ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ವಿಚಾರ

ಸಾರ್ವಜನಿಕವಾಗಿ ಬಿಸಿಬಿಸಿ ಚರ್ಚೆಯಾಗಿ, ಪರ-ವಿರೋದಿ ವಾಗ್ವಾದಗಳಿಗೆ ಕಾರಣಗಳಾದ ಜ್ವಲಂತ ಸಮಸ್ಯೆಗಳು ಇನ್ಯಾವುದೋ ವಿವಾದ, ಮತ್ಯಾವುದೋ ಹಗರಣ, ಅಕಸ್ಮಿಕ ಅನಾಹುತಗಳ ನಂತರ ಜನರ ಮನಸ್ಸಿನಿಂದ ಮರೆಯಾಗುವುದು, ಆ ಪ್ರಕರಣದಿಂದ ಯಾರು ಲಾಭ ಪಡೆಯುತ್ತಾರೋ ಅವರು ಅದನ್ನು ತಲುಪಿಸಬೇಕಾದ ಜಾಗಕ್ಕೆ ತಲುಪಿಸುವುದು, ಜನ ಹಿಂದಿನದನ್ನು ಮರೆತು ಹೊಸ ಪ್ರಕರಣಗಳನ್ನು ಆವಾಹಿಸಿಕೊಳ್ಳುವುದು ನಿರಂತರವಾಗಿ ನಡೆದಿದೆ.ಧಿಕ್ಕಾರ ಕೂಗುವವನು ಕೂಗುತ್ತಲೇ ಇರುತ್ತಾನೆ, ಪ್ರಕರಣಗಳು ಮಾತ್ರ ಬದಲಾಗುತ್ತಿರುತ್ತವೆ ಅಷ್ಟೆ. ಪ್ರತಿಭಟನೆಗಳು ಆ ಕ್ಷಣದ ಕಾವು ಮತ್ತು ಅಂದಿನ ವಾಸ್ತವ ಮಾತ್ರ. ಗುರಿ ತಲುಪಬೇಕಾದ ಅಗತ್ಯ ಹಾಗೂ ಅನಿವಾರ್ಯತೆ ಯಾರಿಗೂ ಇರುವುದಿಲ್ಲ. ಇವೆಲ್ಲವನ್ನು ನೋಡಿದಾಗ ಈ ಹೋರಾಟಗಳೆಲ್ಲಾ ಕೇವಲ ಸುದ್ಧಿಯಲ್ಲಿರುವುದಕ್ಕಾಗಿಯೇ? ಅಥವಾ ತಮ್ಮ ಅಸ್ಥಿತ್ವವನ್ನು ಸಾಬೀತುಪಡಿಸಲೋ ಎಂದು ಅನುಮಾನವಾಗುತ್ತದೆ. ಒಂದು ಹಗರಣವನ್ನು ಜನರ ಮನಸ್ಸಿನಿಂದ ದೂರ ಮಾಡಲು ಇನ್ಯಾರದ್ದೋ ಇನ್ನೊಂದು ಹಗರಣವನ್ನು ಮುಂಚೂಣಿಗೆ ತಂದು ಹಿಂದಿನದನ್ನು ಸಕ್ರಮಗೊಳಿಸುವ ವ್ಯವಸ್ಥಿತ ಯೋಜನೆಗಳಿಂದ ಜನ ಹಿಂದಿನಿಂದಲೂ ಪಿಗ್ಗಿ ಬೀಳುತ್ತಲೇ ಇದ್ದಾರೆ.

ರಾಜ್ಯದ ಅರಣ್ಯ ಪ್ರದೇಶ ಇಡೀ ವಿಶ್ವದ ಆಸ್ತಿ. ಬೆಟ್ಟ-ಗುಡ್ಡ , ಗಿಡ-ಮರಗಳಲ್ಲಿ, ನದಿ-ತೊರೆಗಳಲ್ಲಿ ದೇವರನ್ನು ಕಾಣುವುದೆಂದರೆ ಯಾವುದೋ ಒಂದು ಮರ, ಒಂದು ಕಲ್ಲಿನ ತುಂಡನ್ನು ಗುಡಿಯೊಳಗಿರಿಸಿ, ಕುಂಕುಮ ಹಚ್ಚಿ, ಗಂಟೆ ಬಾರಿಸಿ ಪೂಜಿಸುವುದಲ್ಲ.
ಅನಗತ್ಯ ರಸ್ತೆಗಳು, ವಿವೇಚನಾರಹಿತ ಜಲವಿದ್ಯುತ್ ಯೋಜನೆಗಳು, ಪರಿಸರ ಪ್ರವಾಸೋದ್ಯಮದ ಹೆಸರಿನಲ್ಲಿ ನಡೆಯುತ್ತಿರುವ ಖಾಸಗಿಯವರ ಬಂಡವಾಳ ಹೂಡಿಕೆಗಳು. ಆ ಮೂಲಕ ಸಮಸ್ತ ಜೀವಸಂಕುಲದ ಆಸ್ತಿಯನ್ನು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಬಳಸುತ್ತಿರುವುದು ಅಕ್ಷಮ್ಯ. ಅರಣ್ಯವನ್ನು ಏಟಿಎಮ್ ಎಂದು ಭಾವಿಸಿ ದಿನನಿತ್ಯ ನಿರಂತರವಾಗಿ ಗೊತ್ತುಗುರಿಯಿಲ್ಲದೇ ದೌರ್ಜನ್ಯಕ್ಕೆ ಗುರಿಪಡಿಸಲಾಗುತ್ತಿದೆ. ಈ ಪ್ರಕೃತಿಯು ನಮ್ಮ ಮುಂದಿನ ದಿನಗಳಲ್ಲಿ ಮೈದೆಳೆಯಲಿರುವ ಜೀವಸಂಕುಲದ ಆಸ್ತಿ. ಅದು ನಾವು ನೀಡುತ್ತಿರುವ ದಾನವಲ್ಲ, ನಾವೇ ಇಲ್ಲಿ ಸಾಲಗಾರರು. ಈ ಅಮೂಲ್ಯ ಕಾಡುಗಳನ್ನು ರಕ್ಷಿಸಲು, ವಿಸ್ತರಿಸಲು ತ್ವರಿತ ಕ್ರಮ ಕೈಗೊಳ್ಳದಿದ್ದರೆ ಅದು ನಮ್ಮ ಮೂರ್ಖತನದ ಪರಮಾವಧಿ. ರಸ್ತೆ, ಜಲವಿದ್ಯುತ್, ಗಣಿಗಾರಿಕೆ, ತೈಲಸಾಗಣೆ, ಕೃಷಿಗಾಗಿ ಭೂಮಿ ಒತ್ತುವರಿ ಮುಂತಾದುವು ಸರ್ಕಾರೀ ಯೋಜನೆಗಳ ಹೆಸರಿನಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ಅಮಾನುಷ ಅತ್ಯಾಚಾರ. ಅದರ ಪರವಾಗಿ ಮಾತನಾಡುವವರು ಆಧುನಿಕ ದುಶ್ಯಾಸನರೇ ಸರಿ.

