ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಇಂದಿಗೆ ಇಪ್ಪತ್ತನಾಲ್ಕು ಗಂಟೆಗಳ ಹಿಂದೆ... ಧೋ ಎಂದು ಸುರಿಯುವ ಮಳೆಯ ನಡುವೆ ನಮ್ಮ ಕ್ವಾಲಿಸ್ ಕಾರು ಸಾಗುತ್ತಿತ್ತು. ರಾ.ಹೆ.17. ಕರ್ನಾಟಕದ ಗಡಿದಾಟಿ ಮುಂದೆ ಸಾಗುತ್ತಲೇ ರಸ್ತೆ ನಯವಾಗಿತ್ತು. ವಾಹನ ಕುಲುಕಾಟ ನಿಲ್ಲಿಸಿ ಸೊಯ್ಯನೆ ಸಾಗಲಾರಂಭಿಸಿತು... ಹೌದು ಮಳೆಗಾಲದ ಮಳೆ...ಧೋ ಎಂಬ ಮಳೆ...ದೊಡ್ಡ ದೊಡ್ಡ ಹನಿಗಳನ್ನು ಬಾನಿಂದ ಮೊಗೆ ಮೊಗೆದು ಹಾಕುತ್ತಾ ತಣ್ಣನೆಯ ವಾತಾವರಣ ಸೃಷ್ಠಿಸುತ್ತಿತ್ತು... ಕಾರಲ್ಲಿ ನನ್ನೊಂದಿದ್ದಿದ್ದು ಇಬ್ಬರು ಹಿರಿಯ ಕಲಾವಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ರಾಷ್ಟ್ರೀಯ ಪ್ರಶಸ್ತಿಯನ್ನು ಚಿತ್ರಕಲೆಯ ವಿಭಾಗದಲ್ಲಿ ತನ್ನದಾಗಿಸಿಕೊಂಡ ರಾಮದಾಸ್ ಅಡ್ಯಂತಾಯ ಹಾಗೂ ನಮ್ಮ ಊರಿನವರೇ ಆದ ಹಿರಿಯ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ.

ಇಬ್ಬರೂ ಹಿರಿ ತಲೆಗಳು. ಅಷ್ಟೇ ಪಕ್ವವಾದ ಅನುಭವ ತಮ್ಮ ಕ್ಷೇತ್ರದಲ್ಲಿ ಪಡಕೊಂಡವರು. ಹಲವಾರು ಕಲಾಕೃತಿಗಳನ್ನು ಮಾಡಿ ಆ ಮೂಲಕ ನಾಡಿಗೆ ಹೆಸರು ತಂದವರು. ಏಳನೇ ತರಗತಿ ಫೈಲಾದ ಹುಡುಗ ಹೊಟೇಲ್ ಮಾಣಿಯಾಗಿ ರಾತ್ರಿಪಾಳೆಯದಲ್ಲಿ ಶಾಲೆ ಕಲಿತು, ಬೆಂಗಳೂರಿನ ಪ್ರತಿಷ್ಠಿತ ಶಾಲೆಯಲ್ಲಿ ಅಧ್ಯಾಪಕರಾಗಿ ನಂತರ ಮೈಸೂರಿನ ಕಾವಾ ದಲ್ಲಿ ಡೀನ್ ಆಗಿ ತನ್ನ ಆಸಕ್ತಿಯ ಕ್ಷೇತ್ರವಾದ ಚಿತ್ರಕಲೆಯಲ್ಲಿ ಸಾಧನೆ ಮೆರೆದು ರಾಷ್ಟ್ರೀಯ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಕಥೆ ಕೇಳುತ್ತಾ ಸಾಗುತ್ತಿದ್ದೆವು. ಹೌದು ಸಾಧಿಸುವ ಛಲ, ಸ್ಪಷ್ಟ ಗುರಿಯಿದ್ದರೆ ಏನನ್ನೂ ಮಾಡಬಹುದು ಎಂಬುದಕ್ಕೆ ನನ್ನೊಂದಿಗಿದ್ದ ಈರ್ವರು ಕಲಾವಿದರೇ ಸಾಕ್ಷಿಯಾಗಿದ್ದರು.

