ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವೈವಿಧ್ಯ

ಕಳೆಂಜೆ ಕಳೆಂಜೆನೋ - ಕಳೆಂಜೆ
ಏರ್ ನ ಮಗೆನೋ |
ಮಾಯತರಸುಮಗೆ -ಕಳೆಂಜೆ
ಮಾಯತ ಪುಟ್ಟಾಂಡೆ
ಮಾಯತ ಪುಟ್ಟಾಂಡೆ- ಕಳೆಂಜೆಜೋಗೊತ ಬಲೆಕ್ಕಾಂಡೆ |
ಪತ್ತೇ ಕಾಲೊಂಡ - ಕಳೆಂಜೆ
ಪದಿನಾಜಿ ಪಿರ ಯಾಂಡೆ |
ಪದಿನಾಜಿ ವರುಸೊಡು ಕಳೆಂಜೆ |
ಊರುದಪ್ಪೊಡೆಂದ್
ಊರುದತ್ತೆನೇ ಕಳೆಂಜೆ |
ಕುಂಬಳೇ ಸೀಮೆಗ್....
ಹೀಗೆ ರಾಗಬದ್ಧವಾದ ತುಳು 'ಸಂದಿ'ಯಹಾಡಿಗೆ ಕುಣಿಯುವ ಕಳೆಂಜನನ್ನು ನೀವು ನೋಡಿದ್ದೀರಾ?
ಈ ಕಾಲದಲ್ಲಿ ಅಪುರೂಪವಾದರೂ ಇನ್ನೂ ಅಳಿಯದೆ ಅಲ್ಲಲ್ಲಿ ಉಳಿದಿರುವ ತುಳು ನಾಡಿನ ಜನಪದ ಕಲೆಗಳಲ್ಲಿ 'ಆಟಿ ಕಳೆಂಜ' ಬಹು ಮುಖ್ಯವಾದುದು. ಆಟಿ ತಿಂಗಳಲ್ಲಿ ಮನೆ ಮನೆಗೆ ಶುಭದ ಹಾರೈಕೆಯೊಂದಿಗೆ ಬರುವ ಕಾರಣ 'ಆಟಿ ಕಳೆಂಜ' ಎಂಬ ಹೆಸರು ಬಂದಿದೆ.
ಅತಿ ಮನೋಹರವಾದ, ಕಣ್ಣಿಗೆ ಕಂಡ ಕೂಡಲೆ ತುಳುನಾಡಿನ ಭೂತದ ಕೋಲಗಳಲ್ಲಿನ ವೇಷಗಳನ್ನು ನೆನಪಿಸುವ, ಈ ಕಳೆಂಜನ ವೇಷ ಭೂಷಣಗಳು ವೈವಿಧ್ಯಮಯವಾಗಿವೆ.

ಸೊಂಟದಿಂದ ಕಣಕಾಲಿನವರೆಗೆ ಇಳಿಬಿಟ್ಟ ತೆಂಗಿನ ಎಳೆ ಸೀಳಿನ ಗರಿಗಳ ಲಂಗ, ಮೊಣ ಕೈ ಮತ್ತು ತೋಳುಗಳಲ್ಲಿ ಕೇಪುಳ ಹೂಗಳ ಮಾಲೆಯ ದಂಡೆ, ತಲೆಯಲ್ಲಿ ತೆಂಗಿನ ತಿರಿಯಿಂದ ಮಾಡಿದ ಸುಂದರ ಕಿರೀಟ, ಕೈ0ುಲ್ಲಿ ಬಿದಿರ ಹಿಡಿಯಿರುವ ಹನೆಗರಿಯ ಕೊಡೆ, ಅರ್ದಲವನ್ನು ಬಳಿದಿರುವ ಮುಖ, ಕಾಡಿಗೆಯ ಕುಡಿಮೀಸೆ, ಕಾಲುಗಳಲ್ಲಿ ಗೆಜ್ಜೆ.. ಆಹಾ.. ಸುಂದರವಾಗಿ ಕಾಣುವುದಕ್ಕಿನ್ನೇನು ಬೇಕು ಹೇಳಿ..!!

