ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಪ್ರಿಯ ಓದುಗ ಮಿತ್ರರೇ...

ಈ ಕನಸು.ಕಾಂ ಈಗಾಗಲೇ ಹತ್ತು ಹಲವು ವಿಶೇಷ ಪ್ರಯೋಗಗಳನ್ನು ಮಾಡುವುದರೊಂದಿಗೆ ದಿನಂಪ್ರತಿ ಹೊಸ ಹೊಸ ವಿಚಾರಗಳನ್ನು ಓದುಗರ ಮುಂದಿಟ್ಟು ಮೆಚ್ಚುಗೆಗೆ ಪಾತ್ರವಾಗುತ್ತಿದೆ.ಕನ್ನಡ ಅಂತರ್ಜಾಲ ಸುದ್ದಿತಾಣಗಳ ಪೈಕಿ ಈ ಕನಸು ವಿಭಿನ್ನವಾಗಿ ವೈಶಿಷ್ಟ್ಯವಾಗಿ ಓದುಗರೆದುರು ತೆರೆದುಕೊಳ್ಳುತ್ತಿದೆ - ಇದು ಓದುಗರಿಗೆ ಇಷ್ಟವಾಗುತ್ತಿದೆ ಎಂಬುದು ನಮ್ಮ ಬಳಗಕ್ಕೆ ಸಂತಸ ತಂದಿದೆ. ಇದೀಗ ಮತ್ತೊಂದು ಹೊಸ ಪ್ರಯತ್ನಕ್ಕೆ ನಮ್ಮ ತಂಡ ಮುಂದಾಗಿದೆ. ಈಗಾಗಲೇ ಈ ಕನಸು.ಕಾಂ ನಲ್ಲಿ ಶೂಟಿಂಗ್ - ಶೂಟಿಂಗ್ ಎಂಬ ಸಿನೆಮಾ ಅಂಕಣ ಬರಹದೊಂದಿಗೆ ಜನಮನ್ನಣೆ ಪಡೆದ ಅನು ಬೆಳ್ಳೆ ಅವರು ಇದೀಗ ಹೊಸತೊಂದು ಸಾಮಾಜಿಕ ಕಾದಂಬರಿಯನ್ನು ನಮ್ಮ ಓದುಗರಿಗಾಗಿ ನೀಡುತ್ತಿದ್ದಾರೆ.ಅವರ ಈ ಪ್ರಯತ್ನಕ್ಕೆ ಓದುಗರ ಬೆಂಬಲ ಅತೀ ಅಗತ್ಯ. ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ದಿನಂಪ್ರತಿ ನಮಗೆ ತಿಳಿಸಿ...

ಪ್ರೀತಿಯಿಂದ

- ಸಂ.


ಎಲ್ಲಿರುವೆ ಕುಣಿಸದೆ ಕರೆವೆನ್ನ ಕೊರಳೇ...?

ಪ್ರತಿದಿನವೂ ನಿಮ್ಮ ಈ ಕನಸು.ಕಾಂ ನಲ್ಲಿ...

