ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ದೈನಂದಿನ ಕಾದಂಬರಿ : ಭಾಗ - 9

ಅಧ್ಯಾಯ 3

ನಿಖಿಲ್ ಬಹಳ ಹೊತ್ತು ಹಾಗೇ ನಿಂತಿದ್ದಾಗ ಮೊಬೈಲ್ ಕೂಗಿ ಕರೆಯಿತು. ಸಿಂಚನ ಲೈನ್ನಲ್ಲಿದ್ದಳು. ಕಾಲ್ ಅಟೆಂಡ್ ಮಾಡಿದವನು ಕಂಬಕ್ಕೆ ಒರಗಿ ನಿಂತ.ಪದೇ ಪದೇ ಅದನ್ನೇ ಕೇಳ್ತಾ ಇದ್ದೀಯಲ್ಲ. ನಿನಗೆ ಬೇರೆ ವಿಷಯಗಳೇ ಸಿಗ್ತಿಲ್ವಾ ಹೇಗೆ? ದಯವಿಟ್ಟು ನನ್ನ ಯಾವುದಕ್ಕೂ ಒತ್ತಾಯಿಸ್ಬೇಡಾ. ನಾನು ಬಹಳ ವ್ಯವಹಾರಸ್ಥನಾಗಿದ್ದೇನೆ. ಸಿಡುಕಿನಿಂದಲೇ ಉತ್ತರಿಸಿದಾಗ ಅತ್ತಲಿಂದ ಕುಸುಕು ದನಿ ಕೇಳಿಸಿತು.


ಗುಜರಾತ್ನ ಐ.ಎಮ್.ಬಿ.ಯಲ್ಲಿ ಎಂ.ಬಿ.ಎ. ಮುಗಿಸುವ ಹೊತ್ತಿಗೆ ಪರಿಚಿತಳಾಗಿದ್ದವಳು ಸಿಂಚನ. ಕರ್ನಾಟಕದ ಕೆಲವೇ ಕೆಲವು ಮಂದಿ ವಿದ್ಯಾರ್ಥಿಗಳ ಪೈಕಿ ಅವಳೂ ಒಬ್ಬಳು.

ಖ್ಯಾತ ಸಿನಿ ಛಾಯಾಗ್ರಾಹಕನೊಬ್ಬನ ಮಗಳು ಅಂದುಕೊಂಡು ತನ್ನನ್ನು ಪರಿಚಯಿಸಿಕೊಂಡವಳ ಹಿಂದೆ ಸ್ವಾರ್ಥವಿತ್ತು. ಪದವಿ ಪಡೆದುಕೊಂಡು ಹಿಂತಿರುಗುವ ಹೊತ್ತಿಗೆ ಗಂಟು ಬಿದ್ದಿದ್ದಳು. ಅಂತಹ ಕ್ಷುಲಕ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳಬಾರದೆಂದು ದೂರವಿದ್ದಷ್ಟು ಹತ್ತಿರವಾಗ ಬಯಸುತ್ತಿದ್ದಳು. ಕೊನೆಗೆ ಸೋತು ನುಡಿದಿದ್ದ.

