ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

'ಮಂಜತ್ತೆ ಬಂದ್ರ್ ಮಂಜತ್ತೆ ಬಂದ್ರ್.'
ನಾಳೆ ತೇರೆಂದರೆ ಇವತ್ತೇ ಮಂಜತ್ತೇ ಬಂದಾಯಿತಲ್ಲ!ಗರುಡನ ಕಟ್ಟಿದ ಹಬ್ಬ ಬಿಡುವುದಿಲ್ಲ ತೋರನ ಕಟ್ಟಿದ ಮದುವೆ ಬಿಡುವುದಿಲ್ಲ ಎಂದು ಅಡ್ಡದಲ್ಲಿ ಹೇಳಿಸಿಕೊಳ್ಳುವ ಮಂಜತ್ತೆ.ಕುಂಕುಮ ಬೊಟ್ಟು ತುರುಬು ಹೂವು ಬಣ್ಣದ ಸೀರೆ ಕಾಲುಂಗುರ ಒಂದೂ ಇಲ್ಲದೆಯೂ ಆಕೆ ಬರುವಾಗ ಸಂಭ್ರಮದ ಝಿಣ್ಝಿಣ್.ಮಂಜತ್ತೆ ಸೀದ ಬಾವಿಕಟ್ಟೆಗೆ ನಡೆದರು.ಕೈಕಾಲು ತೊಳೆದರು.ಮುಖಕ್ಕೆ ನೀರು ಪಟಪಟ ಹೊಡೆದುಕೊಂಡರು.
'ಮಂಜತ್ತೆ ಮಂಜತ್ತೆ ಇವತ್ತ್ ನಿಮ್ಮೊಟ್ಟಿಗೆ ನಾನ್ ಮನ್ಕಂಬ್ದ್.'


'ನಾನಲ್ದ ಮಂಜತ್ತೆ?ಹೋಸಲಿಯೂ ಅವ್ಳ್.ಈ ಸಲಿಯೂ ಅವ್ಳೆಯಾ?
'ನಾ ಒಂದು ಸಲಿಯೂ ನಿಮ್ಮೊಟ್ಟಿಗೆ ಮನ್ಕಣ್ಲಿಲ್ಲೆ'
ಹ್ಞಂ ಹ್ಞಂ ಹ್ಞಂ ಹ್ಞಂ.ಮಂಜತ್ತೆಗೆ ಹ್ಞಂ ಅನ್ನುವುದೊಂದೇ ಕೆಲಸ.'ನಾನೇನ್ ಕತಿ ಹೇಳುತ್ತಿಲ್ಲೆ,ಕಾರ್ಣ ಹೇಳತ್ತಿಲ್ಲೆ.ಹಸೆ ಮೂಸಿ ಕಡ್ಲ್ ನಿದ್ದಿ ಹೊಡಿತೆ.ಹಾಂಗಾರೂ ಈ ಮಕ್ಳ್ ಈ ನಮ್ನಿ ಆಸಿ ಮಾಡ್ತ್ವಲೆ!...'
'ಮಂಜತ್ತೆ ಮಂಜತ್ತೆ... ಮಂಜತ್ತೆ ಮಂಜತ್ತೆ...'
ಆಯಿತು.ನಾನು ನಡೂ ಮಲಗುತ್ತೇನೆ ಸೈಯಲ್ಲ.ಈಗೊಂದು ಸಲ ಬಿಡಿ.ಒಳಗೆ ಹೋಗಿ ಗಂಟಲಿಗೆ ಏನಾದರೂ ಹಾಕಿಕೊಳ್ಳುತ್ತೇನೆ ಮೊದಲು.

ಮಂಜತ್ತೆ ಕಾಲು ನೀಡಿ ಕುಳಿತರು.ಕಾಪಿ ತಿಂಡಿ ತಿಂದರು.ಎಷ್ಟು ಹೊತ್ತಿಗೆ ಹೊರಟದ್ದು,ಇಷ್ಟು ಹೊತ್ತಿಗೆ ಮುಟ್ಟಿದೆ,ಇಷ್ಟು ತಡ ಯಾಕಾಯಿತು ಅಂತೆಲ್ಲ ಪ್ರಶ್ನೆಗಳನ್ನು ತಾನೇ ಊಹಿಸಿ ಊಹಿಸಿ ಪರಿಹರಿಸಿದರು.ಇಷ್ಟು ವರ್ಷವಾದರೂ ಜಾತ್ರೆಗೆ ನೀವು ಬಿಡದೇ ಬರುವುದು ಸಾಕು,ಆ ದೂರದಿಂದ ನಡೆದುಕೊಂಡು!-ಅಂತೆಲ್ಲ ಎಲ್ಲರೂ ಹೇಳುವವರೇ.

