ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ದೈನಂದಿನ ಕಾದಂಬರಿ : ಭಾಗ - 3
ಸಾಹಿತ್ಯ


"ಈ ಗೆಟ್ಟ್ ಟು ಗೆದರ್ ನಿಮ್ಮನ್ನು ಪರಿಚಯಸುವುದಕ್ಕೊಸ್ಕರ. ಹಿಂದು ಮುಂದು ಆಲೋಚಿಸದೆ ಈ ಸಂಸ್ಥೆಗೆ ಕಾಲಿಟ್ಟ ಕೂಡಲೇ ಪ್ರವೇಶ ಪಡೆದ ಹೆಣ್ಣು ನೀವು. ಅಷ್ಟೊಂದು ಈ ಸಂಸ್ಥೆ ನಿಮ್ಮನ್ನು ಅಟ್ರಾಕ್ಟ್ ಮಾಡಿದೆಯೆಂದರೆ ನಮ್ಮ ಸಂಸ್ಥೆಗೆ ನೀವೊಂದು ಆಸೆಟ್ ಆಗಬಲ್ಲಿರಿ"
ಮಾತುಗಳು ವಿಚಿತ್ರವೆನಿಸಿತು.


ಆಟ್ರಕ್ಷನ್ ಇಲ್ಲ ಏನೂ ಮಣ್ಣಾಂಗಟ್ಟಿನೂ ಇಲ್ಲ. ಕೆಲಸ ಅನಿವಾರ್ಯ. ಇಲ್ಲಿಯವರೆಗೆ ಅರೆ ಹೊಟ್ಟೆ ತುಂಬಿಸಿಕೊಂಡು ನೀರು ಕುಡಿದಿದ್ದೆ ಹೆಚ್ಚು. ಆ ಅನಿವಾರ್ಯತೆನೇ ಕೆಲಸಕ್ಕೆ ಸೇರಲು ಪ್ರೇರೆಪಿಸಿದ್ದಲ್ಲವೆ? ಕೈಗಳು ಮೆಲ್ಲಗೆ ನಡುಗಿದವು. ಅವನು ಅವಳ ಪರಿಸ್ಥಿತಿಯನ್ನು ಕಂಡು ಮುಗುಳ್ನಕ್ಕ.
"ಒಂದು ನಿಮಿಷ ಎದ್ದು ನಿಲ್ಲಬಹುದೆ" ಅಂದಾಗ ಉಟ್ಟ ಸೀರೆ ಜರ್ರನೆ ಜಾರಿದಂತೆನಿಸಿ ಸೆರಗನ್ನು ಸರಿ ಪಡಿಸಿಕೊಂಡು ಎದ್ದು ನಿಂತಳು.
"ಡಿಯರ್ ಕೊಲೀಗ್ಸ್" ಆತನ ಮಾತು ಮುಂದುವರಿದಾಗ ಕಾಲಿನ ಬೆರಳು ನೆಲದ ಮೇಲೆ ಏನನ್ನೊ ಗೀಚುತ್ತಿತ್ತು.


"ಇವರು ಡಿಗ್ರಿಯಲ್ಲಿ ಡಿಸ್ಟಿಂಕ್ಷನ್. ಮಾತ್ರವಲ್ಲ ಪ್ರತಿ ಕ್ಲಾಸಿನಲ್ಲಿಯೂ ಅತ್ಯುನ್ನತ ಶ್ರೇಣಿಯನ್ನು ಪಡೆದುಕೊಂಡು ಪಾಸಾಗಿದ್ದಾರೆ. ನಮ್ಮ ಸಂಸ್ಥೆಗೆ ಅವರು ಸೇರಿರೋದು ಹೆಮ್ಮೆಯ ಸಂಗತಿ. ಯಾರಾದರೂ ಕೆಲಸಕ್ಕೆ ಸೇರ್ಬೂಕೂಂತ ಅನ್ನೋವಾಗ 15 ದಿವಸ ಇಲ್ಲ 1 ತಿಂಗಳ ಸಮಯ ಕೇಳ್ತಾರೆ. ಆದರೆ ಇವರು ಅಂತಹ ಕಾರಣ ನೀಡದೆ ಇಂದಿನಿಂದಲೆ ಕೆಲಸಕ್ಕೆ ಸೇರಿದ್ದಾರೆ. ಅವರಿಗೆ ಸಂಸ್ಥೆಯ ಪರವಾಗಿ ಸ್ವಾಗತ ಮತ್ತು ಅಭಿನಂದನೆ" ಅಂದಾಗ ಚಪ್ಪಾಳೆಯ ಸುರಿಮಳೆ ತನ್ನ ಮೈಮೇಲೆ ಹೂವಿನ ಪಕಳೆಗಳನ್ನು ಸುರಿದಂತಾಯಿತು ಅವಳಿಗೆ. ಅವನು ಹೇಳುವ ಮೊದಲೆ ಕೈ ಚಾಚಿದವಳು ತಟಕ್ಕನೆ ಖುರ್ಚಿಯಲ್ಲಿ ಕುಸಿದಳು.

