ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ಇದು ವೈದೇಹಿ ಅವರ ಸ್ಮೃತಿ ಕಥನ ..."ಜಾತ್ರೆ"ಯಿಂದ ಆಯ್ದಿರತಕ್ಕಂತಹುದು.ಪ್ರೀತಿಯಿಂದ ನಿನ್ನ ಈ ಕನಸಿನಲ್ಲಿ ಹಾಕಿಕೋ ಎಂದುಕೈಗಿತ್ತರು. ಖುಷಿಯಾಯಿತು. ವೈದೇಹಿಯವರ ಸರಳ ಸ್ವಭಾವ, ಪ್ರೀತಿ ತುಂಬಿದ ಮಾತುಗಳು...ಅವರ ಕಥೆಗಳೂ ಹಾಗೇನೇ...ಅಷ್ಟೇ ಸರಳ...ಮತ್ತೆ ಮತ್ತೆ ಕಾಡುವಂತಹುದು.

ನಮ್ಮ ಸುತ್ತಮುತ್ತಲು, ನಾವು ಅನುಭವಿಸಿದಂತಹ ಅನೇಕ ಘಟನೆಗಳು ... ಅವರ ಕಥೆಗಳನ್ನು ಓದುವಾಗಿ ಇವೆಲ್ಲ ನೆನಪಾಗುತ್ತದೆ. ಜಾತ್ರೆ ಸ್ಮೃತಿ ಕಥನವೂ ಒಂದು ವಿಭಿನ್ನ ಅನುಭವವನ್ನು ಕಟ್ಟಿಕೊಡುತ್ತದೆ. ಓದುತ್ತಾ ಸಾಗಿದಂತೆ ಹಳೆಯ ಒಂದೊಂದೇ ನೆನಪುಗಳು ಗರಿಕೆದರತೊಡಗುತ್ತವೆ. ಅಂದು ನಾವು ಹೀಗೆ ಮಾಡಿದ್ದೇವಲ್ಲ... ನಾವು ಇದೇ ರೀತಿಯ ವಿಚಾರವನ್ನು ಅನುಭವಿಸಿದ್ದೇವಲ್ಲ ಎಂದಾಗುತ್ತದೆ. ಹೌದು...ಆ ಕಾರಣಕ್ಕಾಗಿಯೇ ಅವರ ಕಥೆ ಜನಪ್ರಿಯವಾದವು.ಜನರನ್ನು ಮುಟ್ಟಿದವು...ತಟ್ಟಿದವು...ಇದೀಗ ನೀವು ಅನುಭವಿಸಿ...ನಿಮ್ಮ ಅಭಿಪ್ರಾಯ ತಿಳಿಸಿ...
-ಸಂ.ಜಾತ್ರೆ ಏನೆಲ್ಲ ಕಲಿಸುತ್ತದೆ.ಸಂಭ್ರಮ ಕಲಿಸುತ್ತದೆ.ಗೆಲುವಾಗಿರುವುದನ್ನು ಕಲಿಸುತ್ತದೆ.ಎಲ್ಲ ಒಟ್ಟಿಗೆ ಬಿಡು ಬೀಸಾಗಿ ಬೇಕಾದ್ದು ಬೇಡಾದ್ದು ಮಾತಾಡುತ್ತ ತಿನ್ನುತ್ತ ಕ್ಲಾಸು ಹುಡುಗಿಯರೊಂದಿಗೆ ಮನೆಮಂದಿಯೊಂದಿಗೆ ಓಡಾಡುವುದನ್ನು ಕಲಿಸುತ್ತದೆ. ಇನ್ನೂ ಏನೆಲ್ಲ ಕಲಿಸುತ್ತದೆ, ಏನೆಲ್ಲವನ್ನು ತನ್ನೊಳಗೆ ಸೇರಿಸಿಕೊಳ್ಳುತ್ತದೆ; ಕೊನೆಗೂ ಇಡಿಯ ಬದುಕೇ ಒಂದು ಜಾತ್ರೆಯಂತೆ ಅಲ್ಲವೇ?