'ಮಂಜತ್ತೆ,ಇನ್ನಿನ್ ಇದನ್ನೆಲ್ಲ ಬಿಡಿನಿ.ಯಲ್ಲಾರು ನಡೂ ರಸ್ತಿ ಮೇಲೆ ಬಿದ್ಗಿದ್ರೆ ಯೇನ್ ಗತಿ!ಯಾರ್ ಯೇನ್ ಗುತ್ತಾಗ್ದೆ ಕಡೆಗೆ ಪಂಚಾಯ್ತ್ ಬೋರ್ಡ್ ನವ್ ಯೆತ್ತಿ ಹಾಕ್ತೊ.'
ಈ ಮಾತು ಕೇಳಿ ಮಂಜತ್ತೆ ನಗೆ.'ಸತ್ ಹೆಣ ಯತ್ತ್ ಮುಖ್ನೆ ಬಿದ್ರ್ ಯೇನಾ?ಜೀವ ಇಪ್ಪಲ್ತೊಟ್ ರತ್ರಣ ಕಾಣ್ದೆ ಕಳಿಯ.ಒಂದ್ ರತ್ರಣ ಕಂಡ್ರೆ ಯಾಗ ಮಾಡಿದಷ್ಟ್ ಪುಣ್ಯ ಗೊಯ್ತಾ?'

(...ರತ್ರಣ ಅಂದ್ರೆ?)
ಹೂಗಿನ ಮಿಣ್ಕನೂ ಹೇಳಿ ಕಳಿಸಿದ ಹಾಗೆ ಬಂದಿದ್ದಾಳೆ.'ಅಮ್ಮ,ವೋ ಅಮ್ಮ,ಶ್ಯಾಮಂತ್ಗಿ ಬೇಕೇ?-ಜಗುಲಿಗೆ ತಾಗಿ ನಿಂತು ಕೂಗುತ್ತಿದ್ದಾಳೆ.
ಅದು ಹೇಗೆ ನಾನು ಬಂದದ್ದು ಗೊತ್ತಾಯಿತಾ ಮಿಣ್ಕ ನಿನಗೆ?-
ಗೊತ್ತಾಗದೆ!ರಾತ್ರಿ ಕನಸು ಬಿದ್ದದ್ದಲ್ಲವೆ ತನಗೆ 'ಮಂಜಮ್' ಬರುತ್ತಾರೆಂದು?-ಎಲ್ಲರೂ ಕುಶಾಲು ಮಾತಾಡುವವರೇ.ನಾಳೆ ಜಾತ್ರೆ,ಇವತ್ತೇ ಗೆಲ,ಅಮ್ಮ ಅಮ್ಮ ಶಾಮಂತ್ಗಿ ತಕೋ ತಕೋ...

ಶ್ಶಿ.ಶಾಮಂತ್ಗಿ ಅಂತೆ ಶಾಮಂತ್ಗಿ!ಸ್ಯೇವಂತ್ಗೆ ಅನ್ನಲಿಕ್ಕೆ ಬರುವುದಿಲ್ಲವೆ?...ಹೂಂ ಮುನ್ನೂರು ಹೂಗು ಲೆಕ್ಕ ಮಾಡಿ ಹಾಕು ಮಾರಾಯ್ತಿ.
'ಮುನ್ನೂರ!ಮುನ್ನೂರ್ ಯತ್ತಿಗೆ ಸಾಕ್?ತಕ್ಕಣಿ ನಾನೂರಾರೂ.'
'ನಾಳೆ ಹಬ್ಬ.ಇವತ್ತೇನ್ ಹೂಗ್ ಮುಟ್ಟುಕ್ಯೆಡ್ವಾ?ಯೆಷ್ಟಾ ಮಿಣ್ಕ ನೂರಕ್ಕೆ?'-ಸುಮ್ಮನೆ ಕುಳಿತರೆ ಅವರು ಮಂಜತ್ತೆ ಅಲ್ಲ.
'ಯಷ್ಟಾರೇನ್ ಮಂಜಮ್ಮ.ನೀವ್ ಮುಡೀತ್ರಿಯಾ ಹೇಳಿನಿ!ನೀವ್ ಮುಡೂದಾರೆ ನಾನ್ ಇಡೀ ಹ್ಯೆಡ್ಗೀನೇ ಒಂದ್ ಪಾವಾಣಿ ತ್ಯೆಕ್ಕಣ್ದೆ ಸೋಂವ್ಸಿ ಹ್ವಾತಿ,'-ಮತ್ತೆ ನಗೆ ಫಳಕ್ಕೆನಿಸಿದಳು ಮಿಣ್ಕ.

