ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 11
ಕೊನೆಗೆ ಅವಳ ಅಭಿಪ್ರಾಯವನ್ನು ಒಪ್ಪಿಕೊಂಡು ಬೆಂಗಳೂರಿಗೆ ಹೋಗಿ ಬರುವ ನಿರ್ಧಾರವನ್ನು ಗಟ್ಟಿಗೊಳಿಸಿದ.ಮನೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವ ಅಗತ್ಯವಿಲ್ಲವೆನಿಸಿತು ಮನಸ್ವಿತಾಳಿಗೆ. ಆದರೆ ಎರಡು ದಿನ ಮನೆಯಿಂದ ದೂರ ಉಳಿದರೆ ಏನು ಎಂತೆಲ್ಲಾ ಪ್ರಶ್ನೆಗಳು ಮೂಡುವುದು ಸಹಜ. ಅದಕ್ಕೊಂದು ಸರಿಯಾದ ಕಾರಣವನ್ನು ಹುಡುಕುವುದು ಅಗತ್ಯವಿತ್ತು. ಎರಡು ದಿನ ಪ್ರವಾಸಕ್ಕೆ ಹೋಗೋ ಆಲೋಚನೆಯಿದೆ ಭಾಮಿನಿಯವರು ತರಕಾರಿ ಹೆಚ್ಚುವುದನ್ನು ನಿಲ್ಲಿಸಿ ಮಗಳತ್ತ ಸಂಶಯದ ದೃಷ್ಟಿ ಬೀರಿದರು.


ನೀನು ಎರಡು ದಿನ ಕೆಲಸಕ್ಕೆ ರಜಾ ಹಾಕಿದ್ರೆ ಲೋನ್ ಕಟ್ಟುವುದಕ್ಕೆ ಆಗುತ್ತಾ? ತನ್ನ ಭವಿಷ್ಯದ ಕತ್ತಲೆಯ ಬಗ್ಗೆ ಮಾತನಾಡದವರು ತಮ್ಮ ಸ್ವಾರ್ಥವನ್ನೇ ಎತ್ತಿ ಹಿಡಿದಾಗ ನೊಂದುಕೊಂಡಳು.


ಆಫೀಸ್ನವರೆಲ್ಲಾ ಸೇರಿಯೇ ಹೋಗ್ತಾ ಇರೋದು ಚುಟುಕಾಗಿ ಹೇಳಿದ ಮೇಲೆ ನಿನ್ನಿಷ್ಟ ಅಂದುಕೊಂಡು ತಮ್ಮ ಕೆಲಸ ಮುಂದುವರಿಸಿದರು.
ಮನೆಗಾಗಿರೋ ಸಾಲದ ಹೊರೆ ಇನ್ನಷ್ಟಿತ್ತು. ಅದನ್ನು ತೀರಿಸಲು ಎಷ್ಟು ಸಮಯವಿದೆಯಾ? ಅನಿಸಿದರೂ ಆ ಕೆಲಸ ಆಗಬೇಕಾದಾಗ ಕಷ್ಟವಾದರೂ ಒಪ್ಪಿಕೊಂಡಿದ್ದಳು. ತಂದೆಯ ಬಳಿ ಪ್ರತ್ಯೇಕ ಹೇಳಬೇಕೆನಿಸಲಿಲ್ಲ. ಮಗಳ ಮೇಲೆ ಮೊದಲೇ ಬೇಸರವಿತ್ತು ಅವರಿಗೆ. ನರಸಿಂಹ ಬಂದು ಏನೇನೊ ಹೊಲಸು ಹೇಳಿದ ಮೇಲೆ ಮಗಳ ಮೇಲಿನ ಮಮಕಾರ ನಶಿಸಿಹೋಗಿತ್ತು. ಹಾಗೆಂತ ಜರೆಯಲಾರರು. ತಾವು ತೋಡಿದ ಗುಂಡಿಯನ್ನು ಮುಚ್ಚುತ್ತಿರುವುದು ಅವಳು. ಹಾಗಾಗಿ ಸಮಾಜದಲ್ಲಿ ತಲೆಯೆತ್ತಿ ನಿಲ್ಲುವಂತಾಗಿತ್ತು.

