ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ
ದೈನಂದಿನ ಕಾದಂಬರಿ : ಭಾಗ - 12

ಅಧ್ಯಾಯ 4

ದುಃಖವನ್ನು ನುಂಗಿಕೊಂಡು ಎಲ್ಲವನ್ನೂ ಕಳೆದುಕೊಂಡವನ ಬದುಕು ಕತ್ತಲೆಯಾದಾಗ ಆತ್ಮರಾಮ್ನ ತಮ್ಮ ಜೀವನ್ರಾಮ್ ಸ್ವಂತ ಮಗನಂತೆ ಅಶುತೋಶ್ನನ್ನು ಆದರಿಸಿದ್ದು ಬೇರೆಯ ವಿಷಯ. ಚಿಕ್ಕಪ್ಪನಷ್ಟೆ ಒಳ್ಳೆಯ ಹೃದಯದ ಹೆಣ್ಣಲ್ಲ ಅವರ ಕೈ ಹಿಡಿದ ಸಂಧ್ಯಾ. ಅವರಿಗೆ ಆತ್ಮರಾಮ್ನ ಮಗನ ಮೇಲೆ ಕನಿಕರಕ್ಕಿಂತಲೂ ಅವರ ಆಸ್ತಿಯ ಮೇಲೆ ಕಣ್ಣಿತ್ತು. ಸೂತಕದ ಮನೆಯಲ್ಲಿಯೂ ಕುಳಿತು ಅವರಾಡಿದ್ದು ಕೇವಲ ಕೋಟಿಗಟ್ಟಲೆ ಬೆಲೆಬಾಳುವ ಆತ್ಮರಾಮ್ನ ಆಸ್ತಿಯ ಬಗ್ಗೆ.ದೇಶಸೇವೆಗೆ ತನ್ನನ್ನೇ ಸಮರ್ಪಿಸಿಕೊಂಡವನ ಮೇಲೆ ಎಳ್ಳಷ್ಟು ಒಳ್ಳೆಯ ಅಭಿಪ್ರಾಯವಿರಲಿಲ್ಲ.ಯಾವಾಗ ಅತ್ತಿಗೆ ಹೋದ್ರೊ ಆವಾಗ್ಲೆ ರಿಸೈನ್ ಮಾಡಿ ಬಂದು ಬಿಡ್ತಿದ್ರೆ ಜೀವನಾದ್ರೂ ಉಳಿತಿತ್ತು ಸಾವಿನ ವಾರ್ತೆ ಕೇಳಿದಾಗ ಕೊಂಕು ನುಡಿದ್ದಿದ್ದರು.ಮುಂದೆ ನೀನೇನು ಮಾಡ್ತಿ? ತಬ್ಬಲಿ ಅನಿಸ್ಕೊಬೇಡ. ಯಾವುದಾದ್ರೂ ಒಳ್ಳೆಯ ಬಿಸಿನೆಸ್ ಮಾಡ್ಬಿಡು. ನಿನ್ನ ತಂದೆ ಮಾಡಿಟ್ಟಿರೊ ಆಸ್ತಿ ಯಾರಿಗೆ? ಬಹಳ ಹಗುರವಾಗಿ ಮಗನ ಸಮಾನನಾದವನ ಬಗ್ಗೆ ಆಡಿದರು. ಜೀವನರಾಮ್ರಿಗೆ ಸಹ್ಯವಾಗಲಿಲ್ಲ. ಅಶುತೋಶ್ನದ್ದು ಇನ್ನೂ ಬಿಸಿನೆಸ್ಗೆ ಇಳಿಯುವ ವಯಸ್ಸಲ್ಲ. ಓದು ಮುಗಿಯುವರೆಗೂ ಜವಾಬ್ದಾರಿ ಹೊರಲು ಮುಂದಾಗಿದ್ದರು.ಅವನೇನು ವಿದ್ಯೆ ಮುಗಿಸಿಲ್ಲ. ಪೋಸ್ಟ್ ಗ್ರಾಜುವೇಷನ್ ಮುಗಿಸ್ಲಿ. ಅಲ್ಲಿಯವರೆಗೆ ವ್ಯವಹಾರವಾಗಲಿ, ಮನೆಯ ಬಗ್ಗೆಯಾಗಲಿ ಚಿಂತೆ ಬೇಡ. ಹರಿಣಮ್ಮ ಇರೋವರ್ಗೂ ಅವನನ್ನು ಚೆನ್ನಾಗಿ ನೋಡಿಕೊಳ್ತೀನಿ
ಗಂಡನ ಮಾತಿಗೆ ಸಂಧ್ಯಾ ಮುಖ ಕೊಂಕಿಸಿದರು.