ಹತ್ತಾರು ನದಿಗಳಿಗೆ ಉಗಮ ಸ್ಥಾನವಾದ ಪಶ್ಚಿಮಘಟ್ಟಗಳು ಪ್ರಪಂಚದ ಜೀವವೈವಿಧ್ಯದ ಹಾಟ್ಸ್ಪಾಟ್ ಆಗಿದೆ. ಇಲ್ಲಿರುವ ಇರುವೆ, ಗೆದ್ದಲು, ಹುಲ್ಲು, ಪೊಟರೆಯೊಳಗಿನ ಹಕ್ಕಿ, ಧರೆಗುರುಳಿದ ಮರ, ಕಲ್ಲು ಇವೆಲ್ಲವಕ್ಕೂ ಅವುಗಳದೇ ಆದ ಜೈವಿಕ ಮಹತ್ವ ಇದೆ. ನಮ್ಮ ಯಾವುದೇ ರೀತಿಯ ಮದ್ಯ ಪ್ರವೇಶವು ದೊಡ್ಡ ಜೈವಿಕ ದುರಂತಕ್ಕೆ ಕಾರಣವಾಗುತ್ತದೆ.

ಅಭಿವೃದ್ಧಿಯೆಂದರೆ ಏನು? ಕಾಡಿನೊಳಗೆ ರಸ್ತೆ ಮಾಡಿಸಿ ಗುತ್ತಿಗೆದಾರರಿಗೆ ಕೆಲಸ ಒದಗಿಸುವುದಾ?, ಪರ್ವತದ ಒಡಲು ಬಗೆದು ಖನಿಜ ಹೊರತೆಗೆಯುವುದಾ?, ಜೀವನದಿಗಳನ್ನು ಅಡ್ಡಗಟ್ಟಿ, ತಿರುವಿ, ಕಾಡು ಮುಳುಗಿಸಿ ಖಾಸಗಿಯವರಿಗೆ ಬಂಡವಾಳ ಹೂಡಲು ಅನುಕೂಲ ಮಾಡಿಕೊಡುವುದಾ?, ಕಾಡಿನಂಚಿನಲ್ಲಿರುವ ಒತ್ತುವರಿ ಕೃಷಿಭೂಮಿಗೆ ವಾಣಿಜ್ಯ ಬೆಲೆ ದೊರಕಿಸಿಕೊಡುವುದಾ? ಎಲ್ಲಿ ಪುಕ್ಕಟೆ ಸಂಪನ್ಮೂಲ ಹಾಗೂ ಹಣ ಓಡಾಡುತ್ತದೆಯೋ ಅಲ್ಲೆಲ್ಲ ಪ್ರಕೃತಿಯ ಮೇಲೆ ದಾಳಿ ಅವ್ಯಾಹತವಾಗಿ ನಡೆಯುತ್ತದೆ.

ಜೈವಿಕ ಪರಿಸರವನ್ನು ಕಾಪಾಡುವುದಕ್ಕೆ ಯುನೆಸ್ಕೋ ಸ್ಥಳೀಯ ಸರಕಾರಗಳಿಗೆ ಸಹಕಾರ ನೀಡುತ್ತಿರುವುದು ಒಂದು
ರಚನಾತ್ಮಕ ಬೆಳವಣಿಗೆ. ಅದನ್ನು ಅರಿಯದೇ ತಿರಸ್ಕರಿಸಿ ದಾಷ್ಟ್ರ್ಯ ಮೆರೆದರೆ ಅದು ರಾಜ್ಯ ಸರಕಾರದ ಅಕ್ಷಮ್ಯ ಅಪರಾದವೇ ಸರಿ. ಯಾರ ಹಿತವನ್ನು ಕಾಪಾಡಲು ಈ ವಿರೋಧವನ್ನು ತೋರಿಸುತ್ತಿದೆ ಎಂದು ಹೇಳಲಿ. ಗಿರಿಜನರು, ವಿದ್ಯುತ್ ಸಮಸ್ಯೆ, ವನ್ಯಜೀವಿ ರಕ್ಷಣೆ, ಮುಂತಾದುವುಗಳಿಗೆ ಪ್ರಾಯೋಗಿಕ ಪರಿಹಾರವನ್ನು ಕಂಡುಕೊಳ್ಳಲಾರದ ಸರಕಾರ ತನ್ನ ಭಂಡತನವನ್ನು ಮರೆಮಾಚಲು ಯುನೆಸ್ಕೋ ಜತೆ ಗುದ್ದಾಡಿದೆವೆಂಬ ಹಮ್ಮಿಗೆ ಬಿದ್ದು ವರ್ತಿಸುತ್ತಿರುವುದು ತಪ್ಪು. ಇದರಿಂದ ಯುನೆಸ್ಕೋ ಕಳೆದುಕೊಳ್ಳುವುದು ಏನೂ ಇಲ್ಲ, ನಷ್ಟವಾಗುವುದು ನಮ್ಮೆಲ್ಲರಿಗೆ ಮತ್ತು ನಮ್ಮನಿಮ್ಮೆಲ್ಲರನ್ನೂ ಕಾಪಾಡುತ್ತಿರುವ ಜೈವಿಕ ವ್ಯವಸ್ಥೆಗೆ.

ಅಭಿವೃದ್ಧಿಯೆಂದರೆ ಕಾಂಕ್ರೀಟ್ ಕಟ್ಟಡ, ಟಾರು ರಸ್ತೆ, ವ್ಯಾಪಾರೀ ಮಳಿಗೆಗಳನ್ನು ನಿರ್ಮಿಸಲು ತಮ್ಮ ರಾಜಕೀಯ ಕಾರ್ಯಕರ್ತರಿಗೆ ಅನುವು ಮಾಡಿಕೊಡುವುದು ಎಂದುಕೊಂಡಿರುವುದು ನಮ್ಮ ತಿಳುವಳಿಕೆಗಿರುವ ಮಿತಿ. ಸೀಮಿತ ಸಂಪನ್ಮೂಲಗಳನ್ನು ಸುಸ್ತಿರವಾಗಿ ಉಳಿಸಿಕೊಂಡೇ ಹೆಜ್ಜೆ ಮುಂದಿಡಬೇಕಾದ ಅಗತ್ಯ ಹಿಂದೆಂದಿಗಿಂತಲೂ ಇಂದಿದೆ. ಅಲ್ಲಲ್ಲಿ ಅಲ್ಪಸ್ವಲ್ಪ ಉಳಿದಿರುವ ಕಾಡನ್ನು ವಿಚಲಿತಗೊಳಿಸದೇ ಅಭಿವೃದ್ಧಿ ಸಾಧಿಸಲು ಪ್ರಯತ್ನಿಸದಿರುವುದೇ ನಮ್ಮ ದೌರ್ಬಲ್ಯ.

