ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಕಾದಂಬರಿ : ಭಾಗ - 5
ಅಧ್ಯಾಯ 2

ನಿಖಿಲ್ ಆಫೀಸಿಗೆ ಬರುವ ಹೊತ್ತಿಗೆ ಟೇಬಲ್ ಮೇಲೆ ತಂದಿಟ್ಟ ವೋಚರ್ಸ್ ಮತ್ತು ಚೆಕ್ಸ್ಗಳಿಗೆಲ್ಲಾ ಸಹಿ ಹಾಕಿ ಒಳಗೆ ಕಳುಹಿಸಬೇಕಿತ್ತು. ಮನಸ್ವಿತಾ ಅವುಗಳನ್ನೆಲ್ಲಾ ಪರಿಶೀಲಿಸದೆ ಹಾಗೆ ಕಳುಹಿಸುವಂತೆ ಇರಲಿಲ್ಲ. ಜೊತೆಗೆ ವೋಚರ್ಸ್ಗೆ ಅವಳ ಒಂದು ಇನಿಶಿಯಲ್ ಇದ್ದರೆ ಮಾತ್ರ ನಿಖಿಲ್ ಸಹಿ ಹಾಕುತ್ತಿದ್ದ.
ಮನಸ್ಸು ಎತ್ತಲೊ ಹರಿ ಹಾಯ್ದಾಗ ಯಾಂತ್ರಿಕವಾಗಿ ಸಿಗ್ನೆಚರ್ ಮಾಡಿ ವೋಚರ್ಗಳನ್ನು ಒಳಗೆ ಕಳುಹಿಸಿದಳು.

ಸ್ವಲ್ಪ ಹೊತ್ತಿಗೆ ನಿಖಿಲ್ ಒಳಗೆ ಹೋದವನೆ ಮನಸ್ವಿತಾಳನ್ನು ಕರೆಸಿದ.
ಆಫೀಸಿಗೆ ಬಂದ ಕೂಡಲೇ ಆತ ಯಾವತ್ತೂ ಅವಳನ್ನು ಹಾಗೆ ಕರೆಯುತ್ತಿರಲಿಲ್ಲ. ತಾನು ನೋಡಿದ ವೋಚರ್ಸ್ ಮತ್ತು ಚೆಕ್ಗಳನ್ನು ನೆನಪಿಸಿಕೊಂಡಳು. ಏನಾದರೂ ತಪ್ಪಾಗಿರಬಹುದೆ? ಅನಿಸಿತು.
ಒಳಗೆ ಅಡಿಯಿಟ್ಟ ಕೂಡಲೇ ಖುರ್ಚಿಯ ಕಡೆಗೆ ಕೈ ತೋರಿಸಿ, ಕುಳಿತಿರಿ ಅಂದ. ಅವನು ಯಾವುದೋ ಗಹನವಾದ ವಿಷಯವನ್ನು ಆಲೋಚಿಸುವವರಂತೆ ಕಂಡಿತು. ಹಾಗೇ ಅವನ ಎದುರು ಕುಳಿತಿರುವುದು ಮುಜುಗರವೆನಿಸಿದಾಗ ಚಡಪಡಿಸಿದಳು.


ಆತ ಪೇಪರುಗಳನ್ನೆಲ್ಲಾ ಅವಳತ್ತ ಸರಿಸಿ, ಇನ್ನೂ ನಿಮಗೆ ಚೆಕ್ಗಳಿಗೆ ಸಹಿ ಮಾಡುವ ಅಧಿಕಾರ ಕೊಟ್ಟಿಲ್ಲ ಅಂದಾಗ ಅವಳ ಕಣ್ಣುಗಳು ಕಿರಿದಾದವು. ಹಲ್ಲು ತುಟಿಗಳನ್ನು ಕಚ್ಚಿ ಹಿಡಿಯಿತು. ಯಾವುದೋ ಯೋಚನೆ ತನ್ನನ್ನು ಭಾವನಾ ಸಮುದ್ರದಲ್ಲಿ ಮುಳುಗಿಸಿದ್ದೇ ಅಚಾತುರ್ಯವಾಗಲು ಕಾರಣವಾಯಿತೇನೊ? ಅವನು ತಳ್ಳಿದ ಪೇಪರುಗಳನ್ನು ಗಮನಿಸುತ್ತಿರುವಾಗ ಚೆಕ್ ಪುಸ್ತಕವನ್ನು ಮುಂದೊಡ್ಡಿದ. ಕಣ್ಣುಗಳು ತಪ್ಪನ್ನು ಸೆರೆ ಹಿಡಿದವು. ಅವನು ಅತೀಯಾಗಿ ಇಟ್ಟ ನಂಬುಗೆಗೆ ದ್ರೋಹ ಬಗೆದೆನೇನೊ ಅನ್ನುವ ಕೀಳರಿಮೆ ಸುಳಿಯಿತು.


