ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಶೇಷ ವರದಿ
ಮಂಗಳೂರು: ಕರ್ನಾಟಕ ರಾಜ್ಯದ ವೃತ್ತಿನಿರತ ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಅಲೋಪತಿ ಔಷಧಿಗಳನ್ನು ಬಳಸಲು ಅನುಮತಿ ನೀಡಬೇಕೆಂಬ ಒಂದಂಶದ ಬೇಡಿಕೆಯನ್ನು ಮುಂದಿಟ್ಟುಕೊಂಡು ಜುಲೈ 20ರಿಂದ ರಾಜ್ಯದಾದ್ಯಂತ ಆಯುಷ್ ವೈದ್ಯರು ಮುಷ್ಕರ ಕೈಗೊಳ್ಳುವುದಾಗಿ ನಿರ್ಣಯಿಸಿದ್ದು, ಇದರಂತೆ ಆಯುಷ್ ಫೆಡರೇಷನ್ ಆಫ್ ಇಂಡಿಯಾದ ದ.ಕ.ಜಿಲ್ಲಾ ಆಯುಷ್ ಘಟಕವೂ ಮುಷ್ಕರ ಕೈಗೊಳ್ಳಲಿದೆ. ಅಂದಿನಿಂದ ಎಲ್ಲಾ ಆಯುಷ್ ವೈದ್ಯರು, ವಿದ್ಯಾರ್ಥಿಗಳು ತಮ್ಮ ಆಸ್ಪತ್ರೆಗಳನ್ನು ಬಹಿಷ್ಕರಿಸಿ ಜಿಲ್ಲಾಕೇಂದ್ರದಲ್ಲಿ ಮುಷ್ಕರ ಪ್ರಾರಂಭಿಸಲಿದ್ದಾರೆ.


ಬೇಡಿಕೆಗಳನ್ನು ಈಡೇರಿಸುವಂತೆ ಸಮಗ್ರ ದಾಖಲೆಗಳನ್ನೊಳಗೊಂಡ ಮನವಿಯನ್ನು ಜಿಲ್ಲೆಯ ಎಲ್ಲಾ ಆಯುಷ್ ವೈದ್ಯರ ಪರವಾಗಿ ಜುಲೈ 20ರಂದು ಬೆಳಗ್ಗೆ 11ಗಂಟೆಗೆ ಜಿಲ್ಲಾಧಿಕಾರಿಗಳಿಗೆ ನೀಡಲಾಗುವುದು. ಶಾಂತಿಯುತ ರೀತಿಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು.

ಸರ್ವೋಚ್ಛ ನ್ಯಾಯಾಲಯ ಎಲ್ಲ ರಾಜ್ಯ ಸರಕಾರಗಳಿಗೆ ಆಯುಷ್ ವೈದ್ಯರ ಶಿಕ್ಷಣ, ತರಬೇತಿ ಮತ್ತು ಅನುಭವದ ಆಧಾರದ ಮೇಲೆ ಅಲೋಪಥಿ ಔಷಧಿಗಳನ್ನು ಬಳಸಲು ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಆಕ್ಟ್ 1940, ನಿಯಮ 1945ರ 2(ಇಇ)(iii)ಕ್ಕೆ ತಿದ್ದುಪಡಿ ತಂದು ಆಯಾ ರಾಜ್ಯ ಸರಕಾರಗಳು ಅನುಮತಿ ನೀಡಲು ನಿರ್ದೇಶಿಸಿದೆಯಾದರೂ ಸರಕಾರ ಮಾತ್ರ ಇನ್ನೂ ಮೀನ ಮೇಷ ಎಣಿಸುತ್ತಿದೆ.

ಜಿಲ್ಲೆಯ 2 ಸಾವಿರ ವೈದ್ಯರು ಮುಷ್ಕರದಲ್ಲಿ : ಒಂದಂಶದ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಿಸಿ ದ.ಕ.ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ಫೆಡರೇಷನ್ ಆಫ್ ಇಂಡಿಯಾದ ದ.ಕ.ಜಿಲ್ಲಾ ಆಯುಷ್ ಘಟಕ , ಸರಿ ಸುಮಾರು ಎರಡು ಸಾವಿರ ಮಂದಿ ವೈದ್ಯ ಸದಸ್ಯರು ಈ ಮುಷ್ಕರದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ರೀತಿ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕುಗಳಲ್ಲೂ ವೈದ್ಯರು ಮುಷ್ಕರ ಕೈಗೊಳ್ಳಲಿದ್ದಾರೆ.