ಯಾರ್ಯಾರ ಹಣೆಯಲ್ಲಿ ಏನೇನು ಬರೆದಿದ್ಯೊ ಅದೇ ಆಗ್ಬೇಕು. ಒಬ್ನೆ ಮಗಾಂತ ಮುದ್ದಾಡಿದ್ರು. ಈಗ ಅತ್ತ ಓದು ಪೂರ್ಣ ಆಗದೆ ಇತ್ತ ವ್ಯವಹಾರನೂ ತಿಳಿಯದೆ ಕಂಗಾಲಾಗಿದ್ದಾನೆ. ಇನ್ನು ಇವ್ನು ತಂದೆಯ ಹಾಗೆ ದೇಶ ಸೇವೆಗೆ ಹೊರಡೋದೆ ಚೆನ್ನ
ಯಾವ ಘಳಿಗೆಯಲ್ಲಿ ಅಂದರೋ ಅದನ್ನೇ ಗಟ್ಟಿಯಾಗಿ ಹಿಡಿದುಕೊಂಡ ಅಶುತೋಶ್. ಬೇರೆ ಯಾವ ದಾರಿಯೂ ಗೋಚರಿಸಿದಾಯಿತು. ತಂದೆಯ ಆಪ್ತ ಗೆಳೆಯರಾಗಿದ್ದ ಸುಮಿಂದರ್ ಸಿಂಗ್ರನ್ನು ಭೇಟಿಯಾಗುವ ಉದ್ದೇಶವಿತ್ತು. ಈಗಿಂದೀಗಲೇ ಎದ್ದು ಹೋದರೆ ಚಿಕ್ಕಮ್ಮ ಮತ್ತೆ ಕೊಂಕು ತೆಗೆದಾರೆನ್ನುವ ಭಯವಿತ್ತು.

ನೀನೇನು ಮಾಡ್ಬೇಕೂಂತ ನಿರ್ಧರಿಸಿದ್ದೀಯಾ? ಜೀವನರಾಮ್ ಪ್ರಶ್ನೆ ಬಂದಾಗ ಮುಖದ ಗಂಭೀರತೆ ಸಡಿಲವಾಗಿತ್ತು. ನಕ್ಕು ಸಂಧ್ಯಾರತ್ತ ನೋಡಿದ. ಗೊಂದಲಕ್ಕೊಳಗಾದರೂ ಇಬ್ಬರೂ. ಒಬ್ಬರ ಮುಖ ಒಬ್ಬರು ನೋಡುತ್ತಿರುವಾಗ ಅವನು ನಿರ್ಧಾರ ಗಟ್ಟಿ ಮಾಡಿಕೊಂಡಂತೆ ಹೇಳಿದ.
ಸಂಧ್ಯಾ ಆಂಟೀ ಹೇಳಿರೋದನ್ನೇ ನಾನು ಅನುಸರಿಸ್ಬೇಕೂಂತ ನಿರ್ಧರಿಸಿದ್ದೇನೆ. ಸುಮಿಂದರ್ ಸಿಂಗ್ ಅಂಕಲ್ರನ್ನು ಭೇಟಿಯಾಗೊ ಉದ್ದೇಶವಿದೆ. ಮುಂದಿನ ವಾರ ಚಂಡಿಗಢಕ್ಕೆ ಹೋಗ್ತೀನಿ ಅವನಾಡಿದ ಮಾತುಗಳು ಸಂಧ್ಯಾರನ್ನು ಇರಿಯಿತು. ಜೀವನ್ರಾಮ್ ಮಾತನಾಡಲಾರದೆ ಮಡದಿಯತ್ತ ನೋಡಿದರು. ಅವರಿಗೆ ಅನಾವಶ್ಯಕ ಹುಡುಗನ ಮನಸ್ಸು ನೋಯಿಸಿದಳೆನ್ನುವ ಸಿಟ್ಟು ಇತ್ತು. ಅವನನ್ನು ಸರಿಯಾದ ದಾರಿಯಲ್ಲಿ ನಡೆಸುವ ಧ್ಯೇಯವಿತ್ತು. ತಬ್ಬಲಿ ಹುಡುಗನೆನ್ನುವ ಕನಿಕರ ಜೊತೆಗೆ. ಒಂದು ಹೆಣ್ಣಾಗಿ ಅವಳು ಅಶುತೋಶ್ ಬಗ್ಗೆ ಯೋಚಿಸದಿದ್ದಿದ್ದು ಅತೀವ ವೇದನೆಯಾಯಿತು. ಅವನ ಹತ್ತಿರ ಬಂದು ಮೈದಡವಿದರು.