ಗಡಿನಾಡ ಕಾಸರಗೋಡಿನವರಾದ ಪಿ.ಎಸ್ ಪುಣಿಂಚಿತ್ತಾಯ ಮತ್ತೋರ್ವ ಕಲಾವಿದರು. ಅವರಿಗೀಗ ಎಪ್ಪತ್ತರ ಆಸುಪಾಸು. ಮುಂಬೈನಲ್ಲಿ ತಮ್ಮ ಕಲಾಪದವಿ ಪೂರೈಸಿ ಕೃಷಿ ವೃತ್ತಿಯನ್ನೇ ಜೀವನದ ಭಾಗವಾಗಿ ಸ್ವೀಕರಿಸಿ ಕಾಸರಗೋಡಿನ ಮುಳಿಯಾರು ಗ್ರಾಮಕ್ಕೆ ಬಂದು ನೆಲೆಸಿದವರು. ಅಲ್ಲೇ ತಮ್ಮ ಹದಿಮೂರೆಕ್ಕರೆ ಜಾಗದಲ್ಲಿ ರಬ್ಬರ್, ಟಿಶ್ಯೂ ಕಲ್ಚರ್ ಬಾಳೆ, ಅಡಿಕೆ, ಕೊಕೋ, ಕಾಳುಮೆಣಸು ಹೀಗೆ ವೈವಿಧ್ಯಮಯ ಮಿಶ್ರಕೃಷಿ ನಡೆಸುತ್ತಿದ್ದಾರೆ. ಬೃಹತ್ ಮನೆಯಿದೆ. ಅದರ ತುಂಬೆಲ್ಲಾ ಚಿತ್ರಕಲಾಕೃತಿ. ಕಲಾಗ್ರಾಮ ಎಂಬ ಕಲ್ಪನೆ. ಮನೆ ಮುಂದಿನ ತೋಟದ ಮಧ್ಯೆಯೇ ಸುಂದರ ನೈಸರ್ಗಿಕ ಜಲಪಾತವೊಂದಿಗೆ.

ಜಲಪಾತವೊಂದರ ಒಡೆಯ ಎಂಬ ಬಿರುದೂ ತಾನಾಗಿಯೇ ಬಂದಿದೆ. ಪುಣಿಂಚಿತ್ತಾಯರಿಗೆ ಸರಕಾರದ್ದೂ ಸಹಕಾರ. ವಾಟರ್ ಕಲರ್ ಅವರ ಇಷ್ಟದ ಕಲೆ. ದೊಡ್ಡ ದೊಡ್ಡ ಕ್ಯಾನ್ವಾಸ್ ತುಂಬೆಲ್ಲಾ ವರ್ಣವೈವಿಧ್ಯ. ಹೀಗೇ ನೋಡಿದರೆ ಇದೂ ಒಂದು ಚಿತ್ರವಾ ಎಂಬಂತಿರುವ ಪುಣಿಂಚಿತ್ತಾಯರ ಚಿತ್ರಗಳಲ್ಲಿ ಒಂದು ಆಪ್ತತೆಯಿದೆ. ಒಂದು ಅನುಭವವಿದೆ. ಅದು ನೋಡುವ ದೃಷ್ಠಿಕೋನ ಅನುಭವಿಸುವ ಸಾಮರ್ಥ್ಯದಿಂದ ಅರ್ಥೈಸಬಹುದು. ಗಡಿನಾಡಿನಿಂದ ರಾಜಧಾನಿಯ ತನಕ ಪೇಯ್ಟಿಂಗ್ ಡೆಮೋಸ್ಟ್ರೇಷನ್ ನಡೆಸಿ ಹೆಸರು ಉಳಿಸಿಕೊಂಡ ಕಲಾವಿದ.ಇನ್ನೆರಡು ತಿಂಗಳಲ್ಲಿ ಟೂರಿಸಂ ಇಲಾಖೆಯ ವತಿಯಿಂದ ಅವರ ಏಕವ್ಯಕ್ತಿ ಕಲಾ ಪ್ರದರ್ಶನ ತಿರುವನಂತ ಪುರಂ ನಲ್ಲಿ ನಡೆಯಲಿದೆ. ಅವರ ಅನುಭವಗಳೂ ಇಂದಿನ ಯುವ ಕಲಾವಿದರಿಗೆ ಮಾರ್ಗದರ್ಶನ.

