ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 13

ಸ್ವಚ್ಛಂದದ ಬದುಕು ಅದೇ ಅನಿಸುತ್ತಿತ್ತು. ವಿಶಾಲವಾದ ಅಂಗಳ, ಜೊತೆಗೆ ನಾಯಿ, ಬೆಕ್ಕು, ಆಕಳುಗಳನ್ನು ನೋಡಿ ಖುಷಿ ಪಡುವ ದಿನಗಳವು. ಅವುಗಳ ಮೈ ದಡವಿ ಹರುಷ ಪಟ್ಟುಕೊಳ್ಳುತ್ತಿದ್ದ. ಅಲ್ಲಿಂದ ಹೊರಡುವಾಗ ತಾಯಿ ಕಣ್ಣೀರು ಮಿಡಿದಾಗ ಆತ್ಮರಾಮ್ ಕೆಚ್ಚದೆಯವರಾದರೂ ತಮ್ಮನ್ನು ಅಗಲಿದ ಮಡದಿಯ ನೆನಪಾಗುತ್ತಲೇ ಉಗುಳು ನುಂಗಿಕೊಳ್ಳುತ್ತಿದ್ದರು. ಇದೆಲ್ಲ ಅರ್ಥವಾಗುವ ಹೊತ್ತಿಗೆ ಅಜ್ಜ ಅಜ್ಜಿಯನ್ನು ಕಳೆದುಕೊಂಡಿದ್ದ ಅಶುತೋಶ್. ತಂದೆ ಊರಿಗೆ ಬಂದರೂ ಅಜ್ಜಿ ಮನೆಗೆ ಕರೆದುಕೊಂಡು ಹೋಗದಿರುವುದು ಆಶ್ಚರ್ಯವಾದರೂ ಅದನ್ನು ಹೇಳಿ ಅಲ್ಲಿಗೆ ಹೋಗುವ ಇಚ್ಛಿಯನ್ನು ವ್ಯಕ್ತಪಡಿಸುವ ಉಪಾಯಗಳೇ ಹೊಳೆಯುತ್ತಿರಲಿಲ್ಲ.


ಅವಾಗೆಲ್ಲಾ ಹರಿಣಮ್ಮನ ಜೊತೆಗೆ ಓಡಾಡಿಕೊಂಡಿರುತ್ತಿದ್ದುದೇ ಹೆಚ್ಚು. ತಂದೆ ಒಂದು ಪುಸ್ತಕ ಕೈಯಲ್ಲಿ ಹಿಡಿದುಕೊಂಡು ಕುಳಿತರೆ ಲೋಕವನ್ನೇ ಮರೆಯುತ್ತಿದ್ದರು. ಊಟ, ತಿಂಡಿಗೆಲ್ಲಾ ಹರಿಣಮ್ಮನೇ ಎಚ್ಚರಿಸಬೇಕು. ಆವಾಗ ಎದ್ದು ಮಗನನ್ನು ಹತ್ತಿರ ಕೂರಿಸಿಕೊಂಡು ವಿಮಾನಗಳ ಬಗ್ಗೆ, ತಾವು ಅವುಗಳಲ್ಲಿ ಹೋಗಿ ಬರುತ್ತಿದ್ದ ವಿಷಯಗಳೆನ್ನೆಲ್ಲಾ ಬಹಳ ಸ್ವಾರಸ್ಯಕರ ರೀತಿಯಲ್ಲಿ ಹೇಳುತ್ತಿದ್ದರೆ ಕಿವಿ, ಕಣ್ಣುಗಳೆರಡನ್ನು ಅರಳಿಸಿ ಕೇಳಿಕೊಳ್ಳುತ್ತಿದ್ದ.

ಆಗ ಅವನದ್ದೆ ಇಮ್ಯಾಜಿನೇಷನ್ನಲ್ಲಿ ಅವುಗಳು ಪುಟ್ಟ ಹೃದಯವನ್ನು ತಟ್ಟಿ ಬೃಹತ್ ಕನಸುಗಳನ್ನು ಕಟ್ಟಿಕೊಡುತ್ತಿದ್ದವು.
ಮುಗ್ಧತೆಯಿಂದ ತಂದೆಯನ್ನು ಸಾವಿರ ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆಯುತ್ತಿದ್ದ. ಎಷ್ಟೆಂದರೂ ಮಿಲಿಟಿರಿಯ ಶಿಸ್ತಿನ ಜೀವನ. ಅತಿಯಾಗಿ ಬೆರೆಯುವ ಹಾಗಿರಲಿಲ್ಲ. ಊಟ ಮುಗಿಸಿ ಎದ್ದ ಬಳಿಕ ಮೌನವಾಗಿ ಸಿಟೌಟ್ನಲ್ಲಿ ಈಸಿಚೇರ್ ಮೇಲೆ ಕುಳಿತು ಪುಸ್ತಕ ಹಿಡಿಯುತ್ತಿದ್ದರು. ನೆನಪಾಗಿ ಕಾಡಿದ ಮಡದಿಯನ್ನು ಮರೆಯಲು ಇದಕ್ಕಿಂತ ಬೇರೆ ಔಷಧಿಯಿಲ್ಲವಾಗಿತ್ತು.


