ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ನೆನಪುಳಿದ ಇಂದಿನ ಕಥೆ : ಭಾಗ - 3

ಕೋಟೇಶ್ವರ ದೇವರು,ಸಾಲಿಗ್ರಾಮ ಹಬ್ಬ,ಕುಂದೇಶ್ವರ ದೀಪ,ಇನ್ನೂ ಬೇಕೆಂದರೆ ಆನೆಗುಡ್ಡೆ ರಥೋತ್ಸವವನ್ನೂ ನೋಡಿ ಬಿಡುವ,ಉಡುಪಿ ಕಡೆಯ ಜಾತ್ರೆ ಉಡುಪಿ ಕಡೆಯವರಿಗೆ,ನಿಮ್ಮ ಕಡೆಯದು ನಿಮಗೆ.ಮತ್ತೂ ನೋಡಲು ಹೋದರೆ ನೋಡುವುದು ಅದನ್ನೇ.ನೋಡುವುದು ಅದನ್ನೇ ಆದರೂ ನೋಡಿದಷ್ಟೂ ತೃಪ್ತಿ ಇಲ್ಲ.ಬುದಬುದನೆ ಗೂಡಿನಿಂದ ಹೊರಧುಮ್ಮಿ ಧುಮ್ಮಿ ಬರುವವ ಇರುವೆಗಳಂತೆ ಜನ ಜನ ಜನ.ಇವರಿಗೆ ಒಮ್ಮೆಗೇ ಊರ ಜಾತ್ರೆಯ ಸುದ್ದಿ ಹೇಗೆ ಸಿಗುತ್ತದೆ!?....ಹೇಗೇ ಅಂತ.

ಅದಾ? ಒಂದು ಹಕ್ಕಿ ಎಲ್ಲರ ಮನೆ ಕಿಟಕಿ ಬಾಗಿಲು ಕುಟುಕಿ 'ಜಾತ್ರೆ ಜಾತ್ರೆ' ಎಂದು ಕೀಚಿ ಹೋಗುತ್ತದೆ.ಹದಿನೈದು ದಿನದಿಂದ ಅದೇ ಕೆಲಸ ಮಾಡುತ್ತದೆ.
ನಮ್ಮ ಮನೆಗೂ ಬಂದಿತ್ತಾ?
ಹೂಂ.
ನಾನು ಕಾಣಲೇ ಇಲ್ಲ ಮತ್ತೆ!

ಕಾಣುವುದು ಅಷ್ಟು ಸುಲಭವಾ?ಅದು ದೇವರ ಹಕ್ಕಿ.ಕಾಡಿನಲ್ಲೇ ಇರುತ್ತದೆ.ರಾತ್ರಿ ಹೊತ್ತು ಬರುತ್ತದೆ.ಕಣ್ಣಿಗೇ ಬೀಳದೆ ಹಾರಿ ಹೋಗುತ್ತದೆ.
ಹಾಗಾದರೆ ಋಷಿಮುನಿಗಳೆಲ್ಲ ಕಾಡಿನಲ್ಲೇ ಇರುವುದು ಅದಕ್ಕೆಯಾ?.....ಹಕ್ಕಿ ಕಾಣಲಿಕ್ಕಾ?
ಸುರುವಾಯಿತು.ಹೋಗು ನೀನೂ ಕಾಡಿಗೆ.

(ಹೋ.ಹೋಗುತ್ತೇನೆ.ಧ್ರುವ ಹೋಗಲಿಲ್ಲೇನು!?)ದೇವರ ಹಕ್ಕಿಯನ್ನು ಜೀವಮಾನದಲ್ಲಿ ಒಮ್ಮೆಯಾದರೂ ಕಂಡೇ ಶುದ್ಧ....
ದೊಡ್ಡ ಸಂಗತಿಯಾ ಅದು?ನಾನು ಕಂಡಿದ್ದೇನೆ.ತೇರು ಎಳೆಯುವ ಹೊತ್ತಿಗ ಸರಿಯಾಗಿ ಆಕಾಶ ನೋಡು.ತೇರಿಗೆ ಮೂರು ಸುತ್ತು ಬರುವ ಹಕ್ಕಿ ಕಾಣುತ್ತದೆ.
ಅದು ಬೇರೆ.ಅದು ಗರುಡ.ದೇವರ ಹಕ್ಕಿಗೆ ಹೆಸರಿಲ್ಲ.ಹೆಸರಿಲ್ಲದ ರೂಪ ಕಾಣದ ಹಕ್ಕಿಯದು.ನೆನಸಿಕೊಂಡರೆ ಸಾಕು.ತಲೆಯೊಳಗೆ ಗೂಡು ಕಟ್ಟುತ್ತದೆ!
ಅಯ್ಯಬ್ಬಾ...ಅದರ ಸುದ್ದಿ ಬೇಡ.


