ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 16

ನನ್ನ ಮಗು ನನಗೆ ಹೊರೆಯಲ್ಲ ಕಣೊ, ತಾಯಿಯಿಲ್ಲದ ತಬ್ಬಲೀಂತ ಯಾರು ಕನಿಕರ ತೋರಿಸೊದ್ಬೇಡಿ. ನನ್ನ ಮಗುನ ನಾನು ಚೆನ್ನಾಗಿ ಸಾಕ್ತೀನಿ. ಅಪ್ಪ ಅಮ್ಮ ಎರಡು ನಾನೆ ತಬ್ಬಿ ಎತ್ತಿ ಮುಖಕ್ಕೆ ಲೊಚಲೊಚನೆ ಮುತ್ತಿಟ್ಟರು. ಕರುಳು ಹಿಂಡಿದಂತಾಗಿ ಸಂಧ್ಯಾರತ್ತ ನೋಡಿದರು ಜೀವನ್ರಾಮ್. ಅಹಂಕಾರದ ಹೆಣ್ಣು ತುಟಿ ಕೊಂಕಿಸಿ, ಅವರವರ ಕರ್ಮ ಅಂದಿದ್ದು ಸ್ಪಷ್ಟವಾಗಿ ಅವರ ಕಿವಿಗೆ ಬಿದ್ದಿತ್ತು. ಉಗುಳು ನುಂಗಿಕೊಂಡು ಅಲ್ಲಿಂದ ಹೊರಟು ಬಂದಿದ್ದರು. ಮುಂದೆಂದೂ ಅಶುತೋಶ್ ಬಗ್ಗೆ ಸಂಧ್ಯಾಳ ಎದುರಿಗೆ ಮಾತನಾಡಲೇ ಇಲ್ಲ.

ಆದರೆ ಆಗಿಂದಾಗೆ ಮಗುವನ್ನು ನೋಡಿಕೊಂಡು ಬರುತ್ತಿದ್ದರು. ಸಂಬಂಧವನ್ನು ಬಿಟ್ಟು ಹೋಗುವುದು ಹೇಗೆನ್ನುವ ಚಿಂತೆಯಿತ್ತು. ಹರಿಣಮ್ಮ ಸಂಪೂರ್ಣವಾಗಿ ಮಗುವಿನ ಆರೈಕೆಗೆ ನಿಂತಾಗ ಅವರನ್ನೇ ಕೇಳಿದರು.
ಇದು ದೊಡ್ಡ ಸಮಸ್ಯೆ... ಕೆಲಸ ಬಿಡೋಣವೆಂದರೆ ನನ್ನ ದೇಶಸೇವೆಯ ಪ್ರಶ್ನೆ. ಮಗುವನ್ನು ಬಿಡೋದಿಕ್ಕೂ ಸಾಧ್ಯವಿಲ್ಲ. ಇದಕ್ಕೆ ನೀನೇ ಏನಾದರೊಂದು ನಿರ್ಧಾರ ತಿಳಿಸಬೇಕು.

ಹರಿಣಮ್ಮ ಕೂಡಲೆ, ಮಗುವಿನ ಸಮಸ್ತ ಜವಾಬ್ದಾರಿ ನನ್ನದು ಅಂದಾಗ ಅವರಿಗೆ ದೊಡ್ಡ ಭಾರವೊಂದು ಇಳಿದಂತಹ ಅನುಭವ. ಮಗುವಿನ ಸಂಪೂರ್ಣ ಬೇಕು ಬೇಡಗಳನ್ನು ಅವರಿಗೆ ಒಪ್ಪಿಸಿ ಭಾರವಾದ ಹೃದಯದಿಂದ ಆಗ್ರಾದ ರೈಲು ಹತ್ತಿದರು.
ಮುಂದೆ ಎರಡು ವರ್ಷಗಳು ಬಿಟ್ಟು ಬರುವಾಗ ಆಶುತೋಶ್ ಬಹಳಷ್ಟು ಬೆಳೆದಿದ್ದ. ಹೆಮ್ಮೆಯಿಂದ ಅವನನ್ನು ಎತ್ತಿ ಮುದ್ದಾಡಿ ಊರು ಕೇರಿಯೆಲ್ಲಾ ಸುತ್ತಾಡಿ, ಬೇಕು ಬೇಕಾದುದನ್ನೆಲ್ಲಾ ಕೊಡಿಸಿದರು.

