ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ಠ್ರಿಣ್ ಠ್ರಿಣ್ ಠ್ರಿಣ್ ಠ್ರಿಣ್ ...
ಸರಿಗಮ ಪದನಿಸ ಒಬ್ಬರನ್ನೊಬ್ಬರು ತಟ್ಟಿ ಮುಟ್ಟಿ ಧಡಧಡ ಎದ್ದು ನೋಡಿದರೆ ಹೋ!ಸೈಕಲ್ಲು ಬೆಲ್ಲು ಒಂದೇ ಸಮ ಜಂಭ ಹೊಡೆಯುತ್ತಿದೆ,ನರ ಮನುಷ್ಯರು ಇನ್ನು ಮಲಗದಂತೆ.ಅಣ್ಣಂದಿರೆಲ್ಲ ನಸುಕಿಗೇ ಹೊರಟು ಒಂದು ರೌಂಡು ಜಾತದರೆ ಮುಗಿಸಿ ಬಂದಾಯಿತು.ಹಣ್ಣುಕಾಯಿ ಮಾಡಿ ತಂದಾಯಿತು.ಹಣೆಯ ಮೇಲೇನು ಉದ್ದುದ್ದ ಗಂಧವೆಳೆದುಕೊಂಡು ಒಂದು ಕಾಲು ಮುಂದಿಟ್ಟು,ಸೊಂಟಕ್ಕೊಂದು ಕೈ ಕೊಟ್ಟು ದೊಡ್ಡ ಪುಳಕರಂತೆ ಸೈಕಲಿಗಾನಿಸಿ ನಿಂತು ಬೆಲ್ಲು ಹೊಡೆಯುತ್ತಿದ್ದಾರೆ.ಜಾತ್ರೆ ಈ ವರ್ಷ ಹೇಗೆ,ಏನೆಲ್ಲ ಬಂದಿದೆ ವಿಶೇಷ ಅಂತಷ್ಟೇ ಅಲ್ಲ,ನೆರೆದ ಜನ ಎಷ್ಟು ಅಂತಲೂ ಲೆಕ್ಕ ಹೇಳಿಯಾಯಿತು!ಅವರಿಗೆಲ್ಲ ಇಂತಿಷ್ಟು ಜನ ಅಂತ ಅದು ಹೇಗೆ ತಿಳಿಯುತ್ತದೆ?ಲೆಕ್ಕ ಮಾಡುವುದು ಹೇಗೆ ಅವರು?ಅಣ್ಣಂದಿರೆಲ್ಲ ನಿಜಕ್ಕೂ ಜಾಣರು.ಸಂಶಯವೇ ಇಲ್ಲ.ನಮಗೆಲ್ಲ ಹಾಗೆ ಸೈಕಲ್ ಮೇಲೆ ಹೋಗು ಎಂದರೂ ಹೋಗಲು ತಿಳಿಯಲಿಕ್ಕಿಲ್ಲ.ಅಷ್ಟು ಸಾವಿರ ಜನರ ಲೆಕ್ಕವನ್ನು ಮಾಡಿ ಇಷ್ಟು ಬೇಗ ವಾಪಾಸು ಬರಲಿಕ್ಕು ಸಾಧ್ಯವಿಲ್ಲ!
ಇಷ್ಟಕ್ಕೂ ಮಂಜತ್ತೆ ಎಲ್ಲಿ?ಅಯ್ಯ!ಹಾಸಿಗೆ ನೋಡು.ಖಾಲೀ!!


