ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...
9:20 PM

'ರತ್ರಣ'ದ ಮಂಜತ್ತೆ

Posted by ekanasu

ಸಾಹಿತ್ಯ

ಕಥೆ

ಆಯಿತೇ ರತ್ರಣ ಮುಗಿಯಿತೇ,ಸುರುವೇ,ಕೇಳುತ್ತ ಜಾತ್ರೆಯ ದಾರಿಯಲ್ಲಿ ಮಂಜತ್ತೆಯ ಮೋಟಾರು ಇಗೋ ಹೇಗೆ ಓಡುತ್ತಿದೆ!ಓಡುತ್ತದೆ ಎನ್ನುವ ಹಾಗೆಯೂ ಇಲ್ಲ,ನಡೆಯುತ್ತದೆ ಎನ್ನುವ ಹಾಗೆಯೂ ಇಲ್ಲ.ಅದರ ನಡುವಿನ ಒಂದು ಶಬ್ದ ಉಂಟೋ?...ಎಲ್ಲುಂಟು?ಜಾತ್ರೆಯಲ್ಲಿ ಮತ್ತೆಲ್ಲ ಸಿಗುತ್ತದೆ-ಇದೊಂದು ಇಲ್ಲ.ಅವರ ಜೊತೆ ನಡೆಯ ಬೇಕಾದರೆ ನಾಲ್ಕು ಹೆಜ್ಜೆ ಸೈಕಲ್ ಕುಂಟು ಕುಣಿದು ಅವರ ಸಮಸಮ ಮುಟ್ಟಿಕೊಂಡು ಸ್ವಲ್ಪ ನಡೆದು ಮತ್ತೆ ಹಿಂದೆ ಬಿದ್ದು ಮತ್ತೆ ಕುಪ್ಪಳಿಕೆ ಓಟ ಹೂಡಬೇಕು.ಸುಲಭವಲ್ಲವೋ ಇದು...ಅಮ್ಮ ಹೇಳಿದ್ದಳಲ್ಲ,ಹಾಗೆಯೇ ಆಯಿತು!ಯಾವಾಗಲೂ ಅದು ಹೇಗೆ ಅಮ್ಮ ಹೇಳಿದ ಹಾಗೆಯೇ ಆಗುತ್ತದೆ ಅಂತ!


ದಾರಿ ಸವೆಯತೊಡಗಿತು.ಜಾತ್ರೆಯ ದಾರಿ.ಪೀಂಪ್ರಿಯ ದಾರಿ.ಸದ್ದಿನ ದಾರಿ.ಗದ್ದಲದ ದಾರಿ.ಸಾಲದ್ದಕ್ಕೆ ಅಲ್ಲಿಂದ ಇಲ್ಲಿಂದ ಎಲ್ಲೆಲ್ಲಿಂದೆಲ್ಲ ಪೋಂಪೋಂ.ಇವರಿಗೆಲ್ಲ ನಡೆದುಕೊಂಡು ಬರಲಿಕ್ಕೆ ಏನು ಧಾಡಿ?ನಡೆಯುವವರಿಗೂ ಬಿಡುವುದಿಲ್ಲ.ನಡುವೆ ಬಂದಾಯಿತು.ಪೋಂ ಪೋಂ ಎಂದಾಯಿತು.ಹಬ್ಬಕ್ಕೆ ಹೋಗುವ ಅವಸರ ಇವರಿಗೆ ಮಾತ್ರವಾ?...ನಾವೂ ಎಲ್ಲ ಅಲ್ಲಿಗೇ ಹೊರಟವರೇ...ಇವರ ಹಾಗೇ...ಎನ್ನುವುದರೊಳಗೆ ಢುರ್ರ್ರ ದಾಟಿ ಹೋಗಿಯಾಯಿತು...!


ಹೋಗುವುದು ಹಬ್ಬಕ್ಕಾದರೂ ಈ ಸಲ ಹೋಗುವುದು ಮಂಜತ್ತೆಯೊಡನೆ.ಎಷ್ಟೊತ್ತಿಗೆ ಯಾರೊಟ್ಟಿಗಾದರೂ ಮಾತು ಸಿಗಿಸಿಕೊಂಡಿರುವವರು,ಈಗ ಸಂಪೂರ್ಣ ನಮ್ಮೊಡನೆಯೇ ಇದ್ದಾರೆ.
ಮಂಜತ್ತೆ,ನೀವೇಕೆ ಹೂ ಮುಡಿಯುವುದಿಲ್ಲ?
ನಿಮ್ಮ ತಲೆ ಬೋಳೇಕೆ?
ನೀವೇಕೆ ರವಕೆ ಹಾಕುವುದಿಲ್ಲ?
ಏನೇ ಕೇಳಿದರೂ ಅವರ ಉತ್ತರ ಒಂದೇ.ನನಗೆ ಗಂಡ ಇಲ್ಲವಲ್ಲ ಅದಕ್ಕೇ!