ಸೂಕ್ತ ಸ್ಪಂದನೆಯಿಲ್ಲ : ಆಯುಷ್ ವೈದ್ಯರ ಒಂದಂಶದ ಬೇಡಿಕೆಯನ್ನು ಈಡೇರಿಸುವಂತೆ ಈಗಾಗಲೇ ಹಲವು ಬಾರಿ ಸಂಬಂಧಿಸಿದ ಎಲ್ಲಾ ಅಧಿಕಾರಿಗಳಿಗೆ, ಇಲಾಖೆಗಳಿಗೆ ಮನವಿ ಸಲ್ಲಿಸಲಾಗಿದೆಯಾದರೂ ಯಾವೊಂದು ಪ್ರಗತಿಯೂ ಕಂಡು ಬಂದಿಲ್ಲ. ಇದೀಗ ಮೇ.30ರಂದು ರಾಜ್ಯಪಾಲರು, ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು, ಕಾರ್ಯದರ್ಶಿಗಳು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರ್ಯದರ್ಶಿಗಳು, ವೈದ್ಯಕೀಯ ಶಿಕ್ಷಣ , ಆಯುಷ್ ನಿರ್ದೇಶಕರು ಹೀಗೆ ಸಂಬಂಧಿಸಿದ ಎಲ್ಲರಿಗೂ ಮನವಿ ಸಲ್ಲಿಸಲಾಗಿತ್ತು. ಕಳೆದ ಮೂರು ವರುಷಗಳಿಂದ ಎ.ಎಫ್.ಐ ಸತತವಾಗಿ ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಹಾಗೂ ಆರೋಗ್ಯ ಸಚಿವರಿಗೆ ಮನವಿ ನೀಡುತ್ತಾ ಬಂದಿದೆ.

ಈ ವಿಷಯಕ್ಕೆ ಸಂಬಂಧಪಟ್ಟ ಕಡತವು ಸಂಬಂಧಿತ ಇಲಾಖೆಯಲ್ಲಿದೆ. (ಕಡತ ಸಂಖ್ಯೆ ಎಚ್.ಎಫ್.ಡಬ್ಲ್ಯು 309/ಪಿ.ಐ.ಎಂ./2008/09). ಆರೋಗ್ಯ ಮತ್ತು ಕುಟುಂಬ ಇಲಾಖೆಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖೆಯ ಪದಾಧಿಕಾರಿಗಳು ಹಾಗೂ ಎ.ಎಫ್.ಐ ಪದಾಧಿಕಾರಿಗಳ ಸಭೆ 19/11/2011ರಂದು ನಡೆದಿದ್ದು ಆ ಸಭೆಯಲ್ಲಿ ಚರ್ಚಿಸಿ ತೆಗೆದುಕೊಂಡ ರಾಜ್ಯ ಸರಕಾರದ ನಿರ್ಣಯದ ವರದಿಯನ್ನು ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ. ಇದಾದ ಆರು ತಿಂಗಳಲ್ಲಿ ಹಲವಾರು ಬಾರಿ ಎ.ಎಫ್.ಐ ನಿಂದ ಮನವಿ ಸಲ್ಲಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ಸಾಕಷ್ಟು ಕಾಲಾವಕಾಶಗಳನ್ನು ನೀಡಿದರೂ ಸೂಕ್ತ ಸ್ಪಂದನೆ ದೊರಕದ ಹಿನ್ನಲೆಯಲ್ಲಿ ಈ ಮುಷ್ಕರ ಅನಿವಾರ್ಯವಾಗಿದೆ.

