ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಪ್ರಾದೇಶಿಕ ಸುದ್ದಿ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಅನಧಿಕೃತ ನಿರ್ಮಾಣಗಳು ತಲೆಯೆತ್ತಿದ್ದು ಈ ನಿರ್ಮಾಣಗಳಿಗೆ ಸಂಬಂಧಪಟ್ಟವರಿಂದ ಅನುಮತಿ ಪಡೆಯಲಾಗಿದೆಯೇ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಪ್ರಶ್ನಿಸಿದರು. ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೇಂದ್ರ ನೆರವಿನ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಅನುಷ್ಠಾನ ಮತ್ಗು ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.


ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಮನಸ್ಸಿಗೆ ಬಂದಂತೆ ವಿವಿಧ ಸಂಘಟನೆಗಳ ಬಸ್ಸು ತಂಗುದಾಣಗಳು ನಿರ್ಮಾಣವಾಗುತ್ತಿದ್ದು, ಇಂತಹ ನಿರ್ಮಾಣಗಳಿಗೆ ಪರವಾನಿಗೆ ನೀಡಿದವರು ಯಾರು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಬಯಸಿದ ಸಂಸದರು, ಈ ಸಂಬಂಧ ತಕ್ಷಣವೇ ತಮಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ವರದಿ ಸಲ್ಲಿಸಲು ಸೂಚಿಸಿದರು.
ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯಡಿ ಜಿಲ್ಲಾ ಮುಖ್ಯ ರಸ್ತೆ ವ್ಯಾಪ್ತಿಗೆ 88 ಕಿ.ಮೀ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ ಅನುದಾನ ಬಿಡುಗಡೆಯಾಗಿದ್ದು, ಬೆಳ್ತಂಗಡಿಗೆ 6 ರಸ್ತೆ, ಬಂಟ್ವಾಳಕ್ಕೆ 2, ಮಂಗಳೂರಿಗೆ ಒಂದು, ಪುತ್ತೂರಿಗೆ ಒಂದು ರಸ್ತೆ ಮಂಜೂರಾಗಿದೆ. ಪುತ್ತೂರು ಮತ್ತು ಸುಳ್ಯದ ರಸ್ತೆಗಳ ಗುಂಡಿ ಮುಚ್ಚಲಾಗಿದೆ. 58 ಕಿ.ಮೀ ವ್ಯಾಪ್ತಿಯಲ್ಲಿ ಡಾಮರೀಕರಣ ಮಾಡಲಾಗಿದೆ ಎಂದು ಅಧಿಕಾರಿಗಳು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಮಾಹಿತಿ ನೀಡಿದರು.
ಮೆಸ್ಕಾಂ ಮಳೆಗಾಲದ ಕಾರ್ಯಾಚರಣೆಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.ಇಲಾಖೆಯಲ್ಲಿ ಸಾಧನ ಸಲಕರಣೆಗಳು ಸಾಕಷ್ಟಿದ್ದು, ಸಿಬ್ಬಂದಿ ಕೊರತೆ ಇರುವ ಅಂಶವನ್ನು ಸಂಸದರ ಗಮನಕ್ಕೆ ಅಧಿಕಾರಿಗಳು ತಂದರು.