ಅರರೆ ನಮಗೇನೀಗ ಗಂಡ ಉಂಟಾ?
ಹಾಗಲ್ಲ...ನನ್ನ ಗಂಡ ಸತ್ತು ಹೋದರಲ್ಲವೇ?ನಾನೀಗ ಹೂ ಮುಡಿದರೆ ಸತ್ತ ಗಂಡ ಏನು ತಿಳಿದುಕೊಳ್ಳುತ್ತಾರೆ,ತಾನಿಲ್ಲದಿದ್ದರೂ ಭೂ ಲೋಕದೊಳಗೆ ಎಷ್ಟು ಖುಷಿಯಲ್ಲಿದ್ದಾಳಲ್ಲ ತನ್ನ ಹೆಂಡತಿ ಅಂತ ಬೇಜಾರು ಮಾಡಿಕೊಳ್ಳುತ್ತಾರೆ.
ಆದರೆ ಮಂಜತ್ತೆ ನೀವು ರವಿಕೆಯನ್ನಾದರೂ ಹಾಕಿಕೊಳ್ಳಿ.ಇಸಿ.ಸೆರಗಿನ ಚಡಿಯಲ್ಲಿ ಎಲ್ಲ ಕಾಣುತ್ತದೆ.
ಅಯ್ಯೋ,ಈ ಹೆಣ್ಣಿಗೆ ಬಜೆ ಬೆಣ್ಣೆ ಹಾಕಿದ್ದು ಯಾರಪ್ಪಾ ದೇವರೇ-ಮಂಜತ್ತೆ ಜೋರಾಗಿ ನಗುವರು.ಸನಿಹದಲ್ಲಿ ದಾಟಿ ಹೋಗುವವರನ್ನು ಕರೆದು,'ನೀವು ಯಾರೆಂದು ಕೇಳದೆಯೇ,ಈ ಮಗು ಹೇಳುವುದು ಕೇಳಿ ಎಂದು ಹೇಳಿ ಅವರೂ ನಕ್ಕು ತಾನೂ ನಕ್ಕು ಯಾರ ಬಾಯಾದರೂ ಬೇಕೂ,ಮಕ್ಕಳ ಬಾಯಿಬೇಡ ಅನ್ನುತ್ತಾರಲ್ಲ,ಸುಳ್ಳಾ ಎಂದು ಮತ್ತಷ್ಟು ನಗೆ ದಾಟಿಸುವರು.

ಸರೋಜಕ್ಕನಿಗೆ ಮರ್ಯಾದೆ ಹೆಚ್ಚು.ಅವಳಿಗೆ ಅದೇ ಹೋದಂತಾಗಿದೆ.ಹಾಗೆಲ್ಲಾ ಯಾರಾದರೂ ಕೇಳುತ್ತಾರಾ?ಇವಳಿಗೆ ಅಷ್ಟೂ ಮಂಡೆ ಬೇಡವಾ?ಸೆರಗಿನ ಚಡಿಯಲ್ಲಿ ಇಣುಕಲು ಯಾಕೆ ಹೋಗಬೇಕು.ಹಾಗಾದರೆ ನಾವೂ ನೋಡುತ್ತೇವಲ್ಲ ಮಂಜತ್ತೆಯನ್ನು.ಒಂದು ದಿನ ಹಾಗೆ ಕೇಳಿದ್ದುಂಟಾ?ಇದು ಶುದ್ಧ ಹಡೆಯಾಗುತ್ತದೆ ನೋಡಿ ಮಂಜತ್ತೆ,ದೊಡ್ಡವಳಾದ ಮೇಲೆ ...ಅಮ್ಮನ ಹತ್ತಿರ ಹೇಳಿ ಸರೀ ಬುದ್ಧಿ ಕಲಿಸಿ.ಮಂಜತ್ತೆಗೆ ಮತ್ತಷ್ಟು ನಗು.ಇಷ್ಟು ನಗಲಾದರೂ ಅಷ್ಟು ಸಿಟ್ಟು ಮಾಡಲಿಕ್ಕಾದರೂ ಏನುಂಟು ಎಂದೇ ತಿಳಿಯದೆ ಹೋಯಿತಲ್ಲಾ!(ನಾನೇನು ಇಣುಕಲಿಲ್ಲ.ಅದೇ ಕಂಡದ್ದು.ನಾನೂ ಹೇಳುತ್ತೇನೆ ಹೀಗಂತ ಅಮ್ಮನೊಡನೆ.ಅಮ್ಮ ನಿನಗೆ ಮಾತ್ರ ಅಮ್ಮವಾ?)