ಡಿಗ್ರಿ ಪಾಸು ಮಾಡಿಯೂ ಮುಸುರೆ ತೊಳೆಯುವ ಅದೆಷ್ಟು ಹುಡುಗಿಯರಿಗಿಂತ ತಮ್ಮ ಮಗಳು ಎಷ್ಟೊ ಮೇಲು ಅನಿಸಿ ಹೆಮ್ಮೆಯಾಗುತ್ತಿತ್ತು. ಆದರೂ ತನ್ನ ಮಾತಿಗೆ ಅವಳು ಪ್ರತಿಯೊಂದಕ್ಕೂ ವಿರೋಧವೆನ್ನುವಾಗ ಸಹಿಸಲಾರರು. ಮಾತನಾಡಿದರೆ ಎಲ್ಲಿ ಜಗಳ ಆರಂಭವಾಗುತ್ತದೊ ಎಂದು ಹೆದರಿ ಬಾಯಿ ಮುಚ್ಚಿ ಕುಳಿತುಕೊಳ್ಳುವರು. ಭಾಮಿನಿಯವರು ಅಷ್ಟೆ ಮಗಳ ವಿಷಯಕ್ಕೆ ಅನಗತ್ಯ ತಲೆ ಹಾಕರು.
ಬೆಂಗಳೂರಿಗೆ ಹೊರಟು ನಿಂತಾಗಲೂ ಮಾತನಾಡಲಾರರು. ನಿಖಿಲ್ ತನಗಾಗಿ ಸೀಟ್ ರಿಸರ್ವ್ ಮಾಡಿದ್ದ. ಬೆಂಗಳೂರಿನಲ್ಲೂ ಅಷ್ಟೆ ಸುವ್ಯವಸ್ಥಿತವಾದ ಕೋಣೆಯನ್ನು ಗೊತ್ತು ಪಡಿಸಿದ್ದ. ಸುಮಾರು ಸಂಜೆಯ ಹೊತ್ತಿಗೆ ಅಶುತೋಶ್ ಬರುತ್ತಾನೆನ್ನುವುದು ತಿಳಿಯಿತು. ಅಲ್ಲಿಯವರೆಗೂ ಕೋಣೆ ಬಿಟ್ಟು ಕದಲಿರಲಿಲ್ಲ.

ಓದುವುದಕ್ಕೆ ಅಷ್ಟು ಪುಸ್ತಕಗಳನ್ನು ತೆಗೆದುಕೊಂಡು ಹೋಗಿದ್ದು ಉತ್ತಮವೆನಿಸಿತು. ಸಂಜೆಯ ಹೊತ್ತು ಬಾಗಿಲು ಬಡಿದಿದ್ದ ನಿಖಿಲ್. ಬಾಗಿಲು ತೆರೆದಾಗ ಅವನ ಜೊತೆಗೆ ಬಿಳಿ ಚಹರೆಯ ಆರಡಿ ಎತ್ತರದ ವ್ಯಕ್ತಿ ನಿಂತಿರುವುದು ಕಂಡಿತು. ಆತನ ಮುಖದಲ್ಲಿ ಮುಗುಳ್ನುಗುವಿತ್ತು. ನಿಖಿಲ್ ತನ್ನ ಬಗ್ಗೆ ಹೇಳಿರುವ ಕಾರಣ ಆತ ತನ್ನ ಬಗ್ಗೆ ಆತ್ಮೀಯತೆ ತೋರಿಸಿರುವುದು ಸ್ಪಷ್ಟವಾಯಿತು.

ಬನ್ನಿ, ಇಲ್ಲೆ ಎಲ್ಲಾದ್ರೂ ಗಾರ್ಡ್ ನ ರೆಸ್ಟೋರಕ್ಕೆ ಹೋಗೋಣ ಅಶುತೋಶ್ನ ಆಹ್ವಾನಕ್ಕೆ ತಲೆಯಲುಗಿಸಿದಳು. ಕೋಣೆ ಬಾಗಿಲು ಹಾಕಿ ಕೀಯನ್ನು ತಂದು ರಿಸ್ಪೆಶ್ನ್ ಕೌಂಟರ್ನಲ್ಲಿ ಕೊಟ್ಟಾಗ ಇಬ್ಬರೂ ಕಾರಿನ ಬಳಿ ತನಗಾಗಿ ಕಾಯುವುದು ಕಾಣಿಸಿತು. ಅವಳು ಕಾರಿನ ಬಳಿ ಬರುವಷ್ಟರಲ್ಲಿ ಕಾರಿನ ಬಾಗಿಲು ತೆರೆದು, ಬನ್ನಿ ಎಂದು ಆಹ್ವಾನಿಸಿದ ಅಶುತೋಶ್. ಕಾರಿನ ಒಳಗಿನ ತಂಪು ಹವೆ ಹಿತಕರವಾಗಿತ್ತು.