ನಗರದಲ್ಲಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಬಗ್ಗೆ, ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ ಎಚ್ ಒ ಅವರು ಸಭೆಗೆ ಸಮಗ್ರ ಮಾಹಿತಿ ನೀಡಿದರು. ಗ್ರಾಮೀಣ ನೀರು ಸರಬರಾಜಿಗೆ 56.42 ಕೋಟಿ ರೂ. ಬಿಡುಗಡೆಯಾಗಿದ್ದು 1442 ಕಾಮಗಾರಿಗಳನ್ನು ಆರಂಭಿಸಲಾಗಿದ್ದು, 867 ಕಾಮಗಾರಿಗಳು ಸಂಪೂರ್ಣವಾಗಿದೆ. ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಜಲಮೂಲಗಳ ಸದ್ಬಳಕೆ ಮಾಡಲಾಗಿದ್ದು, 48 ಚೆಕ್ ಡ್ಯಾಮ್ ಗಳಲ್ಲಿ 14 ಡ್ಯಾಮ್ ಕಾಮಗಾರಿಗಳು ಮುಗಿದಿವೆ. ಮಳವೂರು ಡ್ಯಾಮ್ ನಿಂದ ತೊಂದರೆಗೀಡಾದವರಿಗೆ ತಕ್ಷಣವೇ ಸೂಕ್ತ ಪರಿಹಾರ ನೀಡಲು ಜಿಲ್ಲಾಧಿಕಾರಿಗಳು, ಸಿಇಒ ಮತ್ತು ಜಿಲ್ಲಾ ಪಂಚಾಯತ್ ಎಕ್ಸಿಕ್ಯುಟಿವ್ ಇಂಜಿನಿಯರ್ ಜೊತೆಯಾಗಿ ಹೋಗಿ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಯಿಂದ ಪರಿಹಾರ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ಸಂಸದರು ಸೂಚಿಸಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ತಾಲೂಕು ವಾರು ಪ್ರಗತಿ ಪರಿಶೀಲಿಸಿದ ಸಂಸದರು ಕಳೆದ ಸಾಲಿನಲ್ಲಿ ನಡೆಸಿದ ಕಾಮಗಾರಿ ಹಾಗೂ ವೆಚ್ಚದ ಬಗ್ಗೆ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದರು.
ಹಣದುರುಪಯೋಗ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ಕಾರ್ಯನಿರ್ವಹಣಾಧಿಕಾರಿಗಳು ಸಮಗ್ರ ವರದಿಯನ್ನು ತಮಗೆ ನೀಡುವಂತೆ ಸಂಸದರು ಸೂಚಿಸಿದರು. ಸಣ್ಣ ಮತ್ತು ಅತಿಸಣ್ಣ ರೈತರೆಂದು ಗುರುತಿಸಿಕೊಂಡಿರುವ ಬಗ್ಗೆ ಕಂದಾಯ ಇಲಾಖೆಯಿಂದ ದೃಢೀಕೃತ ಸರ್ವೇ ಪಟ್ಟಿ ಸಲ್ಲಿಸಲು ಯಾವುದೇ ತೊಂದರೆಯಿಲ್ಲ. ರೈತರ ಪಟ್ಟಿ ಸಿದ್ಧವಿದೆ ಎಂದು ತಾಲೂಕು ಸಭೆಯಲ್ಲಿ ಉಪಸ್ಥಿತರಿದ್ದ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಹೇಳಿದರು. ಇಂದಿರಾ ಆವಾಸ್ ಯೋಜನೆ ಪ್ರಗತಿ ಬಗ್ಗೆ, ಸಾಮಾಜಿಕ ಸುರಕ್ಷಾ ಯೋಜನೆಗಳ ಬಗ್ಗೆ ಸಂಸದರು ಅಧಿಕಾರಿಗಳಿಂದ ಮಾಹಿತಿ ಪಡೆದರು.
ಕೆ ಆರ್ ಡಿ ಸಿ ಎಲ್ ಸುಳ್ಯ, ಪುತ್ತೂರಿನಲ್ಲಿ ನಡೆಸುತ್ತಿರುವ ರಸ್ತೆ ಕಾಮಗಾರಿ ಅಭಿವೃದ್ಧಿಯ ಪರಿಶೀಲನೆ ನಡೆಸಿದ ಸಂಸದರು, ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿಕೊಂಡು ಜನ ಹಿತವನ್ನು ಗಮನದಲ್ಲಿರಿಸಿ ಕಾಮಗಾರಿ ಮುಗಿಸದಿದ್ದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕರಾದ ಸೀತಮ್ಮ, ಉಪಕಾರ್ಯದರ್ಶಿ ಶಿವರಾಮೇಗೌಡ, ಸಹಾಯಕ ಕಾರ್ಯದರ್ಶಿ ಶಿವರಾಮಯ್ಯ ಅವರು ಉಪಸ್ಥಿತರಿದ್ದರು.

0 comments:

Post a Comment