ಸಾಮಾನ್ಯ ಜಾತ್ರೆಯಲ್ಲಿ ಅಳುತ್ತಾ ಹೋಗುವವರನ್ನು ನಾವು ನೋಡಿಯೇ ಇಲ್ಲ. ತಾಯಿಯ ಕೈ ಹಿಡಿದುಕೊಂಡ ಮಗು ಅತ್ತೀತು. ಎತ್ತಿಕೋ ಅಂತಲೋ , ಗಿರಿಗಿಟಿ ತೆಗೆದುಕೊಡು ಅಂತಲೋ. ಜಾತ್ರೆಯಲ್ಲಿ ಮಗು ಅಳುವುದನ್ನು ನೋಡುವುದೇ ಚಂದ. ಅದರ ಬಾಯಿ ಅಳುತ್ತಿರುತ್ತದೆ. ಕಣ್ಣು ಅತ್ತ ಇತ್ತ ಪಿಳಿಗುಡುತ್ತಿರುತ್ತದೆ. ದನಿ ಒಮ್ಮೆ ಆರಿ, ನೆನಪಾದಾಗ ಮತ್ತೆ `ವ್ಞೋ...' ಸುರು ಮಾಡುತ್ತದೆ. ಒಳ್ಳೇ ಮೋಜು . ಜಾತ್ರೆಯೇ ಒಂದು ಮೋಜು. ಎಲ್ಲರಿಗೂ ಖುಷಿ, ಎಲ್ಲಿ ಕಂಡರೂ ಖುಶಿ, ಏನು ಕಂಡರೂ ಖುಶಿ, ಅಬ್ಬ. ಪ್ರಪಂಚದ ಖುಶಿಗಳೆಲ್ಲ ಹಬ್ಬದ ಗುಡಿಯಲ್ಲಿಯೇ ಒಟ್ಟಾಗಿವೆಯೋ!


ಜಾತ್ರೆಯಲ್ಲಿ ಮೊದಲು ಕಾಣುವುದೇ ಪುಗ್ಗೆ ಮಾರುವವ. ತೇರು ಎಷ್ಟೆತ್ತರವೇ ಇರಲಿ, ಎಷ್ಟಗಲವೇ ಇರಲಿ ಅದನ್ನು ಮೀರಿ ಕಾಣುವುದು ಅವನ ಪುಗ್ಗೆಯ ದಂಡ.
ಆದರೆ ಅವ? ಅವನೆಲ್ಲಿ? ಅವನ ಪ್ಞೇಂ ಕೇಳುತ್ತಿದೆ...ಅವ ಕಾಣುತ್ತಿಲ್ಲ...
ಅಗೋ! ನಿಂತಿದ್ದಾನಲ್ಲ ಅಲ್ಲಿ!... ಅಲ್ಲಿಯನಾ...ಅಲ್ಲಿ!...ಚಡಿಯಲ್ಲಿ ಇಣುಕು...
ಓ.., ಕಂಡೆ ಕಂಡೆ..., ಅಲ್ಲಿ!

