ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಈ ಕನಸು ವಿಶೇಷ

ಪ್ರಕೃತಿ ಸೌಂದರ್ಯದ ನಲೆ ವೀಡಾಗಿರುವ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಗುಂದ ಶ್ರೀ ಉಮಾಮಹೇಶ್ವರ ದೇಗುಲದ ಸುತ್ತೆಲ್ಲಾ ದಟ್ಟ ಹಸಿರ ರಾಶಿ.ಅರ್ಥಾತ್ ಕಾಡುಗಳೇ. ಅದೂ ಅಂತಿಂಥ ಕಾಡುಗಳಲ್ಲ...ಅದು ನಿತ್ಯ ಹರಿದ್ವರ್ಣದ ಮಳೆಕಾಡುಗಳು...ಶೋಲಾ ಕಾಡುಗಳು...ಹೊಸಗುಂದದ ದೇವರಕಾಡು ನಿರ್ಮಾಣವಾಗಿದ್ದೇ ಒಂದು ವಿಶೇಷ. 650 ವರುಷಗಳ ಹಿಂದೆ ಹೊಸಗುಂದ ಅರಸರ ವಂಶ ಸಂಪೂರ್ಣ ಅವನತಿ ಹೊಂದಿದಾಗ ಇಲ್ಲಿದ್ದ ದೇಗುಲಗಳು ನಿರ್ಲಕ್ಷ್ಯಕ್ಕೊಳಗಾಗತೊಡಗಿದವು.

ಅರಸರನ್ನು ಆಶ್ರಯಿಸಿಕೊಂಡಿದ್ದ ಜನಗಳು ಬೇರೆಡೆಗೆ ವಲಸೆ ತೆರಳಿದರು. ಈ ಸಂದರ್ಭದಲ್ಲಿ ದೇಗುಲಗಳು ಪೂರ್ತಿಯಾಗಿ ಕಾಲಗರ್ಭದೊಳು ಸೇರತೊಡಗಿದವು. ಇತಿಹಾಸವೇ ಹೇಳುವಂತೆ ಜನವಸತಿ ಇಲ್ಲದ ನಾಡು ಕಾಡಾಗಿ ಪರಿವರ್ತನೆಗೊಂಡಿತು. ಆ ಕಾಡೊಳಗೆ ದೇಗುಲಗಳ ಅಳಿದುಳಿದ ಅವಶೇಷಗಳಿದ್ದುದರಿಂದ ಕಾಡಲ್ಲಿದ್ದ ಮರಗಳನ್ನು ಕಡಿಯುವ ಸಾಹಸಕ್ಕೆ ಯಾರೊಬ್ಬರೂ ಕೈ ಹಾಕಿಲ್ಲ.ಪರಿಣಾಮ ಅಲ್ಲಿರುವ ಒಂದೊಂದು ಮರವೂ ಕೂಡಾ ಒಂದನ್ನೊಂದು ಮೀರಿಸುವಂತೆ ಬೆಳೆದುನಿಂತವು...

ಪ್ರತಿಯೊಂದು ಮರವೂ ದಷ್ಟಪುಷ್ಟವಾಗಿ ವಿಸ್ತರಿಸುತ್ತಾ ಇಂದೀಗ 500ರಿಂದ 650ವರುಷಗಳ ಆಯಸ್ಸನ್ನು ಹೊಂದಿರುವುದಾಗಿ ಅಂದಾಜಿಸಲಾಗಿದೆ. ನಾಲ್ಕು ಮಂದಿ ಸೇರಿದರೂ ತಬ್ಬಿಕೊಳ್ಳಲು ಸಾಧ್ಯವಾಗದಷ್ಟು ಸುತ್ತಳತೆಯನ್ನು ಈ ಮರಗಳು ಹೊಂದಿವೆ. ಅಂದರೆ ಸುಮಾರು ನಾಲ್ಕು ನೂರರಿಂದ ಐದು ನೂರು ವರುಷಗಳಷ್ಟು ಇತಿಹಾಸ ಒಂದೊಂದು ಮರಕ್ಕೂ ಇವೆ...


