ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಬಡವರಾಗಿರಲಿ ಅಥವಾ ಶ್ರೀಮಂತರಾಗಿರಲಿ ಜೀವನದ ಸಿಹಿಕಹಿ ರುಚಿಯಿಂದ ತಪ್ಪಿಸಿ ಕೊಳ್ಳಲು ಸಾಧ್ಯವೇ ಇಲ್ಲ. ಜೀವನ ಒಂದಲ್ಲ ಒಂದು ರೀತಿಯಲ್ಲಿ ಅಗ್ನಿಪರೀಕ್ಷೆಯೇ ಸರಿ. ಸಾವಿಲ್ಲದ ಮನೆಯಿಲ್ಲ, ದುಃಖ ಪಡದ ಮನಸ್ಸಿಲ್ಲ. ತಪ್ಪು ಮಾಡಿಲ್ಲದ ಮನುಜನಿಲ್ಲ. ನೋವು ನಲಿವುಗಳ ನಡುವೆಯೇ ಜೀವನಚಕ್ರ ನಡೆಯುತ್ತಿರುತ್ತದೆ.


ಜೀವನ ಹೇಗೆ ಬದುಕಿದರೂ ನಡೆದು ಹೋಗುತ್ತದೆ. ಹಾಗಾದರೆ ಒಳ್ಳೆಯ ಜೀವನವನ್ನೇ ನಡೆಸಲು ನಾವು ಯಾಕೆ ಪ್ರಯತ್ನಪಡಬಾರದು. "ಅವನು ಜೀವನವೇ ಹಾಳು ಮಾಡಿಕೊಂಡ, ಅವಳದೂ ಒಂದು ಬಾಳೇ, ನನ್ನ ಜೀವನವೇ ಹಾಳಾಗಿ ಹೋಯಿತು, ಅವರಿಗೆ ಬದುಕುವುದಕ್ಕೇ ಬರುತ್ತಿಲ್ಲ, ಛೆ! ಏನು ಜೀವನವೋ, ಅವನನ್ನು ನೋಡಿಯಾದರೂ ಸ್ವಲ್ಪ ಜೀವನದಲ್ಲಿ ಬದುಕುವುದನ್ನು ಕಲಿತುಕೊ" - ಇಂತಹ ಅನೇಕ ಟೀಕೆಗಳ ಮಾತುಗಳನ್ನು ನಾವು ಸುತ್ತಾ-ಮುತ್ತಾ ಕೇಳಿರುವುದುಂಟು.

ಪ್ರಪಂಚಕ್ಕೇನೋ ಬಂದಿದ್ದೇವೆ ನಿಜ. ಪ್ರಕೃತಿಯ ವಿಕೋಪಗಳನ್ನು ಹೊರತುಪಡಿಸಿ ಸರಿಯಾದ ಜೀವನ ನಡೆಸಲು ಪ್ರಯತ್ನಿಸುವುದು ಹೇಗೆ? ಸರಿಯಾದ ಜೀವನವೆಂದರೆ ಏನು? ಮಾಮೂಲಿ ಮೂರನೆ ತರಗತಿ ಪರೀಕ್ಷೆಗೆ ಏನೇನೋ ಸಿದ್ಧತೆಗಳನ್ನು ನಡೆಸುತ್ತೇವೆ. ಹಾಗಾದರೆ ಜೀವನವೆಂಬ ಅಗ್ನಿಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ ನಮಗೆ ಸಿದ್ಧತೆಗಳು ಬೇಡವೆ?

ಸನ್ಮಾರ್ಗ ಯಾವುದು, ದುರ್ಮಾರ್ಗ ಯಾವುದೆಂಬುದರ ಬಗ್ಗೆ ಧರ್ಮಗಳು ಸಾರಿ ಸಾರಿ ಹೇಳಿವೆ. ಉದಾಹರಣೆಗೆ ಕಳ್ಳತನ ಮಾಡುವುದು ತಪ್ಪು. ಇದು ಎಲ್ಲಾ ಧರ್ಮದ ಜನರಿಗೂ ಗೊತ್ತು. ಹೇಗೆ? ಸರಿ-ತಪ್ಪಿನ ಪರಿಜ್ಞಾನ ನಮಗಿದೆ. ಈ ಜ್ಞಾನ ನೀಡಿದವರಾರು? ಗುರು ಹಿರಿಯರು. ಗುರುಹಿರಿಯರಿಗೆ ಜ್ಞಾನದ ಅರಿವು ಹೇಗಾಯಿತು? ಅವರಿಗೂ ಯಾರೋ ಗುರು ಇರಬೇಕಲ್ಲವೆ? ಗುರುಗಳ ಮೂಲ ಹುಡುಕಿಕೊಂಡು ಹೋದರೆ ಪ್ರವಾದಿಗಳೊಂದಿಗೆ ಕೊನೆಗೊಳ್ಳುತ್ತದೆ. ಇದರರ್ಥ ಪ್ರತಿ ಜನಾಂಗದಲ್ಲೂ ಪ್ರವಾದಿಗಳು ಬಂದಿದ್ದಾರೆ ಎಂದಾಯಿತಲ್ಲವೆ. ಪ್ರವಾದಿಗಳ ಸಂಬಂಧ ದೇವರೊಂದಿಗೆ ಇದ್ದೇ ಇರುತ್ತದೆ.