ಅದೇನು ಹಂಗಣೆ ಅಲ್ಲ.ಹಂಗಣೆಯ ಸೋಂಕೇ ಇಲ್ಲದೆ ಈ ಮಿಣ್ಕ ಎಂತಹ ಸಂಗತಿಯನ್ನಾದರೂ ನಗೆ ಮಾಡಿ ಕುಶಾಲಿನೊಳಗೆ ತೂರಿಸಿಬಿಡುತ್ತಾಳೆ.ಮಂಜತ್ತೆಗಂತೂ ಕುಳಿತಲ್ಲೇ ತೂಗಿ ನಗೆ.ಮಿಣ್ಕನ ತಲೆಯ ಮೇಲೆ ಹೂವಿನ ಹೆಡಿಗೆ ಮುದ ಹಗುರ ಕುಳಿತಿದೆ.ಮಿಣ್ಕ ಮಗು ಇಳಿಸಿದಂತೆ ಅದನ್ನು ಇಳಿಸಿದಳು.ಅದರಡಿ ಇರಿಸಿದ ಬಟ್ಟೆ ಚೌಂಡೆಯನ್ನು ನೆತ್ತಿಯಿಂದೆತ್ತಿ ಕೊಡವಿ ಬದಿಗಿಟ್ಟಳು.ಹೂವಿನ ಮೇಲೆ ಹರಡಿದ ಒದ್ದೆ ವಸ್ತ್ರವನ್ನು ನಿಧಾನ ತೆಗೆದಳು...ವ್ಹ! ವ್ಹ! ಹಳದಿ ಹೂವಿನ ಸಮುದ್ರ!ಘಂಮ್ಮ!ಸೇವಂತಿಗೆಗೇ ಒಂದು ಪರಿಮಳ ಉಂಟು ಗೊತ್ತೇ?ಗುಲಾಬಿಯ ಹಂಗೇ ಇಲ್ಲದ ಪರಿಮಳವದು.ಮೂಗಿದ್ದವರಿಗೆ ಮಾತ್ರ ತಿಳಿಯುತ್ತದೆ.

'ಹಾಂಗ್ ಕಣ್ ಬಿಟ್ಕಂಡು ಕಾಣ್ಬೇಡಿನಿಯೇ ಮಂಜಮ್ಮ.ದಿಸ್ಟಿ ಆಕ್ಕ್'-ಮಿಣ್ಕ ಇನ್ನಷ್ಟು ನಗೆ ಹೊರಳಿಸಿದಳು.ಎರಡೂ ಅಂಗೈಯಲ್ಲಿ ಹೂವೆತ್ತಿಕೊಂಡು ಬೆರಳ ಚಡಿಯಲ್ಲಿ ಲೆಕ್ಕಕ್ಕಿಂತ ಹೆಚ್ಚಾದ ಹೂಗಳನ್ನು ಉದುರಿಸುತ್ತ ಐದೈದೆ ಲೆಕ್ಕ ಮಾಡುತ್ತ ಒಂದೊ ಒಂದೊ,ಎಯ್ಡೊ ಎಯ್ಡೊ...!
ಜಾತ್ರೆಗೆ ಕಾಸು ಮಾಡಿಕೊಂಡು ಮಿಣ್ಕ ಹೊರಟು ಹೋದ ಮೇಲೆಯೂ ಜಗಲಿ ಹಾಡುತ್ತದೆ.ಒಂದೊ ಒಂದೊ,ಎಯ್ಡೊ ಎಯ್ಡೊ-ಹೌದಾ!ಹೂವು ಚಿಪ್ಪಡಿಸುವುದು ಯಾರು ಕಾಂ...ತೆ ಈಗ!
ಯಾರು?ಎಲ್ಲಿದ್ದೊ?ಪುಡ್ಚೊ.

