ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 7

ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳದ ತಂದೆ ತಾಯಿಯ ಮೇಲೆ ಸಿಟ್ಟಿದ್ದರೂ ಉಗುಳು ನುಂಗಿಕೊಂಡು ದಲ್ಲಾಳಿ ನರಸಿಂಹನಿಗೆ, ನೋಡಿ, ಇನ್ನು ಮುಂದೆ ಯಾವ ಸಂಬಂಧಗಳನ್ನು ನೀವು ತರುವುದು ಬೇಡ. ನನ್ನ ಮದುವೆಯ ಅನಿವಾರ್ಯತೆ ಬರುವಾಗ ನಾನೆ ಹೇಳಿ ಕಳಿಸುತ್ತೇನೆ. ಆಮೇಲೆ ನೀವು ಗಂಡು ಹುಡುಕೊ ಶಾಸ್ತ್ರ ಮಾಡಿ ಅಂದಾಗ ಸೊಕ್ಕಿನ ಹೆಣ್ಣು ಅನಿಸಿತು ಸಂಬಂಧ ತಂದವನಿಗೆ.ಊರಿಡೀ ಗುಲ್ಲು ಹರಡಿತು. 'ಆ ಹೆಣ್ಣಿಗೆ ಆಫೀಸಿನಲ್ಲಿಯೇ ಯಾರೋ ಇದ್ದಾರಂತೆ, ಮದುವೆ ಆಗುವುದಿಲ್ಲವಂತೆ' ಮಾತು ಭಾಮಿನಿಯವರ ಕಿವಿಗೆ ಬೀಳುವಾಗ ಹೌಹಾರಿದರು. ಮಗಳನ್ನು ನಿಲ್ಲಿಸಿ ಕೇಳಿದರು.


ಊರು ಏನೇನು ಅಂತು ಅಂತ ನನ್ನ ಕೇಳ್ತಿದ್ದೀರಲ್ಲ. ನಾನು ಯಾವತ್ತೂ ಅದಕ್ಕೆಲ್ಲಾ ಆಸ್ಪದ ಕೊಡುವವಳಲ್ಲ. ಯಾರು ನಿಮ್ಮ ಕಿವಿ ಊದಿದ್ರೊ ಅವರನ್ನು ಕರೆಯಿರಿ, ನಾನು ಮಾತಾಡ್ತೀನಿ ಮಾತನಲ್ಲಿಯೇ ನೋವನ್ನು ಕಕ್ಕಿಕೊಂಡಾಗ ಭಾಮಿನಿಯವರು ಬಾಯ್ಮಿಚ್ಚಿ ಕುಳಿತರು.
ಗಂಡನ ಮುಂದೆ ಗುಟ್ಟಾಗಿ ವಿಷಯವನ್ನು ಪ್ರಸ್ತಾಪಿಸಿದವರೇ ದುಃಖವನ್ನು ನುಂಗಿ ಕುಳಿತರು. ಮಕ್ಕಳು ಬೆಳೆಯುತ್ತಿರುವಾಗ ನಾವು ಹೊಂದಿಕೊಳ್ಳಬೇಕೆನ್ನುವ ಸತ್ಯವನ್ನು ಸ್ವೀಕರಿಸಲು ತಯಾರಿರಲಿಲ್ಲ. ಮತ್ಯಾಕೆ ಈ ಸಂಪ್ರದಾಯ ಕಟ್ಟಳೆಗಳೆಲ್ಲಾ? ಮಕ್ಕಳಿಗೆ ಶಿಸ್ತು, ಸಂಯಮ ಕಲಿಸಿದರೆ ತಾನೆ ಅದು ಮುಂದುವರಿಯುವುದು ಅನ್ನುವ ಗೊಡ್ಡು ಪಾಠವನ್ನು ಅವಳು ಒಳಗಿರುವಾಗಲೇ ಹೇಳಿದರು.