ಜೀವನವೆಂಬ ಅಗ್ನಿಪರೀಕ್ಷೆಯಲ್ಲಿ ಪಾಸಾಗಲು ರಂಜಾನ್ ತಿಂಗಳು ಮುಸಲ್ಮಾನರಿಗೆ ದೇವರ ವತಿಯಿಂದ ಒಂದು ವರದಾನವಾಗಿದೆ. ಇದೇ ತಿಂಗಳಲ್ಲಿ ಜನಕಲ್ಯಾಣಕ್ಕಾಗಿ ಪ್ರವಾದಿ ಮುಹಮ್ಮದ್ರವರ(ಸ) ಮೇಲೆ ಪವಿತ್ರ ಕುರ್ಆನ್ ಅವತೀರ್ಣಗೊಂಡಿತು. ಜೀವನ ಅಂದರೆ ಏನು? ಅದನ್ನು ಹೇಗೆ ನಡೆಸಬೇಕು ಎಂದು ಪ್ರವಾದಿವರ್ಯರು ಸರ್ವರಿಗೂ ತೋರಿಸಿಕೊಟ್ಟು ಎಲ್ಲರಿಗೂ ಮಾರ್ಗದರ್ಶಿಯಾಗಿದ್ದಾರೆ.
ರಂಜಾನ್ ತಿಂಗಳ ಬಹಳ ಮುಖ್ಯ ವಿಷೇಶತೆಯೆಂದರೆ - ಉಪವಾಸ. ಆರೋಗ್ಯವಂತರು ಒಂದು ತಿಂಗಳ ಉಪವಾಸ ವ್ರತ ಆಚರಿಸಬೇಕಾಗುತ್ತದೆ. ಇದು ಒಂದು ರೀತಿಯ ಬಾಹ್ಯ ಮತ್ತು ಆಂತರಿಕ ವ್ಯಕ್ತಿತ್ವ ವಿಕಸನದ ಟ್ರೇನಿಂಗ್. ಲೌಕಿಕ ಮತ್ತು ಅಲೌಕಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಂಡು ಹೋಗಲೀ ಅಂತ ದೇವರು ಉಪವಾಸ ವ್ರತ ಮಾಡಿದ್ದಾನೆ.

ಉಪವಾಸ ಮನುಷ್ಯನ ಬಾಹ್ಯ ಮತ್ತು ಆಂತರಿಕ ಶುದ್ಧೀಕರಣಕ್ಕಾಗಿ ಒಂದು ಉತ್ತಮ ಮಾರ್ಗ ಮತ್ತು ಶಿಕ್ಷಣವಾಗಿದೆ. ಉಪವಾಸವಿಡುವುದರಿಂದ ಮಾನವನಿಗೆ ಶಾರೀರಿಕವಾಗಿ ಸಿಗುವ ಲಾಭಗಳು ಹಲವಾರು. ಆರೋಗ್ಯ ಉತ್ತಮವಾಗಿರುತ್ತದೆ ಎಂದು ವೈದ್ಯರು ಹೇಳುತ್ತಾರೆ. ಆತ್ಮಶಕ್ತಿ ಸಹ ವೃದ್ಧಿಗೊಳ್ಳುತ್ತದೆ. ಶ್ರೀಮಂತ ಉಪವಾಸಿಗೆ ಹಸಿವಿನ ಬೆಲೆ ತಿಳಿದಾಗ ಬಡಬಗ್ಗರ ಬಗ್ಗೆ ಯೋಚಿಸಲಾರಂಭಿಸುತ್ತಾನೆ. ದಾನ ಮಾಡುವ ಅರಿವು ಮೂಡುತ್ತದೆ. ಎಂತಹ ರುಚಿಕರ ಆಹಾರವೇ ಮುಂದೆ ಬರಲಿ, ಎಷ್ಟೇ ಹಸಿವು ದಾಹವಿರಲಿ, ಬೆಳಗಿನಿಂದ ಸಂಜೆಯವರೆಗೆ ಉಪವಾಸಿವಿರುವವರು ಏನೂ ಸೇವಿಸುವುದಿಲ್ಲ.