ಹೋಗಿಲ್ಲ,ಹೋಗಿಲ್ಲ,ಅಯ್ಯಬ್ಬ.ಅಲ್ಲಿ ಜಗುಲಿಯಲ್ಲಿ ಕಾಣುತ್ತಾರಲ್ಲ.ಸೇವಂತಿಗೆ ಸಾಲದೆಂದು ಸೋಣೆ ಹೂವನ್ನೆಲ್ಲಾ ಕೊಯ್ದು ಕಟ್ಟುತ್ತಿದ್ದಾರೆ.ಪಾದದ ಹೆಬ್ಬರಳಿಗೆ ಹಗ್ಗದುಮಗುರ ಸಿಗಿಸಿ ಕಾಲು ಅರೆಮಡಿಸಿ ತಾನೇ ಹೂ ಆರಿಸಿ ಜೋಡಿಸಿಕೊಂಡು... ಕಾಲ್ಬೆರಳೆಲ್ಲ ಹೇಗಿವೆ ನೋಡು!ಮಂಜತ್ತೆಯದಲ್ಲ ಎಂಬ ಹಾಗೆ...!ಚಿರುಟಿ ಚಪ್ಪಟೆದ್ದು ಉಗುರೆಲ್ಲ ಕಪ್ಪು ಕಪ್ಪು.ಬೆರಳ ಚಡಿ ನೋಡು.ಅಷ್ಟು ಅಗಲ!ಅಲ್ಲಿ ನಂಜಾಗಿದೆ...ನಿನಗೆ ಹೇಗೆ ತಿಳಿಯಿತು?ಹೇಗೆಂದರೆ,ನೋಡಲ್ಲಿ ಬಿಳೀ ಹೊಳೆಯುತ್ತಿದೆ.

ಕೆಲಸದ ಕೃಷ್ಣಿಯ ಕಾಲ ಚಡಿಯೂ ಹೀಗೇ ಆಗಿದೆ.ನನಗೆ ತೋರಿಸಿದ್ದಾಳೆ.-ಅದಕ್ಕೆ ರಾತ್ರಿ ಮುಲಾಮು ಹಚ್ಚುವನ!ಹಚ್ಚುವ.)ಮುಖ ನೋಡಿದರೆ ಇತ್ತಿನ ಗೋಚರವಿಲ್ಲದೆ ಮಂಜತ್ತೆ ಆ ಕಾಲು ಕಾಲಲ್ಲ ಯಾವುದೋ ಗೋಟವೆಂಬಂತೆ ಹೆಬ್ಬೆರಳಿಗೆ ಸಿಗಿಸಿದ ಹಗ್ಗದಲ್ಲಿ ಹೂದಂಡೆ'ಮಡಿಯು'ತ್ತಿದ್ದಾರೆ.
ಏನೇನು,ನೀವೂ ಎಲ್ಲ ಮಂಜತ್ತೆಯೊಟ್ಟಿಗೆ ಹೋಗುವದ!ಬೇಡ ಬೇಡ;ಉರಿ ಬಿಸಿಲಿಗೆ.ಮಧ್ಯಾಹ್ನದ ಮೇಲೆ ಹೋದರೆ ಸಾಕು.
ಇಲ್ಲ ಇಲ್ಲ ನಾವು ಹೋಗುವವರೇ.

ಬೇಡವೇ ಬೇಡ.ನಿಮ್ಮ ಜಂಡೆ ಕಟ್ಟಿಕೊಂಡು ಹೋದರೆ ಅವಳು ಹಬ್ಬದ ಗುಡಿ ಮುಟ್ಟಿದ ಹಾಗೆಯೇ.ಅವಳು ಹೋಗಲಿ ಅವಳಷ್ಟಕ್ಕೆ.
ಏನಿಲ್ಲ.ನಾವು ಈ ಸಲ ಅವರ ಜೊತೆಗೇ ಹೋಗುತ್ತೇವೆ.ಆಞಂ...ಒಂದು ಸಲವೂ ಅವರೊಟ್ಟಿಗೆ ಕೋಟೇಶ್ವರ ಹಬ್ಬಕ್ಕೆ ಹೋಗಲೇ ಇಲ್ಲ ನಾವು!ಆಞಂ...!
ಅವಳು ಮೋಟಾರು ಹೋದಂತೆ ಹೋಗುತ್ತಾಳೆ.ನಿಮಗೆ ಸಾಧ್ಯವಾ ಅವಳ ಸಮಸಮ?

ಓಹೋ,ಸಾಧ್ಯ.ಭಾರಿಯ ಅದೊಂದು?ನಾವು ಬೇಕಾದರೆ ಅವರಿಗಿಂತ ಮುಂದೆಯೇ.ಮಂಜತ್ತೆ, ನೀವೇ ಹೇಳಿ ಮಂಜತ್ತೆ,ಕರೆದುಕೊಂಡು ಹೋಗುತ್ತೇನೆ ಅಂತ ನೀವೇ ಹೇಳಿ ಮಂಜತ್ತೆ ಅಮ್ಮನಿಗೆ.
'ಇರ್ಲಿ ಬಿಡ ಮಾಲಶ್ಮಿ.ಅವ್ವ್ ನನ್ನೊಟ್ಟಿಗ್ ಬರ್ಲಿ.'