ಕೋಟೇಶ್ವರ ಜಾತ್ರೆ ಗೊತ್ತೇ ನಿಮಗೆ?ಅದಕ್ಕೆ ಕೊಡಿಹಬ್ಬ ಅಂತಲೂ ಹೇಳುತ್ತಾರೆ.ಕೊಡಿಹಬ್ಬ ಅಂತ ಯಾಕೆ ಹೇಳುತ್ತಾರೆ ಎಂದರೆ ಜಾತ್ರೆಗೆ ಹೋದವರೆಲ್ಲರೂ ಒಂದೊಂದು ಕಬ್ಬಿನ ಕೋಲು ಅದರ ಕೊಡಿ ಸಮೇತ ಹಿಡಿದುಕೊಂಡು ಘೈಲ್ ಘೈಲಿಸುತ್ತಾ ಬರುತ್ತಾರೆ.ಕೈಯಲ್ಲಿ ಕೊಡಿ ಕಂಡೀತೇ ಆದರೆ ಅವರು ಹಬ್ಬ ಮುಗಿಸಿ ಬಂದವರೆಂದೇ ಅರ್ಥ.ಆದರೂ-'ಹಬ್ಬಕ್ ಹೋಯಿ ಬಪ್ಟ್ ಭರವಾ'
ಹ್ಞಾಂ.ಯಾವ್ ನಮ್ನಿ ಜನಾ ಅಂತ್ರಿ!ದೇವ್ರೇ !...ನೀವೂ ಹಬ್ಬಕ್ ಹೋಪ್ದಾ!'

'ಹ್ಞೂಂ...'
ಯಾಕೆ ಕೊಡಿ ತರಬೇಕು?ಯಾಕೋ.ಅದು ಕಬ್ಬಿನ ಕೊಡಿಯೇ ಯಾಕಾಗಬೇಕು?ಯಾಕೋ.ಅದು ಕಬ್ಬು ಬೆಳೆದು ನಿಂತ ಸಮಯ ಅಂತೆಲ್ಲ 'ಲೆಚ್ಚರ್' ಬೇಬಿಯಕ್ಕ ಹೇಳಲು ಹೊರಟರೆ ರಾಧ ಚಿಕ್ಕಿಗೆ ಆಗದು.ಅದನ್ನೆಲ್ಲಾ ಕೇಳಲಿಕ್ಕೂ ಹೋಗಬಾರದು.ಹೇಳಲಿಕ್ಕೂ.ಹಾಗೆಲ್ಲ ಮಾಡಿದರೆ ಹಬ್ಬದ ಚಂದ ಹಾಳು ಬೀಳತ್ತದೆ.ಕಬ್ಬಿನ ಕೊಡಿಯ ಚಂದವೂ ಒಣಗುತ್ತದೆ.ಅಷ್ಟೇ ಅಲ್ಲ...ಬರುವ ವರ್ಷ ಕಬ್ಬಿನ ಬೆಳೆಯೇ ಆಗುವುದಿಲ್ಲ!
ಅಯ್ಯಯ್ಯಬ!...ಏನೆಲ್ಲಾ ಇದೇ ಅಂತ!