ಮೋಡಗಳೆಲ್ಲಾ ಚದುರಿ ತುಂತುರು ಮಳೆ ಆರಂಭವಾಗುವ ಹೊತ್ತಿಗೆ ಮನಸ್ವಿತಾ ಮನೆಯ ಮೆಟ್ಟಲುಗಳನ್ನು ಹತ್ತಿದಾಗ ಅವಳಿಗಾಗಿ ಕಾಯುತ್ತಿದ್ದ ಭಾಮಿನಿಯವರಿಗೆ ಸಮಾಧಾನವಾಗಿದ್ದು ಆಶ್ಚರ್ಯವಲ್ಲ. ಮಗಳು ಡಿಗ್ರಿ ಪಡೆದು ಮನೆಯಲ್ಲಿಯೇ ಉಳಿಯುತ್ತಾಳೆನ್ನುವ ಆತಂಕದ ನಡುವೆಯೂ ಖಾಸಗಿ ಸಂಸ್ಥೆಯೊಂದರಲ್ಲಿ ಆಕೌಂಟೆಂಟ್ ಆಗಿ ನಿಯುಕ್ತಿಯಾದಾಗ ನಿಟ್ಟುಸಿರಿಟ್ಟಿದ್ದರು. ಅಂತು ಕೆಲಸಾಂತ ಒಂದು ಗಿಟ್ಟಿಸಿಕೊಂಡೆ. ಅಪ್ಪಯ್ಯನ ಕೈಯಲ್ಲಿ ಇನ್ನು ಏನೂ ಆಗೋದಿಲ್ಲ ನೋಡು. ಕೊನೆಗೆ ನಿನ್ನ ಮದುವೆಗೆ ಬೇಕಾದನ್ನು ನೀನು ಹೊಂದಿಸಿಕೊಂಡರೆ ಸಾಕು...ತಾಯಿಯ ಮಾತಿಗೆ ಶೂನ್ಯ ಭಾವನೆಯೊಂದೇ ಅವಳ ಮುಖದಲ್ಲಿದ್ದುದು. ಮಧ್ಯಮ ವರ್ಗದಿಂದ ಬೆಳೆದು ಬಂದ ಹುಡುಗಿ ಅವಳು. ಹಾಗಂತ ಆಸೆ ಆಕಾಂಕ್ಷೆಗಳಿಲ್ಲವೆಂದೇನಲ್ಲ. ಕಾಲೇಜು ಮೆಟ್ಟಲು ಹತ್ತುವಾಗಲೇ ಬಹಳಷ್ಟು ಕನಸುಗಳನ್ನು ಕಟ್ಟಿಕೊಂಡಿದ್ದು ಆ ವಯೋಮಾನದ ಸಹಜ ಕಾಯಿಲೆ ಅನಿಸಿದ್ದಿದೆ ಅವಳಿಗೆ.

ಕ್ಲಾಸ್ನಲ್ಲಿ ಪ್ರಥಮ ಶ್ರೇಣಿ ಪಡೆದುಕೊಂಡರೂ ವಿಜ್ಞಾನವನ್ನು ಐಚ್ಚಿಕವಾಗಿ ತೆಗೆದುಕೊಳ್ಳುವುದು ಅಸಾಧ್ಯವಾದಾಗ ತಂದೆಯ ಎದುರು ನಿಂತು ಕೇಳಿದ್ದಳು.
ದುಡ್ಡಿಲ್ಲಾಂತ ಹೇಳಿದ್ರೆ ಹೇಗೆ? ನಾನು ಸಾಯನ್ಸ್ ತೆಗೆದುಕೊಂಡು ಡಾಕ್ಟರ್ ಆಗಬೇಕೂಂತ ಇದ್ದೆ. ಸಾಧ್ಯವಿಲ್ವಾ?
ಆಗಿನ ಪರಿಸ್ಥಿತಿಗೆ ಶ್ರೀನಿವಾಸರು ಕೈ ಚೆಲ್ಲಿ ಕುಳಿತಿದ್ದರು.


ನೋಡು, ಚಾಪೆ ಇದ್ದಷ್ಟು ಕಾಲು ಚಾಚಬೇಕು. ಇದ್ದ ಬದ್ಧ ಹಣವನ್ನು ನಿನ್ನ ಓದಿಗೆಂತ ಖರ್ಚು ಮಾಡಿದ್ರೆ ಭವಿಷ್ಯದ ಕಡೆಗೂ ಗಮನ ಕೊಡೋದು ಬೇಡ್ವಾ? ಭಾಮಿನಿಯವರು ಗಂಡನ ಪರ ನಿಲ್ಲದೆ ಬೇರೆ ದಾರಿಯೇ ಇರಲಿಲ್ಲ.
ಶ್ರೀನಿವಾಸರ ತಿಂಗಳ ಆದಾಯ ಮತ್ತು ಖರ್ಚು ತಕ್ಕಡಿಯ ಹಾಗೇ ಒಂದೇ ಬ್ಯಾಲನ್ಸ್ನಲ್ಲಿರುತ್ತಿತ್ತು. ಅದು `ಎಲ್ಲರ ಹಾಗೇ ತನ್ನದೂ ಒಂದು ಸಂಸಾರ' ಅನ್ನುವ ವ್ಯಂಗದ ಮಾತಿನಂತಾಗಿತ್ತು.