ಅರಣ್ಯ ಮತ್ತು ಪರಿಸರವೆಂದರೆ ಮರಮುಟ್ಟು ನೀಡುವ ಅಕ್ಷಯ ಖಜಾನೆ ಎಂದುಕೊಂಡಿರುವ ನಾಯಕರು, ಬಂಜರು ಪ್ರದೇಶದಲ್ಲಿ ನೀಲಗಿರಿ, ಅಕೇಶಿಯಾ, ಸಾಗುವಾನಿ ಗಿಡಗಳನ್ನು ನೆಡುವದರಿಂದಲೇ ಅರಣ್ಯ ಸೃಷ್ಟಿಮಾಡಿದೆವೆಂದು ಬೀಗುವ ಅಧಿಕಾರಿಗಳು ಸ್ವಲ್ಪ ಪರಿಸರ ಅದ್ಯಯನ ಮಾಡುವುದು ಒಳ್ಳೆಯದು. ಕಲ್ಲು ಕೀಳುವುದು, ಮರ ಉರುಳಿಸುವುದು, ಕಾಡು ಮುಳುಗಿಸುವುದು, ಪ್ರವಾಸಿಗರಿಂದ ದುಡ್ಡು ಪೀಕುವುದು, ರೈಲು ಹಳಿ ಹಾಕುವುದು, ಪೈಪ್ಲೈನ್ ಅಳವಡಿಸುವುದು, ವಿದ್ಯುತ್ ಸಾಗಣೆಗೆ ಲೈನ್ ಎಳೆಯುವುದು ಮಾತ್ರ ಅಭಿವೃದ್ಧಿಯಲ್ಲವೆಂದು ಅರಿಯುವುದು ಅಗತ್ಯವಾಗಿದೆ.

ಗಣಿಗಾರಿಕೆ, ಕೈಗಾರಿಕೆ, ಕೃಷಿಭೂಮಿ ಒತ್ತುವರಿ, ಅರಣ್ಯ ಉತ್ಪನ್ನಗಳ ಲೂಟಿ ಇವನ್ನೆಲ್ಲಾ ನಿಯಂತ್ರಣದಲ್ಲಿಡಬೇಕಾದ ಸರಕಾರ ಪಶ್ಚಿಮಘಟ್ಟಕ್ಕೆ ಯುನೆಸ್ಕೋ ನೀಡಲುದ್ದೇಶಿಸಿರುವ ಮಾನ್ಯತೆಯನ್ನು ವಿವೇಚನೆಯಿಂದ ಸ್ವಾಗತಿಸಿ, ಸಿಕ್ಕಿರುವ ಗೌರವವನ್ನು ಪಡೆಯಬೇಕು. ನೂರಾರು ದೇಶಗಳು ತಮ್ಮ ಪರಂಪರೆಯ ತಾಣಗಳಿಗೆ ಯುನೆಸ್ಕೋ ಮಾನ್ಯತೆ ಸಿಗಲೆಂದು ಆಶಿಸುತ್ತಿರುವಾಗ ಕರ್ನಾಟಕದ ವಿಮುಖತೆ ಆಶ್ಚರ್ಯ ಹಾಗೂ ಮರುಕ ಉಂಟುಮಾಡುತ್ತದೆ. ಬಂಡವಾಳಶಾಹಿಗಳು ಹಾಗೂ ಗುತ್ತಿಗೆದಾರರೇ ಈ ಸರಕಾರವನ್ನು ನಡೆಸುತಿದ್ದಾರೋ ಎಂಬ ಅನುಮಾನ ಉಂಟಾಗುತ್ತಿದೆ.

ಕಾಡಿನೊಳಗೆ ಪ್ರವೇಶಿಸಿದೊಡನೆ ಎದುರಾಗುವ ಮರದಿಂದ ಎಷ್ಟು ಚದರಡಿ ನಾಟಾ ಪಡೆಯಬಹುದೆನ್ನುವುದು, ಕಾಡು ಸವರಿ ತೋಟಮಾಡಿದರೆ ಎಷ್ಟು ಬೆಳೆ ತೆಗೆಯಬಹುದೆನ್ನುವುದು, ಕರಿಕಲ್ಲು ಕಿತ್ತರೆ ಎಷ್ಟು ಗಳಿಸಬಹುದೆನ್ನುವುದು, ನೆಲ ಅಗೆದರೆ ಎಷ್ಟು
ಅದಿರು ಸಾಗಿಸಬಹುದೆನ್ನುವುದು, ನೀರು ಕಟ್ಟಿ ನಿಲ್ಲಿಸಿದರೆ ಎಷ್ಟು ಕಮಿಷನ್ ಪಡೆಯಬಹುದೆನ್ನುವುದು, ಗಿರಿಜನರನ್ನು ಸ್ಥಳಾಂತರಿಸಿದರೆ ಹುಟ್ಟುವ ಕಾಲೋನಿಗಳಲಿ ಎಷ್ಟು ಓಟು ಪಡೆಯಬಹುದೆನ್ನುವುದು, ರಸ್ತೆ ನಿರ್ಮಾಣ ಮಾಡಲು ಗುತ್ತಿಗೆ ನೀಡಿದರೆ ಪಾರ್ಟಿಗೆ ಎಷ್ಟು ಫಂಡ್ ಪಡೆಯಬಹುದೆಂದು ಯೋಚಿಸುವುದನ್ನು ಬಿಟ್ಟು ಮರದ ಮೇಲಿರುವ ಆರ್ಕಿಡ್ಗಳು, ತೊಗಟೆಯಡಿ ವಾಸಿಸುವ ಹುಳುಹುಪ್ಪಟೆಗಳು, ಕಪ್ಪೆಗಳು, ಪೊಟರೆಯ ಪಕ್ಷಿಗಳು, ನೆಲದಲ್ಲಿನ ಅಣಬೆಗಳು, ಮರಗಳು ಬೇರಿಳಿಸಿ ಬಾಷ್ಪೀಕರಿಸುವ ನೀರು, ನೆಲದಡಿಯ ಸೂಕ್ಷ್ಮ ಜೀವಿಗಳು, ಕಲ್ಲಿನಡಿಯ ನೀರಿನ ಸಂಗ್ರಹ, ದೊಣೆಗಳೊಳಗಿನ ಸರೀಸೃಪಗಳು ಇವುಗಳನ್ನು ಗಮನಿಸಲಿ. ಇವೆಲ್ಲವೂ ಸೇರಿಯೇ ಅರಣ್ಯವಾಗುತ್ತದೆ.