ಯಾರು ಏನೇ ಹೇಳಲಿ.ಕೋಟೇಶ್ವರ ಹಬ್ಬದಷ್ಟು ದೊಡ್ಡ ಹಬ್ಬ ಪ್ರಪಂಚದಲ್ಲೇ ಇಲ್ಲ...ಗೊತ್ತುಂಟಾ?ಎಲ್ಲರೂ ಹೋಗೋದು ಹೋಗೋದು ಹೋಗೋದು.ಬರೂದು ಬರೂದು ಬರೂದು. ಹೋಗೋದು ಬರೂದು,ದೂಡಿ ದೂಡಿಕೊಂಡು, ನೋಡೂದು ನೋಡೂದು ನೋಡೂದು!ಕೋಟೇಶ್ವರ ತೇರು ಎಲ್ಲಾ...ಕ್ಕಿಮತ ಎತ್ತರ.ನೋಡಲು ಹೋದರೆ ಕುತ್ತಿಗೆ ಪೂರ್ತಿ ಹಿಂದಕ್ಕೆ ಮಡಚಿ ಬೀಳುತ್ತದೆ.ಇರುವ ಎರೆಡೇ ಕಣ್ಣು ದಣಿದು ಮುಚ್ಚಿಕೊಳ್ಳುತ್ತದೆ!

ಕಿವಿ ಮುಟ್ಟಿ ನೋಡಿಕೋ.ಸ್ಟಾರಿನ ಅಂಡೆ ಇದೆಯಲ್ಲ.ಹುಂ.ಬಿಗಿ ಮಾಡಿಕೊ...ಏನಿಲ್ಲ,ಕಳ್ಳರಿಗೆ ಇಷ್ಟೇ ಸಾಕು.ಕಿವಿಯನ್ನೇ ಕತ್ತರಿಸಿಕೊಂಡು ಹೋಗುತ್ತವೆ...ಹುಂ!ಆಗೋ,ಓ ಅಲ್ಲಿ ಕೆಂಪು ಕಣ್ಣಿನವ!ಕಳ್ಳನೇ ಆತ,ಬೆಟ್ ಕಟ್ಟುತ್ತೇನೆ ಬೇಕಾದರೆ.ಕಳ್ಳನಟ್ಟು ಕಂಡ ಕೂಡಲೇ ತಿಳಿದು ಬಿಡುತ್ತದೆ...ಹ್ಞಂ ಹ್ಞಂ?...ಆಚೆಗೆ ಯಾರದು,ರಾಜೀವಿಯಮ್ಮ!ಯಾರೊಡನೆಯೊ ಪಟ್ಟಾಂಗದಲ್ಲಿದ್ದಾರೆ.ಪಟ್ಟಾಂಗ ಹೊಡೆಯಲು ಬೇರೆ ತಾವು ಸಿಕ್ಕಿದ್ದು ಸಾಕು ಅವರಿಗೆ!-ಮಾತಿಗೇನು ದುಡ್ಡು ಕೊಡಬೇಕಾ?ಮನುಷ್ಯರಾದ ಮೇಲೆ ಬಾಯಿ ತುಂಬ ಮಾತಾಡಬೇಕು.ಇಲ್ಲವಾದರೆ ಮನುಷ್ಯರಾದರೆ ಯಾಕಾಗಬೇಕು.ಪ್ರಾಣಿಗಳಾಗಬಹುದಲ್ಲ-ಎಂಬ ರಾಜೀವಿಯಮ್ಮ ಅವರು.ಯಾತಕ್ಕೋ, ಅಚ್ಚರಿಪಟ್ಟು ಕವುಳಿಗೆ ಅಂಗೈ ಒತ್ತಿಕೊಂಡು,ಎಷ್ಟು ಹೊತ್ತಾಯಿತೋ.ನೆನಪೇ ಹೋದಂತಿದೆ.

