ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ


ಜಿಗಿ-ಜಿಗಿ ಮಳೆ,ಚುಮು-ಚುಮು ಚಳಿಯಲ್ಲಿ ಮೂಡುಬಿದ್ರೆಯಿಂದ ಹೊರಟು ಮಂಜು ಕವಿದು ರಸ್ತೆಯೇ ಕಾಣದೆ,ಜೀವ ಕೈಲಿಟ್ಟುಕೊಂಡು ಆಗುಂಬೆ ಘಾಟಿಯಲ್ಲಿ ಕಾರು ತಡವರಿಸುತ್ತಾ ಮುಂದೆ ಸಾಗಿದಾಗ ಮಳೆಗಾಲದ ಮಲೆನಾಡ ರಮಣೀಯ ಚಿತ್ರ ಕಣ್ಮುಂದೆ ಮತ್ತೆ ಮೈದೊಳೆದು ನಿಂತಿತು.


ದಟ್ಟ ಹಸಿರ ಕಾಡು,ಸುತ್ತಲೂ ಮೋಡದ ಮುಸುಕು ಹಾಕಿ ಹುಕ್ಕಾ ಸೇದುತ್ತಾ ಗುಮ್ಮನೆ ಕುಳಿತಂತೆ ಕಾಣುವ ಬೆಟ್ಟ-ಗುಡ್ಡ,ನಡು-ನಡುವೆ ಎಗ್ಗಿಲ್ಲದೆ ಹಿಗ್ಗಿನಿಂದ ಉಕ್ಕುತ್ತಿರುವ ಜಲಪಾತಗಳು,ಅಲ್ಲಲ್ಲಿ ಯೌವನ ಮೈ ತುಂಬಿ ವೈಯಾರದಿಂದ ಬಳಕುತ್ತಿರುವ ಹಳ್ಳ-ತೊರೆಗಳು...ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಹೋಗುವ ಭರದಲ್ಲಿ ಪ್ರವಹಿಸುವ ನದಿಗಳು...ಹಸಿರ ವೆಲ್ವೆಟ್ ಹಾಸಿದಂತೆ ಕಾಣುವ ಗದ್ದೆ ಮಧ್ಯೆಯಲ್ಲಿ ಕಂಬಳಿ ಕೊಪ್ಪೆ ಹೊದ್ದು ದುಡಿವ ರೈತ.ಅಬ್ಬಾ!ಮೊದಲೇ ಸೊಬಗಿಗೆ ಹೆಸರಾದ ಮಲೆನಾಡ ಸೌಂದರ್ಯ ವೈಭವವಂತೂ ಮಳೆಯಲ್ಲಿ ಚಿನ್ನದ ಪುತ್ಥಳಿಯಂತೆ ಕಂಗೊಳಿಸುತ್ತಿತ್ತು.