ಜನರ ಮುಂದೆ ತಿನ್ನದಿರುವುದಲ್ಲ, ಏಕಾಂತದಲ್ಲೂ ಆಹಾರ ಸೇವಿಸುವುದಿಲ್ಲ. ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ ನೋಡಿ. ಇದರ ಬುಡದಲ್ಲಿರುವುದು ಸೃಷ್ಟಿಕರ್ತನ ಪ್ರೀತಿಯಾಗಿದೆ. ಅವನು ಸರ್ವಜ್ಞ. ಸರ್ವವ್ಯಾಪಿಯೂ ಆಗಿರುವನೆಂಬ ದೃಡ ನಂಬಿಕೆಯೇ ಇದಕ್ಕೆ ಕಾರಣ.
ಉಪವಾಸ ಕೇವಲ ಬಾಹ್ಯವಾಗಿಟ್ಟರೆ ಸಾಲದು, ಬುದ್ಧಿ ಮತ್ತು ಮನಸ್ಸಿನ ಉಪವಾಸವೂ ಇಡಬೇಕಾಗುತ್ತದೆ. ಕೆಟ್ಟದ್ದನ್ನು ನೋಡಬಾರದು,ಕೇಳಬಾರದು,ಹೇಳಬಾರದು,ಮಾಡಬಾರದು.

ಅನ್ಯಾಯ,ದಗಾ,ವಂಚನೆ,ಮೋಸ,ಕೊಲೆ,ದರೋಡೆ,ಗುಂಡಾಗಿರಿ,ಜಗಳ,ದುಷ್ಚಟ,ಕುಡಿತ,ವ್ಯಭಿಚಾರ,ಲಂಚ, ಕೋಪ ಇತ್ಯಾದಿಗಳಿಂದ ದೂರ ಸರಿಯಬೇಕಾಗುತ್ತದೆ. ತಗ್ಗಿಬಗ್ಗಿ ವಿನಮ್ರತೆಯಿಂದ ನಡೆದುಕೊಳ್ಳಬೇಕಾಗುತ್ತದೆ. ಕುಟುಂಬದವರೊಂದಿಗೆ,ನೆರೆಹೊರೆಯವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕಾಗುತ್ತದೆ, ಅವರ ಹಕ್ಕುಗಳನ್ನು ಪೂರೈಸಬೇಕಾಗುತ್ತದೆ. ಪ್ರತಿ ಕ್ಷಣದಲ್ಲೂ ಮಾನವೀಯತೆ ಕಾಪಾಡಿಕೊಳ್ಳಬೇಕಾಗುತ್ತದೆ. ಸನ್ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಒಳ್ಳೆಯ ಮನುಷ್ಯನಾಗಬೇಕಾಗುತ್ತದೆ. ಒಟ್ಟಾರೆ ಯಾವುದೇ ರೀತಿಯ ತಪ್ಪು ಮಾಡುವ ಹಾಗಿಲ್ಲ. ಕೇವಲ ತೋರ್ಪಡೆಯ ಉಪವಾಸದಿಂದ ದೇವರಿಗೇನೂ ಲಾಭವಿಲ್ಲ. ನಮ್ಮ ಬಾಹ್ಯ ಮತ್ತು ಆಂತರಿಕ ಶುಧ್ಧಿಕರಣಕ್ಕಾಗಿಯೇ ಆತ ಉಪವಾಸ ವ್ರತದ ಆದೇಶವನ್ನು ಹೊರಡಿಸಿದ್ದಾನೆ.

ಪ್ರತಿವರ್ಷ ಉಪವಾಸದಿಂದ ಟ್ರೇನಿಂಗ್ ಸಿಗುತ್ತಲೇ ಇರುತ್ತದೆ, ಆದರೂ ಪ್ರತಿ ಕ್ಷಣ ನಾವು ದುಷ್ಕರ್ಮಗಳನ್ನು ಮಾಡುತ್ತಲೇ ಇರುತ್ತೇವೆ. ಒಂದಲ್ಲ ಒಂದಿನ ನಮ್ಮ ಮನಸ್ಸು ಪರಿವರ್ತನೆಗೊಳ್ಳಲೆಂದು ಪುನಃ ರಂಜಾನ್ ಬರುತ್ತಲೇ ಇರುತ್ತದೆ.

- ಜಬೀವುಲ್ಲಾ ಖಾನ್

0 comments:

Post a Comment