ಮುಂದೆ ವಿದ್ಯಾಭ್ಯಾಸದ ಬಗ್ಗೆ ಹೆದರಿಕೆಯಿತ್ತು. ಆದರೂ ಹರಿಣಮ್ಮ ಧೈರ್ಯದಿಂದ ಅದರ ಚಿಂತೆಯನ್ನು ಬಿಟ್ಟರು. ಮಗು ಕ್ಲಾಸಿಗೆ ಫಸ್ಟ್ ಬರುತ್ತಿರುವ ವಿಷಯ ತಿಳಿದು ಸಂತಸಗೊಂಡಿದ್ದರು. ಆಗ ಆಗ್ರಾದಿಂದ ಜೈಸಲ್ಮಾರ್ಗೆ ವರ್ಗವಾಗಿತ್ತು. ಅಲ್ಲಿಯೇ ವಾತಾವರಣಕ್ಕೆ ಹೊಂದಿಕೊಳ್ಳುವ ಹೊತ್ತಿಗೆ ಮತ್ತೆ ಪ್ರಮೋಷನ್ ಆಗಿ ಮೇಜರ್ ಪಟ್ಟಿ ಅಂಟಿಸಿಕೊಂಡರು. ಆಗ ಜವಾಬ್ದಾರಿಗಳ ಹೊರೆ ಮತ್ತಷ್ಟು ಹೆಚ್ಚಾಯಿತು. ಮಗನನ್ನು ವಿಚಾರಿಸಿಕೊಳ್ಳುವುದಕ್ಕೂ ಸಮಯ ಸಿಗುತ್ತಿರಲಿಲ್ಲ.

ಊರಿಗೆ ಹೋಗಿ ಬರೋಣವೆಂದರೆ ಆಗ ತನ್ನ ರಕ್ಷಣೆಗೆ ಜನ ಬೇಕಾಗಿತ್ತು. ಹಾಗಾಗಿ ಐದು ವರ್ಷದ ಬಳಿಕ ಮಗನನ್ನು ತಾವೇ ಕರೆಸಿಕೊಂಡು ಒಂದು ತಿಂಗಳು ರಜೆಯಲ್ಲಿ ಅವನ ಜೊತೆಗೆ ಓಡಾಡಿ ಸಂಭ್ರಮಿಸಿದರು. ಹರಿಣಮ್ಮನಿಗೂ ಹೊಸ ಪರಿಸರ ಬದಲಾವಣೆ ನೀಡಿತು. ಮತ್ತೊಂದು ವಾರದಲ್ಲಿ ಮಗುವನ್ನು ಕರೆದುಕೊಂಡು ಬೆಂಗಳೂರಿಗೆ ಹಿಂತಿರುಗಿದರು.
***
ಹೊಸ ಅಸೈನ್ಮೆಂಟೊಂದು ಹುಡುಕಿಕೊಂಡು ಬಂದಾಗ ನಿಖಿಲ್ಗೆ ಆಶ್ಚರ್ಯ. ವಿಶ್ವ ಮಾರುಕಟ್ಟೆಗೆ ಪ್ರವೇಶಿಸುವ ತನ್ನ ಕಂಪನಿಯ ಉತ್ಪಾದನೆಗಳಿಗಾಗಿ ಮಾನ್ಯತೆ ಪಡೆಯುವ ತರಾತುರಿಯಲ್ಲಿದ್ದ. ಈಗ ಉತ್ಪಾದನೆಯಾಗುವ ವಸ್ತುಗಳ ಗುಣಮಟ್ಟದಲ್ಲಿ ಇನ್ನಷ್ಟು ಸುಧಾರಿಕೆಯಾಗಬೇಕೆಂದು ತಿಳಿದಿತ್ತು. ಹಾಗಾಗಿ ಬಂದ ಹೊಸ ಒಪ್ಪಂದವನ್ನು ಮುಂದುವರಿಸಬೇಕೊ, ಬೇಡವೊ ಎನ್ನುವ ಜಿಜ್ಞಾಸೆ ಹಾಗೆಯೆ ಉಳಿಯಿತು.