ಮಲೆನಾಡಿನಲ್ಲೇ ಹುಟ್ಟಿ ಬೆಳೆದ ನನಗೆ ಅಲ್ಲಿನ ತಂಪಾದ ನಿಸರ್ಗದ ಬೆಲೆ ಗೊತ್ತಾದದ್ದು ದಕ್ಷಿಣ ಕನ್ನಡದ 'ಬಿಸಿ'ಯಲ್ಲಿ ಬೆವರಿದಾಗ.
ಮಳೆಗಾಲದಲ್ಲಿ ಮಲೆನಾಡು ಎಷ್ಟು ಸುಂದರವೋ ಅಷ್ಟೇ ಭಯಾನಕವೂ ಹೌದು..ಬಯಲು ಸೀಮೆಯಿಂದ ಬಂದವರಿಗಂತೂ ಇಲ್ಲಿನ ಮಳೆ ಸಿಂಹ ಸ್ವಪ್ನವೇ ಸರಿ.ಇಡೀ ದಿನ ಭೋ... ಎಂದು ಹನಿ ಕಡಿಯದೆ ಸುರಿವ ಕುಂಭದ್ರೋಣ ಮಳೆ,ಸೂರ್ಯನಂತೂ ಸುಮಾರು ನಾಲ್ಕು ತಿಂಗಳುಗಳ ಕಾಲ ಧೀರ್ಘ ರಜೆ ಘೋಷಿಸಿ ಮಲೆನಾಡತ್ತ ಇಣುಕಿಯೂ ನೋಡದಂತಹ ಮೋಡ ಕವಿದ ಕತ್ತಲ ವಾತಾವರಣ.ಮೋರಿಕಟ್ಟೆ ಒಡೆದೋ,ನದಿಯುಕ್ಕಿ ರಸ್ತೆ ಮುಳುಗಿಯೋ ದಿನಗಟ್ಟಲೇ ವಾಹನ ಸಂಚಾರ ಸ್ಥಗಿತ...ಬಿದ್ದ ಮರಗಳಿಂದ ತುಂಡಾದ ವಿದ್ಯುತ್ ತಂತಿ...ಚಿಮಣಿ ಬೆಳಕು...ಹೊಗೆಯಲ್ಲೇ ದಿನಚರಿ...ಸೋರುವ ಮಾಡು...ಒಣಗದೇ ಮುಗ್ಗುಲು ವಾಸನೆ ಬೀರುವ ಥಂಡಿ ಬಟ್ಟೆ...ಆದ್ರತೆಗೆ ಲಡ್ಡಾದ ದಿನಸಿ...ಹಸಿಯಾದ ಕಟ್ಟಿಗೆ,ಮುನಿದ ಒಲೆ ಕಾರುವ ಹೊಗೆ...ಕೆಂಡದಲ್ಲಿ ಸುಟ್ಟು ಕೊಬ್ಬರಿ ಎಣ್ಣೆ ಸವರಿದ ಹಲಸಿನ ಹಪ್ಪಳ...ಕಳಲೆ...ಕೆಸು...ಹುರುಳಿ ಕಟ್ಟಿನ ಸಾರು...ಬಾಲ್ಯದ ಅನುಭವಗಳೇ ಬೆಚ್ಚಗೆ ನನ್ನನ್ನಾವರಿಸಿದವು.

ಆಗುಂಬೆ,ಗುಡ್ಡೇಕೇರಿ,ನಾಲೂರು ದಾಟಿ ಮೇಗರವಳ್ಳಿ ಪ್ರವೇಶಿಸುತ್ತಿದ್ದಂತೆ ನನ್ನಲ್ಲೇನೊ ಪುಳಕ.ಮಳೆ ರಾಚುತ್ತಿದ್ದರೂ ಕಿಟಕಿ ಗಾಜು ಇಳಿಸಿ ತಲೆ ಹೊರಹಾಕಿದಾಗ ರಸ್ತೆ ಬದಿಯಲ್ಲಿ ಛತ್ರಿ ಹಿಡಿದು ಯೂನಿಫಾರಂ ಹಾಕಿ ಚರಂಡಿ ನೀರಿನಲ್ಲಿ ಪಚ ಪಚ ಎಂದು ಕುಪ್ಪಳಿಸುತ್ತಾ ಸ್ಕೂಲಿನಿಂದ ಮನೆಗೆ ಹಿಂದಿರುಗುತ್ತಿದ್ದ ನನ್ನನ್ನೇ ನಾ ಕಂಡಂತಾಯಿತು.

