ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ
ಮಳೆಗಾಲ ಬಂದಿದೆ.ಮಕ್ಕಳಿಗೆ ಶಾಲೆ ಪ್ರಾರಂಭವಾಗಿದೆ.ಬೆಳಗ್ಗಿನ ಹೊತ್ತು ಗಡಿಬಿಡಿಯ ವಾತಾವರಣ.ಬೆಳಗ್ಗೇನೆ ಕೈಕೊಟ್ಟ ಕರೆಂಟ್.ತಿಂಡಿಗೆ ಚಟ್ನಿ ರುಬ್ಬುವ ಹಾಗಿಲ್ಲ.ತಾಯಂದಿರ ಅವಸ್ಥೆ ಹೇಳುವುದಕ್ಕಿಲ್ಲ.ಚಟ್ನಿಯಿಲ್ಲದೆ ತಿಂಡಿ ತಿನ್ನಲು ಮುಷ್ಕರ ಹೂಡುವ ಮಕ್ಕಳು.ಅದೆಲ್ಲದಕ್ಕೂ ಪರಿಹಾರ ಮೊದಲೇ ತಯಾರಿಸಿಡಬಹುದಾದ ರುಚಿಯಾದ ವ್ಯಂಜನಗಳು.ಇದು ಈ ಕನಸು ಇಂದಿನ ರುಚಿ...ದೋಸೆಪ್ಪುಡಿ

ಬೇಕಾಗುವ ಸಾಮಾಗ್ರಿಗಳು:ಉದ್ದಿನ ಬೇಳೆ 1 ಕಪ್,ಒಣಮೆಣಸು 10,ಮೆಂತೆ 1/2 ಚಾ ಚಮಚ,ಉಪ್ಪು,ಎಣ್ಣೆ.
ಮಾಡುವ ವಿಧಾನ:ಉದ್ದಿನ ಬೇಳೆಯನ್ನು ಎಣ್ಣೆ ಹಾಕದೆ ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲ್ಲಿಟ್ಟು ಕೆಂಪಗಾಗುವವರೆಗೆ ಹುರಿಯಿರಿ.ಮೆಂತೆಯನ್ನೂ ಮೆಣಸನ್ನೂ ಬೇರೆಯಾಗಿ ಹುರಿಯಿರಿ.ನಂತರ ಅಗತ್ಯವಿದ್ದಷ್ಟು ಉಪ್ಪು ಹಾಕಿ ಎಲ್ಲವನ್ನೂ ಪುಡಿ ಮಾಡಿ ಜಾಡಿಯಲ್ಲಿ ತುಂಬಿಡಿ.ಈ ಪುಡಿಯನ್ನು ಒಂದು ಚಮಚ ಬಡಿಸಿಕೊಂಡು ಒಂದು ಚಮಚ ತೆಂಗಿನೆಣ್ಣೆ ಹಾಕಿ ಕಲಸಿ ಇಡ್ಲಿ ಹಾಗು ಉದ್ದಿನ ದೋಸೆಯೊಂದಿಗೆ ತಿನ್ನಲು ಚೆನ್ನಾಗಿರುತ್ತದೆ.ಇದು ಒಂದು ತಿಂಗಳವರೆಗೂ ಕೆಡುವುದಿಲ್ಲ.


