ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಸಾಹಿತ್ಯ

ದೈನಂದಿನ ಕಾದಂಬರಿ : ಭಾಗ - 15
ಅಧ್ಯಾಯ 5


ನಿಖಿಲ್ ಹಾಗೂ ತನ್ನ ಬಗ್ಗೆ ಅದೇನೊ ಕಲ್ಪಿಸಿಕೊಂಡಂತ್ತಿದ್ದ ಅಶುತೋಶನ ದೃಷ್ಟಿ ಮಂದವಾಗಿ ಆ ತೆಳು ಪರದೆಯಲ್ಲಿ ಕಾಶ್ಮೀರದ ಮಂಜು ಮುಸುಕಿದ ಹಾದಿಯಂತೆ ಕಂಡಿತ್ತು. ಆ ಹಿಮದ ಪರದೆಯ ಹಿಂದೆ ಮನಮೋಹಕವಾಗಿ ನಗುತ್ತಾ ನಿಂತಿರುತ್ತಿದ್ದ ಕನ್ಯೆಯೇ ಮನಸ್ವಿತಾಳೇನೊ ಏನೊ ಭ್ರಮೆಗೆ ಪುಳಕಿತನನ್ನಾಗಿಸಿತು. ವಿಪರೀತ ಕೊರೆಯುವ ಮಂಜು ಮುಚ್ಚಿದ ಮಣ್ಣಿನ ಗುಂಡಿಗಳಲ್ಲಿ ಕುಳಿತು ಕಷ್ಟಗಳನ್ನು ಅನುಭವಿಸುವ ಆ ಸ್ಥಿತಿಯಲ್ಲಿಯೂ ಎಲ್ಲವನ್ನೂ ಮರೆತು ಹೋಗುವ ಸಂದರ್ಭದಲ್ಲಿ ತಾಯಿಯಷ್ಟೆ ಪ್ರೀತಿಯನುಣಬಡಿಸಿದ ಹರಿಣಮ್ಮ ಕಾಣುತ್ತಿದ್ದುದು ಸಾಂತ್ವನವೆನಿಸುತ್ತಿತ್ತು.


ತಂದೆ ಸತ್ತಾಗ ತಾನು ತೆಗೆದುಕೊಂಡ ನಿರ್ಧಾರವನ್ನು ಕೇಳಿಯೆ ಮೌನವಾಗಿ ಅಳುತ್ತ ಮನೆಯ ಮೂಲೆ ಮೂಲೆಯಲ್ಲಿ ಓಡಾಡುತ್ತಿದ್ದ ಹರಿಣಮ್ಮ ಕೊನೆಯ ದಿನಗಳಲ್ಲಿ ಯಾರಿಗೂ ಹೇಳದೆ ಒಂದು ಹಳೆಯ ಟ್ರಂಕು ಹಿಡಿದು ಹೋದಾಗ ಅನತಿ ದೂರದವರೆಗೆ ಅವರನ್ನೇ ಹಿಂಬಾಲಿಸಿದ್ದ.


ಆದರೆ ಎಲ್ಲಿ ದುಃಖದ ಕಟ್ಟೆಯೊಡೆದು ಹೃದಯ ಒಡೆದು ಹೋಗುತ್ತದೋ ಎಂದು ತಿಳಿದು ಹಿಂತುರುಗದೆ, ಅವರು ಹೊರಟಾಗ ಕೈ ಮುಂದಕ್ಕೆ ಚಾಚಿ `ನಿಲ್ಲುವಂತೆ' ಸೂಚಿಸಿದರೂ ಬಾಯಿಯಿಂದ ಸದ್ದು ಹೊರಡದೆ ಕಣ್ಣೀರು ಮಿಡಿದಿದ್ದ. ಆಗ ಸಾಂತ್ವನಕ್ಕೆ ನಿಂತವರು ಆತ್ಮಾರಾಮ್ನ ತಮ್ಮ ಜೀವನರಾಮ್.ಹೆಂಡತಿಯ ಜೊತೆಗೆ ಬಿಸಿ ಬಿಸಿ ಮಾತುಕತೆಯಾಗಿ ಸಂಧ್ಯಾ ಹೊರನಡೆದಾಗ ಅಲ್ಲಿಯೇ ನಿಂತು ಅವನನ್ನು ತುಂಬಾ ಒತ್ತಾಯಿಸಿ ಮನಸ್ಸು ಬದಲಾಯಿಸಲು ಪ್ರಯತ್ನಿಸಿ ಸೋತರು.