ಜೊರ್ರೋ...ಎಂದು ಹಠ ಕಟ್ಟಿ ಸುರಿವ ಮಳೆ...ನಮ್ಮನ್ನೇ ಹಾರಿಸಿಕೊಂಡು ಹೋಗುವಂತಹ ಗಾಳಿ...ನೆಪ ಮಾತ್ರಕ್ಕೆ ಛತ್ರಿ...ಮೈ,ಬಟ್ಟೆ,ಬ್ಯಾಗ್,ಪುಸ್ತಕವೆಲ್ಲಾ ಒದ್ದೆ-ಮುದ್ದೆ...ಚಳಿಯಲ್ಲೇ ಮುದುಡಿ ಕುಳಿತು ಪಾಠ ಕೇಳುತ್ತಿದ್ದ ನಮಗೆ ಮೇಷ್ಟ್ರ ಬೆತ್ತದ ಬಿಸಿ ಏಟಿನ ಹಿತವಾದ ಅನುಭವ...ಹಳ್ಳಿಯಿಂದ ಬರುತ್ತಿದ್ದ ಮಕ್ಕಳು ಕಾಲಿನಲ್ಲಿ ತರುತ್ತಿದ್ದ ಇಂಬಳ,ತರಗತಿ ತುಂಬಾ ತೊಟ್ಟಿಕ್ಕುತ್ತಿದ್ದ ರಕ್ತ...ಕೂಗಾಟ,ಹುಡುಕಾಟ...ಮಳೆಯನ್ನೂ ಲೆಕ್ಕಿಸಿದ ಆಟದ ಹುಚ್ಚು...ಪಾಚಿ ಕಟ್ಟಿದ ಮೈದಾನ...ಕಾಲು ಜಾರಿ ಬಿದ್ದಾಗ ಬಟ್ಟೆಗೆ ಮೆತ್ತಿದ ಕೆಸರ ತೊಳೆದು ಕೊಳ್ಳಲು ಚರಂಡಿ ನೀರೇ ಆಧಾರ...ಮನೆಗೆ ಬಂದಾಗ ಅಮ್ಮನ ಬೈಗುಳ ಜೊತೆಗೇ ಬಿಸಿ ಬಿಸಿ ಕಾಫಿ...ಅಪ್ಪ ಬಚ್ಚಲ ಒಲೆಯ ಕೆಂಡದಲ್ಲಿ ಸುಟ್ಟು ರೆಡಿಯಿಟ್ಟಿರುತ್ತಿದ್ದ ಹಲಸಿನ ಬೀಜ...ಥಂಡಿಯೇರಿ ರಾತ್ರಿ ಕಾಲು ಸೆಳೆಯಲಾರಂಭಿಸಿದಾಗ ಅಮೃತಾಂಜನದ ಜೊತೆ ಮಮತೆಯ ಬೆರೆಸಿ ಮಸಾಜು ಮಾಡುತ್ತಿದ್ದ ಅಮ್ಮ...ಶೀತ...ಕೆಮ್ಮು..ಜ್ವರ.ಈಗ ಎಲ್ಲವೂ ಕೇವಲ ನೆನೆಪಷ್ಟೇ.ಸುರಿವ ಮಳೆಯ ಸೀಳಿ ಕಾರು ನುಗ್ಗುತ್ತಿತ್ತು.ಚಳಿಯಿಂದ ಹೆಪ್ಪುಗಟ್ಟಿದ ಮುಖ...ಕೆನ್ನೆಯ ಮೇಲೆ ಬಿಸಿ ಕಣ್ಣೀರು ಇಳಿದಾಗಲೇ ನೆನಪಿನ ಸುಳಿಯಿಂದೆದ್ದು ವಾಸ್ತವಕ್ಕೆ ಮರಳಿದ್ದು..ತೊಡೆಯ ಮೇಲೆ ಮಲಗಿದ್ದ ಕಂದ ಚಳಿಯಿಂದ ನಡುಗುತ್ತಿರುವುದ ಅರಿತು ಸರಸರನೆ ಗಾಜನ್ನೇರಿಸಿ ಸೀಟಿಗೊರಗಿ ಕಣ್ಮುಚ್ಚಿದೆ.

ದೂರಾದ ಮಲೆನಾಡು...ಮಗ್ಗಲು ಬದಲಿಸಿದ ಬದುಕು,ಹೊಸ ನೀರ ರಭಸಕ್ಕೆ ಕೊಚ್ಚಿ ಹೋದ ಹಳೆ ನೀರು...ತೇಲಿ ಹೋದ ಬಾಲ್ಯ,ಮುಗ್ಧತೆ,ಸ್ವಾತಂತ್ರ್ಯ,ನಿಶ್ಚಿಂತೆ..ಋತುಗಳು ಮರುಕಳಿಸಿದಂತೆ ಕಳೆದು ಹೋದ ಆ ದಿನಗಳು ಮತ್ತೆ ಬಾರದೇ ಎನಿಸಿತು...ಚಳಿಯಲ್ಲಿ ಏಳುವ ಮನಸ್ಸಿಲ್ಲದೆ ಹೊದಿಕೆಯೊಳು ಮುದುಡಿ-ಮುದುಡಿ ಮಲಗುವಂತೆ ನೆನಪಿನ ಅಮಲಿನಿಂದ ಹೊರ ಬರಲಿಚ್ಚಿಸದೆ ಅನುಭವಗಳ ಪದರದೊಳುಮತ್ತೆ ತೂರುವ ಪ್ರಯತ್ನ ಮಾಡಿದೆ.ಕಾರಿನ ವೈಪರ್ರಿನಂತೆ ಕೈ ಕಣ್ಣೀರೊರೆಸುವ ವ್ಯರ್ಥ ಹೋರಾಟ ಮಾಡುತ್ತಿತ್ತು...

ಜಿ.ಎನ್. ದಿವ್ಯಾ ರಾವ್

0 comments:

Post a Comment