ಆಂಟಿ ಹೇಳ್ತಾರೆ ಅನ್ನೊ ದೃಷ್ಟಿಯಿಂದ ನೀನು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ. ಬದುಕುವ ದಾರಿ ಹಲವಾರಿದೆ. ದೇಶ ಸೇವೆ ನಿನ್ನ ತಂದೆ ಮಾಡಿರೋದ್ರಿಂದ ನೀನೂ ಅದನ್ನೇ ಆರಿಸಿಕೊಳ್ಳಬೇಕಾಗಿಲ್ಲ. ಹೇಗೂ ಕಲಿಯುವ ಮನಸಿದೆಯಲ್ಲ ಮೊದಲು ಓದು ಮುಗಿಸು. ಅಲ್ಲಿಯವರೆಗೂ ನೀನು ನಮಗೆ ಹೊರೆಯಾಗೋದಿಲ್ಲ ಆ ಮಾತುಗಳನ್ನು ಹೇಳುವಾಗ ತುಂಬಾ ಗದ್ಗದಿತರಾಗಿದ್ದರು. ಅಣ್ಣನನ್ನು ಕಳೆದುಕೊಂಡ ದುಃಖದ ಛಾಯೆ ಕೂಡ ಎದ್ದು ಕಾಣುತ್ತಿತ್ತು.

ಸಂಧ್ಯಾ ಗಂಡ ಇಷ್ಟೊಂದು ಸೆನ್ಸಿಟಿವ್ ಆಗಿರೋದನ್ನು ಸಹಿಸರು. ಆತ್ಮಾರಾಮ್ ಇರುವಾಗಲೂ ಅವರೆಷ್ಟು ಬಂದು ಹೋಗುತ್ತಿದ್ದರು? ಅವರದೇ ಒಂದು ಪ್ರಪಂಚವಾದರೆ ಮಗ ಆಶುತೋಶ್ನದು ಇನ್ನೊಂದು ಪ್ರಪಂಚ. ಈಗ ಆ ಬಾಂಧವ್ಯವನ್ನು ಹಿಡಿದುಕೊಂಡು ಜೋತಾಡುವುದೇಕೆ? ಗಂಡನತ್ತ ದೃಷ್ಟಿ ಹಾಯಿಸಿದಾಗ ಮುಖದಲ್ಲಿ ಬೇಸರದ ಸುಳಿಯುತಿತ್ತು.

ಅವನು ಹೇಳಿರೋ ಮಾತು, ನೂರಕ್ಕೆ ನೂರು ಅವನು ತೆಗೆದುಕೊಂಡಿರೊ ನಿರ್ಧಾರ. ಅದರಲ್ಲಿ ಬೇರೆಯವರು ಹಸ್ತಕ್ಷೇಪ ನಡೆಸೋದನ್ನು ಅವನು ಇಷ್ಟ ಪಡಲಾರ ಅನಿಸುತ್ತೆ ಗಂಡನ ಕುರಿತಾಗಿ ಅಂದರೂ ನೋಟ ಅಶುತೋಶ್ನ ಕಡೆಗೆ ಹರಿಯಿತು. ಅವನ ಮುಖದಲ್ಲಿ ಅದೇ ಅಚಲವಾದ ಮುಗುಳ್ನಗು, ತನ್ನ ನಿರ್ಧಾರ ಬದಲಾಗದೆನ್ನುವ ಸೂಚನೆಯಂತೆ ಇತ್ತು.

ನೀನು ಪದೇ ಪದೇ ಆ ವಿಷಯವನ್ನು ಅವನ ಮುಂದೆ ಹೇಳೋದು ಬೇಡ. ಅವನದ್ದು ಇನ್ನೂ ಕಲಿಯುತ್ತಿರುವ ವಯಸ್ಸು. ಅವನೇ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಅನುವು ಮಾಡಿಕೊಡು ಮಡದಿಯ ಮೇಲೆ ಆರೋಪ ಹೊರಿಸುವಂತೆ ನುಡಿದಾಗ ಸಂಧ್ಯಾ ಏಕಾಏಕಿ ಭೂಮಿಗಿಳಿದು ಹೋದರು. ಕಣ್ಣುಗಳು ನೀರಿನ ಕೊಳಗಳಾಗುವಂತಾಯಿತು.ನಾನೇನು ಅವನ ತಲೆ ಕೆಡಿಸ್ದೆ ಅನ್ನೊ ತರ ಹೇಳ್ತೀದ್ದೀರಿ. ಅದು ಅವನ ಇಷ್ಟಾಂತ ಅವನೇ ಹೇಳಿದ ಮೇಲೆ ನನ್ಮೇಲೇಕೆ ಆರೋಪ? ಸೆರಗಿನಿಂದ ಮೂಗು ಒರೆಸಿಕೊಂಡರು.

