ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 10


ಅವನ ಮೇಲ್ ಡಿಲೀಟ್ ಮಾಡಿ ಎರಡು ದಿನಗಳಲ್ಲಿಯೇ ಮತ್ತೊಂದು ಮೇಲ್ ತನ್ನ ಹೆಸರನ್ನು ಉದ್ದೇಶಿಸಿಯೇ ಬರೆದಿತ್ತು. ಆ ಆತ್ಮೀಯತೆಯ ಮೇಲ್, ತನ್ನ ಬಗ್ಗೆ ಆತ ತಿಳಿದುಕೊಂಡಿರಬಹುದಾದ ವಿಷಯಗಳು ಕುತೂಹಲಕ್ಕೆ ನಾಂದಿಯಾಗಿದ್ದವು. ಜಂಕ್ ಮೇಲ್ಗಳ ಜೊತೆಗೆ ಅದನ್ನು ಸೇರಿಸುವ ಹಾಗೆ ಇರಲಿಲ್ಲ. ಮತ್ತೊಮ್ಮೆ ಮಗದೊಮ್ಮೆ ಅದನ್ನು ತೆರೆದು ಓದಿ ಪುಳಕಗೊಳ್ಳುತ್ತಿದ್ದುದೇ ಹೆಚ್ಚು. ಅರವಿಂದ್... ಹೃದಯದ ಸಮೀಪಕ್ಕೆ ಬಂದ ಹೆಸರೆನಿಸಿತು.


ಯಾರು? ಏನು? ಎಲ್ಲಿಂದ ? ತನ್ನ ಮೇಲ್ ಐಡಿ ಹೇಗೆ ಗಳಿಸಿಕೊಂಡ? ಹಾಗೇಯೇ ಸಾವಿರಾರು ಪ್ರಶ್ನೆಗಳು ಉದ್ಭವಿಸಿ ಮತ್ತಷ್ಟು ಕುತೂಹಲಕೆಳೆಯುತ್ತಿತ್ತು. ಕಂಪ್ಯೂಟರ್ ಪ್ರೊಗಾಮರ್ ಅನುಷಾಳನ್ನು ಕರೆದು ಮೇಲ್ ಎಲ್ಲಿಂದ ಬಂತೆನ್ನುವುದನನ್ನು ಪತ್ತೆ ಹಚ್ಚಲು ಸಾಧ್ಯವೇ? ಎಂದು ತಿಳಿಯುವ ಮನಸ್ಸದಾರೂ, ಆ ವಿಷಯ ಅವಳಿಂದ ಇಡೀ ಆಫೀಸಿಗೆ ಹಬ್ಬಿ ಅಲ್ಲಿಂದ ಅದು ಬಾಸ್ನವರೆಗೂ ತಲುಪುವುದು ಬೇಡವೆನಿಸಿತು. ಮತ್ತೊಮ್ಮೆ ಮೇಲ್ ತೆರೆದು ಎಲ್ಲಿಂದ ಬಂದಿದೆಯೆನ್ನುವುದಾದರೂ ತಿಳಿಯುತ್ತದೊ ಏನೋ ಅನ್ನುವ ಕುತೂಹಲವಿತ್ತು. ಆ ಕುತೂಹಲಕ್ಕೆ ಅನಿವಾರ್ಯವಾಗಿ ಕಡಿವಾಣ ಹಾಕಿಕೊಂಡಾಗ ನಿಖಿಲ್ ಬರಲು ಹೇಳಿ ಕಳುಹಿಸಿದ.