ದಂಡವನ್ನು ಭುಜಕ್ಕೊರಗಿಸಿಕೊಂಡು ಕತ್ರಿಕಾಲಲ್ಲಿ ನಿಂತು ಎರಡೂ ಕೈಯಲ್ಲಿ ಪುಗ್ಗೆ ಹಿಡಕೊಂಡು - ಪ್ಞೇಂ....ಅಲ್ಲಿ ನಿಂತಿದ್ದಾನೆ.! ಪ್ರತಿ ವರ್ಷದ ಜಾತ್ರೆಗೂ ಅವನು ಬರುತ್ತಾನೆ. ಅದೇ ಜಾಗದಲ್ಲಿ ನಿಲ್ಲುತ್ತಾನೆ. ಅವನ ಅಂಗಿ ಮಲಿನ.ಮುಖ ಕರ್ರಗಿದೆ.ಎಡಗೈ ಹಿಡಿದ ದಂಡ ನೆಲಕ್ಕೂರಿ ನಿಂತಿದೆ.ಅದರಲ್ಲಿ ಸುನೆರಿ ಚಿಮುಕಿಸಿದ ಕಾಗದದ ಹೂವು, ಪುಗ್ಗೆ ,ಗಿರಿಗಿಟಿ,ಟರಟರ್ರ ಆಟಿಕೆ,ರಬ್ಬರಿನ ಒಂದೆಳೆಯ ಉಯ್ಯಾಲೆಯಲ್ಲಿ ಅಂಗೈಗೆ ಪಟಕ್ಕೆನೆ ಹೊಡೆದು ಮೇಲೆ ಕೆಳಗೆ ಪುಟಿಯುವ ಗಿಣಿ! ದಪ್ಪ ಹೊಟ್ಟೆಯ ಚೂಪು ಕೊಕ್ಕಿನ ರೆಕ್ಕೆ ಇಲ್ಲದ ಗಿಣಿ. ಎಷ್ಟು ಗಿಣಿ!ತುಂಟ ಗಿಣಿ!ನಮ್ಮನ್ನೇ ನೋಡುವ ಗಿಣಿ - ಎಲ್ಲವನ್ನೂ ಸಿಕ್ಕಿಸಿಕೊಂಡಿದ್ದಾನೆ.

ಪುಗ್ಗೆ ಹೇಗೆ ಪ್ಞೇಂ ಎನ್ನುತ್ತದೆ? ಅದರ ಒಳಗೆ ಏನುಂಟು?
ಏ...ಯ್. ಬಿದಿರು ಕಡ್ಡಿ ಕೀಳುತ್ತಿಯಾ? ಕಿತ್ತರೆ ಮತ್ತೆ ಅದು ಕೂಗುವುದೇ ಇಲ್ಲ!
ಹ್ಞಂ ಹ್ಞಂ ಎಲ್ಲ ಸುಳ್ಳು. ಪುಗ್ಗೆ ಕಿತ್ತು ಬರೀ ಕಡ್ಡಿಯನ್ನೇ ಬಾಯಿಗಿಟ್ಟು ಊದು. ಅದೂ ಪ್ಞೇಂ ಎನ್ನುತ್ತದೆ.
ಅದು ಹೇಗೆ?
ಅದೆಲ್ಲ ಒಂದು ಟ್ರಿಕ್ಕು . ಅಷ್ಟು ಬೇಗನೆ ಅರ್ಥವಾಗುವುದಿಲ್ಲ.
ಸದ್ದು ಮಾಡುತ್ತ ಕರೆಯುವ ಪುಗ್ಗೆಯವನ ಮುಖ ಚಪ್ಪೆ!ಅಲ್ಲಿ ಹಬ್ಬದ ನಗೆಯಿಲ್ಲ. ಮಗುವಿನ ಗೆಲುವಿಲ್ಲ. ಮಗುವಿನಂತೆ ಆಡಿದರೂ ಆತ ಮಗುವಲ್ಲ. ಮಗು ಅವನ ಕೈಯಿಂದ ಗಿರಿಗಿಟಿಕೊಳ್ಳುವಾಗಲೂ ಅದರ ಸಂಭ್ರಮ ಅವನಿಗೆ ದಾಟುವುದಿಲ್ಲ. ಈ ಮಗು, ಇನ್ನೊಂದು,ಮತ್ತೊಂದು, ಸುತ್ತಾ ಅವನ ಗಮನ. ಆತ ನೋಡುತ್ತಿರುವುದು ಮಗುವನ್ನೋ , ಕೊಡಿಸುವ ಚೌಕಾಸಿಯ ಅದರ ತಂದೆತಾಯಿಯರನ್ನೋ ? ಹಿಂದೆಮುಂದೆಲ್ಲ ನಡೆಯುವ ವ್ಯಾಪಾರದ ಭರಾಟೆಯ ನಡುವೆ ಆತ ನಿಂತಿರುವ ರೀತಿಯೆಂದರೆ ತನ್ನ ಬೆನ್ನಿನಲ್ಲಿಯೂ ಕಣ್ಣಿವೆ ಎಂಬಂತೆ!