ನಿರ್ಣಯ ಜಾರಿ ಮಾಡಲಿ : ಆರೋಗ್ಯ ಎಂಬುದು ಇಡೀ ರಾಜ್ಯದ ಜನತೆಗೆ ಸಂಬಂಧ ಪಟ್ಟ ವಿಷಯವಾಗಿರುವ ಹಿನ್ನಲೆಯಲ್ಲಿ ರಾಜ್ಯ ಸರಕಾರ ಈ ಬಗ್ಗೆ ಗಂಭೀರ ಚಿಂತನೆಯನ್ನು ಮಾಡಿ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಮತ್ತು ಇತರೆ 12 ರಾಜ್ಯಗಳಲ್ಲಿ ಜಾರಿಗೆ ತಂದಿರುವಂತೆ ಆದಷ್ಟು ಶೀಘ್ರ ನಿರ್ಣಯವನ್ನು ಕೈಗೊಂಡು ವೃತ್ತಿನಿರತ ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಆಲೋಪತಿ ಔಷಧಿಗಳನ್ನು ಬಳಸಲು ಕಾನೂನು ತಿದ್ದುಪಡಿ ಮಾಡಿ (ಡ್ರಗ್ಸ್ ಆಂಡ್ ಕಾಸ್ಮೆಟಿಕ್ಸ್ ಆಕ್ಟ್ 1940 ಹಾಗೂ ನಿಯಮ 1945 (2) ( ಇ ಇ) (iii)) ರಾಜ್ಯ ಸರಕಾರದಿಂದ ಅನುಮತಿ ಕೊಡಿಸಬೇಕು. ಈ ರೀತಿಯ ಕಾನೂನು ತಿದ್ದುಪಡಿಗೆ ಸರಕಾರಕ್ಕೆ ಯಾವುದೇ ರೀತಿಯ ಹಣಕಾಸಿನ ಭಾರವಾಗುವುದಿಲ್ಲ. ಈ ತಿದ್ದುಪಡಿ ಆದದ್ದೇ ಆದಲ್ಲಿ ಆಯುಷ್ ವೈದ್ಯರು ಇನ್ನೂ ಪರಿಣಾಮಕಾರಿಯಾಗಿ ಸೇವೆಸಲ್ಲಿಸಲು ಅನುಕೂಲವಾದಂತಾಗುತ್ತದೆ.

ಕರ್ನಾಟಕ ರಾಜ್ಯದ ವೃತ್ತಿ ನಿರತ ಆಯುಷ್ ವೈದ್ಯರು ಭಾರತೀಯ ವೈದ್ಯ ಪದ್ಧತಿಗಳ ಕೇಂದ್ರ ಪರಿಷತ್ತು (ಸಿ.ಸಿ.ಐ.ಎಂ) ಹೋಮಿಯೋಪಥಿ ವೈದ್ಯ ಮಂಡಳಿ ( ಸಿ.ಸಿ.ಎಚ್) ಕೇಂದ್ರ ಸರಕಾರ ಹಾಗೂ ಸಂಬಂಧಪಟ್ಟ ರಾಜ್ಯಗಳ ವಿಶ್ವವಿದ್ಯಾನಿಲಯಗಳಿಂದ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಗಳಿಂದ ಪದವಿ ಪಡೆದು ರಾಜ್ಯದ ಆಯುರ್ವೇದ , ಯುನಾನಿ, ಹೊಮಿಯೋಪತಿ ವೈದ್ಯಪದ್ಧತಿಗಳ ಮಂಡಳಿಗಳಲ್ಲಿ ನೋಂದಾಯಿತರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ.

ಮಾನ್ಯತೆ ಪಡೆದ ವಿದ್ಯಾಲಯಗಳಿಂದ ಪದವಿಪಡೆದ ಆಯುಷ್ ವೈದ್ಯರು ತಮ್ಮ ಪಠ್ಯಕ್ರಮದಲ್ಲಿ ಆಯುರ್ವೇದ , ಯುನಾನಿ, ಹೋಮಿಯೋಪಥಿ, ಹಾಗೂ ಆಲೋಪಥಿ ವೈದ್ಯಪದ್ಧತಿಗೆ ಸಂಬಂಧಪಟ್ಟ ವಿಷಯಗಳನ್ನು ಅಭ್ಯಸಿಸಿ ಕಲಿಕಾ ಅವಧಿಯಲ್ಲಿ ಎರಡೂ ವೈದ್ಯಪದ್ಧತಿಗಳಲ್ಲಿ ತರಬೇತಿಯನ್ನು ಹೊಂದಿರುತ್ತಾರೆ.