ಇಷ್ಟು ಬೇಗನೆ ನಿಖಿಲ್ನ ಮನಸ್ಸು ಗೆದ್ದವಳ ಮೇಲೆ ಕೆಲವರ ಈರ್ಷೆಯ ನೋಟ ಹರಿಯಿತು. ತಲೆ ತಗ್ಗಿಸಿ ಕುಳಿತಳು. ಐದು ಹತ್ತು ನಿಮಿಷಗಳಲ್ಲಿ ಕಾಫಿ ತಿಂಡಿಯಾದ ಬಳಿಕ ಅವನು ಎದ್ದು ಹೋಗಿದ್ದ. ಕೆಲವರು ಆತ್ಮೀಯತೆಯಿಂದ ಮಾತನಾಡಿಸಿದರೆ ಇನ್ನು ಕೆಲವರು ಮುಗುಳ್ನಗೆಯ ಪರಿಚಯ ಮಾಡಿಕೊಂಡರು.

ಮೊದಲ ದಿನವೇ ಸಂತಸದಿಂದ ಕಳೆದಾಗ `ಇದಕ್ಕಿಂತಲೂ ಇನ್ನೇನು ಬೇಕು' ಅನಿಸದಿರಲಿಲ್ಲ. ಡಾಕ್ಟರ್ ಕಲಿಯಲಾಗಲಿಲ್ಲವೆನ್ನುವ ನೋವನ್ನು ಈ ಕೆಲಸದಲ್ಲಿದ್ದುಕೊಂಡೇ ಮರೆಯಬೇಕೆನ್ನುವ ತುಡಿತಕ್ಕೊಳಗಾಗಿ ಕಾರ್ಯದಲ್ಲಿ ಸಂಪೂರ್ಣ ತೊಡಗಿಸಿಕೊಂಡಳು.
ಮುಂದೆ ಒಂದು ವರ್ಷದಲ್ಲಿಯೇ ಉನ್ನತ ಹುದ್ದೆಯನ್ನು ಪಡೆದು ಜವಾಬ್ದಾರಿಯನ್ನು ಮೈಮೇಲೆ ಹಾಕಿಕೊಂಡಾಗಿತ್ತು. ನಿಖಿಲ್ನ ಸಮಸ್ತ ಜವಾಬ್ದಾರಿಗಳು ಮನಸ್ವಿತಾಳ ಕೈಗೆ ವರ್ಗವಾಗಿತ್ತು.

ಆತ ಓಡಾಡುವುದಕ್ಕೆ ಒಂದು ಕಾರು ಕೊಡುತ್ತೇನೆಂದಾಗ ನಯವಾಗಿ ನಿರಾಕರಿಸಿದಳು.
"ಅಂತಹ ಅನಿವಾರ್ಯತೆಯಿಲ್ಲ. ಮುಂದೆ ನೋಡೋಣ" ಅಷ್ಟು ಹೇಳಿದಾಗ ಆತ ಸುಮ್ಮನಾದ.
***
ಮನೆಯ ಪರಿಸ್ಥಿತಿ ದಿನದಿಂದ ದಿನಕ್ಕೆ ಒಳ್ಳೆಯ ರೀತಿಯಲಿಯೆ ವೃದ್ಧಿಸುತ್ತಿದ್ದರೂ ತಂದೆಯ ಆರೋಗ್ಯ ಮಾತ್ರ ದಿನೇ ದಿನೇ ಕಡಿಮೆಯಾಗುತ್ತಿತ್ತು. ಅಂಗಡಿಯಿಂದ ಬರುವ ಆದಾಯ ಅಷ್ಟರಲ್ಲಿಯೇ ಇದೆ. ಸುಮ್ಮನೆ ಅಲ್ಲಿ ಕುಳಿತು ಸಮಯ ಹಾಳು ಮಾಡುವುದಕ್ಕಿಂತ ಮನೆಯಲ್ಲಿದ್ದು ಏನಾದರೊಂದು ಕೆಲಸ ಮಾಡಿಕೊಳ್ಳಬಹುದಲ್ಲಾ ಅನ್ನೋದು ಅವಳ ವಾದ. ಶ್ರೀನಿವಾಸರು ಸುಲಭದಲ್ಲಿ ಅದಕ್ಕೆಲ್ಲಾ ಒಪ್ಪಿಕೊಳ್ಳಲಾರರು. ಭಾಮಿನಿಯವರು ಗಂಡನಿಗೆ ಹೇಳಲಾರರು.ಆ ದಿನ ಮನೆಯೊಳಗೆ ಕಾಲಿಟ್ಟಾಗ ಮಗಳು ಎಂದಿನಂತೆ ಇಲ್ಲವೆನ್ನುವುದು ಭಾಮಿನಿಯವರಿಗೆ ತಿಳಿಯಿತು.

ನಾಳೆಗೆ...

- ಅನು ಬೆಳ್ಳೆ.

0 comments:

Post a Comment