ನಲಿಕೆಯವನು ಬಡಿಯುವ ಡೋಲಿನ ತಾಳಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾ ಕೈ0ುಲ್ಲಿ ಬಿಚ್ಚಿ ಹಿಡಿದ ಕೊಡೆಯನ್ನು ತಿರುಗಿಸಿಕೊಂಡು 'ಮಾಯೆದ ಕಳೆಂಜ' ಮನೆ ಮನೆಗೂ ಬರುತ್ತಾನೆ.

ಆಟಿ ತಿಂಗಳು ಎಂದರೆ ನಿಲ್ಲದ ಮಳೆ, ಶೀತ ಗಾಳಿ, ರೋಗ ರುಜಿನಗಳು ಹುಡುಕುತ್ತಾ ಬರುವ ಕಾಲ. ಮನುಷ್ಯರು ಮಾತ್ರವೇ ಅಲ್ಲದೆ ಸಾಕಿದ ಜಾನುವಾರುಗಳು ಈ ತಣ್ಣನೆ0ು ವಾತಾವರಣದಿಂದಾಗಿ ವಿವಿಧ ರೀತಿಯ ರೋಗಗಳಿಗೆ ತುತ್ತಾಗುತ್ತವೆ. ಇವುಗಳ ನಿವಾರಣೆಗಾಗಿ ಈ 'ಆಟಿ ಕಳೆಂಜ' ಮನೆಗಳಿಗೆ ಭೇಟಿ ನೀಡುತ್ತಾನೆ ಎಂಬ ನಂಬಿಕೆ. ಬಂದವನಿಗೆ ಹಣವೋ, ತೆಂಗಿನಕಾಯಿ ಅಕ್ಕಿಯ ಧಾನವೋ ಕೊಟ್ಟರಾಯಿತು. ಹರಸಿ ಇನ್ನೊಂದು ಮನೆಗೆ ತೆರಳುತ್ತಾನೆ.

ಈಗಿನಂತೆ ಮನೋರಂಜನೆಗಳಿಲ್ಲದ ಹಿಂದಿನ ಕಾಲದಲ್ಲಿ, ಭಯ ಭಕ್ತಿ ಯೊಂದಿಗೆ ಈ ಕಳೆಂಜನ ಕುಣಿತ ಮತ್ತು 'ಸಂದಿ'ಯ ಹಾಡುಗಳು ಒಂದಿಷ್ಟು ಹೊತ್ತು ಎಲ್ಲರ ಮನಸ್ಸನ್ನು ತೃಪ್ತಿಪಡಿಸುತ್ತಿದ್ದುದು ಸುಳ್ಳಲ್ಲ.ವಿಪರೀತ ಮಳೆಯಿಂದಾಗಿ ದುಡಿಮೆಯೂ ಸಾಧ್ಯವಿಲ್ಲದ ಈ ಸಮಯದಲ್ಲಿ ಇದು ವೇಷ ಕಟ್ಟಿದವರ ಹೊಟ್ಟೆ ಹೊರೆಯುತ್ತಿದ್ದುದೂ ನಿಜ.

ನಾಗರೀಕತೆಯ ಈ ಘಟ್ಟದಲ್ಲಿ ಇದನ್ನು ಮೂಢ ನಂಬಿಕೆ ಎಂದು ತಳ್ಳಿ ಹಾಕಿದರೂ, ಒಂದು ಕಲಾ ಪ್ರಕಾರವಾಗಿ ತೆಗೆದುಕೊಂಡರೆ ಇದನ್ನು ಉಳಿಸಿಕೊಳ್ಳುವುದು ಸಾಧ್ಯ. ಪಾಲನೆ ಪೋಷಣೆಗಳಿಲ್ಲದೆ ನಮ್ಮಿಂದ ಮರೆಯಾಗುತ್ತಿರುವ ಕೆಲವು ಪಾರಂಪರಿಕ ಕಲೆಗಳಲ್ಲಿ ಇದೂ ಸೇರುವುದು ಬೇಡ ಎಂಬ ಕಳ ಕಳಿ ನಮ್ಮಲ್ಲಿರಲಿ.

ಅನಿತಾ ನರೇಶ್ ಮಂಚಿ
ಚಿತ್ರ: ರಾಮ್ ನರೇಶ್ ಮಂಚಿ

0 comments:

Post a Comment