ನಿಮ್ಮ ಜೊತೆ ಒಂದು ಮುಖ್ಯವಾದ ವಿಷಯ ಮಾತಾಡ್ಬೇಕು ಮುಖ ಗಂಭೀರವಾಗಿತ್ತು. ಬೇರೇನನ್ನು ಆಲೋಚಿಸುವಂತೆ ಇರಲಿಲ್ಲ. ಹೇಳಿ ಅನ್ನುವಂತೆ ಕುಳಿತಳು.
ನಾಳೆ ಒಂದು ಮುಖ್ಯವಾದ ಕೆಲಸವಿದೆ. ನೀವು ನನ್ನ ಜೊತೆ ಬೆಂಗಳೂರಿಗೆ ಹೊರಡ್ಬೇಕು. ಇದು ನಿಖಿಲ್ ಎಂಟರ್ಪ್ರೈಸಸ್ನ ಭವಿಷ್ಯದ ಪ್ರಶ್ನೆ
ಅವನ ಮಾತಿನ ಹಿಂದಿರುವುದೇನು? ನಿಖಿಲ್ ಮತ್ತು ನಿಖಿಲ್ ಎಂಟರ್ಪ್ರೈಸಸ್ನ ಭವಿಷ್ಯದ ಪ್ರಶ್ನೆಯೇ? ಅಷ್ಟೊಂದು ಗಂಭೀರವಾದ ವಿಷಯವೇ? ಆದರೆ ಬೆಂಗಳೂರಿಗೆ ಹೋಗಿ ಬರುವುದು ಸಾಧ್ಯವೇ? ಅದೂ ನಿಖಿಲ್ ಜೊತೆಗೆ? ಒಪ್ಪಿಕೊಳ್ಳಲಾರಳು.

ದಯವಿಟ್ಟು ಬೇರೆ ದಾರಿ ಇಲ್ಲವೆ? ತಟ್ಟನೆ ಅವಳ ಮುಖವನ್ನೇ ನೋಡಿದ. ಮುಗ್ಧತೆಯಿತ್ತು ಪ್ರಶ್ನೆಯಲ್ಲಿ.
ಇದು ವ್ಯವಹಾರಕ್ಕೆ ಸಂಬಂಧಿಸಿದ್ದು. ನಿಮ್ಮಿಂದ ಮಾತ್ರ ಸಾಧ್ಯ ಅನಿಸಿತು ವಿಷಯವನ್ನು ಸಂಪೂರ್ಣವಾಗಿ ಹೇಳಲಾರ. ಅವಳ ಒಪ್ಪಿಗೆ ತಿಳಿದ ನಂತರವೇ ಹೇಳುವುದೆಂದುಕೊಂಡ.

ಅನುಮತಿಗಾಗಿ ಮನೆಯಲ್ಲಿ ಹೇಳುವ ಅಗತ್ಯವಿರಲಿಲ್ಲ. ಹೇಳಿದರೆ ಖಂಡಿತಾ ಒಪ್ಪಿಗೆ ನೀಡಲಾರರು. ಹಾಗಂತ ಹೇಳದೆಯೂ ವಿಧಿಯಿರಲಿಲ್ಲ. ನರಸಿಂಹಯ್ಯ ಊರಿಗೆ ಗುಲ್ಲು ಹರಡಿದರೆ ತನಗೇ ಪೆಟ್ಟು. ಇದನ್ನೆಲ್ಲಾ ಗುಟ್ಟಾಗಿ ನಿಬಾಯಿಸುವುದು ಸೂಕ್ತವೆನಿಸಿತು. ಗಟ್ಟಿ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಯಿತು.

ಕಂಪನಿಯ ಏಳಿಗೆಗಾದರೆ ಸರಿ. ನನಗೆ ತೊಂದರೆಯಾದರೂ ಪರ್ವಾಗಿಲ್ಲ... ಬರ್ತೀನಿ ಸಂಪೂರ್ಣ ಅಲ್ಲದಿದ್ದರೂ ಅನುಮತಿ ದೊರೆತಾಗ ಸಂತಸಗೊಂಡ ನಿಖಿಲ್. ಇನ್ನು ವಿಷಯ ಮುಚ್ಚಿಡುವುದು ಸಾಧ್ಯವಿಲ್ಲವೆನಿಸಿತು.
ನನ್ನ ಹಳೆಯ ಸ್ನೇಹಿತ ಅಶುತೋಶ್ ಬೆಂಗಳೂರಿಗೆ ಬರ್ತಿದ್ದಾನೆ