ಆಂಟೀ, ನೀವ್ಯಾಕೆ ಅಷ್ಟೊಂದು ಸೆನ್ಸಿಟಿವ್ ಆಗ್ತೀರಾ? ನಾನು ನನ್ನ ಸ್ವಂತ ನಿರ್ಧಾರರಕ್ಕೆ ಬಂದ ಮೇಲೆಯೇ ನಿಮ್ಮಗಳ ಜೊತೆಗೆ ಹೇಳಿದೆ ಅವನೆಂದಾಗ ಸಂಧ್ಯಾ ಸಿಟ್ಟಿನಿಂದ ಎದ್ದು ಹೋದರು. ಜೀವನ್ರಾಮ್ಗೆ ಸರಿ ಕಾಣಲಿಲ್ಲ.ಬಿಡ್ತು ಅಶು. ಅವಳು ಹೇಳಿದನ್ನೆಲ್ಲಾ ತಲೆಗೆ ತಂದ್ಕೊಬೇಡ. ನಿನ್ನ ನಿರ್ಧಾರ ತುಂಬಾ ಆತುರದ್ದು ಅನ್ಸುತ್ತೆ. ಇನ್ನೊಮ್ಮೆ ಆಲೋಚಿಸಿ ನೋಡು.

ನಿನ್ನನ್ನು ಡಾಕ್ಟರೇಟ್ ಮಾಡುವ ಉದ್ದೇಶದಿಂದ ಹೇಳ್ತಾ ಇಲ್ಲ. ದೇಶ ಸೇವೆ ಮಾಡೋದಕ್ಕೂ ಪುಣ್ಯ ಮಾಡಬೇಕು. ಈ ನಿನ್ನ ತಂದೆಯನ್ನೇ ನೋಡು, ಅವನ ಹೆಸರು ಶಾಶ್ವತವಾಗಿ ಉಳಿಯಿತು ಉದ್ವೇಗದಿಂದ ನುಡಿದಾಗ ಎರಡು ಹನಿ ನೀರು ಕಣ್ಣುಗಳನ್ನು ತುಂಬಿದ್ದು ಅರಿವಾಗಲೇ ಇಲ್ಲ. ಅವನದ್ದು ಅದೇ ನಿರ್ಲಿಪ್ತ ಭಾವ ತಲೆ ತಗ್ಗಿಸಿ ಕುಳಿತ್ತಿದ್ದ.

ಹಿರಿಯರ ಮಾತೇ ವೇದವಾಕ್ಯವೆಂದು ತಿಳಿದವನು. ಕೆಲಸದಾಕೆ ಅನ್ನುವ ಅನಾಧಾರವಿಲ್ಲದೆ ಹರಿಣಮ್ಮ ಹೇಳಿದ ಮಾತುಗಳನ್ನು ಚಾಚು ತಪ್ಪದೆ ಪಾಲಿಸುತ್ತಿದ್ದ. ಈ ರೀತಿ ಬೆಳೆದು ಸ್ವಂತ ನಿರ್ಧಾರ ತೆಗೆದುಕೊಳ್ಳುವಾಗಲೂ ಅವರ ಮಾತು ಮೀರಲಾರ. ಅವರಿಗೂ ಅದನೋ ಮಮತೆ. ಸಂಬಂಧಗಳ ಅಂತರವನ್ನು ಕೇವಲ ಹಣ, ಅಂತಸ್ತುಗಳಿಂದ ಅಳೆಯಲಾರರು. ಅನಾಥ ಹುಡುಗನೆಂದು ಕನಿಕರ ಮಿತಿ ಮೀರಿದಾಗ ಬಹಳ ನಯವಾಗಿಯೇ ಮಾತನಾಡಿ ಅವನನ್ನು ದಾರಿಗೆ ತಂದಿದ್ದರು.

ವರ್ಷಕೊಮ್ಮೆ ಬರುವ ಆತ್ಮರಾಮ್ ಜೊತೆಗೆ ಆತ ಕಳೆಯುತ್ತಿದ್ದುದೇ ಅಪರೂಪ. ಅವರಾಗಿಯೇ ಜಭರ್ದಸ್ತಿಕೆಯಿಂದ ಅವನನ್ನು ಕರೆದುಕೊಂಡು ಸಂಬಂಧಿಕರ ಮನೆಗೆ ಹೋಗಿ ಬರುತ್ತಿದ್ದುದುಂಟು. ಅದನೆಲ್ಲಾ ತನ್ನ ಮಡದಿಯ ತಾಯಿ ಮತ್ತು ತಂದೆಯನ್ನು ನೋಡಿ ಅಲ್ಲಿಯೇ ಒಂದೆರಡು ದಿನ ಠಿಕಾಣಿ ಹೂಡುವಾಗ ಅಶುತೋಶ್ಗೆ ಎಲ್ಲೆಲ್ಲಿದ ಸಂಭ್ರಮ.

- ಅನು ಬೆಳ್ಳೆ.

0 comments:

Post a Comment