ಮಂಜತ್ತೆ ಬಾಳೆ ಹಗ್ಗ ತಂದರು.ನೆನೆಸಿದರು.ಸಿಗಿದು ಎರಡೆಳೆ ಎತ್ತಿ ಕುಣಿಕೆ ಮಾಡಿದರು.ನಾನು ಹಿಡಿದುಕೊಳ್ಳಲೆ?ಹೂಂ ವಾರೆ ಹಿಡಿಯಬೇಡ.ಬಗ್ಗಿಸಬೇಡ.ಸರ್ತ ಹಿಡಕೊ.ಛೆ...ಅಲ್ಲಾಡಿಸಬೇಡ.ಎರಡೆಯೊಳಗೆ ಒಂದೊಂದೇ ಹೂವು ಸಂಭ್ರಮದಿಂದ ಸಯಸಯನೆ ಹೋಗಿ ಜತೆ ಕುಳಿತವು.ನಾಳೇ ಅವೂ ಹಬ್ಬಕ್ಕೆ ಹೋಗುವವು.ಒಟ್ಟು ಎಷ್ಟು ದಂಡೆ'ಮಡಿಯ' ಬೇಕು?ಎಷ್ಟು ಜಡೆಯುಂಟೋ ಅಷ್ಟು.ಒಟ್ಟು ಎಷ್ಟು ಜಡೆಯುಂಟು ಲೆಕ್ಕ ಮಾಡುವಾ.ಅದು ಮಾತ್ರ ಕೂಡದು. ಯಾಕೆ? ಮಂಜತ್ತೆ ಸರಕ್ಕನೆ ತನ್ನ ತಲೆಯ ಮೇಲಿನ ಸೆರಗು ಜಾರಿಸಿದರು.
`ಕಾಣ್ . ನಂಗ್ ಜಡಿ ಇತ್ತಾ ಕಣ್. ಅದ್ಕೇ...

ಅದಕ್ಕೆ, ಏನು? ಏನೋ ಈ ಮಂಜತ್ತೆಯದು. ಕಟ್ಟಿದ ದಂಡೆಗಳು ಮಣೆಯ ಮೇಲೆ ಹಾಸಿದ ಒದ್ದೆ ಪಾಣಿಪಂಜಿಯ ಮೆಲೆ ಮಲಗಿದವು. ಮೇಲೆ ಪಂಜಿಯ ಇನ್ನೊಂದು ತುದಿಯನ್ನು ತಂಪಾಗಿ ಹೊದೆದವು. ಇನ್ನು ಬೆಳಿಗ್ಗೆಯೇ ಏಳುವುದು! ಫಳಾರ ಮುಗಿಸಿ ಮಾತಾಡುತ್ತ ಆಡುತ್ತ ನಡೂ ಮಧ್ಯೆ ಹಾಸಿಗೆಯಲ್ಲಿ ಮಂಜತ್ತೆಯೂ ಮಲಗಿದರು. ಬೆಳಗ್ಗೆ ಬೇಗ ಕಪ್ಪಿರುವಾಗಲೇ ಹೊರಡುವಳು ತಾನು.
`ನಮ್ಮನ್ನೂ ಎಬ್ಸಿ ಮಂಜತ್ತೆ. ನಾವು ಸಾ ಈ ಸಲ ನಿಮ್ಮೊಟ್ಟಿಗ್ ಬತ್ತೊ.'
`ಅಕ್ಕಲೆ, ಅಮ್ಮ್ ನತ್ರ ಕೇಣಿ'

ಮಾತು ಸಾಕು. ಮಲಗುವ. ಬೆಳಗ್ಗೆ ಬೇಗ ಏಳಬೇಕಲ್ಲ. ಯಾರಿಗೆ ಫಸ್ಟ್ ಎಚ್ಚರಾಗುತ್ತದೋ ಅವರು ಇನ್ನೊಬ್ಬರನ್ನು ಎಬ್ಬಿಸಬೇಕು. ಮಂಜತ್ತೆ ಎಬ್ಬಿಸದೆ ಹಾಗೆಯೇ ಹೋದರೂ ಹೋದರೇ...

ಮುಂದುವರಿಯುವುದು...
ವೈದೇಹಿ.

0 comments:

Post a Comment