!ಎದುರಿನವರ ಮಾತನ್ನು ,ಕಣ್ಣು ಅತ್ತಿತ್ತ ತಿರುಗಿಸುತ್ತಾ,ಕಣ್ಣಿನಲ್ಲೇ ಕೇಳುತ್ತಿದ್ದಾರೆ!ಎಡಗೈಯಲ್ಲಿ ಚೀಲ ಹಿಡಿದುಕೊಂಡು ಕಂಕುಳಲ್ಲಿ ಪರ್ಸು ಸಿಕ್ಕಿಸಿಕೊಂಡಿದ್ದಾರೆ.ಈಗ ಒಬ್ಬ ಕಳ್ಳ ಆ ಪಸರ್ು ಜಾರಿಸಬೇಕು,ಬುದ್ದಿ ಬರುತ್ತದೆ.ಇಲ್ಲವಾದರೆ ಜಾತ್ರೆಯಲ್ಲಿ ಹಾಗೆಲ್ಲಾ ನಿಲ್ಲುತ್ತಾರಾ?ಅಷ್ಟೂ ಗೊತ್ತಾಗುವುದಿಲ್ಲವ?...ಆದರೆ ರಾಜೀವಿಯಮ್ಮ ಎಲ್ಲ ಹೆಂಗಸರಂತಲ್ಲ.ದೊಡ್ಡ ಧೈರ್ಯಸ್ಥೆ ಎಂದು ಹೆಸರು ಹೋದವರು.ಎಲ್ಲರೂ ಅವರನ್ನು 'ಗಂಡಸಾಗಿ ಹುಟ್ಟಬೇಕಿತ್ತು.ಎಲ್ಲೋ ತಪ್ಪಿ ಹೆಣ್ಣಾಗಿ ಹುಟ್ಟಿದ್ದಾರೆ'-ಎನ್ನುವವರೆ.
ಅದು ಯಾತಕ್ಕೆ?...ತಪ್ಪುವುದು ಎಂದರೆ?ಎಲ್ಲಿ...

ಎಲ್ಲೋ.ಇಸಿ ಇವಳೊಬ್ಬಳಿಗೆ ಎಂತದೂ ತಿಳಿಯುವುದಿಲ್ಲ.
ತಡಿ.ಅವರ ಪರ್ಸನ್ನು ನಾವೇ ಎಳೆದು ಬಿಡುವ.ಹಾಗಾದರೆ ಏನು ಧೈರ್ಯ ನೋಡಿಯೇ ಬಿಡುವ.ಮೆಲ್ಲ ಹಿಂದಿನಿಂದ ಬಂದು ರಾಜೀವಿಯಮ್ಮನ ಪರ್ಸನ್ನು ಸರಕ್ಕನೆ ಎಳೆದರೆ ಅವರು ಹಿಂತಿರುಗಿ ನೋಡಿಯಾಯ್ತಲ್ಲ!
'ನೀವ ಮಕ್ಳೆ!ನಾನ್ ಯಾರಪ್ಪಾ ಅಂತೆಳಿ ಮಾಡ್ಯೆ'-ಎಂದರು ಹೊರತು ಇದು ಯಾರು ಕಳ್ಳರಪ್ಪಾ ಅಂತ ಹೆದರಿದೆ ಎನ್ನಲಿಲ್ಲ!ಹೋ.ಚಿಕ್ಕಮ್ಮನೊಟ್ಟಿಗೆ ಬಂದಿರಾ?ಬೇಬಿಯಕ್ಕನೂ ಬಂದಿದ್ದಾಳೋ.ಅಮ್ಮಂಗೆ ಬರಲು ಪುರುಸೊತ್ತಾಗಬೇಕಲ್ಲ ಪಾಪ...ಮೊನ್ನೆ ಬಂದ ನೆಂಟರು ಹೋದರಾ ಇದ್ದಾರಾ?

...ರಾಧಚಿಕ್ಕಿಯೂ ಬೇಬಿಯಕ್ಕನೂ ಉತ್ತರ ಕೊಡುತ್ತಾರೆ ಅಂತ ತಿಳಿದರೆ ಎಲ್ಲಿ ಅವರು,ಪದ್ರಾಡ್!ಮಕ್ಕಳೆಂದೂ ಕಾಣದೆ ರಾಜೀವಿಯಮ್ಮನ ಪ್ರಶ್ನೆ ಬಾಣಗಳು ಒಂದೇ ಸಮನೆ ಇತ್ತ ಎರಗುತ್ತಲೇ ನಾವು ನಗುನಗುತ್ತ ಜಾತ್ರೆಯ ಗದ್ದಲದ ಕೆಪ್ಪು ಜಾಸ್ತಿ ಮಾಡಿಕೊಂಡು ಕಾಲು ತಿರುಗಿಸಿದೆವು...

- ವೈದೇಹಿ.
ಚಿತ್ರ: ಆದೂರು.

0 comments:

Post a Comment