ಎರಡು ತಿಂಗಳುಗಳ ರಜೆ ಹೇಗೆ ಮುಗಿಯುತ್ತಿತ್ತೆಂದು ಅವರಿಗೆ ಅನಿಸದಿದ್ದರೂ ಅಶುತೋಶ್ನಿಗೆ ತಂದೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಅನ್ನುವ ಅನುಭವಕ್ಕಿಂತಲೂ ದುಃಖವೇ ಹೆಚ್ಚಾಗುತ್ತಿತ್ತು.
ಮಗನನ್ನು ಕರೆದುಕೊಂಡು ಹೋಗಿ ಬೋರ್ಡಿಂಗ್ ಸ್ಕೂಲ್ಗೆ ಸೇರಿಸುವ ನಿರ್ಧಾರ ತೆಗೆದುಕೊಂಡಾಗ ಹರಿಣಮ್ಮ ಅವನ ಸಮಸ್ತ ಜವಾಬ್ದಾರಿಯನ್ನು ತಾನೇ ವಹಿಸಿಕೊಳ್ಳುವ ಪ್ರಾಮಿಸ್ ಮಾಡಿದಾಗ ಸಂತೋಷದಿಂದ ಒಪ್ಪಿಕೊಂಡರು. ಜೀವನದಲ್ಲಿ ಕಟ್ಟು ನಿಟ್ಟಿನ ಪಾಲಿಸಿಗಳೆನ್ನೆಲ್ಲಾ ಮಗನ ಮೇಲೆ ಹೇರಲಾರರು. ತಾಯಿಯ ಪ್ರೀತಿಯಿಂದ ವಂಚಿತನಾದ ಮಗನನ್ನು ಮನ ಬಂದಂತೆ ಬೆಳೆಯಲು ಬಿಟ್ಟರೂ, ಹರಿಣಮ್ಮನಂತಹ ಹೆಂಗಸು ತನ್ನಲ್ಲಿ ಪ್ರೀತ್ಯಾದರಗಳಿಂದ ಬಹಳ ಶಿಸ್ತಿನಿಂದ ಸಾಕಿದಾಗ ಹೆಮ್ಮೆ ಪಟ್ಟಿದ್ದರು. ಯಾವ ಅನುಬಂಧ ಮಾಲೆಯೋ ಏನೊ? ಹೀಗೊಂದು ರೀತಿ ಅವರ ಬದುಕಿನಲ್ಲಿ ಪ್ರವೇಶಿಸಿತ್ತು. ತನಗಿಂತಲೂ ಐದಾರು ವರ್ಷ ಹಿರಿಯಾಕೆ ಸಹೋದರಿಯಂತೆ ಕಂಡರು. ಅಪರೂಪಕೊಮ್ಮೆ ಫೋನ್ ಮಾಡಿ ಮಗನ ಬಗ್ಗೆ ವಿಷಯ ತಿಳಿದುಕೊಳ್ಳುತ್ತಿದ್ದರು. ಅಂತೂ ಅವನೊಂದು ಸೇಫ್ ಕೈಗಳಲ್ಲಿ ಬೆಳೆಯುತ್ತಿರುವುದು ಸಮಾಧಾನದ ವಿಷಯವಾಗಿತ್ತು.

***
ಅರವಿಂದ್ ಬಗ್ಗೆ ಏನೊಂದು ಮಾಹಿತಿಗಳು ತಿಳಿಯದಾದಾಗ ಆ ವಿಷಯವನ್ನು ಅಲ್ಲಿಗೆ ಬಿಟ್ಟು ಬಿಡಬೇಕೆಂದುಕೊಂಡಳಾದರೂ ಕಂಪ್ಯೂಟರ್ ತೆರೆದಾಗ ಮೇಲ್ ಅಲರ್ಟ್ಟನಲ್ಲಿ ಅವನದೇ ಮೇಲ್ ಕುಳಿತಿರುವುದು, ಪದೇ ಪದೇ ಅವನನ್ನು ಜ್ಞಾಪಿಸುತ್ತಿತ್ತು ಮನಸ್ವಿತಾಳಿಗೆ. ನೇರವಾಗಿ ಅವನಿಗೆ ಹೀಗೆಲ್ಲಾ ಮೈಲ್ ಕಳುಹಿಸಬಾರದಾಗಿ ಪ್ರತ್ಯುತ್ತರ ಕೊಡಬೇಕೆಂದು ಯೋಚಿಸುತ್ತಿದ್ದಳಾದರೂ ಅಂತಹ ಧೈರ್ಯವಿರಲಿಲ್ಲ. ಮುಂದೆ ಅದೊಂದು ದೊಡ್ಡ ಅನಾಹುತಕ್ಕೆ ಕಾರಣವಾದೀತೆನ್ನುವ ಆತಂಕವಿರದಿರಲಿಲ್ಲ.