ಅಂದ್ರೆ... ನಿಮ್ಮ ದೃಷ್ಟಿಯಲ್ಲಿ ನಾನು ಹೊರಗೆ ಹೋಗಿ ದುಡಿಯುವುದು ತಪ್ಪಲ್ವಾ? ಅಂದಾಗ ಶ್ರೀನಿವಾಸರು ಮಡದಿಯತ್ತ ಸುಮ್ಮನಿರುವಂತೆ ಸೂಚಿಸಿದರು. ಬಗೆ ಹರಿಯದ ಸಮಸ್ಯೆಯೊಂದು ಬದುಕಿಗೆ ಎದುರಾಗಿ ನಿಂತಿದ್ದು ಕನಸ್ಸುಗಳನ್ನೆಲ್ಲಾ ಬದಿಗಿರಿಸಿದಂತೆ ಆಯಿತು. 'ಮಾತು ಆಡಿದರೆ ಹೋಯಿತು, ಮುತ್ತು ಒಡೆದರೆ ಹೋಯಿತು' ಅನ್ನುವುದನ್ನು ಮನನ ಮಾಡಿಕೊಂಡ ಬಳಿಕ ಮನೆಯಲ್ಲಿ ಮಾತಾಡುವುದನ್ನು ನಿಲ್ಲಿಸಿದಳು.
ಹಿಂಸೆ ಅನಿಸಲಿಲ್ಲ ಮನೆಯವರಿಗೂ.

ಅಲ್ಲಿಯವರೆಗೂ ಮನಸ್ವಿತಾಳ ವೈಯಕ್ತಿಕ ವಿಷಯಗಳಿಗೆ ತಲೆ ಹಾಕದ ನಿಖಿಲ್ ಆ ದಿನ ಕರೆದು ಮನೆ, ಮನೆಯವರ ಬಗ್ಗೆ ಎಲ್ಲಾ ಕೇಳಿದ. ಅವಳ ನಾಲಿಗೆ ಒಣಗಿತು. ಮಾತೇ ಆಡದವರಂತೆ ನಾಲಗೆ ತಟಸ್ಥವಾಯಿತು.
ನಿಖಿಲ್ಗೆ ಆಶ್ಚರ್ಯ!
ತೀರಾ ವೈಯಕ್ತಿಕ ವಿಷಯಗಳನ್ನು ಕೇಳಬಾರದೇನೊ ಅನಿಸಿ, ಕ್ಷಮಿಸಿ ಅಂದ.
ಅಷ್ಟರವರೆಗೂ ತಡೆ ಹಿಡಿದಿದ್ದ ದುಃಖ ಕಣ್ಣೀರಾಗಿ ಇಳಿಯಿತು.
ದಿನದಿಂದ ದಿನಕ್ಕೆ ನಿಖಿಲ್ ಎಂಟರ್ಪ್ರೈಸಸ್ನ ವ್ಯವಹಾರ ಏರುತ್ತಲೇ ಹೋಗುವುದರ ಹಿಂದೆ ಮನಸ್ವಿತಾಳ ಕಾಲ್ಗುಣವೇ ಕಾರಣವೆಂಬ ನಿರ್ಧಾರಕ್ಕೆ ಬಂದ ನಿಖಿಲ್, ಮನಸ್ವಿತಾಳನ್ನು ತನ್ನ ಛೇಂಬರ್ಗೆ ಕರೆದ. ಅವಳನ್ನು ಹೊಗಳಲೇ ಬೇಕೆನ್ನುವ ನಿರ್ಧಾರವಿದ್ದಂತೆ ಕಾಣಲಿಲ್ಲ. ಆದರೂ ಸಂಸ್ಥೆಯ ಒಂದು ಗಟ್ಟಿ ಪಿಲ್ಲರ್ ಆಗಬಲ್ಲ ಅವಳ ಮೇಲೆ ಅತೀವ ನಂಬಿಕೆಯೆನಿಸಿತು. ಮುಂದೆ ನಿಖಿಲ್ ಎಂಟರ್ಪ್ರೈಸಸ್ನ ಒಂದು ಭಾಗದ ಪಾಲುದಾರಿಕೆಯನ್ನು ಅವಳ ಹೆಗಲಿನ ಮೇಲೆರಿಸಲು ನಿರ್ಧರಿಸಿದ್ದ.