ಈರ್ವರು ಕಲಾವಿದರೊಂದಿಗೆ ಮೂರು ದಿನಗಳ ಕೇರಳ ಪ್ರವಾಸ. ಕಾಸಗೋಡು, ತಲಶ್ಯೇರಿ, ಕಣ್ಣೂರು, ಕ್ಯಾಲಿಕೆಟ್ ಊರುಗಳ ಸುತ್ತಾಟ. ಹಾದಿ ಮಧ್ಯೆ ಅದೆಷ್ಟೋ ಸಮುದ್ರ, ನದಿ , ಹಳ್ಳ , ತೋಡು, ದೇಗುಲ, ಕಲಾಗ್ರಾಮ ಹೀಗೆ ಹಲವು ಪ್ರದೇಶಗಳ ಸುತ್ತಾಟ...
ದೇವರ ನಾಡೆಂಬ ಖ್ಯಾತಿಯ ಕೇರಳದಲ್ಲಿ ಹೆಜ್ಜೆ ಹೆಜ್ಜೆಗೂ ದೇಗುಲಗಳು. ಅವುಗಳಿನ್ನೂ ಪುರಾತನ ಶೈಲಿಗಳನ್ನು ಉಳಿಸಿಕೊಂಡಿವೆ. ಸಿಕ್ಕ ಸಿಕ್ಕ ಬಣ್ಣಗಳಿಂದ ಶೋಭಿಸುತ್ತಿಲ್ಲ... ಪುರಾತನ ಶೈಲಿಗೆ ಮಹತ್ವ ನೀಡಿ ಪೋಷಿಸಲಾಗುತ್ತಿದೆ. ಇಲ್ಲಿನ ಪ್ರವಾಸೋಧ್ಯಮವೂ ಅತ್ಯಂತ ಶಿಸ್ತುಬದ್ಧವಾಗಿದೆ. ಪುಟ್ಟಪುಟ್ಟ ಜಾಗವನ್ನೂ ಪ್ರವಾಸೋದ್ಯಮಕ್ಕಾಗಿ ಪರಿವರ್ತಿಸಿರುವ ರೀತಿ ಮೆಚ್ಚತಕ್ಕಂತಹುದು.

ಮೀನೂ ಸಸ್ಯಾಹಾರ...!

ಕೇರಳಕ್ಕೆ ಹೋದರೆ ಸಸ್ಯಾಹಾರಕ್ಕೆ ಪರದಾಡುವ ಪರಿಸ್ಥಿತಿ...ಪ್ಯೂರ್ ವೆಜ್ ಎಂಬ ಫಲಕ ಹೊಂದಿದ ಹೊಟೇಲ್ ಗೆ ನುಗ್ಗಿ ಊಟಕ್ಕೆ ಕೂತಾಗ "ಮೀನು ಫ್ರೈ ಬೇಕೇ... ಮೊಟ್ಟೆ ಆಮ್ಲೆಟ್ ಬೇಕೇ?" ಎನ್ನುತ್ತಾರೆ. ಕೆಲವೊಂದು ಕಡೆಗಳಲ್ಲಿ ಸಾಂಬಾರ್ ನಲ್ಲಿ ಮೀನೂ ಇರುತ್ತದಂತೆ! ಹಾಗಾಗಿ ನನ್ನ ಪಾಲಿಗೆ ಕೇರಳ ಊಟ ಲಭಿಸಲೇ ಇಲ್ಲ!... ಕೇರಳದ ಹೊಟೇಲ್ ಒಳನುಗ್ಗಿ "ಪಚ್ಚಕ್ಕರಿ' ಮಾತ್ರವೇ ಇದ್ಯಾ ಅಂತ ಕೇಳಿದ್ರೆ ಸತ್ಯಗೊತ್ತಾಗುತ್ತೆ...!

0 comments:

Post a Comment