ಪಶ್ಚಿಮಘಟ್ಟವನ್ನು ವಿಶ್ವಪರಂಪರೆಯ ಪಟ್ಟಿಗೆ ಯಾಕೆ ಸೇರಿಸಬೇಕೆಂದು ಕೇಳಿದರೆ ಕನಿಷ್ಟ ನೂರು ಕಾರಣ ನೀಡಬಹುದಾದರೆ, ಯಾಕೆ ಸೇರಿಸಬಾರದೆಂಬುದಕ್ಕೆ ಮೂರು ವಿತಂಡವಾದಗಳು ಸಿಗಬಹುದು. ಜೈವಿಕ ಪರಿಸರ, ಪರಿಸರ ವಿಜ್ಞಾನ, ಮಾಲಿನ್ಯ ನಿಯಂತ್ರಣ, ಅರಣ್ಯ ಸಂರಕ್ಷಣೆ ಮುಂತಾದುವುಗಳ ಬಗ್ಗೆ ತಳಮಟ್ಟದ ಚರ್ಚೆಯಾಗಬೇಕು. ಇಂದಿನ ಲಾಭಕ್ಕಾಗಿ ಮಿಲಿಯಾಂತರ ವರ್ಷಗಳ ಈ ಭೂಮಿಯನ್ನು ಬಲಿಕೊಡುವುದು ಬೇಡ. ಯುನೆಸ್ಕೋ ಪರಂಪರಾ ತಾಣಗಳ ನಿರ್ವಹಣೆಯ ಕುರಿತಾದ ನೀತಿನಿಯಮಾವಳಿಗಳನ್ನೇ ಪೂರ್ಣವಾಗಿ ಅಧ್ಯಯನ ಮಾಡದೇ ಸಾರಾಸಗಟಾಗಿ "ಜುಟ್ಟು" ಹೇಳಿಕೆಯನ್ನು ನೀಡಿರುವುದು ಎಷ್ಟರಮಟ್ಟಿಗೆ ಸರಿ? ಅರಣ್ಯ ಇಲಾಖೆಯ ಅಧಿಕಾರಿಗಳಲ್ಲದೇ ಆ ಕ್ಷೇತ್ರದಲ್ಲಿ ಪರಿಣತಿ, ಆಸಕ್ತಿಯುಳ್ಳ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು, ವಿಜ್ಞಾನಿಗಳು ಸೇರಿ ಸಮಗ್ರವಾಗಿ ಪರಂಪರಾತಾಣಗಳ ಉಸ್ತ್ತುವಾರಿ ಮಾಡಬೇಕೆನ್ನುವುದನ್ನು
ಯುನೆಸ್ಕೋ ಸೂಚಿಸುತ್ತದೆ. ಪ್ರವಾಸಿಗಳು ಬರಲಿ, ಬಿಡಲಿ ನಮಗೆ ನಮ್ಮ ಅರಣ್ಯ ಪ್ರದೇಶದ ಸೂಕ್ಷ್ಮ ಮೂಲಸ್ವರೂಪವನ್ನು ಉಳಿಸಿಕೊಳ್ಳುವುದು ಮುಖ್ಯ.

ವೈಜ್ಞಾನಿಕ ಅನ್ವೇಷಣೆಗಳ ಅಳವಡಿಕೆ, ಐಷಾರಾಮಿ ಜೀವನ ಶೈಲಿಗಳ ಅನುಕರಣೆ, ವಿದೇಶೀ ಜೀವನ ಶೈಲಿಗಳತ್ತ ನೋಡುವ, ದನ ಸಾಕುವುದು ಹೇಗೆಂದು ತಿಳಿಯಲು ವಿದೇಶೀ ಪ್ರವಾಸ ಹೋಗುವ ಮಂತ್ರಿ ಮಹೋದಯರಿಗೆ, ಶೌಚಗೃಹಗಳ ನಿರ್ಮಾಣ ತಂತ್ರಜ್ಞಾನ ತಿಳಿಯಲು ವಿದೇಶಕ್ಕೆ ಅದ್ಯಯನ ತಂಡವನ್ನು ಕಳಿಸುವ ಸರಕಾರಕ್ಕೆ, ಕೆರೆ ಹೂಳೆತ್ತುವ ನೆಪದಲ್ಲಿ, ರಸ್ತೆ ನಿರ್ಮಾಣದ ಕಾರಣಕ್ಕೆ, ಚೆರಂಡಿ ನಿರ್ಮಾಣದ ನೆಪದಲ್ಲಿ ದುಡ್ಡುಹೊಡೆಯಲು ವಿಶ್ವಬ್ಯಾಂಕ್ ನೆರವಿಗೆ ಕೈಒಡ್ಡುವ ನಮಗೆ, ನಮ್ಮ ಕಾಡನ್ನು ರಕ್ಷಣೆ ಮಾಡಲು ವಿಶ್ವಸಂಸ್ಥೆಯ ನೆರವಿನ ಅಗತ್ಯವಿಲ್ಲ ಎನ್ನುವುದು ಹಾಸ್ಯಾಸ್ಪದವಾಗಿ ಕಾಣುತ್ತದೆ. ನಾವೇ ಸ್ಥಳೀಯರು ರಕ್ಷಣೆ ಮಾಡುತ್ತೇವೆಂದು ಈವರೆವಿಗೆ ಕಾಪಾಡಿಕೊಂಡಿರುವುದು ನಮ್ಮ ಕಣ್ಣಮುಂದಿದೆ. ನಮ್ಮೊಡನೆ ಯಾರೋ ಸದುದ್ದೇಶ ಹೊಂದಿರುವವರು ಕೈಜೋಡಿಸಿದರೆ ಎಲ್ಲಿ ನಮ್ಮಗಳ ಹುನ್ನಾರ ಜಾರಿಯಾಗಲು ಕಷ್ಟವಾಗುತ್ತದೋ ಎಂಬ ಭಯ ಅಧಿಕಾರಸ್ಥರನ್ನು ಕಾಡುತ್ತಿದೆ. ಈ ಅರಣ್ಯ ಪ್ರದೇಶ ಯಾರೊಬ್ಬರ ಸ್ವಂತ ಆಸ್ತಿಯಲ್ಲ, ಇಡೀ ಜಗತ್ತಿನ ಜೀವರಾಶಿಯ ಮಿಲಿಯಾಂತರ ವರ್ಷಗಳ ಫಲಶೃತಿ.

ಸ್ಥಳೀಯರಿಗೆ ಇಲ್ಲಸಲ್ಲದ ಸುಳ್ಳು ಹೇಳಿ, ಆಮಿಷ ಒಡ್ಡಿ ಹಾದಿತಪ್ಪಿಸುವುದನ್ನು ಬಿಟ್ಟು ಪಶ್ಚಿಮ ಘಟ್ಟವನ್ನು ಕಾಪಾಡುವತ್ತ
ಗಮನ ಹರಿಸುವುದು ಮತ್ತು ಜವಾಬ್ದಾರಿಯುತ ಹಾಗೂ ತಿಳುವಳಿಕೆಯುಳ್ಳ ನಾಗರೀಕರನ್ನು ಒಳಗೊಂಡ ಜೈವಿಕ ಪರಿಸರ ರಕ್ಷಣಾ ತಂಡಗಳನ್ನು ತಾಲ್ಲೂಕುವಾರು ರಚಿಸುವುದು ಇಂದಿನ ಅಗತ್ಯವಾಗಿದೆ ಅರಣ್ಯವಾಸಿಗಳನ್ನು ಯಾವುದಾದರೂ ನೆಪದಲ್ಲಿ ಒಕ್ಕಲೆಬ್ಬಿಸಿ ಉದ್ದಿಮೆಗಳಿಗೆ ಕಾಮರ್ಿಕರನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಬಂಡವಾಳಶಾಹಿಗಳೊಂದಿಗೆ ಕೈಜೋಡಿಸುತ್ತಿರುವ ಆಡಳಿತ ವ್ಯವಸ್ಥೆ ಇಡೀ ಕಾಡನ್ನೇ ಹರಾಜು ಹಾಕಲು ಹೊರಟಿರುವುದು ವಿಪರ್ಯಾಸ.