ಬೆಂಗಳೂರಿನಿಂದ ಹಿಂದಿರುಗಿದ ಬಳಿಕ ನಿಖಿಲ್ ಬಗ್ಗೆ ಇನ್ನಷ್ಟು ವಿಶ್ವಾಸ ಬೆಳೆಸಿಕೊಂಡಿದ್ದಳು. ಹಿಂದಿನಂತೆ ಇದ್ದ ಅಳುಕು ಮತ್ತು ಆತನ ಮೇಲೆ ಹೆದರಿಕೆಯಿಲ್ಲವಾದರೂ ಆತನನ್ನು ಬಾಸ್ ಎಂದು ಒಪ್ಪಿಕೊಂಡ ಮೇಲೆ ಆ ತರಹದ ಸಂಬಂಧವನ್ನು ಉಳಿಸಿಕೊಳ್ಳಬೇಕಿತ್ತು. ಸಂಸ್ಥೆಯಲ್ಲಿ ಪ್ರತಿಯೊಂದು ವಿಷಯದಲ್ಲಿಯೂ ಆತನಿಗೆ ಏಕಪ್ರಕಾರ ಡಿಸಿಷನ್ ತೆಗೆದುಕೊಳ್ಳುವ ಅಧಿಕಾರವಿದ್ದರೂ, ಮನಸ್ವಿತಾಳ ಬಳಿ ವಿಚಾರಿಸಿ, ವಿಶ್ಲೇಸಿದ ಬಳಿಕವೇ ನಿರ್ಧಾರ ತೆಗೆದುಕೊಳ್ಳುತ್ತಿದ್ದ.

ಆ ಸಲುಗೆಯನ್ನು ಅವಳೆಂದೂ ಮೀರುವ ಯೋಚನೆಯನ್ನು ಮಾಡಿರಲಿಲ್ಲ. ಸಂಸ್ಥೆಯ ಉನ್ನತಿಗಾಗಿ ಅವಳ ಪಾಲು ಬಹು ದೊಡ್ಡದೆಂದು ಸ್ಪಷ್ಟವಾಗಿ ತಿಳಿದಿದ್ದ. ಮುಂದೊಂದು ದಿನ ಸಂಸ್ಥೆ ವಿಶ್ವ ಖ್ಯಾತಿಯನ್ನು ಪಡೆಯುವುದು ಮಾತ್ರವಲ್ಲ ವಿಶ್ವ ಮಾರುಕಟ್ಟೆಯಲ್ಲಿ ಹೆಸರು ಗಳಿಸುವುದೆನ್ನುವ ಆಸೆ ನಿಖಿಲ್ ಎಂಟರ್ಪ್ರೈಸಸ್ನ ಮಾಲಿಕನಿಗಿತ್ತು.
ಈಗ ನೀವೇ ಬೆಲೆ ಕಟ್ಟಿರೊ ಆ ಮನೆಯನ್ನು ಹಾಗೇ ಬಿಡುವುದು ಸರಿಯಲ್ಲ. ಒಂದೋ ನಮ್ಮ ಹೆಡ್ ಆಫೀಸ್ನ್ನು ಅಲ್ಲಿ ಸ್ಥಾಪಿಸಿದರೆ ಅನುಕೂಲವಾದಿತು. ಅಥವಾ ಆ ಮನೆಯನ್ನು ಬಾಡಿಗೆಗೆ ಕೊಟ್ಟು ಅದರಿಂದ ಬರುವ ಆದಾಯವನ್ನು ಬಿಸಿನೆಸ್ಗೆ ಇನ್ವೆಸ್ಟ್ ಮಾಡಿದರೆ ಹೇಗೆ? ಅವಳ ಸಲಹೆಗಾಗಿ ತನ್ನ ನಿರ್ಧಾರವನ್ನು ಬಿಟ್ಟಿದ್ದ.

- ಅನು ಬೆಳ್ಳೆ.

0 comments:

Post a Comment