ಇವನ್ನು ಕಟ್ಟಿಕೊಂಡು ಹೋದರೆ ನಿಮಗೆ ಸುಖವಿಲ್ಲ ಮಂಜತ್ತೆ.ಕರಕರಕರ ಜಗಲ ಮಾಡುತ್ತವೆ.ನಿಮ್ಮನ್ನು ಛಪ್ಪಂಚೂರು ಮಾಡಿ ಹಾಕುತ್ತವೆ.ಕಂಡಕಂಡಲ್ಲಿ ನಿಲ್ಲುತ್ತವೆ.ಕಂಡದ್ದು ಕೇಳುತ್ತವೆ.ಬರೀ ಕಂಡದ್ದು ಬೇಕು ಕುಂಡಿ ಬಯಕೆ.
ಇಲ್ಲ.ಕಂಡ ಕಂಡಲ್ಲಿ ನಿಲ್ಲುವುದಿಲ್ಲ.ಏನು,ಏನೂ ಬೇಕು ಎನ್ನುವುದಿಲ್ಲ.

ಹೇಳಿದ ಹಾಗೆಯೇ ಕೇಳುತ್ತೇವೆ.ಖಂಡಿತ ಅಂದರೆ ಖಂಡಿತ.ಬೇಕಾದರೆ,ಕೈ ನೀಡು,ಭಾಷೆ ಕೊಡುತ್ತೇವೆ.
'ಕಡೆಗೆಲ್ಲಾರು ಕಾಲ್ ನೋಂವ್ ಕೂದಿ ನೋಂವ್ ಅಂದ್ರೆ ಕಬ್ಣಸೌಟ್ ಕಾಸಿ ಬರೆ ಹಾಕ್ತೆ...'
ಹೂಂ ಹಾಕು ಅಡ್ಡಿಲ್ಲ.
ಸರಿ ನಡೆಯಿರಿ.ಹೊರಡಿ ಹಾಗಾದರೆ.ಜಗಲ ಮಾಡಬೇಡಿ?ಮಂಜತ್ತೆಗೆ ಕರಕರೆ ಕೊಡಬೇಡಿ.
ಹ್ಹೊ ಹ್ಹೊ ಹ್ಹೊ ಹ್ಹೋ...!
ಬೇಗ ಹೊರಡಲುಂಟೆ?ಹಬ್ಬ ಮುಗಿಸಿ ಬಂದ ಸೈಕಲ್ ಠ್ರಿಣ್ನವರು ತಂಗಿಯಂದಿರ ತಲೆಯ ಮೇಲೆ ಕುಪ್ಳ ಕೂಡಿಸ ಹೊರಟಿದ್ದಾರೆ.
'ಸೀತಕ್ಕ ಸೀತಕ್ಕ ನಿನ್ ತಲೀ ಮೇಲೆ ಗುಬ್ಬಿ ಕೂತಿತ್ತೋ'
'ಸೀತಕ್ಕ ಸೀತಕ್ಕ ನಿನ್ ತಲೀ ಮೇಲೆ ಕಾಣ್!'-ಹಕ್ಕಿ ಪುಕ್ಕ!
ಅವಳಿಗೆ ಹೇಳುತ್ತೀಯಲ್ಲ,ನಿನ್ನ ತಲೆ ನೋಡಿಕೊ!'ಹಬ್ಬಕ್ ಹೋಪವ್ರ್ ತಲೀ ಮ್ಯಾಲೆ ಕುಪ್ಳ ಕೂತಿತ್ತೋ'...ಶ್ಶೇ.ಯಾರು ಹಾಕುವುದಿದು,ಕಣ್ಣು ಮಾಯಕದಲ್ಲಿ!