ಕ್ಷಮಿಸಿ ತುಟಿಗಳು ಕ್ಷಮಾಯಾಚನೆಯ ಪದಗಳನ್ನು ತಿಳಿಸಿದಾಗ, ಬೇಜಾವಬ್ದಾರಿ ಬೇಡ ಅಂದಿದ್ದ. ಅಲ್ಲಿ ಕ್ಷಣವೂ ನಿಲ್ಲದೆ ಪೇಪರುಗಳನ್ನು ಎತ್ತಿಕೊಂಡು ಹೊರಗೆ ಧಾವಿಸಿದಳು. ಕಣ್ಣುಗಳು ಆಗಲೇ ನೀರಿನ ಕೊಳಗಳಂತಾಗಿದ್ದವು. ಇಪ್ಪತ್ಮೂರು ವರ್ಷಕ್ಕೆ ಇಂತಹ ಜವಾಬ್ದಾರಿಯನ್ನು ಹೊರಬೇಕಾದ ಅನಿವಾರ್ಯತೆ, ಬಡತನವೆಂಬ ಕೂಪದಲ್ಲಿ ಹುಟ್ಟಿದ್ದಕ್ಕೆ ಏನೋ ಅನಿಸದಿರಲಿಲ್ಲ. ತನ್ನನ್ನು ತನ್ನ ಇಚ್ಚೆಯಂತೆ ಓದಲು ಅನುಕೂಲ ಮಾಡಿಕೊಡದ ತಂದೆಯ ಮೇಲೆ ಕೋಪ ಸಹಜವಾಗಿತ್ತು. ಈಗಿನ ಕಾಲಕ್ಕೆ ಶೈಕ್ಷಣಿಕ ಸಾಲಗಳು ಸುಲಭವಾದರೂ ಅಂತಹ ರಿಸ್ಕ್ಗಳನ್ನು ತೆಗೆದುಕೊಳ್ಳಲು ತಯಾರಿಲ್ಲದ ಮನುಷ್ಯ ಅನಿಸಿತು.


ಕಣ್ಣುಗಳನ್ನು ಸೆರಗು ಸಾಂತ್ವನಿಸಿತು. ರವಿರಾಜನನ್ನು ಕರೆದು ಚೆಕ್ ಕಾನ್ಸಲ್ ಮಾಡಿಸಿ ಇನ್ನೊಂದು ಚೆಕ್ ಬರೆಯುವಂತೆ ಸೂಚಿಸಿದಳು. ಆತ ಮನಸ್ವಿತಾಳ ಕಡೆಗೆ ನೋಡಿದ. ಕಣ್ಣುಗಳು ಕೆಂಪಡರಿದ್ದನ್ನು ಸೂಕ್ಷ್ಮವಾಗಿ ನೋಡಿದ. ನಿಖಿಲ್ನ ಬುದ್ಧಿ ತಿಳಿಯದವನೇನಲ್ಲ. ಕೆಲಸದ ಮಟ್ಟಿಗಂತೂ ಆತನದ್ದು ಹದ್ದಿನ ಕಣ್ಣು.ಆಫೀಸಿಗೆ ಗುಸು ಗುಸು ಹರಡಲು ಹೆಚ್ಚು ಸಮಯ ಬೇಕಿರಲಿಲ್ಲ. ಇನ್ನೊಂದು ಚೆಕ್ ಬಂದು ಮೇಜಿನ ಮೇಲೆ ಕುಳಿತಾಗ ಉಗುಳು ನುಂಗಿಕೊಂಡು ಪರಿಶೀಲಿಸಿದವಳು, ಖುದ್ದಾಗಿ ತಾನೇ ಅದನ್ನು ತೆಗೆದುಕೊಂಡು ಒಳಗೆ ಹೋದಾಗ ನಿಖಿಲ್ ಸ್ವಾಗತಿಸುವಂತೆ ತಲೆ ಎತ್ತಿ ಮುಗುಳ್ನಕ್ಕ.


ಅನ್ಯಮನಸ್ಕತೆಗೆ ಕಾರಣವಿರಬೇಕಲ್ಲ ಅವಳು ಚಾಚಿದ ಚೆಕ್ನ್ನು ನೋಡದೆಯೆ ಸಿಗ್ನೇಚರ್ ಹಾಕಿ ತಳ್ಳಿದ. ಅವನ ಪ್ರಶ್ನೆಗೆ ಇಲ್ಲವೆನ್ನುವಂತೆ ತಲೆಯಲುಗಿಸಿದಳು.
ಮತ್ಯಾಕೆ, ಯಾವತ್ತೂ ಇಲ್ಲದ ಗೊಂದಲ ಇವತ್ತು? ಪ್ರಶ್ನಿಸಿದಾಗ ಉತ್ತರವಿಲ್ಲದೆ ನಿಂತಳು.

... ನಾಳೆಗೆ...

- ಅನು ಬೆಳ್ಳೆ.
ಗ್ರಾಫಿಕ್ಸ್ :ಆದೂರು

0 comments:

Post a Comment