ಸ್ಥಳೀಯ ಅಮಾಯಕ ಜನರಿಗೆ ಪರಿಹಾರ ಹಣದ ಆಮಿಷ ಒಡ್ಡಿ ಅವರನ್ನು ಹಾದಿ ತಪ್ಪಿಸಲು ಸರಕಾರದ ಬಳಿ ಸಾಕಷ್ಟು ದಾರಿಗಳಿವೆ. ಕೃಷಿ ಮಾಡುವುದು ನಷ್ಟದ ಬಾಬತ್ತೆಂದು ರೈತರಿಗೆ ಅನ್ನಿಸುವಂತೆ ಪರಿಸ್ಥಿತಿ ಸೃಷ್ಟಿಮಾಡಿ, ಪರಿಹಾರ ರೂಪದ ಹಣದಲ್ಲಾದರೂ ಜೀವನ ಮಾಡುವ ಎಂದು ನಗರಕ್ಕೆ ವಲಸೆ ಹೋಗುವಂತೆ ಮಾಡುವುದು, ನಗರದಲ್ಲಿ ಇರುವ ಅಧಿಕಾರಸ್ತರ

ಉದ್ದಿಮೆಗಳಿಗೆ ಕೂಲಿ-ಕಾರ್ಮಿಕರನ್ನು ಪೂರೈಕೆ ಮಾಡುವುದು ಇದರ ಪರೋಕ್ಷ ಹುನ್ನಾರ. ಇಲ್ಲಿ ರೈತರು ಮೂರುಕಾಸಿಗೆ ಮಾರಿದ ಭೂಮಿಯನ್ನು ತಾವೇ ಖರೀದಿಸಿ, ರೈತರನ್ನೇ ಕೂಲಿಗಿಟ್ಟುಕೊಳ್ಳುವ ವ್ಯವಸ್ಥಿತ ಲೂಟಿಯ ಭಾಗವೇ ಈ ಎಲ್ಲಾ ವಿದ್ಯಮಾನಗಳು.
ಈಗ ಗುರುತಿಸಿರುವ ಅರಣ್ಯಪ್ರದೇಶಗಳು ಮಾತ್ರವಲ್ಲ, ರಾಜ್ಯದಾದ್ಯಂತ ಇರುವ ಇನ್ನೂ ಹಲವು ತಾಣಗಳನ್ನು ಆಯ್ಕೆ ಮಾಡಿ ಶೀಘ್ರವೇ ಯುನೆಸ್ಕೋ ಮಾನ್ಯತೆಗೆ ಶಿಫಾರಸ್ಸು ಮಾಡಿ ಸರಕಾರ ಕೋರಿಕೆ ಸಲ್ಲಿಸಬೇಕು.


ಮರಗಳ್ಳರು, ಗಣಿಕೋರರು, ಅರಣ್ಯ ಒತ್ತುವರಿದಾರರು, ರೆಸಾರ್ಟ್ ಬಂಡವಾಳಿಗರು, ಭ್ರಷ್ಟ ಅಧಿಕಾರಿಗಳು, ಸಮಯ ಸಾಧಕ ರಾಜಕಾರಣಿಗಳು, ಒಟ್ಟಾಗಿ ಸೇರಿ ನಡೆಸಿರುವ ಈ ಲಾಬಿಗೆ ಸರಕಾರ ಮಣಿದರೆ ಈ ರಾಜ್ಯದ ಜನತೆ ಅವರನ್ನು ಎಂದೂ ಕ್ಷಮಿಸಲಾರರು. ಜೈವಿಕ ಪರಿಸರ ಎಂದರೆ ಮೂಲಭೂತವಾಗಿ ಏನೆಂದೇ ತಿಳಿಯದವರು ವಾದ ಮಂಡಿಸುವುದನ್ನು ನೋಡಿದರೆ ನಾವು ಈ ಮಟ್ಟಿಗಿನ ಬೌದ್ಧಿಕ ಅಧ:ಪತನ ಕಂಡಿದ್ದೇವೆಯೇ ಎಂದು ದಿಗ್ಬ್ರಮೆ ಉಂಟಾಗುತ್ತಿದೆ.

ಓಟು ಗಳಿಸಿ ಅಧಿಕಾರ ಪಡೆದಿದ್ದಾರೆ ಎಂಬ ಒಂದೇ ಕಾರಣಕ್ಕೆ ರಾಜಕಾರಣಿಗಳ ಮುಂದೆ ಈ ನಾಡಿನ ಬುದ್ಧಿಜೀವಿಗಳು ಅಂಗೈಯಷ್ಟು ಸ್ಪಷ್ಟವಾಗಿರುವ ಸತ್ಯವನ್ನು ಮನವರಿಕೆ ಮಾಡಿಕೊಡಲು ಕೈ ಮುಗಿದು ಪ್ರಾರ್ಥಿಸುವ ಪರಿಸ್ಥಿತಿ ನಿರ್ಮಾಣವಾಗಿದೆಯೆಂದರೆ ನಮ್ಮೆಲ್ಲರಿಗೂ ನಾಚಿಕೆಯ ವಿಷಯ. ಹೊಟ್ಟೆಗೆ ಅನ್ನ ತಿನ್ನಿ ಎಂದು ಹೇಳುವುದಕ್ಕೂ ಕೈ ಜೋಡಿಸಿ ಬೇಡಬೇಕಾಗಿರುವುದು ಪರಿಸ್ಥಿತಿಯ ವ್ಯಂಗ್ಯ. ಮಲೆಕುಡಿಯರು, ಸಿದ್ಧಿಯರನ್ನು ಮುಖ್ಯವಾಹಿನಿಗೆ ತರುತ್ತೇವೆಂದು ಬಂಬಡಾ ಬಾರಿಸುತ್ತಿರುವುದರ ಹಿಂದೆ ಇರುವ ಉದ್ದೇಶ ಎಂಥವರಿಗೂ ಅರ್ಥವಾಗುವಂಥದ್ದೇ. ಕಾಡುಜನರಿಗಾಗಿ ಕೋಟ್ಯಾಂತರ ರೂಪಾಯಿ ಖರ್ಚುಮಾಡುತ್ತಿದ್ದೇವೆ ಎಂದು ಜಾಗಟೆ ಹೊಡೆಯುತ್ತಿರುವವರು ಈ ಎಲ್ಲಾ ಕಾರ್ಯಗಳನ್ನು ಅರಣ್ಯ ಲೂಟಿ ಹೊಡೆಯಲು ಮೂಲಸೌಕರ್ಯವನ್ನಾಗಿ ಹೊಂದಿಸಿಕೊಳ್ಳುತ್ತಿದ್ದಾರೆ ಅಷ್ಟೇ.