ಸಧ್ಯದ ಗುಂಪು ಚದುರಿದೊಡನೆ ಮತ್ತೆ - ಪ್ಞೇಂ , ಟರ್ರ ಟರ್ರ ಟರ್ರ, ಟಿರ್ರೀಂಚ್.. ಅಂದ ಹಾಗೆ ಅವನ ಮನೆಯೆಲ್ಲಿ? ಇಷ್ಟು ದಿನ ಎಲ್ಲಿದ್ದ? ಇಂದು ನಮ್ಮೂರ ಜಾತ್ರೆ ಎಂದು ಅವನಿಗೆ ಹೇಳುವವರು ಯಾರು? ದಿನವಿಡೀ ಹೀಗೆಯೇ ನಿಂತಿರುತ್ತಾನೆಯೇ? ಊಟವನ್ನೂ ಮಾಡದೆ? ಊಟ ಮಾಡುತ್ತಾನೆಯಾದರೆ ಅಷ್ಟೊತ್ತಿಗೆ ದಂಡವನ್ನು ಎಲ್ಲಿಡುತ್ತಾನೆ? ಆಗ ಅಯ್ಯೋ, ಕಳ್ಳರು ಅದರಲ್ಲಿ ಸಿಕ್ಕಿದ್ದನ್ನು ಕದಿಯುವುದಿಲ್ಲವೋ? ಜಾತ್ರೆಯಿಲ್ಲದಾಗ ಈ ಪುಗ್ಗೆ ಗಿಣಿ ಗಿರಿಗಿಟಿಗಳೆಲ್ಲ ಎಲ್ಲಿರುತ್ತವೆ?

ಬಾ.ಪುಗ್ಗೆಯವ ಬಳಿ ಒಂಚೂರು ನಿಂತುಕೊಳ್ಳೋಣ. ಒಂದು ಬಗೆಯ ಪರಿಮಳ ಬರುತ್ತಿದೆಯಲ್ಲ! ಏನಿದು? ಪುಗ್ಗೆ ಪರಿಮಳವೋ ವಾಸನೆಯೋ? ಉದ್ದ ನಾಳದ ತುದಿಯಲ್ಲಿ ಅರಳಿರುವ ಉರುಟು ಪುಗ್ಗೆಯನ್ನು ನೋಡಿದೆಯಾ? ಅದರ ಬಣ್ಣ ನೋಡು. ಮೇಲೆಲ್ಲಾ ಹುಂಡು ಹುಂಡು ನೋಡು. ಕೈಯಾಡಿಸಿದರೆ ಸಾಕು. ಟರ್ರೀಂಚ್ ಎಂದು ಹಕ್ಕಿಯಂತೆ ಕೂಗುವ ಗದ್ದಲ ನೋಡು! ಪುಗ್ಗೆ ಮಾರುವವ ಮಾತಾಡುವುದಿಲ್ಲ. ಬದಲು ಆಟಿಕೆ ತಿರುಗಿಸುತ್ತಾ ಸದ್ದು ಮಾಡುತ್ತಾ ಇರುತ್ತಾನೆ. ಕೇಳಿದವರಿಗೆ ಕ್ರಯ ಹೇಳುತ್ತಾನೆ. ಆ ಗಿಳಿಗೆ ಎಷ್ಟು. ?ಒಂದೂವರಾಣೆ. ಮುಕ್ಕಾಲಾಣೆಗೆ ಕೊಡುತ್ತಿಯಾ? ಇಲ್ಲ ಇಲ್ಲ. ಒಂದಾಣೆಗೆ? ಊಹೂಂ. ಈ ಪುಗ್ಗೆಗೆಷ್ಟು? ಒಂದಾಣೆ. ಅರ್ಧ ಆಣೆಗೆ ಕೊಡುತ್ತಿಯಾ? ಇಲ್ಲ. ಇಲ್ಲ. ಮುಕ್ಕಾಲು ಆಣೆಗೆ ..'ತಕಣಿಯಮ್ಮ.' ಆ ಬಣ್ಣವಲ್ಲ , ಬೇರೆ. ಅದು, ಓ ಅದು! 'ಇಕಣಿಯಮ್ಮ'. ಬೇಕಾದ ಬಣ್ಣವನ್ನೇ ಆರಿಸಿಕೊಡುತ್ತಾನೆ...(ಸಣ್ಣ ಮಕ್ಕಳಿಗೂ ಆತ ತಮ್ಮ ಅಯ್ಯ ಎನ್ನುತ್ತಾನೆ ಎಂಬುದು ತಿಳಿವಿಗೆ ಬಂದದ್ದು ಎಷ್ಟು ತಡವಾಗಿ! ಆಗ ಏನೆಂದೇ ತಿಳಿಯದ ಪರಿಮಳ ಅದು. `ಬಾಲ್ಯದ ಪರಿಮಳ' ಎಂದು ತಿಳಿದದ್ದು ತಡವಾಗಿ.)... ಸುತ್ತಿನ ಪ್ಞೇಂ ಪ್ಞೇಂ ನಡುವೆ ಈಗ ಮತ್ತೊಂದು ಪ್ಞೇಂ ಟಿರ್ರಿಂಚ್ - ಗದ್ದಲ ಸಮುದ್ರಕ್ಕೆ ಮತ್ತೊಂದು ಬಿಂದುವಿನಂತೆ...