ಹೊಸಗುಂದದ ಈ ಕಾಡನ್ನು ದೇವರ ಕಾಡು ಎಂದು ಘೋಷಿಸಲಾಗಿದೆ. ಎಕ್ಕರೆ ಗಟ್ಟಲೆ ಹಬ್ಬಿರುವ ಕಾಡು ಬಳ್ಳಿಗಳು ಬೃಹತ್ ಸ್ವರೂಪ ತಾಳಿದ್ದು ಅದೊಂದು ಸೋಜಿಗದಂತೆ ಕಂಡು ಬರುತ್ತಿವೆ. ಮರಗಳು , ಅಪರೂಪದ ಸಸ್ಯ ಪ್ರಬೇಧಗಳು, ನೂರಕ್ಕೂ ಮಿಕ್ಕಿದ ಮಾವಿನ ತಳಿಗಳು ಮಾತ್ರವಲ್ಲದೆ ಈ ಕಾಡೊಳಗೆ ಹಲವಾರು ದೇಗುಲಗಳ ಕುರುಹು ಲಭ್ಯವಾದ ಹಿನ್ನಲೆಯಲ್ಲಿ ಇದೊಂದು ಸಂಶೋಧನೆಗೆ ಸೂಕ್ತವಾದ ಅಧ್ಯಯನ ತಾಣವೆಂದೂ ಕರೆಯಲಾಗುತ್ತದೆ.

ದೇಗುಲದ ಅಭಿವೃದ್ಧಿಕಾರ್ಯವನ್ನು ಕೈಗೊಂಡ ಶ್ರೀ ಉಮಾ ಮಹೇಶ್ವರ ಸೇವಾ ಟ್ರಸ್ಟ್ ಶಿವಮೊಗ್ಗದ ವಿ.ವಿ.ಯ ಸಹಕಾರದೊಂದಿಗೆ ದೇವರ ಕಾಡಿನಲ್ಲಿ ಸಮಗ್ರ ಅಧ್ಯಯನಕ್ಕೆ ಮುಂದಾಗಿದೆ. ಈಗಾಗಲೇ ಈ ಕಾಡಿನಲ್ಲಿ ನೂರ ಎಂಟು ಬಗೆಯ ಸಸ್ಯಗಳಿವೆಯೆಂದು ಪತ್ತೆ ಹಚ್ಚಲಾಗಿವೆ. ಅವುಗಳಲ್ಲಿ ಅಳಿವಿನಂಚಿಗೆ ಸೇರಿದ, ಕೆಂಪು ಪಟ್ಟಿಗೆ ಸೇರಿದ ಹಾಗೂ ತೊಂದರೆಯಿಲ್ಲದ ವಿವಿಧ ತಳಿಗಳನ್ನು ಪತ್ತೆ ಹಚ್ಚಲಾಗಿದೆ.
ಅಳಿವಿನಂಚಿನ ಸಸ್ಯಗಳನ್ನು ಮತ್ತೆ ತಳಿ ಅಭಿವೃದ್ಧಿಗೊಳಿಸುವ ಕಾರ್ಯವೂ ಪ್ರಗತಿಯಲ್ಲಿದೆ.


ಈಗಾಗಲೇ ಪತ್ತೆಹಚ್ಚಲಾದ ಅಳಿವಿನಂಚಿನಲ್ಲಿರುವ ಸಸ್ಯಗಳನ್ನು ಮತ್ತೆ ನೆಟ್ಟು ಪೋಷಿಸುವ ಕಾರ್ಯವೂ ಅಚ್ಚುಕಟ್ಟಾಗಿ ಸಾಗಿವೆ. ಒಟ್ಟಿನಲ್ಲಿ ದೇವರ ಕಾಡಿನ ಹೆಸರಿನಲ್ಲಿ ಕಾಡೊಂದು ಅಭಿವೃದ್ದಿಯಾಗುತ್ತಿದೆ. ಇಂದಿನ ಅಭಿವೃದ್ಧಿಯ ಸೋಗಿನಲ್ಲಿ ಮರಗಿಡಗಳು ನಾಶವಾಗುತ್ತಿರುವ ಸಂದರ್ಭದಲ್ಲಿ ದೇವರ ಕಾಡುಗಳ ಹೆಸರಿನಲ್ಲಿಯಾದರೂ ಮರಗಳುಳಿಯುತ್ತಿರುವುದು ಸಂತಸದ ಸಂಗತಿ...

- ಆದೂರು.

1 comments:

Darshan Bm said...

Nice one......

Post a Comment