ಊರಿನಲ್ಲಿಯೇ ಒಂದು ದಿನಸಿ ಅಂಗಡಿಯಿಂದ ಅಬ್ಬಬ್ಬಾ ಎಂದರೆ ದಿನಕ್ಕೆ ನೂರು ನೂರೈವತ್ತು ಗಳಿಸುವುದೇ ಕಷ್ಟವಾಗುತ್ತಿತ್ತು. ಲಕ್ಷ್ಮಿ ಇಲ್ಲದ ಮನೆಯಲ್ಲಿ ಸರಸ್ವತಿ ನೆಲೆಸುತ್ತಾಳೆ ಅನ್ನುವ ಮಾತಿನಂತೆ ಮಗಳು ಎಲ್ಲದರಲ್ಲಿಯೂ ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗುವಾಗ ಬರುವ ಸ್ಕಾಲರ್ ಶಿಪ್, ಫ್ರೀ ಶಿಪ್ಗಳೇ ಓದಿಗೆ ಆಧಾರವಾಗುತ್ತಿತ್ತು. ಮಾತ್ರವಲ್ಲ. ಅವಳ ಓದಿಗೆ ವ್ಯಯಿಸಿ ಮಿಕ್ಕಿದ ಹಣ ಎರಡು ತಿಂಗಳಿಗಾಗುವಷ್ಟು ಮನೆಯ ಖರ್ಚಿಗೂ ಸಾಕೆನಿಸುತ್ತಿತ್ತು.

ಅದೇ ಹಣವನ್ನು ಬ್ಯಾಂಕ್ನಲ್ಲಿಟ್ಟಿದ್ದರೆ ಇಷ್ಟರೊಳಗೆ ಎರಡು ಪಟ್ಟಾಗಿ ಅವಳ ಉನ್ನತ ವ್ಯಾಸಾಂಗಕ್ಕೆ ಅನುಕೂಲವಾಗುತ್ತಿತ್ತೊ ಏನೊ?
ಕೊರಗು ಅವರನ್ನು ಹತ್ತಿಕೊಂಡಾಗ ಭಾಮಿನಿ, ಅದನ್ನೆಲ್ಲಾ ಮನಸ್ಸಿಗೆ ಹಚ್ಚಿಕೊಂಡ್ರೆ ಹೇಗೆ? ಅವಳೇನೊ ಓದ್ಬೇಕೂಂತ ಅಂದ್ರೆ... ನಾಳೆ, ಇರೋ ಒಬ್ಬ ಮಗಳನ್ನು ಕೆಲಸಕ್ಕೆಂತ ನೀವು ದೂರದೂರಿಗೆ ಕಳುಹಿಸ್ತೀರಾ? ಅದನೆಲ್ಲಾ ಅವಳು ಸ್ವಲ್ಪ ಯೋಚಿಸಲಿ ಅಂದಾಗ ಮಡದಿಯ ಮಾತು ಕೂಡ ಸರಿಯೆನಿಸಿತು.

ಶ್ರೀನಿವಾಸರು ಅಂಗಡಿ ಮುಚ್ಚಿ ಸಂಜೆಯ ಹೊತ್ತಿಗೆ ಮನೆಗೆ ಬಂದವರೆ ಮಗಳನ್ನು ಕರೆದರು. ನೀನೇನೊ ಸಾಯನ್ಸ್ ತಗೋಬೇಕೂಂತ ಹೇಳ್ತೀಯಾ. ಇಲ್ಲೆ ಪಕ್ಕದಲ್ಲಿ ಕಾಮರ್ಸ್ , ಆರ್ಟ್ಸ್ ಕಾಲೇಜು ಇರುವಾಗ ಪೇಟೆಗೆ ಹೋಗಿ ಸಾಯಿನ್ಸ್ ಕಲಿಯೋದು ಅಗತ್ಯನಾ? ...

ನಾಳೆಗೆ

0 comments:

Post a Comment