ಸಾಕು.ಹೆಚ್ಚು ಊದಬೇಡ...ಸಾಕು ಎಂದೆನಲ್ಲ, ಕೆಪ್ಪೆ? ಅದು ಮನೆಯವರೆಗಾದರೂ ಒಡೆಯದೇ ಬರಲಿ.
... ಠೋಪ್!
ಆಯಿತ! ಕೊಟ್ಟ ದುಡ್ಡು ವಾಪಾಸು ಬಂದಾಯಿತಾ! ಹಾಗಾದರೆ ಹೇಳಿದ್ದು ತಿಳಿಯುವುದೇ ಇಲ್ಲವೋ ಯಂತ ಕತೆ? ಸಾರಿ ಸಾರಿ ಹೇಳಿದೆ!
... ಕಡೆಗೂ ಗಿಣಿಯನ್ನು ತೆಗೆದುಕೊಳ್ಳಲೇ ಇಲ್ಲ. ಪ್ರತೀ ಜಾತ್ರೆಯಲ್ಲಿಯೂ ತೆಗೆದುಕೊಳ್ಳಲು ಹೋಗಿ ಹಿಂದೆ ಬಂದು ಬಂದು ಆಮೇಲಾಮೇಲೆ ಅದು ಕಾಣಲೇ ಇಲ್ಲ!ಆ ಪುಟ್ಟ ಗಿಣಿಗಳು, ಹತ್ತಿ ಹೊಟ್ಟೆಯ ಗಿಣಿಗಳು, ಬಟ್ಟೆ ಮೈಯಿನ ಗಿಣಿಗಳು - ಎಲ್ಲಿ ಹೋದವು? ಪುಗ್ಗೆಯವನೇ , ಎಂದು ಕೇಳಲು ತಿರುಗಿದರೆ ಅಲ್ಲಿ ಆ ಪುಗ್ಗೆಯವನೇ ಇಲ್ಲ! ಬೇರೆಯವನಿದ್ದಾನೆ - ಪ್ಞೇಂ ಯಲ್ಲಿ ಮಗ್ನನಾಗಿದ್ದಾನೆ. ಹೆ ಹೆ, ಈತನಿಗೆ ಮುಂಡಾಸೇ ಇಲ್ಲ!
ಆತನಾದರೂ ಏನಾದ? ಈತ ಎಲ್ಲಿಂದ ಬಂದ?