ಇಲ್ಲಿನ ಕಾಮಗಾರಿಗಳ ಗುತ್ತಿಗೆಯ ಫಲಾನುಭವಿಗಳು ಆಯಾ ಪಕ್ಷದ ಕಾರ್ಯಕರ್ತರುಗಳು. ಕೆಲಸಕ್ಕಾಗಿ ಗುತ್ತಿಗೆಯಲ್ಲ, ಗುತ್ತಿಗೆದಾರರಿಗಾಗಿ ಕೆಲಸದ ಸೃಷ್ಟಿಯಾಗುತ್ತಿದೆ. ನಮ್ಮ ಕಾನೂನಿನ ಸದುಪಯೋಗ ಪಡೆದು ಈವರೆಗೆ ಅರಣ್ಯ ರಕ್ಷಣೆ ಮಾಡಿರುವುದರ ಚಿತ್ರಣ ನಮ್ಮ ಮುಂದೆ ಇದೆ. ವಿಶ್ವ ಪರಂಪರೆಯ ಪಟ್ಟಿಗೆ ಅರಣ್ಯ ಪ್ರದೇಶವನ್ನು ಸೇರಿಸುವುದರಿಂದ ಯಾವುದೇ ಲಾಭವಿಲ್ಲ ಎಂದಿರುವ ಸಚಿವರು ಈ "ಲಾಭ" ಪದದ ಅರ್ಥವ್ಯಾಪ್ತಿಯನ್ನು ವಿವರಿಸಿದರೆ ಈ ನಾಡಿನ ಜನತೆಗೆ ಉಪಕಾರವಾಗುತ್ತದೆ.

ಪರಿಸರ ಪ್ರವಾಸೋದ್ಯಮ ಎಂಬ ಮಾಯಾಂಗನೆಯನ್ನು ಮುಂದಿಟ್ಟುಕೊಂಡು ಪ್ರದರ್ಶಿಸುತ್ತಾ ಕಾಡುಳಿಸುತ್ತೇವೆ, ಉದ್ಯೋಗ ಕೊಡುತ್ತೇವೆ ಎಂಬುದೆಲ್ಲಾ ತಮ್ಮ ಲಾಭ ಹಾಗೂ ತಮ್ಮವರ ಲಾಭಕ್ಕಾಗಿ ಆಯಕಟ್ಟಿನ ಜಾಗದಲ್ಲಿ ಕಾಲೂರಲು ಹೇಳುವ ನೆಪಗಳಾಗಿವೆ. ಜೈವಿಕ ವ್ಯವಸ್ಥೆಯನ್ನು ಕೇವಲ ಸೀಮಿತ ವ್ಯಾಪ್ತಿಯಲ್ಲಿ ವ್ಯಾಖ್ಯಾನ ಮಾಡುವ ಅರೆ ತಿಳುವಳಿಕೆಯ ಕೆಲಸವನ್ನು ಮಾಡುವುದು ಬೇಡ.

ನಮಗೆ ಪ್ರವಾಸೋದ್ಯಮದ ಹೆಸರಿನಲ್ಲಿ ಹರಿದು ಬರುವ ಹಣ ಬೇಡ. ಹಣದಿಂದ ನಮಗೆ ಆಮ್ಲಜನಕ, ಶುಭ್ರ ನೀರು, ಆರೋಗ್ಯಕರ ವಾತಾವರಣ ಸಿಗುವುದಿಲ್ಲ. ನಮಗೆ ನಮ್ಮ ಅರಣ್ಯ ಉಳಿಯಬೇಕು, ಹೆಚ್ಚು ವಿಸ್ತಾರವಾಗಿ ಬೆಳೆಯಬೇಕು ಮತ್ತು ನೈಸಗರ್ಿಕವಾಗಿರಬೇಕು. ಅರಣ್ಯದೊಳಗೆ ಬದುಕುತ್ತಿರುವವರು ಈ ಮೂರನ್ನು ಗಮನದಲ್ಲಿಟ್ಟುಕೊಂಡು ಪ್ರಕೃತಿಯೊಡನೆ ಹೊಂದಿಕೊಂಡು ಜೀವಿಸಬೇಕು.
2005ರಲ್ಲಿ ಕರ್ನಾಟಕ ಸರಕಾರವೇ ಯುನೆಸ್ಕೋ ಮಾನ್ಯತೆ ಕೋರಿ ಮನವಿ ಸಲ್ಲಿಸಿದ್ದರೆ ಇಂದಿನ ಸರಕಾರ ಸಿಕ್ಕಿರುವ ಮಾನ್ಯತೆಯನ್ನು ತಿರಸ್ಕರಿಸಿ ಭಾರೀ ಪ್ರಮಾದವನ್ನೇ ಮಾಡಿದೆ. ಜನತೆ ತಮಗೆ ನೀಡಿರುವ ಪರಮಾಧಿಕಾರದಿಂದ ಈ ವರೆವಿಗೆ ಏನೇನನ್ನು ಮಾಡಿದ್ದೀರೆಂಬುದು ಕಣ್ಣೆದುರೇ ಇದೆ. ಯಾರಿಗೂ ಬೇಕಿಲ್ಲದ ಕಾಮಗಾರಿಗಳನ್ನು ಅರಣ್ಯದೊಳಗೆ ನಡೆಸಿದ್ದರಿಂದ ಸರಕಾರೀ ಖಜಾನೆ ಖಾಲಿಯಾಯ್ತಲ್ಲದೇ, ಹಿಂಬಾಲಕರ ಜೇಬು ಈ ನೆಪದಲ್ಲಿ ತುಂಬಿತು. ಪರಂಪರಾ ತಾಣವಾಗಿ ಗುರುತಿಸಿರುವ ಹತ್ತು ಸ್ಥಳಗಳಲ್ಲಿ 5 ತಾಣಗಳು ರಾಷ್ಟ್ರೀಯ ಉದ್ಯಾನ ಮತ್ತು ವನ್ಯಜೀವಿ ಧಾಮಗಳಾಗಿದ್ದು, ಇನ್ನು 5 ತಾಣಗಳು ರಕ್ಷಿತಾರಣ್ಯಗಳೇ ಆಗಿವೆ. ಸರಕಾರ ಈ ವರೆಗೆ ಮಾಡಿರುವ ಸಂರಕ್ಷಣಾ ಕೆಲಸಗಳನ್ನು ಮಾನ್ಯಮಾಡುವುದಷ್ಟೇ ಯುನೆಸ್ಕೋದ ಉದ್ದೇಶವಾಗಿದೆ. ಕೆಸರಿನಲ್ಲಿ ಸಿಕ್ಕಿಹಾಕಿಕೊಂಡಿರುವ ವಾಹನವನ್ನು ತಳ್ಳಲು ನಮ್ಮ ಜೊತೆ ದಾರಿಹೋಕರ್ಯಾರೋ ಕೈಜೋಡಿಸಿದಂತೆ ಅಷ್ಟೇ. ಅದಕ್ಕೆ ಯಾಕೆ ಈ ಅವಾಂತರ ಸೃಷ್ಟಿಯಾಗಿದೆಯೋ ಆಶ್ಚರ್ಯವಾಗುತ್ತದೆ.

