ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಪಪ್ಪಾಯಿ ಇದೊಂದು ಬಹುರುಚಿಕರ ಫಲ. ಎಳೆ ಪಪ್ಪಾಯಿ, ಕಾಯಿ, ಹಣ್ಣು ಎಲ್ಲವೂ ಆಹಾರ ರೂಪದಲ್ಲಿ ಬಳಸಲ್ಪಡುತ್ತದೆ. ಈ ಫಲ ಮಧ್ಯ ಅಮೇರಿಕ ಭಾಗದಿಂದ ಬಂದದ್ದಾಗಿದೆ. ಸ್ಪೇನ್ ಮತ್ತು ಪೋರ್ಚುಗಲ್ ನಾವಿಕರಜೊತೆಯಲ್ಲೇ ಭಾರತಕ್ಕೆ ಈ ಹಣ್ಣು ಬಂದಿದೆ.ಔಷಧಿ ಗುಣವನ್ನು ಈ ಫಲ ಒಳಗೊಂಡಿದೆ. ಉತ್ತಮ ಆಹಾರವೂ ಹೌದು...ಪಪ್ಪಾಯಿಯಿಂದ ವಿವಿಧ ಖಾದ್ಯಗಳನ್ನು ತಯಾರಿಸಲು ಸಾಧ್ಯ. ಈ ಕನಸು.ಕಾಂ ಓದುಗರಿಗಾಗಿ ಕೆಲವೊಂದು ಖಾದ್ಯಗಳು ಇಲ್ಲಿವೆ.ಪಪ್ಪಾಯಿ ದೋಸೆ

ಬೇಕಾಗುವ ಸಾಮಾಗ್ರಿಗಳು : ಎಳೆ ಪಪ್ಪಾಯಿ - 1, ಬೆಳ್ತಿಗೆ ಅಕ್ಕಿ - ಅರ್ಧ ಕೆಜಿ, ಉಪ್ಪು .
ಮಾಡುವ ವಿಧಾನ : ಪಪ್ಪಾಯಿಯ ಸಿಪ್ಪೆ ಹಾಗೂ ಬೀಜವನ್ನು ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಹೆಚ್ಚಿ ನೀರಿನಲ್ಲಿ ಹಾಕಿಡಿ. ಮೂರು ನಾಲ್ಕು ಬಾರಿ ನೀರನ್ನು ಬದಲಾಯಿಸುತ್ತಿರಿ. ನಂತರ ನೆನೆಯಿಸಿದ ಬೆಳ್ತಿಗೆ ಅಕ್ಕಿಯೊಂದಿಗೆ ಅಗತ್ಯವಿದ್ದಷ್ಟು ಉಪ್ಪು ಹಾಕಿ ಪಪ್ಪಾಯಿ ಹೋಳುಗಳನ್ನು ಸೇರಿಸಿ ನುಣ್ಣಗೆ ರುಬ್ಬಿ. ಕಾದ ಕಾವಲಿಗೆಯಲ್ಲಿ ತೆಳ್ಳಗೆ ದೋಸೆ ಹುಯ್ಯಿರಿ. ಹಿಟ್ಟು ಸ್ವಲ್ಪ ದಪ್ಪವಿರಲಿ. ತೆಳ್ಳಗಿನ ಗರಿ ಗರಿಯಾದ ದೋಸೆಗೆ ತುಪ್ಪ ಹಾಕಿ ತಿನ್ನಲು ಬಲುರುಚಿ.