ಅತೀ ಆಡಂಬರದ ಒಂದು ಡ್ರೈವ್ ಇನ್ ರೆಸ್ಟೊರೆಂಟ್ಗೆ ಬರುವಾಗ ಶ್ರೀಮಂತರದೇ ದಿಂಡು, ಬಗೆ ಬಗೆಯ ಕಾರುಗಳು ಅಲ್ಲಿ ನಿಂತಿರುವುದು ಕಾಣಿಸಿತು. ತಾನು ಉಟ್ಟಿದ್ದ ಸೀರೆಯನ್ನು ಉಳಿದವರ ಡ್ರೆಸ್ ಜೊತೆಗೆ ಆನಲೈಸ್ ಮಾಡಿಕೊಂಡಾಗ ಅವರಿಗಿಂತ ತಾನೇನು ಕಡಿಮೆಯಿಲ್ಲವೆನಿಸಿತು. ಕಾರಿನ ಬಳಿ ಬೇರರ್ ಬಂದು ನಿಂತಾಗ, ಮೈಸೂರ್ ಮಸಾಲೆ ದೋಸೆಗೆ ಆರ್ಡರ್ ಮಾಡಿ ಮುಸುಂಬಿ ಜ್ಯೂಸ್ ತರುವಂತೆ ಹೇಳಿದ ನಿಖಿಲ್. ಆ ಹೊತ್ತಿಗೆ ಹೊಟ್ಟೆ ಕೂಡ ತಾಳ ಹಾಕುತ್ತಿತ್ತು. ಬಸ್ಸು ಪ್ರಯಾಣದ ಜೊಂಪು ಬೇರೆ ಇಳಿದಿರಲಿಲ್ಲ.

ಮೇಡಂ, ನಮ್ಮ ವ್ಯವಹಾರಕ್ಕೆ ನಿಮ್ಮನ್ನು ಮಧ್ಯವರ್ತಿಯಾಗಿ ಆಯ್ಕೆ ಮಾಡಿರುವುದು ನನಗಿಷ್ಟ ಆಗ್ಲಿಲ್ಲ ಕುಚೋದ್ಯಕ್ಕೆ ಹೇಳಿದನೊ ಇಲ್ಲ, ಶಿವಪೂಜೆಯಲ್ಲಿ ಕರಡಿ ಅನ್ನುವಂತೆ ತನ್ನನ್ನು ಪರೋಕ್ಷವಾಗಿ ನಿಂದಿಸುತ್ತಿರುವನೊ? ತಿಳಿಯದೆ ಆಶುತೋಶ್ ಕಡೆಗೆ ನೋಡಿದಳು. ಅವನ ಮುಖದಲ್ಲಿ ನಗುವಿರುವುದನ್ನು ಕಂಡು ಗಂಭೀರವಾದ ಮಾತಲ್ಲವೆಂದು ತಿಳಿಯಿತು.

ದಯವಿಟ್ಟು ತಪ್ಪು ತಿಳ್ಕೊಳ್ಬೇಡಿ. ಅವನು ಯಾವತ್ತೂ ಹಾಗೇ, ತಮಾಷೆ ಮಾಡ್ತಾ ಇರ್ತಾನೆ. ಈಗ ವ್ಯವಹಾರದ ವಿಷಯ ಮಾತನಾಡು ಅಂದ್ರೆ ಮನೇನ ಸೇಲ್ ಮಾಡ್ತಾ ಇಲ್ಲ ಅಂತಿದ್ದಾನೆ. ಏನನ್ಬೇಕು ನೀವೇ ಹೇಳಿ ಕಂಪ್ಲೆಂಟ್ ಹೇಳಿದ ನಿಖಿಲ್ನನ್ನು ಓರೆ ಕಣ್ಣಿಂದ ನೋಡಿದ ಅಶುತೋಶ್.
ಮೇಡಂ, ನಿಖಿಲ್ ಎಂಟರ್ಪ್ರೈಸಸ್ನ ಹಿಂದೆ ನಿಮ್ಮ ಕಾಲ್ಗುಣ, ಚಾಣಾಕ್ಷತೆಯನ್ನು ತುಂಬಾ ತುಂಬಾ ಹೊಗಳ್ತಾ ಇದ್ದಾನೆ. ಅದಕ್ಕಿಂತಲೂ ಮಿಗಿಲಾದುದು ಏನಾದ್ರೂ ಇದೆಯೊ, ಏನೊ? ಕಣ್ಣು ಮಿಟುಕಿಸಿ ಗೆಳೆಯನತ್ತ ನೋಡಿದವನನ್ನು ಗಮನಿಸಿದವಳೆ ತುಟಿಗಳನ್ನು ಕಚ್ಚಿ ಹಿಡಿದು ಮುಖ ಕೆಂಪಾಗುವುದನ್ನು ತಡೆದುಕೊಂಡಳು.