ವನಮಹೋತ್ಸವದಂದು ಒಂದು ಗಿಡವನ್ನು ಕೈಯಲ್ಲಿ ಹಿಡಿದು ಫೋಟೋ ತೆಗೆಸಿಕೊಂಡು, ಪೇಪರಿನಲ್ಲಿ ಹಾಕಿಸಿಕೊಳ್ಳುವುದೇ ಪರಿಸರ ರಕ್ಷಣೆ ಎಂದುಕೊಂಡಿರುವುದು ಹಾಸ್ಯಾಸ್ಪದ. ಯಾರೋ ಕೆಲವು ಬುದ್ಧಿಗೇಡಿಗಳ ತಪ್ಪು ನಿದರ್ಾರದಿಂದ ಕರ್ನಾಟಕದ ಜನತೆ ಮೂರ್ಖರೆಂಬ ಹಣೆಪಟ್ಟಿ ಧರಿಸುವ ಕಾಲ ಬಂದಿದೆ.

ಪ್ರತಿಭಟಿಸಿದವರನ್ನು ಯಾವುದಾದರೂ ಟೀಯೆ ಡೀಯೆ ಸೌಲಭ್ಯವಿರುವ ಕಮಿಟಿಗಳಿಗೆ ಹಾಕಿಕೊಂಡರೆ, ಸಮಾಜ ಸೇವಕರ ಕೋಟಾದಡಿ ಸೈಟು ನೀಡಿದರೆ, ಯಾವುದೋ ಕಾರಣದಲ್ಲಿ ವಿದೇಶ ಪ್ರವಾಸ ಕಳಿಸಿದರೆ, ಯಾರಿಗೋ ಸೇರಬೇಕಾಗಿದ್ದ ನಾಲ್ಕು ಸಪೋಟಾ ಗಿಡಗಳನ್ನು ಕೊಟ್ಟು ತಲೆ ಸವರಿದರೆ ಅಥವಾ ಇನ್ಯಾವುದೋ ಆಮಿಷ ಒಡ್ಡಿ ಬಾಯಿ ಮುಚ್ಚಿಸುವ ನಮ್ಮ ಈ ವ್ಯವಸ್ಥೆ ಚಳುವಳಿಗಳನ್ನು ಹಾದಿ ತಪ್ಪಿಸುವ ಕೆಲಸ ಮಾಡುತ್ತಿದೆ. ವೈಯಕ್ತಿಕ ಲಾಭದ ನಿರೀಕ್ಷೆಯಲ್ಲಿ ಹೋರಾಟಗಳ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವವರ ಸಂಖ್ಯೆಯೇನೂ ಕಡಿಮೆಯಿಲ್ಲ.

ಮಾನ್ಯತೆಯಿಂದ ಪಶ್ಚಿಮಘಟ್ಟಗಳ ರಕ್ಷಣೆಗೆ ಹರಿದು ಬರಬಹುದಾದ ಅನುದಾನಕ್ಕೆ ಲೆಕ್ಕ ಕೊಡಬೇಕಾಗಿ ಬರುತ್ತದೆ. ಆದರೆ ಪಶ್ಚಿಮಘಟ್ಟಗಳನ್ನು ಈಗಿನಂತೆಯೇ ಕೊಳ್ಳೆಹೊಡೆಯುತ್ತಿದ್ದರೆ ಯಾರಿಗೂ ಲೆಕ್ಕಕೊಡಬೇಕಾಗಿಲ್ಲ. ಮೊಬೈಲ್ ಕರೆಗೆ 7 ಪೈಸೆಯಂತೆ, 15 ಪೈಸೆಯಂತೆ ಎಂದು ಜುಜುಬಿ ಲೆಕ್ಕ ಹಾಕಿ ಏನನ್ನೋ ಭಾರೀ ಉಳಿಸಿದ್ದೇವೆ ಎಂದು ಬೀಗುವ ನಾವು ನಮ್ಮೆದುರಿಗೇ ಬೆಲೆಯನ್ನೇ ಕಟ್ಟಲಾಗದ ವಿಶ್ವ ಸಮುದಾಯದ ಆಸ್ತಿಯನ್ನು ಅವಿವೇಕಿ ಯಾರೋ ಲೂಟಿ ಲೂಟಿ ಹೊಡೆಯುತ್ತಿದ್ದಾನೆ ಎಂದರೆ ನೋಡಿಕೊಂಡು ಸುಮ್ಮನಿರುತ್ತೇವೆ ಎಂದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ.ಪಶ್ಚಿಮ ಘಟ್ಟಗಳ ಶೋಷಣೆಯೇ ಹಲವರ ಜೀವನಕ್ಕೆ ಆಧಾರವಾಗಿರುವುದು ವಿಪರ್ಯಾಸ .ಹಾಗಾಗಿ ಸುಲಭವಾಗಿ ಮತ್ತು ಸರಾಗವಾಗಿ ನಡೆಯುತ್ತಿರುವ ಯಲ್ಲಮ್ಮನ ಜಾತ್ರೆಯನ್ನು ನಿಲ್ಲಿಸಲು ಯಾರೂ ಮುಂದಾಗುತ್ತಿಲ್ಲ. ಪ್ರತಿಯೊಬ್ಬರೂ ಈ ವ್ಯವಸ್ಥೆಯ ಲಾಭವನ್ನು ಒಂದಲ್ಲ ಒಂದು ರೀತಿಯಲ್ಲಿ ಪಡೆಯುತ್ತಿದ್ದಾರೆ ಇಲ್ಲವೇ ಪಡೆಯುವ ಹವಣಿಕೆಯಲ್ಲಿದ್ದಾರೆ. ತಮ್ಮ ಹಾಗೂ ತಮ್ಮವರ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಅದರ ಮೂಲಕ ಆರ್ಥಿಕ ಹಾಗೂ ರಾಜಕೀಯ ಲಾಭಕ್ಕಾಗಿ ಹೊಂಚುಹಾಕುತ್ತಿರುವವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು.