ಪುಳಿಂಜಿ

ಬೇಕಾಗುವ ಸಾಮಾಗ್ರಿಗಳು:ಹುಣಸೆ ಹುಳಿ 2 ನಿಂಬೇ ಗಾತ್ರ,ಅದೇ ಪ್ರಮಾಣದ ಬೆಲ್ಲ, ಹಸಿಮೆಣಸು 10,ಹಸಿ ಶುಂಠಿ 4 ಇಂಚು,ಉಪ್ಪು,ಒಗ್ಗರಣೆ ವಸ್ತುಗಳು.
ಮಾಡುವ ವಿಧಾನ:ಹುಳಿಯನ್ನು 1/2 ಘಂಟೆ ನೆನೆಸಿ ಕಿವುಚಿ ಹಿಂಡಿ ತೆಗೆಯಿರಿ.ಹಸಿಮೆಣಸು,ಶುಂಠಿಯನ್ನು ಸಣ್ಣಗೆ ಹೆಚ್ಚಿ ಕಿವುಚಿಟ್ಟ ಹುಳಿಗೆ ಹಾಕಿ,ಉಪ್ಪು ಬೆಲ್ಲವನ್ನೂ ಸೇರಿಸಿ 1/2 ಘಂಟೆ ಸಣ್ಣ ಉರಿಯಲ್ಲಿಟ್ಟು ಬೇಯಿಸಿ ನಂತರ ಕರಿಬೇವು ಹಾಕಿ ಒಗ್ಗರಣೆ ಹಾಕಿ ತಣಿದ ಮೇಲೆ
ಜಾಡಿಯಲ್ಲಿ ತುಂಬಿಡಿ.ಬೆಳಗ್ಗಿನ ಗಂಜಿಯೂಟದೊಂದಿಗೆ ನಂಜಿಕೊಳ್ಳಲು ಬಲು ರುಚಿ.ಇದು 2 ವಾರದವರೆಗೂ ಕೆಡದೆ ಉಳಿಯುತ್ತದೆ.


ಕರಿಬೇವಿನ ಚಟ್ನಿ

ಬೇಕಾಗುವ ಸಾಮಾಗ್ರಿ:ಕರಿಬೇವು 2 ಹಿಡಿ,ಒಣ ಕೊಬ್ಬರಿ ತುರಿ 2 ಕಪ್,ಒಣಮೆಣಸು 6,ಉದ್ದಿನ ಬೇಳೆ 4 ಚಮಚ,ಕೊತ್ತಂಬರಿ 2 ಚಮಚ,ಮೆಂತೆ 1/4 ಚಮಚ,ಹುಳಿ ನೆಲ್ಲಿಕಾಯಿ ಗಾತ್ರ,ಉಪ್ಪು.
ಮಾಡುವ ವಿಧಾನ:ಕರಿಬೇವನ್ನು ಸ್ವಚ್ಚ ಮಾಡಿಟ್ಟುಕೊಳ್ಳಿ.ಕೊಬ್ಬರಿ ತುರಿಯನ್ನು ಸಣ್ಣ ಉರಿಯಲ್ಲಿಟ್ಟು ಹೊಂಬಣ್ಣ ಬರುವವರೆಗೆ ಹುರಿಯಿರಿ.ಕೆಳಗಿಳಿಸುವ ಮುನ್ನ ಕರಿಬೇವನ್ನು ಹಾಕಿ ಮಿಕ್ಸ ಮಾಡಿ.ಮೆಣಸು,ಕೊತ್ತಂಬರಿ,ಉದ್ದಿನ ಬೇಳೆ ಹಾಗೂ ಮೆಂತೆಯನ್ನು ತುಸು ಎಣ್ಣೆ ಹಾಕಿ ಸಾಂಬಾರಿಗೆ ಹುರಿಯುವಂತೆ ಹುರಿಯಿರಿ.ನಂತರ ಉಪ್ಪು ಹಾಗೂ ಹುಳಿ ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ.ತಿಂಡಿಯೊಂದಿಗೂ ತುಪ್ಪದ ಅನ್ನದೊಂದಿಗೆ ನಂಜಿಕೊಂಡು ಈ ಚಟ್ನಿ ಚೆನ್ನಾಗಿರುತ್ತದೆ.ಬಹಳ ದಿನದವರೆಗೂ ಕೆಡುವುದಿಲ್ಲ ಈ ಚಟ್ನಿ.

- ಸುಮತಿ ಕೆ.ಸಿ.ಭಟ್, ಆದೂರು.

0 comments:

Post a Comment