'ಅಮ್ಮ ಕಾಣಮ್ಮ,ಶಂಕ್ರಣ್ಣಯ್ಯ ಕುಪ್ಳ ಹಾಕ್ತಾ...ಬೈಯ್ ಅಮ್ಮ'ಅಮ್ಮ ಬೈಯುವುದಿಲ್ಲ ನಗುತ್ತಾಳೆ!'ಈ ಮಾಣಿಕ್ಳಿಗೆಲ್ಲ ಯಂತ ಆತ್ತಾ.'ಎಂದು ಮಂಜತ್ತೆಯೂ ನಗುತ್ತಾಳೆ.ಎಲ್ಲರೂ ನಗುತ್ತೇವೆ.ತಲೆಯ ಮೇಲೆ ಕೈಯಿಟ್ಟುಕೊಂಡು ತಿರುಗಿದರೂ ಕುಪ್ಳ ಬೀಳುವುದು ತಿಳಿಯುವುದಿಲ್ಲವಲ್ಲ!ಸಾಕೋ ಸಾಕು.

ಮಿಂದಾಯಿತು.ಈ ಸಲ ಆನೆ ಆನೆ ಅಂಚಿನ ರೇಷ್ಮೆ ಲಂಗ ಹಾಕಬೇಕಂತಿದ್ದೆ.ಲೀಲಕ್ಕ ಕೊಡಬೇಕಲ್ಲ.ಲೀಲಕ್ಕನದು ಗಿಡ್ಡವಾಗಿದೆ.ಆದರೂ ಅವಳು ಹಾಕುವುದನ್ನು ಬಿಡುವುದಿಲ್ಲ.ಬಿಟ್ಟರೆ ನನಗಾಗುತ್ತದೆ ಅಂತ ಮತ್ತಷ್ಟು ಬಿಡುವುದಿಲ್ಲ.ಈ ಸಲವೂ ಅದನ್ನೇ ಹಾಕಿಕೊಂಡಳು.ಆಗಲಿ.ಎಷ್ಟು ಮಾಡುತ್ತಾಳೆ ನೋಡುವ.ಜಗಳ ಮಾಡಿದರೆ ಅಮ್ಮ ಹೋಗುವುದೇ ಬೇಡವೆಂದರೆ ಎಂದಳೇ.ಯಾವುದೋ ಅಂಗಿ ಕೊಳಿಸಿಕೊಂಡರಾಯಿತು.
ಒಳಗೆ ಮುಂಡುಗನೋಲೆ ಕಡುಬು ಬೇಯುವ ಪರಿಮಳ ಬರುತ್ತಿದೆ.

ಅಮ್ಮ ಪಾರ್ತಕ್ಕ ಮಾಚಮ್ಮ ಮತ್ತೆಲ್ಲರೂ ಬಹಳ ಕೆಲಸದಲ್ಲಿದ್ದಾರೆ.ಮಾತಾಡಿಸಿದರೆ ಸಾಕು ಓಡಿಸುತ್ತಾರೆ.ಒಳ್ಳೆಯದೇ ಆಯಿತು.ಮಂಜತ್ತೆಯೇ ಜಡೆ ಕಟ್ಟಿದರು.ಹಾ ಹಾ ಅಷ್ಟು ಬಿಗಿಯಬೇಡಿ.ಜಡೆಯ ಬುಡದಲ್ಲಿ ಉರಿಯುತ್ತದೆ.ಮಂಜತ್ತೆಯೇ ಹೂ ಮುಡಿಸಿದರು.ಹೂವೇನೋ ಎಷ್ಟು ಬೇಕಾದರೂ ಉಂಟು;ನಿಂಗೆ ಕೂದಲೇ ಇಲ್ಲವಲ್ಲ ಹೆಣೇ!ಆದರೂ ಎರಡೆರೆಡು ದಂಡೆ ಹೂವು.ತಲೆಭಾರವೋ ಹೂವು ಭಾರವೋ?ಯಾವುದೂ ಭಾರವಿಲ್ಲ.ಹೋಯ್,ಜಾತ್ರೆ!ಜಾತ್ರೆಗೆ ಹೊರಟಿದ್ದೇವೆ!