ಹಿಡಿದ ಹಠ ಬಿಡದ ತ್ರಿವಿಕ್ರಮನಂತಿದ್ದ. ಒಂದೆರಡು ದಿನಗಳಲ್ಲಿಯೇ ಮನೆಗೆ ಬೀಗ ಜಡಿದು ಡಿಫೆನ್ಸ್ಗೆ ಅರ್ಜಿ ಸಲ್ಲಿಸಿದ್ದ. ಎಲ್ಲಾ ಪರೀಕ್ಷೆಗಳಲ್ಲಿಯೂ ಸುಲಭವಾಗಿ ಪಾಸು ಮಾಡಿ ಕೆಲಸ ದೊರೆತ ನಂತರವೇ ಆ ಮನೆಗೆ ಹಿಂತಿರುಗಿದ್ದು.ಅಶುತೋಶ್ ಬಂದಿರುವ ಸುದ್ದಿ ತಿಳಿದು ಸಂಧ್ಯಾರನ್ನು ಹೊರಡಿಸಿದ ಜೀವನರಾಮ್ ವಿಷಯ ತಿಳಿಸದೇ ಅಲ್ಲಿಗೆ ಬಂದಾಗ ಸಂಧ್ಯಾರ ಮುಖ ಗಂಟಾಗಿತ್ತು.


ಇನ್ನು ನನ್ನ ಮೇಲೆ ಏನೇನೋ ಆರೋಪ ಹೊರಿಸುವಂತಿದ್ದರೆ ನಾನು ಬರಲಾರೆ. ನೀವು ಹೋಗಿಬನ್ನಿ ಗೇಟಿನ ಬಳಿಯೇ ನಿಂತು ಗಂಡನಿಗೆಂದಾಗ ಅವರು ಮಡದಿಯನ್ನು ಸಾಂತ್ವನಿಸಿ ಮನೆಗೆ ಕರೆದರು. ಸಂಧ್ಯಾರ ಕಣ್ಣು ಆ ಮನೆಯ ಸಮಸ್ತವನ್ನು ಬೆಲೆ ಕಟ್ಟುತ್ತಿತ್ತು.
ಈ ಮನೆಯನ್ನು ಏನು ಮಾಡ್ತಾನಂತೆ ಕೇಳಿ ನೋಡಿ ಮೆಲ್ಲನೆ ಗಂಡನನ್ನು ತಿವಿದರು ಸಂಧ್ಯಾ. ಜೀವನರಾಮ್ಗೆ ಅದು ರುಚಿಸದ ವಿಷಯ. ಚಕಾರವೆತ್ತದೆ ಕುಳಿತರು.

ಗಂಡನ ಮೇಲೆ ಸಿಟ್ಟಾದರು. ಮನಸ್ಸಿಗೆ ಬಂದಿದ್ದನ್ನು ಹತ್ತಿಕ್ಕಿಕೊಳ್ಳದ ಹೆಣ್ಣು ಅವರು ತಾವಾಗಿಯೇ ಆಡಿದರು.
ಈ ಮನೆಯನ್ನು ಏನ್ಮಾಡೋಕೂಂತ ನಿರ್ಧರಿಸಿದ್ದೀಯಾ? ಹೀಗೆ ಬಿಟ್ರೆ ಹಾಳು ಬಿದ್ದು ಹೋಗುತ್ತೆ ಆತಂಕಕ್ಕಿಂತಲೂ ಆಶಯವಿತ್ತು ಅವರ ಮಾತಿನಲ್ಲಿ.
ಸದ್ಯಕ್ಕಂತು ಏನೂ ನಿರ್ಧರಿಸಿಲ್ಲ ಮುಂದೆ ನೋಡ್ಬೇಕು ಎಲ್ಲವನ್ನೂ ಕಳೆದುಕೊಂಡ ನಿರ್ಭಾಗ್ಯತನದಲ್ಲಿ ಭಂಡ ಧೈರ್ಯವಿತ್ತು ಆಗ ಅವನಲ್ಲಿ. ಮೊದಲ ಬಾರಿಗೆ ಆಕೆಯೆ ಬಳಿ ಆ ರೀತಿ ಮಾತನಾಡಿದ. ಜೀವನ್ರಾಮ್ ಒಳಗೊಳಗೆ ನಕ್ಕರು.

ಸುಮ್ಮನೆ ಹಾಳಾಗುವುದು ಬೇಡ. ಯಾರಿಗಾದರೂ ಬಾಡಿಗೆಗೆ ಕೊಡೋದು ಒಳ್ಳೆಯದಲ್ವೆ? ಅವನ ಇಂಗಿತವೇನೆಂದು ತಿಳಿಯುವ ಕುತೂಹಲವಿತ್ತು ಸೋಲು ಒಪ್ಪಿಕೊಳ್ಳದ ಹೆಣ್ಣಿನಲ್ಲಿ.
ತಂದೆಯ ನೆನಪಿಗೆ ಉಳಿಸಿಕೊಳ್ಳುವ ಇರಾದೆಯಿದೆ. ಹಾಗಾಗಿ ಹಣದ ಅವಶ್ಯಕತೆಗೆ ಬಾಡಿಗೆಗಾಗಲಿ, ಮಾರುವುದಾಗಲಿ ಮಾಡಲಾರೆ ಅವನ ಮಾತುಗಳನ್ನು ಕೇಳಿ ಜೀವನರಾಮ್ ಹೆಮ್ಮೆ ಪಟ್ಟರು.


