿಸುವವರಿಗೆ,ಬದಲಾಯಿಸುವುದೇ ಕೆಲಸ-ಇದನ್ನೂ ಬದಲಾಯಿಸಿಬಿಟ್ಟರು.ಹೇಗೆ ಅಂತ ಕೇಳಿ.ಒಂದು ದಿನ ಕೋಟೇಶ್ವರ ಹಬ್ಬಕ್ಕೆ ಹೋಗಿ ನೋಡಿದರೆ ಬಳೆಗಾರ್ತಿ ಮಾಧುವಿನ ಅಂಗಡಿಯಲ್ಲಿ ಹುಡುಗಿಯರೇನು ಮುತ್ತಿಬಿಟ್ಟಿದ್ದಾರೆ.ಏನಿರಬಹುದೆಂದು ನಾವು ಓಡಿದೆವು.ಎರಡು ಪ್ಲಾಸ್ಟಿಕ್ ಮಣಿ ಹಾಕಿ ಇಲಾಸ್ಟಿಕ್ ಕಟ್ಟಿರುವ,ಎಳೆದರೆ ಉದ್ದವಾಗಿ ಒಂದರೊಳಗೊಂದು ಸಿಕ್ಕಿಸಲು ಬರುವಂತಹ ಒಂದು ವಸ್ತು.ಮಣಿಯಂತೂ ಬಿಸಿಲಿಗೆ ಹಿಡಿದರೆ ಸಾಕು ಏಳೂ ಬಣ್ಣ ಫಳಫಳ ಮಿಂಚಿ,ವಜ್ರ!

ಅಲ್ಲ ಒಂದಕ್ಕೆ ಎಣಿಸಿದರೆ ಹುಡುಗರು ಪಾಪ-ಸುಳ್ಳ?ಅವಕ್ಕೆ ಜಡೆಯೂ ಇಲ್ಲ ರಿಬ್ಬನೂ ಇಲ್ಲ ಹೂವಿನ ದಂಡೆಯೂ ಇಲ್ಲ.ಬೋಳು ಮಂಡೆ ಮಾತ್ರ!...ಅದಕ್ಕೇ ಇರಬಹುದು ತಲೆಗೆ ನಾನಾ ನಮುನೆ ತೊಡುವ ಹೆಣ್ಣು ಮಕ್ಕಳನ್ನು ಮಿಕಿಮಿಕೀ ನೋಡುವುದು.ಆಸೆಯಾಗುತ್ತದೋ ಏನು ಕರ್ಮವೋ,ಹೇಳಿಕೊಳ್ಳಲಿಕ್ಕುಂಟ?ಹೇಳಿಕೊಂಡರೆ 'ಹೆಮ್ಮಾಳಜ್ಜ'!-ನಾಚಿಕೆ!ಇರಲಿ...ಎಲ್ಲಿಗೆ ಬಂತು?ಫಳಫಳ ಮಿಂಚಿ ವಜ್ರ.

.... ನಾಳೆಗೆ

ವೈದೇಹಿ.

0 comments:

Post a Comment