ಆಯುಷ್ ವೈದ್ಯಪದ್ಧತಿಗಳ ಪಠ್ಯಕ್ರಮಗಳು ರಾಷ್ಟ್ರದಾದ್ಯಂತ ಒಂದೇ ತೆರನಾಗಿದ್ದು ಪ್ರಸ್ತುತ 12 ರಾಜ್ಯಗಳಲ್ಲಿ ಆಯಾಯ ರಾಜ್ಯ ಸರಕಾರಗಳು ಆಯುಷ್ ವೈದ್ಯರಿಗೆ ತುರ್ತು ಸಂದರ್ಭದಲ್ಲಿ ಅಲೋಪತಿ ಔಷಧಿಗಳನ್ನು ಬಳಸಲು ಪರವಾನಿಗೆ ನೀಡಿದೆಯಾದರೂ ಕರ್ನಾಟಕದಲ್ಲಿ ಇದು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುದು ಸೋಜಿಗ.

ಕರ್ನಾಟಕ ರಾಜ್ಯ ಸರಕಾರವು ಸರಕಾರಿ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರನ್ನು ನೇಮಕಮಾಡಿ ಅವರನ್ನು ರಾಷ್ಟ್ರೀಯ ಆರೋಗ್ಯ ಯೋಜನೆಗಳಾದ ಟಿ.ಬಿ, ಮಲೇರಿಯಾ, ಇತ್ಯಾದಿಗಳಲ್ಲಿ ಅವರ ಸೇವೆಯನ್ನು ಬಳಸಿಕೊಳ್ಳುತ್ತಿದೆ. ಆಲೋಪಥಿ ವೈದ್ಯರು ಇಲ್ಲದ ಆಸ್ಪತ್ರೆಗಳಲ್ಲಿ ಆಯುಷ್ ವೈದ್ಯರು ಆಲೋಫಥಿ ಔಷಧಿಗಳನ್ನು ಬಳಸಿ ಚಿಕಿತ್ಸೆ ನೀಡುತ್ತಿದ್ದಾರೆ. ಇದನ್ನು ಗಮನಿಸುವಾಗ ಸರಕಾರ ತಾತ್ವಿಕವಾಗಿ ಆಯುಷ್ ವೈದ್ಯರು ಅಲೋಪಥಿ ಔಷಧಿಗಳನ್ನು ಬಳಸಲು ಒಪ್ಪಿಕೊಂಡಂತೆ ಭಾಸವಾಗುತ್ತಿದೆ.

ಗ್ರಾಮೀಣ ಪ್ರದೇಶಗಳಲ್ಲಿ ಆಲೋಫಥಿ ವೈದ್ಯರ ಕೊರತೆಯಿದ್ದು ಈ ಕೊರತೆಯನ್ನು ನೀಗಿಸುವಲ್ಲಿ ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಆಯುಷ್ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ತುರ್ತು ಸಂದರ್ಭದಲ್ಲಿ ಆಯುಷ್ ವೈದ್ಯರು ಅನಿವಾರ್ಯವಾಗಿ ಆಲೋಪಥಿಗಳನ್ನು ಬಳಸಲೇ ಬೇಕಾಗುತ್ತದೆ. ಈ ಅನಿವಾರ್ಯತೆಯನ್ನು ಮನಗಂಡು ಕರ್ನಾಟಕ ರಾಜ್ಯದ ಬಹುತೇಕ ವಿಧಾನಸಭೆ, ಪರಿಷತ್ ನ ಸದಸ್ಯರು ಸಚಿವರು , ವಿರೋಧ ಪಕ್ಷದ ಮುಖಂಡರು, ಶಾಸಕರು ತಮ್ಮ ಒಪ್ಪಿಗೆ ಪತ್ರವನ್ನು ಆರೋಗ್ಯ ಸಚಿವರು, ಮತ್ತು ಮುಖ್ಯಮಂತ್ರಿಗಳಿಗೆ ನೀಡಿರುತ್ತಾರೆ.

- ಹರೀಶ್ ಕೆ.ಆದೂರು.

0 comments:

Post a Comment