ನೊ, ನೊ... ಹಾಗೇನಿಲ್ಲ ಮಾತುಗಳು ತಡವರಿಸಿದಾಗ ಗೊಳ್ಳನೆ ನಕ್ಕ.
ಕ್ಷಮಿಸಿ, ನಾನು ನಿಮ್ಮ ಮೇಲೆ ಆರೋಪ ಹೊರಿಸ್ತಾ ಇಲ್ಲ. ನನ್ನ ಗೆಳೆಯನನ್ನು ಪ್ರಶ್ನಿಸ್ತಾ ಇದ್ದೇನೆ. ಅವನು ಮಾತೇ ಆಡ್ತಾ ಇಲ್ಲ. ಮೌನಂ ಫಟಿಂಗ ಲಕ್ಷಣ ಅಂತಾರಲ್ಲ?

ಓರೆಯಾಗಿ ಹಿಂದೆ ಕುಳಿತಿದ್ದವನನ್ನು ಗಮನಿಸಿದ. ಮುಖದ ಬಣ್ಣ ಬದಲಾಯಿತು. ತನ್ನ ಬಗ್ಗೆ ಆಡುವಾಗ ಸುಮ್ಮನೆ ಕುಳಿತಿರುವ ನಿಖಿಲ್ ಮೇಲೆ ಅಸಹ್ಯ ಸಿಟ್ಟು ಬಂತಾದರೂ ಅದನ್ನು ತೋರಿಸಿಕೊಳ್ಳುವ ಸಮಯವಲ್ಲವೆನಿಸಿತು.
ಬೇರರ್ ಮೂರು ಪ್ಲೇಟು ತಂದಿತ್ತಾಗ ಕಾರಿನ ಬಾಗಿಲು ತೆರೆದು, ತೆಗೆದುಕೊಂಡರು. ತಿಂಡಿ ತಿನ್ನುತ್ತಿರುವಾಗಲೇ ವ್ಯವಹಾರದ ಮಾತು ಹೊರಗೆ ಬಂತು.

ಆ ಮನೆಯನ್ನು ನೋಡಿ ಒಂದು ನಾಮಿನಲ್ ರೇಟ್ ಫಿಕ್ಸ್ ಮಾಡಿಬಿಡಿ. ನಾಮಿನಲಾಗಿ ಸ್ಕ್ವಾರ್ ಫೀಟಿಗೆ ನಾಲ್ಕುಸಾವಿರ ಇದೆ. ಮತ್ತೆ ನಿಮಗೆ ಬಿಟ್ಟಿರೋದು ಅಂದಾಗ ನಿಖಿಲ್ ಮನಸ್ವಿತಾಳತ್ತ ನೋಡಿದ.
ಸರಿ, ಮನೆ ನೋಡದೆ ಹೇಳೋಕಾಗೋದಿಲ್ಲ. ವ್ಯವಹಾರ ಇಲ್ಲಿ ಮುಖ್ಯ ಅಲ್ಲ. ನಮ್ಮ ತಂದೆ ಕಾಲದಲ್ಲಿದ್ದ ಸಂಬಂಧ ಉಳಿಬೇಕು, ಮುಂದುವರಿಬೇಕು ಅಶುತೋಶ್ನ ಕಣ್ಣುಗಳಲ್ಲಿ ಎರಡು ಹನಿ ನೀರು ಕಾಣಿಸಿತು.

ಮನೆಯ ಒಂದೊಂದು ಮೂಲೆಯೂ ನೆನಪಿನ ನಾವೆಯನ್ನು ಮನದಲ್ಲಿ ತೇಲಿಸಿ, ಹತ್ತು ವರ್ಷಗಳ ಹಿಂದಕ್ಕೆ ತಳ್ಳಿತು. ಹೆತ್ತವಳ ಮುಖದ ನೆನಪಿಲ್ಲದೆ ಕೆಲಸದಾಕೆಯ ಆಸರೆಯಲ್ಲಿ ಬೆಳೆದು, ಬದುಕು ಅರ್ಥ ಪಡೆಯುತ್ತಿರುವಾಗ ಭಯೋತ್ಪಾದಕರ ಗುಂಡಿನೇಟಿಗೆ ಬಲಿಯಾಗಿದ್ದರು ಮೇಜರ್ ಆತ್ಮಾರಾಮ್.

ನಾಳೆಗೆ...

- ಅನು ಬೆಳ್ಳೆ.

1 comments:

ashok said...

super articles

Post a Comment