ಅದಕ್ಕಾಗಿಯೇ ಅವಳ ವೈಯಕ್ತಿಕ ಬದುಕಿನ ಆಚೆ ಈಚೆಗಳನ್ನು ತಿಳಿದುಕೊಳ್ಳಬೇಕಿತ್ತು. ಆದರೆ ಅವಳ ಮನಸ್ಥಿತಿ ಸರಿಯಿಲ್ಲದಂತೆ ದುಃಖ ತಳೆದ ಸಂಗತಿ ಏನೆಂದು ಅರಿಯಲಾರ. ವೈಯಕ್ತಿಕ ವಿಷಯವನ್ನು ಕೇಳಿದ್ದೇ ಹೀಗಾಯಿತೇನೊ ಅನಿಸಿದರೂ ಅಷ್ಟೊಂದು ಸೆನ್ಸಿಟಿವ್ ಹೆಣ್ಣಲ್ಲವೆನಿಸಿತು.
ಕ್ಷಮಿಸಿ, ನಿಮಗೆ ಇಷ್ಟವಿಲ್ಲದಿದ್ದರೆ ಬೇಡ ಅವಳ ಸಂಕೋಚಕ್ಕೆ ಒಂದು ಅರ್ಥ ಕಲ್ಪಿಸಿದ ಮೇಲೆ ಹೇಳಿದ. ಕಣ್ಣೀರನ್ನು ಒರೆಸಿಕೊಂಡು, ದಯವಿಟ್ಟು ಕ್ಷಮಿಸಿ. ಮುಂದೆ ನಾನಾಗಿಯೇ ತಿಳಿಸುತ್ತೇನೆ ಹೇಳಿದುದರ ಹಿಂದೆ ಯಾವುದೋ ಸಂಕೋಚ ಕಾಣಲಿಲ್ಲ. ಬದುಕಿನಲ್ಲಿ ನೊಂದವಳೇನೋ ಅನಿಸಿತು. ಮೌನವಾದ.

ಅವಳು ಚೇಂಬರ್ನಿಂದ ಹೊರಟ ಮೇಲೂ ಕೆನ್ನೆಯ ಮೇಲೆ ಇಳಿದ ನೀರ ಹನಿಗಳು ಚುಚ್ಚಿದಂತಾಯಿತು. ಬಲವಾದ ಕಾರಣವಿಲ್ಲದೆ ಸೆನ್ಸಿಟಿವ್ ತರಹ ವರ್ತಿಸಲು ಸಾಧ್ಯವಿಲ್ಲ. ನಿಖಿಲ್ ಎಂಟರ್ಪ್ರೈಸಸ್ನ ಏಳಿಗೆಯ ಹಿಂದೆ ಅಚ್ಚೊತ್ತಿ ನಿಲ್ಲಬಹುದಾದ ಸ್ವಾರ್ಥರಹಿತ ಸೇವೆಗೆ ಟೊಂಕಕಟ್ಟಿ ನಿಂತವಳಂತೆ ಕಾಣುವ ಹೆಣ್ಣಿನ ಮೇಲೆ ಗೌರವವಿದ್ದೇ ಇತ್ತು.


ಸಂಜೆಯ ಹೊತ್ತು ಬೇಗನೆ ಹೊರಟ. ಕಪ್ಪು ಬಣ್ಣದ ಉದ್ದನೆಯ ಕಾರು ಸದ್ದಿಲ್ಲದೆ ಬಂದು ಪೊರ್ಟಿಕೋದಲ್ಲಿ ನಿಂತಾಗ ವಾಣಿಶ್ರೀಯವರಿಗೆ ಗೊಂದಲವಾಯಿತು. ನಾಲ್ಕು ಹೊತ್ತು ಆಫೀಸು ಆಫೀಸು ಎಂದು ಬಡಕೊಳ್ಳುತ್ತಿದ್ದವ ಏಕಾಏಕಿ ಹೀಗೆ ಬಂದು ಇಳಿದಿದ್ದೇಕೆ? ಹುಬ್ಬುಗಳನ್ನು ಗಂಟಿಕ್ಕಿ ನೋಡಿದರು.

ನಾಳೆಗೆ...

- ಅನು ಬೆಳ್ಳೆ.
ಗ್ರಾಫಿಕ್ಸ್ : ಆದೂರು.

0 comments:

Post a Comment