ತುಂಬಾ ನಿರೀಕ್ಷೆಗಳನ್ನು ಇಟ್ಟುಕೊಳ್ಳಬೇಡಿ. ಸಾಧ್ಯವಾದ್ರೆ ಬೆಂಗಳೂರಿಗೆ ಬಂದ ನಂತರ ಭೇಟಿಯಾಗೋಣ ಆದರೂ ತಾಳ್ಮೆಯಿಲ್ಲದ ಹುಡುಗಿ ಅನಿಸಿತು. ಕಮ್ಯುನಿಕೇಷನ್ ಇಲ್ಲದಿದ್ರೆ ಹೇಗೆ? ನೀನು ಮರ್ತು ಬಿಡೋ ಛಾನ್ಸ್ಸ್ಸೆ ಹೆಚ್ಚು. ದಯವಿಟ್ಟು ಫೋನಾದ್ರೂ ರಿಸೀವ್ ಮಾಡು ಆಗ ಕನಿಕರ ಮೂಡಿತು. ಧ್ಯೇಯವಿದ್ದುದು ಬೇರೆಯೆ. ಬದುಕಿನಲ್ಲಿ ಡ್ಯಾಡ್ ಗಳಿಸಿದ ಘನತೆ, ಗೌರವಗಳನ್ನೆಲ್ಲಾ ಉಳಿಸಿಕೊಳ್ಳಬೇಕಿತ್ತು. ಸರಕಾರದ ಕೆಲಸ ದೇವರ ಕೆಲಸವೆಂದು ಪಾಲಿಸಿಕೊಂಡು ಬಂದವರು ಎತ್ತರಕ್ಕೆ ಏರಿದ್ದು ಸಾಮಾನ್ಯದ ಸಂಗತಿಯಲ್ಲ. ರಿಟೈರ್ಡ್ ಆಗುವ ಹೊತ್ತಿಗೆ ಮನೆ, ಆಸ್ತಿ ಎಂದು ಅಷ್ಟೊಂದು ಹಣ ಸುರಿದುದು ವ್ಯರ್ಥವಾಗಿರಲಿಲ್ಲ.

ಆದರೆ ಒಂದು ಕಡೆ ನೆಲೆ ನಿಂತ ಮೇಲೆ ಅವನ್ನೆಲ್ಲಾ ನಿಭಾಯಿಸಿಕೊಂಡು ಹೋಗುವುದು ಸುಲಭವಲ್ಲ. ಹಾಗಂತ ಇದ್ದೊಬ್ಬ ಮಗನನ್ನು ದೂರವಿರಿಸಲಾರರು. ತಮ್ಮ ಪ್ರೀತಿಯನ್ನೆಲ್ಲಾ ಅವನಿಗೆ ಮೀಸಲಿಟ್ಟಿದ್ದರು. ಮುಂದೆ ಎಂ.ಬಿ.ಎ.ಗೆ ಸೇರುವಾಗಲೂ ಆಕ್ಷೇಪವೆತ್ತಿದ್ದು ವಾಣಿಶ್ರೀಯವರು ಮಾತ್ರ.

ಬಿಡು, ಆ ಓದು ಎಲ್ಲರಿಗೂ ಸಿಗೋಲ್ಲ. ಎರಡು ವರ್ಷ ಕಲಿತು ಬರ್ಲಿ ಒಪ್ಪಿಗೆಯಿತ್ತಿದ್ದು ಹೆಚ್ಚು. ಓದಿನ ಕಡೆಗೆ ಸಂಪೂರ್ಣ ಗಮನವಿತ್ತು. ಒಳ್ಳೆಯ ಮಾರ್ಕ್ಸ್ ತೆಗೆದುಕೊಂಡು ಪಾಸಾದಾಗ ಕಂಪೆನಿಯವರೆ ಬಂದು ಕರೆದಿದ್ದರು.
ನೀನು ದೂರವಾಗ್ಬಿಟ್ರೆ ನಮ್ಮ ಬದುಕಿಗೆ ಅರ್ಥವಿರೋದಿಲ್ಲ. ಅಂತಹ ಆಲೋಚನೆ ಬಿಟ್ಟು ಬಿಡು. ಹಣದ ಚಿಂತೆ ಬೇಡ ನಾನು ಗಳಿಸಿರೋದು ನಿನ್ನ ಕಾಲಕ್ಕೆ ಸಾಕಾಗುತ್ತೆ. ಇಲ್ಲೆ ಏನಾದರೂ ಬಿಸಿನೆಸ್ ಮಾಡ್ಕೊಂಡಿರು ಸಲಹೆಯಿತ್ತಾಗ ವಾಣಿಶ್ರೀಯವರಿಗೂ ನೆಮ್ಮದಿಯೆನಿಸಿದ್ದು. ಬೇರೆ ಮಕ್ಕಳ ತರಹ ಹಠ ಹಿಡಿದು ವಿದೇಶಕ್ಕೆ ಹಾರುತ್ತಿದ್ದರೆ ದುಃಖಿತರಾಗಿಯೇ ಇರುತ್ತಿದ್ದರೋ ಏನೊ? ಅಂತು ಆತನು ಒಪ್ಪಿಕೊಂಡ ಮೇಲೆ ನಿಡಿದಾದ ಉಸಿರು ದಬ್ಬಿದರು.