ಆದರೆ ಮಂಜತ್ತೆ ಬೇಗ ಹೊರಡುವವರೇ?ನಿನ್ನೆ ರಾತ್ರಿ'ಬೇಗೆ ಕಪ್ಪಿಪ್ಪತಿಗೇ ಜಾರ್ಕಂತೆ'-ಎಂದು ದಿಗಿಲು ಹಾರಿಸಿದವರು ಈಗ ಹೊರಡುವ ಅಂದಾಜೇ ಕಾಣಿಸುತ್ತಿಲ್ಲ.ಹೊರನೆರಿ ಸೀರೆಯ ಗಂಟು ಬಿಗಿ ಮಾಡಿಕೊಂಡು 'ಇನ್ನ್ ಹೋಪ್ದೆ'ಎಂದು ಒಂದು ಹೊಸಿಲು ದಾಟುವರು.ಒಂದು ಮಾತು ಬೆಳೆಸುವರು.ಇನ್ನೊಂದು ಹೊಸಿಲು ದಾಟುವರು ಇನ್ನೊಂದು ಮಾತು ಬೆಳೆಸುವರು.ಎರಡೆರಡು ಹೆಜ್ಜೆಗೆ ಒಂದೊಂದು ಮಾತಿನ ತಂತಿ.ಸಿಕ್ಕಿದ್ದೇ ಮೀಟುತ್ತ ನಿಲ್ಲುವರು.ಎಷ್ಟು ಹೊತ್ತು ಎಷ್ಟು ಹೊತ್ತು!ಕೈ ಹಿಡಿದು ಜಗ್ಗಿ'ಅಯ್ಯೋ ಮಾತು ಸಾಕೂ...ಹೋಪಾ...'

ಸೈ.ಇನ್ನು ಹೊರಟೇ ಬಿಡುವ.'ರತ್ರಣ'ದೊಳಗಾದರೂ ಮುಟ್ಟಬೇಕು.(...ರತ್ರಣ ಅಂದರೆ?)ಮೆಟ್ಟಿಲಿಳಿದರು ಮಂಜತ್ತೆ.ಮಂಜತ್ತೆಗೆ ಎಷ್ಟುದ್ದ ಬಾಲ!ಈ ಬಾಲ ಜಾತ್ರೆ ತಲುಪುತ್ತದೆಯೇ?ತಲುಪುತ್ತದೆ,ತಲುಪಿಯೇ ತಲುಪುತ್ತದೆ,ತಲುಪುತ್ತದೆ ಮತ್ತೆ!ತಲುಪದಿದ್ದರೆ ನಾಕಾಣೆ ಪಂಥ...ಹೀಗೆಲ್ಲ ಮಾತಾಡಿಸಿದಂತೆ ಮಾಡಿ ಮಂಜತ್ತೆಯ ತಲೆಯ ಮೇಲೆ,ಅಯ್ಯೋ,'ಕುಪ್ಳ'ಕೂಡಿಸಿದ್ದಾರೆ!
'ಹಬ್ಬಕ್ ಹೋಪವ್ರ್ ತಲೀ ಮ್ಯಾಲೆ ಕುಪ್ಳ ಕೂತಿತ್ತೋ...'

'ಮಂಜತ್ತೇ ನಿಮ್ ತಲೀ ಮೇಲ್ ಕಾಣಿ.'-ಒಂದು ಬಾಲ ಎಚ್ಚರಿಸುತ್ತದೆ.
'ಯಾರ್ ಮಣ್ಯಾ ಅದ್!ಮಿಂದ್ ಮಡಿ ಮಡೀ ಹೊರಟವಳಿಗೆ...'
ಮತ್ಯಾರಲ್ಲ, ಅದು ಸಣ್ಣಣ್ಣಯ್ಯನೇ ಹಾಕಿದ್ದು! ನಮ್ಮದೂ ಪಂಥ ಬೇಕಾದರೆ!
ಅಗೋ, ಸಣ್ಣಣ್ಣಯ್ಯ ಬಾಗಿಲಡ್ಡ ನಿಂತೂ ಏನೂ ತಿಳಿಯದವರಂತೆ ಎತ್ತಲೋ ನೋಡುತ್ತ ದಾರಂದಕ್ಕೆ ನಗೆ ತಟ್ಟುತ್ತಿದ್ದಾನೆ!

- ವೈದೇಹಿ.

0 comments:

Post a Comment