ಆದಿತ್ಯ ಗ್ರೂಪ್ಸ್ನ ಮಾಲಿಕ ನವ್ಯಕುಮಾರ್ ಮೊದಲಿನಿಂದಲೂ ಪರಿಚಿತನೆ. ಗಲ್ಫ್ಗೆ ತೆರಳಿ ಅಲ್ಲಿ ಭಾರತದ ಉತ್ಪಾದನೆಗಳನ್ನು ಪರಿಚಯಿಸುವ ಒಂದು ಸಣ್ಣ ಉದ್ಯಮವನ್ನು ಸ್ಥಾಪಿಸಿದ್ದ. ಅವನ ನಿರೀಕ್ಷೆಗೂ ಮೀರಿ ಆದಿತ್ಯ ಗ್ರೂಪ್ಸ್ ಬೆಳೆದಿತ್ತು. ಸಾಮಾನ್ಯವಾಗಿ ಆಹಾರೋದ್ಯಮ ವಿಭಾಗ, ಅದರಲ್ಲೂ ಭಾರತದಿಂದ ರಫ್ತಾಗುವ ಡ್ರೈಪ್ರುಟ್ಸ್ಗಳಿಗೆ ಗಲ್ಫ್ ರಾಷ್ಟ್ರಗಳಲ್ಲಿ ಬಹು ಹೆಚ್ಚಿನ ಬೇಡಿಕೆ ಕುದುರಿ ವ್ಯವಹಾರ ಅಷ್ಟು ಮಟ್ಟದಲ್ಲಿ ಬೆಳೆದುದು ಆಶ್ಚರ್ಯವೇ.

ನಿಖಿಲ್ ಎಂಟರ್ಪ್ರೈಸೆಸ್ನ ಆರಂಭವಾದಾಗಲೇ ತನ್ನ ವ್ಯವಹಾರಗಳ ಬಗ್ಗೆ ಬಿಚ್ಚಿಟ್ಟಿದ್ದ ನವ್ಯ, ನಿಖಿಲ್ಗೆ ಹೊಸತೊಂದು ಐಡಿಯಾ ಕೊಟ್ಟಿದ್ದ. ಏನೂ ಆಲೋಚನೆಗಳಿಲ್ಲದೆ ನಿಖಿಲ್ ಎಂಟರ್ಪ್ರೈಸ್ಸ್ ಆರಂಭವಾದಾಗ ನವ್ಯ ನೀಡಿದ ಹೊಸ ಐಡಿಯಾ ನಿಖಿಲ್ನಲ್ಲಿ ಹೆಮ್ಮರವಾಗಿ ಬೆಳೆದು ಡ್ರೈ ಪ್ರುಟ್ಸ್ ವಿಭಾಗವನ್ನು ಸ್ಥಾಪಿಸಿದ. ಅದರಲ್ಲೂ ಕರ್ನಾಟಕದ ಕರಾವಳಿಯ ಉದ್ದಕ್ಕೂ ಬೆಳೆಯುವ ತೆಂಗು ಆತನ ವ್ಯವಹಾರಕ್ಕೆ ಕಚ್ಚಾ ವಸ್ತುವಾಯಿತು. ಕೊಬ್ಬರಿಯನ್ನು ತಂದು ಅವುಗಳನ್ನು ಕೆಡದಂತೆ ಪ್ಯಾಶ್ಚಿಕರಿಸಿ ಪಾಲಿಥೀನ್ ಬ್ಯಾಗ್ಗಳಲ್ಲಿ ತುಂಬಿಸಿ ಭಾರತದ ಉಳಿದೆಡೆ ಮಾರಾಟ ತಂತ್ರವನ್ನು ಆರಂಭಿಸಿದಾಗ ಅವನನ್ನು ನಿರುತ್ತೇಜನಗೊಳಿಸಿದವರೆ ಹೆಚ್ಚು.