ನಮ್ಮ ಸಂಸ್ಥೆಯಲ್ಲಿ ಪಾಲುದಾರಿಕೆಗಾಗಿಯೇ? ವ್ಯವಹಾರ ಚಾಣಾಕ್ಷತೆಯಿದ್ದವಳು ಕೇಳಿದಾಗ ಗಂಭೀರ ಮುಖ ತಣ್ಣಗಾಯಿತು.
ಆತ ಬರೋದು ವ್ಯವಾಹಾರದ ಮೇಲಲ್ಲ. ಅವನು ಪಕ್ಕಾ ದೇಶ ಸೇವೆಗೆ ನಿಂತವನು. ಕಾಶ್ಮೀರದ ಬ್ಯಾರಕ್ಗಳಲ್ಲಿ ಸೇವಾ ನಿರತ. ಬೆಂಗಳೂರಿಗೆ ಬರದೆ ಎರಡು ವರ್ಷಗಳ ಮೇಲಾಯಿತು. ಅವನ ತಂದೆ ನಮ್ಮ ಫ್ಯಾಮಿಲಿ ಫ್ರೆಂಡ್. ಅವ್ರು ದೇಶ ಸೇವೆಗಾಗಿ ಪ್ರಾಣತ್ಯಾಗ ಮಾಡ್ದೋರು. ಅಂತಹ ವ್ಯಕ್ತಿಯನ್ನು ನಿಮಗೆ ಪರಿಚಯ ಕೂಡ ಮಾಡಿಸ್ಬೇಕು

ಅವನ ಮಾತುಗಳು ಅರ್ಥವಾಗಲೇ ಇಲ್ಲ. ಅವರ ಪ್ಯಾಮಿಲಿ ಪ್ರೆಂಡ್ಸ್ಗೆ ತನ್ನನ್ನು ಪರಿಚಯಿಸುವ ಅಗತ್ಯವೇನು? ಈಗಷ್ಟೆ ನಿಖಿಲ್ ಎಂಟರ್ಪ್ರೈಸಸ್ನ ಭವಿಷ್ಯದ ಪ್ರಶ್ನೆ ಅಂದನಲ್ಲ?
ಇದರಲ್ಲಿ ಬರೀ ನಿಖಿಲ್ನ ಪಾತ್ರ ಇದೆ ಹೊರತು ನಿಖಿಲ್ ಎಂಟರ್ಪ್ರೈಸಸ್ನ ವ್ಯವಹಾರವಿಲ್ಲ ಅನ್ನುವ ಮಾತು ನಾಲಗೆಯ ತುದಿಯವರೆಗೂ ಬಂದು ಜಾರದೆ ನಿಂತಿತು. ಅವಳನ್ನೇ ಅಳೆಯುವಂತೆ ನೋಡಿದ.

ನಿಮಗೆ ಕುತೂಹಲವಿರಬಹುದು. ಇದು ನಿಖಿಲ್ ಎಂಟರ್ಪ್ರೈಸಸ್ಗೆ ಸಂಬಂಧಪಟ್ಟ ವಿಷಯ ಅಲ್ಲಾಂತ. ನಿಜವಾಗಿಯೂ ಇದು ನಮ್ಮ ಸಂಸ್ಥೆಗೆ ಸಂಬಂಧಪಟ್ಟ ವಿಷಯ, ಹಾಗಾಗಿ ನಾನು ನಿಮ್ಮನ್ನು ಒತ್ತಾಯಿಸ್ತಾ ಇರೋದು ಮಾತು ಪೂರ್ತಿಗೊಳಿಸಿದಂತೆ ನಿಲ್ಲಿಸಿದ. ಅವನ ಮುಖದಲ್ಲಿ ಯಾವುದೋ ಲೆಕ್ಕಾಚಾರಗಳು ತಾಕಲಾಡುವಂತೆ ಕಂಡಿತು. ಪಕ್ಕಾ ವ್ಯವಹಾರಸ್ಥನಾಗಿದ್ದು ಇಷ್ಟೊಂದು ಎತ್ತರಕ್ಕೆ ಏರಲು ಸಾಧ್ಯವಾಯಿತೇನೊ ಅನಿಸಿತು.