ಮಂಜತ್ತೆ ನಿಮ್ಮ ಗಂಡ ಸತ್ತದ್ದು ಹೇಗೆ?
ಆಯುಷ್ಯ ತೀರಿತು,ಸತ್ತರು.
ಸಾಯುವುದು ಹೇಗೆ?
ಹೇಗೆಂತ ಹೇಳುವುದು?ನಾಲಗೆ ಹೊರಚಾಚುವುದು,ಕಣ್ಣು ಮೇಲೆ ಮುಖನೆ ಮಾಡುವುದು,ಮಲಗುವುದು.ಮತ್ತೆ ಏಳುವುದೇ ಅಲ್ಲ!ಬಿಡು.ಯಾಕೆ ಈಗ ಆ ವಿಚಾರ.ಹಬ್ಬಕ್ಕೆ ಹೋಗುವ ಜನ ನೋಡು!
ಹಾ!ಮಂಜತ್ತೆಯ ಬೆನ್ನು ಇನ್ನಷ್ಟು ಸರ್ತವಾಗಿದೆ.ಇನ್ನಷ್ಟು ಸರ್ತವಾದರೆ ಮೋಟಾರಿನ ಸ್ಪೀಡು ಇನ್ನಷ್ಟು ಜಾಸ್ತಿಯಾಯಿತೆಂದೇ ಲೆಕ್ಕ.ಹಿಂದಿರುವ ಸೈಕಲುಗಳೂ ಅದಕ್ಕೆ ತಕ್ಕನೆ ಸ್ಪೀಡು ಹೆಚ್ಚಿಸಿಕೊಳ್ಳಬೇಕು.ನಾ ಮುಂದೆ.ನಿನಗಿಂತ ನಾ ಮುಂದೆ...ಯಾರು ಮುಂದೆ ನೋಡುವ?ಸ್ಪರ್ಧೆ ಈಗ.
'ಅದ್ಯಾರ್ ಜೊಟ್ಟುಪ್ಯಾದರಲ್ದ!ಹ್ವಾಯ್ ಉಪೈದ್ರೇ.ರತ್ರಣ ಆಯ್ತಾ ಯಂತದೇ!?'-ಉಪಾಧ್ಯರು ನಿಂತು ಮಂಜತ್ತೆಯನ್ನೂ ಜೊತೆಗಾರರನ್ನೂ ಒಂದೇ ಬೀಸಿಗೆ ನೋಡಿ,ನೋಡುವುದರಲ್ಲಿಯೇ ಕನಿಕರ ನಕ್ಕು'ಯೆಷ್ಟೊತ್ತಿಗ್ ಮುಟ್ಟತ್ ಮಾರಾಯ್ರೆ ನಿಮ್ ಗ್ಗಾಡಿ!ರತ್ರಣ ಆ...ಗ,...ಬೀಸ ಹೋರೆ'-ಇದೆಲ್ಲ ಯಾರು ಎಂಬಂತೆ ನೋಡುತ್ತ ನಿಂತ ಅವರ ತಲೆಯ ಯಾವ ಕಡೆ ನೋಡಿದರೂ ಜೊಟ್ಟೇ ಇಲ್ಲ;ಜೊಟ್ಟುಪಾದ್ಯರಂತೆ!ಅಯ್ಯ ಇವರೊಬ್ಬರು ಮಂಜತ್ತೆ.

ಪುಣ್ಯ!ಮಂಜತ್ತೆ ಅವರೊಡನೆ ಮಾತಿಗೆ ನಿಲ್ಲಲಿಲ್ಲ.ನಿಲ್ಲುವಂತಿಲ್ಲ ಇನ್ನು ಒಂದು ಕ್ಷಣವೂ ಎಂಬಂತೆ ಉಪಾಧ್ಯರೇ 'ಬೀಸ ಹೋರೆ' ಎಂದು ಇನ್ನುಳಿದ ಜಾತ್ರೆಯ ದಾರಿಯುದ್ದಕ್ಕೂ ಗಾಳಿಯಲ್ಲಿಯೇ ಫೋರ್ಸಾಗಿ ಸ್ವತಾ ಕೈ ಬೀಸಿ ಎಷ್ಟು ಬೀಸೆಂತ ತೋರಿಸಿದ್ದಾರಲ್ಲ.ಬನ್ನಿ ಮಕ್ಕಳೆ ಬನ್ನಿ ಬನ್ನಿ,ಹೀಗೆ ಅಜ್ಜಿ ಕುಪ್ಪರಂತೆ ಹೋದರೆ ಆಗ ಎನ್ನುತ್ತ ವೇಗ ದುಮ್ಮಡಿ ಜಾಸ್ತಿ ಮಾಡಿದರು ಮಂಜತ್ತೆ.ಅಯ್ಯೊ ಕಾಲು ಒಂದು ನೋವೂ...ಹೇಳುವಂತಿಲ್ಲ.


... ನಾಳೆಗೆ...

- ವೈದೇಹಿ.

0 comments:

Post a Comment