ಪಪ್ಪಾಯಿ ರೊಟ್ಟಿ

ಬೇಕಾಗುವ ಸಾಮಾಗ್ರಿಗಳು : ಎಳೆ ಪಪ್ಪಾಯಿ - 1, ಬೆಳ್ತಿಗೆ ಅಕ್ಕಿ - 1 ಪಾವು, ಕುಚ್ಚಲಕ್ಕಿ - 1 ಪಾವು, ತೆಂಗಿನ ತುರಿ - 2 ಕಪ್, ಒಣಮೆಣಸು - 2, ಉಪ್ಪು.
ಮಾಡುವ ವಿಧಾನ : ಪಪ್ಪಾಯಿಯ ಸಿಪ್ಪೆ ಹಾಗೂ ಬೀಜವನ್ನು ತೆಗೆದೆಸೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಹೆಚ್ಚಿ ನೀರಿನಲ್ಲಿ ಹಾಕಿ ನೀರು ಬದಲಾಯಿಸುತ್ತಿರಿ. ನೆನೆಯಿಸಿದ ಎರಡೂ ಬಗೆಯ ಅಕ್ಕಿಯನ್ನು ನೀರು ಸೋಸಿ ತೆಗೆದು ತೆಂಗಿನ ತುರಿ, ಪಪ್ಪಾಯಿ ಹೋಳು, ಒಣಮೆಣಸು, ಉಪ್ಪಿನೊಂದಿಗೆ ಹೆಚ್ಚು ನೀರು ಹಾಕದೆ ಗಟ್ಟಿಯಾಗಿ ನುಣ್ಣನೆ ರುಬ್ಬಿ. ನಂತರ ಚಿಕ್ಕ ಚಿಕ್ಕ ಬಾಳೆ ಎಲೆಯಲ್ಲಿ ತೆಳ್ಳಗೆ ರೊಟ್ಟಿ ತಟ್ಟಿ ಕಾದ ಕಾವಲಿಯಲ್ಲಿ ಹಾಕಿ ಎರಡೂ ಬದಿಗೆ ತುಪ್ಪ ಸವರಿ ಬೇಯಿಸಿ. ಬೆಳಗ್ಗಿನ ತಿಂಡಿಗೂ ಇದು ಬಹು ರುಚಿಕರ.

ಪಪ್ಪಾಯಿ ಉಪ್ಪಿನ ಕಾಯಿ

ಬೇಕಾಗುವ ಸಾಮಾಗ್ರಿಗಳು: ಎಳೆ ಪಪ್ಪಾಯಿ - 1, ಸಾಸಿವೆ - 3 ಟೀ ಚಮಚ, ಒಣಮೆಣಸು - 20, ಅರಶಿನ ಹುಡಿ - ಕಾಲು ಚಮಚ, ಉಪ್ಪು - ಅರ್ಧ ಕಪ್, ಜೀರಿಗೆ - ಕಾಲು ಚಮಚ, ಚಿಟಿಕೆ ಇಂಗು, ಲಿಂಬೆ ಹಣ್ಣು - 1
ಮಾಡುವ ವಿಧಾನ : ಪಪ್ಪಾಯಿಯ ಸಿಪ್ಪೆ ಹಾಗೂ ಬೀಜವನ್ನು ತೆಗೆದೆಸೆದು ಚಿಕ್ಕದಾಗಿ ಹೆಚ್ಚಿ ಎರಡು ಬಾರಿ ನೀರಿನಲ್ಲಿ ಚೆನ್ನಾಗಿ ತೊಳೆದು ಒಂದು ಬಟ್ಟೆಯಲ್ಲಿ ಹರಡಿ ನೀರಾರಲು ಬಿಡಿ. ನಂತರ ಆ ಹೋಳುಗಳನ್ನು ಜಾಡಿಯಲ್ಲಿ ಹಾಕಿ ಎರಡು ಚಮಚ ಉಪ್ಪು ಹಾಕಿ ಲಿಂಬೆ ರಸ ಹಿಂಡಿ ಮುಚ್ಚಿಡಿ. ಅರಸಿನ ಹುಡಿಯನ್ನು ಅದಕ್ಕೇ ಹಾಕಿಡಿ. ಮೇಲೆ ಹೇಳಿದ ಸಾಂಬಾರ ಪದಾರ್ಥಗಳನ್ನು ಬೇರೆ ಬೇರೆಯಾಗಿ ಹುರಿದು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿಮಾಡಿ. ಉಪ್ಪು ನೀರು ಕುದಿಸಿ ಆರಿದ ಬಳಿಕ ಉಪ್ಪಿನ ಕಾಯಿ ಹುಡಿಯನ್ನು ಪಪ್ಪಾಯಿ ಹೋಳಿಗೆ ಹಾಕಿ ಅಗತ್ಯವಿದ್ದಷ್ಟು ಉಪ್ಪುನೀರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪಿನಕಾಯಿ ರೆಡಿ...ಮಸಾಲೆಯನ್ನು ಹುರಿಯದೆ ಹಸಿಯಾಗಿಯೂ ಮಾಡಬಹುದು.

- ಸುಮತಿ ಕೆ.ಸಿ.ಭಟ್ ಆದೂರು.

0 comments:

Post a Comment