ದೇಶಸೇವೆಗೆ ಟೊಂಕಕಟ್ಟಿ ನಿಂತ ಆತ್ಮರಾಮ್ನೆ ಆ ಮಾತುಗಳನ್ನು ಆಡಿದಂತಾಯಿತು. ಬಹಳ ಸಂತೋಷದಿಂದ ಅವನನ್ನೇ ನೋಡುತ್ತಾ ನಿಂತರು.
ನಾಳೆ ಕಾಶ್ಮೀರಕ್ಕೆ ಹೊರಡ್ತಾ ಇದ್ದೀನಿ. ಮತ್ತೆ ಟ್ರೈನಿಂಗ್ಗೆ ಬೆಂಗಳೂರಿಗೆ ಬರಬಹುದೇನೊ? ಅಭಿಮಾನದಿಂದ ಹೇಳಿ ಕೊಂಡಾಗ ಕರುಳಲ್ಲಿ ಕತ್ತರಿ ಆಡಿಸಿದಂತಾಯಿತು. ಕಾಶ್ಮೀರದ ಕಣಿವೆ ಸ್ವರ್ಗದ ಬಾಗಿಲು ಎಂದು ತಿಳಿದಿತ್ತು. ಆದರೂ ಅಲ್ಲಿ ನಡೆಯುವ ಭೀಕರ ನರಹತ್ಯೆ, ಗಡಿಯಲ್ಲಿ ನಡೆಯುವ ಗುಂಡಿನ ಕಾಳಗ ಎಲ್ಲವೂ ಕಣ್ಣ ಮುಂದೆ ಸುಳಿದಂತಾಗಿ ವೇದನೆಯಾಯಿತು. ಅವನನ್ನು ತಡೆ ಹಿಡಿಯುವ ಯಾವ ತಂತ್ರಗಳು ಫಲಿಸಲಿಲ್ಲ. ಅಣ್ಣನಂತೆ ದೇಶ ಸೇವೆಯಿಂದ ಕೀರ್ತಿ ಗಳಿಸಲಿ ಎಂದು ಮನಸಾರೆ ಆಶೀರ್ವದಿಸಿದರು.

ಜಾಗ್ರತೆಯಲ್ಲಿರು, ನೀನು ದೂರ ಹೋದ ಮಾತ್ರಕ್ಕೆ ಸಂಬಂಧಗಳನ್ನು ಕಡಿದುಕೊಳ್ಳುವುದರಲ್ಲಿ ನ್ಯಾಯವಿಲ್ಲ. ಊರಿಗೆ ಬಂದಾಗಲೆಲ್ಲಾ ಮನೆಗೆ ಬಾ. ಫೋನಾದರೂ ಮಾಡುತ್ತಿರು ಅತೀವ ವೇದನೆಯಿಂದ ಹೇಳಿದವರೇ ಅಲ್ಲಿ ಒಂದು ಕ್ಷಣವೂ ನಿಲ್ಲದೆ ಮನೆಗೆ ಹಿಂತಿರುಗಿದರು. ಎಳೆಯ ಮಗು ತಾಯಿಯ ಮುಖವನ್ನು ಸರಿಯಾಗಿ ಕಾಣದ ವಯಸ್ಸು. ಎದೆಹಾಲಿಗಾಗಿ ಅಳುತ್ತಿದ್ದಾಗ ಸಂಧ್ಯಾರನ್ನು ಮುಂದೆ ಮಾಡಿ ಮಗುವನ್ನು ಎತ್ತಿಕೊ ಅಂದಾಗ ಹರಿಣಮ್ಮನನ್ನು ಕರೆದು, ಮಗುವಿನ ಬಾಯಿಗೆ ಬಾಟಲಿ ತುರುಕಿಸಿ ಎಂದು ಉದ್ಧಟತನದಿಂದ ಹೇಳಿದ್ದು ಜೀವನರಾಮ್ಗೆ ಇನ್ನೂ ಅಚ್ಚಳಿಯದೆ ನಿಂತು ಹೋಗಿತ್ತು. ತನಗೆ ಮಕ್ಕಳ ಭಾಗ್ಯವಿಲ್ಲವೆನ್ನುವ ಈರ್ಷೆಯ ಆ ಹೆಣ್ಣಿನಲ್ಲಿ ಸಾವಿರವಿತ್ತು. ಆವತ್ತೇ ಆ ಮಗುವನ್ನು ಆರೈಕೆ ಮಾಡಿದ್ದರೆ ಇವತ್ತು 'ತನಗಿಲ್ಲಾ' ಅನ್ನುವ ಕೊರಗನ್ನು ದಾಟಬಹುದಿತ್ತು. ಮಡದಿಯ ಮಾತು ಕೇಳಿ ಆತ್ಮರಾಮ ತಮ್ಮನಿಗೆ ಹೇಳಿದ್ದರು.

... ಮುಂದುವರಿಯುವುದು...

- ಅನು ಬೆಳ್ಳೆ.

0 comments:

Post a Comment