ತೆಂಗು ಬೆಳೆಯದ ಮನೆಯಲ್ಲಿ ಅದೂ ಇಂತಹ ಒಂದು ಉದ್ಯೋಗಕ್ಕೆ ಇಳಿದಿದ್ದು ನಿರರ್ಥಕ ಎಂದು ದೂರಿದವರೇ ಹೆಚ್ಚು. ಆದರೂ ಧೃತಿಗೆಡದೆ ಮುಖ್ಯವಾಗಿ ಉತ್ತರ ಭಾರತದ ರಾಜ್ಯಗಳಿಗೆ ತಾನೇ ಖುದ್ದಾಗಿ ಅವುಗಳ ಪ್ರಾಡಕ್ಟ್ಗಳನ್ನು ತೆಗೆದುಕೊಂಡು ಹೋಗಿ ಪರಿಚಯಿಸಿದ. ಅಲ್ಲಿ ತೆಂಗಿನ ಕಾಯಿಯ ಬೇಡಿಕೆ ಕಡಿಮೆಯಾಗಿದ್ದು ಅವನಲ್ಲಿ ಆತಂಕವನ್ನು ಸೃಷ್ಟಿಸಿತ್ತು.
ಈಗಿನ ಆಹಾರ ಪದ್ಧತಿಗೆ ಪ್ರಾದೇಶಿಕ ಬೌಂಡರಿ ಇಲ್ಲದಿರುವುದರಿಂದ ಉತ್ತರದ ಕಡೆಯವರು ದಕ್ಷಿಣದ ಆಹಾರವನ್ನು ದಕ್ಷಿಣದ ಕಡೆಯವರು ಉತ್ತರದ ಆಹಾರವನ್ನು ಬಯಸುತ್ತಿರುವುದು ಹೆಚ್ಚು. ಹಾಗಿರುವಾಗ ನಿಖಿಲ್ನ ಹೊಸ ಉತ್ಪಾದನೆಗೆ ಎಲ್ಲಿಲ್ಲಿದ ಬೇಡಿಕೆ ಬಂದಿತ್ತು. ಕೊಟ್ಟ ಆರ್ಡರ್ಗಳನ್ನು ಪೂರೈಸುವುದೇ ಕಷ್ಟಕರವೆನಿಸಿದಾಗ ಹಗಲೂ ರಾತ್ರಿ ತಾನು ಹೆಗಲುಕೊಟ್ಟು ನಿಂತ. ನಿಖಿಲ್ ಎಂಟರ್ಪ್ರೈಸಸ್ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿಕೊಂಡಿತು. ಟಿ. ವಿ. ಚಾನೆಲ್ಗಳಲ್ಲಿ ಜಾಹಿರಾತು ನೀಡಿ ಇನ್ನಷ್ಟು ಪ್ರಚಾರ ಹೆಚ್ಚಿಸಿಕೊಂಡ ಮೇಲೆ ಒಮ್ಮೆ ನವ್ಯಕುಮಾರ್ ಇಂಡಿಯಾಕ್ಕೆ ಬಂದಾಗ ನಿಖಿಲ್ನನ್ನು ಭೇಟಿಯಾದ.

- ಅನು ಬೆಳ್ಳೆ
....ನಾಳೆಗೆ....

0 comments:

Post a Comment