ನಿಖಿಲ್ ಎಂಟರ್ಪ್ರೈಸಸ್ ಆರಂಭವಾಗುವ ಹೊತ್ತಿಗೆ ಸುಮ್ಮನೆ ಕಾಲಹರಣಕ್ಕೆ ಎಂದು ತಿಳಿದಿದ್ದವರ ನಂಬಿಕೆ ಬುಡಮೇಲು ಮಾಡುವಂತೆ ವ್ಯವಹಾರ ವಿಸ್ತರಿಸಿತ್ತು. ಒಂದು ವರ್ಷವಾದಲ್ಲಿಯೇ ನಿರೀಕ್ಷೆಗೂ ಮೀರಿ ಹೆಸರು ಗಳಿಸಿತ್ತು. ಮಗನ ಬೆಂಬಲಕ್ಕೆ ನಿಂತವರಿಗೆ ದೇವರು ಎಲ್ಲೂ ಮೋಸ ಮಾಡಲಿಲ್ಲವೆನಿಸಿತು. ಅವನ ಏಳಿಗೆಯ ಹಿಂದೆ ಯಾರ್ಯಾರು ಇರುವರೆನ್ನುವುದನ್ನು ತಿಳಿದುಕೊಳ್ಳುವ ಕುತೂಹಲವೂ ಇರಲಿಲ್ಲ. ಜೊತೆಗೆ ಅಲ್ಲಿಗೆ ಹೋಗುವ ಆಸಕ್ತಿಯೂ ಇರಲಿಲ್ಲ.

ಸಂಜೆಯ ಹೊತ್ತು ಮಡದಿಯ ಜೊತೆಗೆ ಅಡ್ಡಾಡಿ ಬರುವಾಗಲೂ ಬಹಳ ಸರಳವಾಗಿಯೇ ಇರುತ್ತಿದ್ದರು. ಮಗನ ಸಾಧನೆಯ ಹಿಂದೆ ಉತ್ತೇಜನ ಮಾತ್ರ ಅವರುಗಳದ್ದು. ತಮ್ಮ ಬಳಿಯಿದ್ದ ಕಾರನ್ನೂ ಮಗನಿಗೆ ದಾನರೂಪದಲ್ಲಿ ಕೊಟ್ಟರೂ ಪಕ್ಕಾ ವ್ಯವಹಾರಸ್ಥ ಅದನ್ನು ನಿರಾಕರಿಸಿದ್ದ. ಅವನ ಅಭಿರುಚಿಗೆ ತಕ್ಕಂತೆ ಒಳ್ಳೆಯ ಲಕ್ಸುರಿ ಗಾಡಿಯೇ ಬೇಕಿತ್ತು. ಆರು ತಿಂಗಳೊಳಗೆ ಬಂದ ಲಾಭದಲ್ಲಿಯೇ ಲ್ಯಾನ್ಸರ್ ತಂದು ಮನೆಯೆದುರು ನಿಲ್ಲಿಸಿದ. ಹೆಮ್ಮೆಯಿಂದ ಮಗನ ಭುಜ ತಟ್ಟಿದರು.