ಬರೀ ಹೋಕಿಲ್ಲದ ಪ್ರಶ್ನೆಗಳು. ನಡೆ ಮುಂದೆ. ಆಚೀಚೆ ನೋಡದೆ! ಮುನ್ನಡೆಯುತ್ತ ಹಿಂದಿರುಗಿ ನೋಡಿದರೆ `ಗಿರ್ಗಿಟ್ಲಿಗಳು' ಸಿಗಿಸಿಟ್ಟಲ್ಲೇ ಗಿರಗಿರ ತಿರುಗುತ್ತಿವೆ. ಸೂರ್ಯನ ಬಿಸಿಲಿಗೆ ಮಿರಮಿರ ಮಿರುಗುತ್ತಿವೆ. ಮನಸ್ಸಿನ ಮೂಲವನ್ನೇ ಕಲಕಿ, ನೋವು ಪುಲಕ ಬೆರೆತ ಸೆಳೆತ ಎಬ್ಬಿಸೆಬ್ಬಿಸಿ ಸಡಗರಿಸುತ್ತಿವೆ... ಇದನ್ನು ಮುಂದೆ ಬಿಟ್ಟು ಹೋಗಲೇಬೇಕೇ? ಯಾತಕ್ಕೆ?

ಗಿರಿಗಿಟಿ ಹಿಡಿದು ರುಂಯ್ಯ ರುಂಯ್ಯನೆ ಓಡಬೇಕು. ಕನ್ನಡ ಪಾಠಪುಸ್ತಕದಲ್ಲಿ ಹುಡುಗನೊಬ್ಬ ಕಾಲುಡೊಂಕು ಮಾಡಿಕೊಂಡು ಗಿರಿಗಿಟಿ ಹಿಡಿದುಕೊಂಡು ಓಡುತ್ತಿರುವ ಚಿತ್ರ ನೆನಪಾಗುತ್ತದೆ. ಹುಡುಗಿ ಹಾಗೆ ಓಡುವ ಚಿತ್ರವೇ ಇಲ್ಲ ಎಂಬುದೂ... ಈಗ ನೆನಪಾಗುತ್ತಿದೆ! ಚಿತ್ರ ಬರೆದವರದು ತಪ್ಪಲ್ಲ. ಹೌದಾದ್ದನ್ನೇ ಬರೆದಿದ್ದಾರೆ. ಗಿರಿಗಿಟಿ ಹಿಡಿದು ಓಡುವವರೆಲ್ಲ ಹುಡುಗರು. ನಿಂತು ನೋಡಿ ಕೈ ತಟ್ಟಿ ಕುಣಿಯುವವರೆಲ್ಲ ಹುಡುಗಿಯರು. ನಮಗೇ ಗಮ್ಮತ್ತು. ಯಾಕೆ ಹೇಳಿ. ಅವರು ಓಡುವಾಗ ಎದುರಿಂದ ಗಿರಿಗಿಟಿ ಬಣ್ಣವೆಲ್ಲ ಕಲಸಿ ಹೊಸ ಬಣ್ಣವಾಗಿ ರವಂಡುರವಂಡಾಗಿ ತಿರುಗುವುದು ನೋಡಲು ಬಲು ಸೊಗಸು. ದೂರದಿಂದ ಸರಿಯಾಗಿ ಕಾಣುತ್ತದೆ ಕೂಡ. ತೀರ ಹತ್ತಿರದಿಂದ ಕಂಡದ್ದು ಯಾವುದೂ ಕಂಡ ಹಾಗೆಯೇ ಅಲ್ಲ. ಹಾಗಾಗಿ ಪಾಪ, ಹುಡುಗರಿಗೆ ಓಡುವುದೊಂದೇ. ಗಿರಿಗಿಟಿ ಕಾಣುವುದೇ ಇಲ್ಲ.
`ಹಾಂಗೇ ಆಯ್ಕ್.'

- ವೈದೇಹಿ.
ಚಿತ್ರ: ಆದೂರು.

1 comments:

Shankara Bhat said...

'ಆಗ ಏನೆಂದೇ ತಿಳಿಯದ ಪರಿಮಳ ಅದು. `ಬಾಲ್ಯದ ಪರಿಮಳ' ಎಂದು ತಿಳಿದದ್ದು ತಡವಾಗಿ...'
ಎಲ್ಲರ ಬದುಕಿನಲ್ಲಿಯು ಇರುವ 'ಮಧುರ'ನೆನಪುಗಳು,ಆತ್ಮೀಯ ಬರೆಹ.ಚಿತ್ರಗಳೂ ಚೆನ್ನಾಗಿದೆ.

Post a Comment