ನಾವು ಸತ್ತ ಕೂಡಲೇ ಈ ಜಗತ್ತೇನೂ ನಿಂತು ಹೋಗುವುದಿಲ್ಲ. ನಮ್ಮ ಮುಂದಿನವರಿಗೂ ನಾವೀಗ ಅನುಭವಿಸುತ್ತಿರುವ ಸಕಲ ಜೈವಿಕ ಅನುಕೂಲಗಳ ಅಗತ್ಯವಿದೆ. ಮರಗಳು ವೋಟ್ ಹಾಕಲ್ವಲ್ಲ ಅದೇ ಎಡವಟ್ಟಾಗಿರುವುದು.ಪಶ್ಚಿಮಘಟ್ಟಗಳಿಗೆ ಯುನೆಸ್ಕೋ ಪಾರಂಪರಿಕ ಮಾನ್ಯತೆಯನ್ನು ವಿರೋಧಿಸುತ್ತಿರುವವರ ಎಲ್ಲಾ ರೀತಿಯ ವ್ಯವಹಾರಗಳಿಗೆ ಬಂಡವಾಳ ಹರಿದುಬರುತ್ತಿರುವುದು ಈ ಕಾಡುಗಳಿಂದ. ಇವರುಗಳ ಪಾರಂಪರಿಕ ದಂಧೆಗಳಿಗೆ ಎಲ್ಲಿ ಕುತ್ತು ಬರುತ್ತದೆಯೋ ಎಂಬ ಆತಂಕದಲ್ಲಿದ್ದಾರೆ ಅಷ್ಟೆ.
ಇವರ ಪಾರಂಪರಿಕ ಅವ್ಯವಹಾರಗಳನ್ನು ಉಳಿಸಿಕೊಳ್ಳಲು ಜನರಲ್ಲಿ ಇಲ್ಲಸಲ್ಲದ ಹಾಗೂ ಕಾಲ್ಪನಿಕ ಭಯವನ್ನು ಹುಟ್ಟುಹಾಕಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಇಲ್ಲಿರುವುದು ಕೇಂದ್ರ ಹಾಗೂ ರಾಜ್ಯ ಸರಕಾರಗಳ ನಡುವಿನ ಅಧಿಕಾರವ್ಯಾಪ್ತಿಯ ಪ್ರಶ್ನೆಯಲ್ಲ, ಸರಳವಾದ ವಿವೇಕದ ಪ್ರಶ್ನೆ.

ರಾಜ್ಯ ಸರಕಾರಕ್ಕೆ ತನ್ನದೇ ಆದ ಪರಿಸರ ಕಾಳಜಿ ಇದ್ದಲ್ಲಿ, ಗೋಮಾಳ ಪ್ರದೇಶ, ಸಾರ್ವಜನಿಕ ಕೆರೆ ಹಾಗೂ ಸಮುದಾಯದ ಬಳಕೆಗಾಗಿ ಮೀಸಲಾಗಿದ್ದು ಈಗ ಖಾಸಗಿ ಸ್ವತ್ತಾಗಿರುವ ಒತ್ತುವರಿಪ್ರದೇಶಗಳನ್ನು ಸೂಕ್ತ ಕಾನೂನಿನ ಅನ್ವಯ ಭೂರಹಿತರಿಗೆ ಹಾಗೂ ಭೂಮಿ ಕಳೆದುಕೊಂಡ ಸಣ್ಣ ಹಿಡುವಳಿದಾರರಿಗೆ ಮರು ಹಂಚಿಕೆ ಮಾಡಲಿ. ಆಗಲಾದರೂ ಪರಿಸರ ಕಾಳಜಿಯ ಜೊತೆಜೊತೆಗೆ ಸಾಮಾಜಿಕ ನ್ಯಾಯವನ್ನೂ ಸಾಧಿಸಿದಂತಾಗುತ್ತದೆ.

ಪರಿಸರದ ಪರವಾಗಿ ಮಾತನಾಡುವವರೆಲ್ಲರೂ ಪ್ರಗತಿ ವಿರೋಧಿಗಳೆಂದು ಬಿಂಬಿಸುವ ಪ್ರಯತ್ನ ಎಲ್ಲೆಡೆಯೂ ನಡೆಯುತ್ತಿದೆ. ಪ್ರಗತಿಯೆಂದರೆ ಸಾರ್ವಜನಿಕ ಸಂಪನ್ಮೂಲಗಳನ್ನು ಕೆಲವೇ ಜನರ ಅಗತ್ಯಕ್ಕೆ ಬಳಸಿಕೊಳ್ಳುವುದೆಂದು ತಿಳಿದಿರುವವರಿಗೆ ಬುದ್ಧಿಹೇಳುವವರು ಯಾರು?
ಗಣಿ, ಟಿಂಬರ್, ಒತ್ತುವರಿ, ರೆಸಾರ್ಟ್ ಹಾಗೂ ಗುತ್ತಿಗೆ ಲಾಬಿಗೆ ಸಾರ್ವಜನಿಕ ಹಿತಾಸಕ್ತಿಯನ್ನು ಅಡವಿಟ್ಟಿರುವವರು ನಾಳೆ ನಮ್ಮ ನಿಮ್ಮನ್ನು ಯಾರಿಗಾದರೂ ಮಾರುವುದಿಲ್ಲ ಎಂಬುದು ಯಾವ ಖಾತ್ರಿ? ಸ್ವಯಂ ಸೇವಾ ಸಂಸ್ಥೆಗಳಿಗೆ ಸಾರ್ವಜನಿಕರ ಹಣವನ್ನು ಹಂಚಿ ಅವರ ಮೂಲಕ ತನಗೆ ಬೇಕಾದ ಹೇಳಿಕೆಗಳನ್ನು ಕೊಡಿಸುವ ಈ ವ್ಯವಸ್ಥೆ ನಮ್ಮ ಜೈವಿಕ ಪರಿಸರವನ್ನು ಪ್ರಾಮಾಣಿಕವಾಗಿ ಉಳಿಸುತ್ತದೆ ಎನ್ನುವ ಭರವಸೆ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿದೆ.

ಅತ್ಯಂತ ಮುಖ್ಯ ನಿರ್ಧಾರಗಳನ್ನು ಮತ್ತು ಸಮಸ್ಯೆಗಳನ್ನು ಜನರಿಂದ ದೂರವಿಟ್ಟು ಮುಚ್ಚಿಹಾಕುವ ಹುನ್ನಾರ ನಾಡಿಗೆ ಒಳಿತನ್ನು ಮಾಡುವುದಿಲ್ಲ. ನಮ್ಮ ನೈಸರ್ಗಿಕ ಕಾಡನ್ನು ಮೂಲಧನವನ್ನಾಗಿಟ್ಟುಕೊಂಡು ಅದರಿಂದ ಬರುವ ಬಡ್ಡಿಯನ್ನಷ್ಟೇ ನಾವು ಬಳಸುವುದನ್ನು ಬಿಟ್ಟು ಮೂಲ ಬಂಡವಾಳವನ್ನೇ ಬೇಕಾಬಿಟ್ಟಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಜೀವಮಂಡಲದ ಮೇಲೆ ದಬ್ಬಾಳಿಕೆ ನಡೆಸದಂತೆ ಬದುಕುವುದರಲ್ಲಿ ನಾಡಿನ ಘನತೆ-ಗೌರವ ಇದೆ.

ಅನ್ಯಾಯ ಮಾಡುವವನಿಗಿಂತ, ನಡೆಯುತ್ತಿರುವ ಅನ್ಯಾಯವನ್ನು ನೋಡಿಕೊಂಡು ಸುಮ್ಮನಿರುವವನು ಈ ಸಮಾಜಕ್ಕೆ ಹೆಚ್ಚು ಅಪಾಯಕಾರಿ.

- ಧನಂಜಯ ಜೀವಾಳ ಬಿ.ಕೆ.
ಪರಿಸರ ಕಾರ್ಯಕರ್ತ, ಮೂಡಿಗೆರೆ.

0 comments:

Post a Comment