ಆಫೀಸ್ನ ಇಂಟೀರಿಯರ್ನಿಂದ ಹಿಡಿದು ಪ್ರತಿಯೊಂದರ ಹಿಂದೆಯೂ ಮಾಡರ್ನ್ ಮತ್ತು ಅವನ ಎಥಿಕ್ಸ್ ಎದ್ದು ಕಾಣುತ್ತಿತ್ತು. ಮನಸ್ವಿತಾ ಬಂದ ನಂತರವಂತೂ ಅವನಿಗೆ ಕುಳಿತರೂ ಪುರುಸೊತ್ತಿಲ್ಲದಷ್ಟು ಕೆಲಸ. ಅವಳೇ ಸರಿಯಾದ ಆಯ್ಕೆ ಅನಿಸಿ ಸಮಸ್ತ ಜವಾಬ್ದಾರಿಯನ್ನು ಅವಳ ಹೆಗಲಿಗೇರಿಸಿದ. ಪ್ರೊಬೆಷನರಿ ಅನ್ನುವ ಆರು ತಿಂಗಳು ನೆಪ ಮಾತ್ರಕ್ಕೆ. ಆಗಲೇ ಅವಳು ಐದು ಅಂಕಿಗಳ ಸಂಬಳ ಪಡೆಯುವಂತಾಗಿತ್ತು.
ಆ ಹಣವನ್ನು ಸೇರಿಸಿ ಇಡುತ್ತಿದ್ದರೆ ಒಂದೆರಡು ವರ್ಷಗಳಲ್ಲಿಯೇ ಸಣ್ಣದೊಂದು ಸೈಟ್ ಖರೀದಿಸಬಹುದಿತ್ತು.

ಆದರೆ ತಂದೆಯ ಬೆನ್ನಿಗೆ ಅಂಟಿಕೊಂಡ ಬಡತನ ಸಾಲದ ಹೊರೆಯನ್ನು ಏರಿಸಿತ್ತು. ಜೊತೆಗೆ ಅವರುಗಳ ಮೊಂಡುತನವೂ ಇತ್ತು. ಮನೆಯನ್ನು ಪಡೆಯುವಲ್ಲಿ ಪಟ್ಟ ಶ್ರಮ ಅಧಿಕವಾಗಿದ್ದರೂ ಅದರ ಮೇಲಿನ ಸಾಲದ ಭಾದೆಯೂ ವಿಪರೀತವಾಗಿತ್ತು. ಬಡ್ಡಿಗೆ ಬಡ್ಡಿ ಸೇರಿ ಎಷ್ಟು ತೀರಿಸುತ್ತಾ ಬಂದರೂ ಇನ್ನಷ್ಟು ಉಳಿದಿರುವಾಗ ಕಂಗಾಲಾಗಿದ್ದಳು. ಆದಾಯದ ಮೂಲವೇ ಅಲ್ಲದ ಅಂಗಡಿಯಿಂದಲೂ ಉಪಯೋಗವಿರಲ್ಲಿಲ್ಲ. ಸುಮ್ಮನೆ ಅಲ್ಲೊಂದಷ್ಟು ಬಾಡಿಗೆ, ಹಣಗಳನ್ನು ಇನ್ವೆಸ್ಟ್ ಮಾಡುವುದರಲ್ಲಿಯೂ ಅರ್ಥವಿರಲಿಲ್ಲ. ಶ್ರೀನಿವಾಸರು ಅದನ್ನು ಬಿಡಲೊಲ್ಲರು. ಧರ್ಮಸಂಕಟದಲ್ಲಿ ನರಳುವಂತಾಗಿತ್ತು.

ಹಾಗೊಂದು ಕೆಲಸ ತನ್ನನ್ನು ಅರಸಿ ಬರದಿರುತ್ತಿದ್ದರೆ ಏನು ಮಾಡಬೇಕಿತ್ತೆನ್ನುವ ಪ್ರಶ್ನೆ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದಂತೆ ಆಗುತ್ತಿತ್ತು. ಎಲ್ಲವೂ ಸುಳ್ಳೆ ಅನ್ನುವ ಪ್ರಾಪಂಚಿಕ ಸತ್ಯ ಬಹು ಬೇಗನೆ ತಿಳಿಯಿತು. ಕಟ್ಟಿದ ಕನಸುಗಳ ನಕ್ಷತ್ರ ಮಾಲೆ ಎಂದೊ ಉರಿದು ಹೋಗಿತ್ತು. ಆದರೆ ಎಲ್ಲೊ ಒಂದು ಬೆಳಕಿನ ಕಿರು ದೀಪ ಬೆಳಗಿದಂತೆ ಪ್ರವೇಶಿಸಿದವನು ಅರವಿಂದ್.

- ಅನು ಬೆಳ್ಳೆ.

0 comments:

Post a Comment