ಮೊದಲನೆಯದಾಗಿ ಅವನ ತಂದೆಗೆ ಸೇರಿದ ಆಸ್ತಿ. ಅಂದ್ರೆ ಸ್ವಂತ ಮನೆಯನ್ನು ಮಾರಾಟ ಮಾಡುವುದಕ್ಕೆ ಹೊರಟಿದ್ದಾನೆ. ಆ ಮನೆ ಯಾರ್ಯಾರ ಕೈ ಸೇರುವ ಬದಲು ನಾವೇ ಕೊಂಡುಕೊಂಡರೆ ಹೇಗೆ?
ತಟ್ಟನೆ ಅವನ ಮುಖವನ್ನು ನೋಡಿದಳು. ಅಲ್ಲಿರಬಹುದಾದ ಭಾವನೆಗಳಾವುವು ಎಂದು ತಿಳಿಯಲಿಲ್ಲ 'ನಾವೇ' ಅನ್ನುವ ಪದದ ನಿಖರವಾದ ಅರ್ಥ ಈ ಸಂದರ್ಭದಲ್ಲಿ ತಿಳಿಯಲಿಲ್ಲ. ಮತ್ತೆ ಅವನು ಮುಂದುವರಿಸಿ, ಆ ಮನೆಗೆ ಇನ್ವೆಸ್ಟ್ ಮಾಡಬೇಕಿದ್ದರೆ ಷೇರ್ಸ್ಗಳಿಗೆ ಹಾಕಿರೋ ಹಣವನ್ನು ವಾಪಾಸು ಪಡ್ಕೊಳ್ಳಬೇಕು. ಮಾತ್ರವಲ್ಲ ಈಗಿರೋ ಲಾಭದಲ್ಲಿ ಸ್ವಲ್ಪವನ್ನಾದರೂ ಅದಕ್ಕೆ ಹಾಕಬೇಕು. ಉಳಿದಂತೆ ಬ್ಯಾಂಕ್ ಲೋನ್ ತೆಗೆದುಕೊಳ್ಳುವುದು ಉತ್ತಮ. ಇದಕ್ಕೆ ನಿಮ್ಮ ಅಭಿಪ್ರಾಯ ಮುಖ್ಯ

ತೀರಾ ಫ್ಯಾಮಿಲಿ ಮ್ಯಾಟರ್ ವ್ಯವಹಾರಕ್ಕೆ ತಿರುಗಿದ್ದು ಸೋಜಿಗವೆನಿಸಿತು. ಇದರಲ್ಲಿ ತನ್ನ ಅಭಿಪ್ರಾಯ ಅಗತ್ಯವಿಲ್ಲವೆನಿಸಿತು. ಪ್ರತಿಯೊಂದು ಹೆಜ್ಜೆಯನ್ನು ಬಹಳ ಕ್ಯಾಲುಕ್ಯುಲೇಟ್ ಆಗಿ ತೆಗೆದುಕೊಳ್ಳುವ ಮನುಷ್ಯ ಆತ. ಸರಿಯಾದ ದಾರಿಯಲ್ಲಿಯೇ ಮುಂದುವರಿಯುತ್ತಿರುವುದರಲ್ಲಿ ಸಂದೇಹವಿಲ್ಲ.
ಷೇರುಗಳ ಬೆಲೆ ಅಧೋಮುಖಿಯಲ್ಲಿರುವಾಗ ಈ ರಿಸೆಷನ್ ಸಮಯದಲ್ಲಿ ರಿಟರ್ನ್ ಅಷ್ಟೊಂದು ಸಿಗಲಾರದು. ಇದು ಸಾಮಾನ್ಯ ಜ್ಞಾನವಿರುವ ಎಲ್ಲರಿಗೂ ತಿಳಿದಿರುವ ವಿಷಯ, ಆ ಷೇರುಗಳ ಬಗ್ಗೆ ಯಾಕೆ ಆಲೋಚಿಸುತ್ತಿರುವನೋ ತಿಳಿಯಲಿಲ್ಲ. ಅದಕ್ಕಿಂತಲೂ ಬ್ಯಾಂಕ್ ಲೋನ್ ತೆಗೆದು ಅಭಿವೃದ್ಧಿಯಲ್ಲಿರುವ ಕಂಪನಿಯ ಲಾಭಾಂಶದಿಂದ ಅದನ್ನು ಆದಷ್ಟು ಬೇಗನೆ ಮುಗಿಸಿದರೆ ಲಾಭ ತನ್ನ ಅಭಿಪ್ರಾಯವನ್ನು ಮಂಡಿಸಿದಾಗ ಆಲೋಚನೆಗೆ ಇಳಿದ.

- ಅನು ಬೆಳ್ಳೆ

0 comments:

Post a Comment