ಈ ಕನಸು

ಇದು ವರ್ಷದ ಕನಸು

ನಮ್ಮ ಸಹೋದರ ಸಂಸ್ಥೆ ವಾರ್ತೆ.ಕಾಂ ನಲ್ಲಿ ಇತ್ತೀಚಿನ ಸುದ್ದಿ/ವಿಶೇಷ ವರದಿಗಳನ್ನು ವೀಕ್ಷಿಸಬಹುದು...

ಅಂಕಣ

ಅದೊಂದು ಶಾಕ್ ನ್ಯೂಸ್... ಹೌದು... ಅದನ್ನು ಊಹಿಸಿರಲೇ ಇಲ್ಲ... ಗೋಪಿ ಟೀಚರ್ ಇನ್ನಿಲ್ಲ ಎಂಬ ಮಾತು ಕೇಳಿದೊಡನೆ ಅರಿವಿಲ್ಲದಂತೆಯೇ ಎರಡು ಹನಿ ನೀರು ಕಣ್ಣಿಂದ ಜಿನುಗಿತು. ಮದುವೆ ಮನೆ. ಊಟದ ಪಂಕ್ತಿಯಲ್ಲಿ ನಾನೂ ನನ್ನ ಅಜ್ಜನೂ ಜೊತೆಗಿದ್ದೆವು. ಅಜ್ಜ ಎಂದರೆ ಸಂಬಂಧದಲ್ಲಿ ಅಜ್ಜ. ಅವರು ನನ್ನ ಮಾಸ್ಟ್ರು ಆಗಿದ್ದರು. ಆದರೆ ಗುರು ಎಂಬ ಗೌರವೂ ಅಜ್ಜ ಎಂಬ ಸಲಿಗೆ ಎರಡೂ ಅವರಮೇಲಿದೆ. ಆ ಕಾರಣಕ್ಕೆ ಅವರು ನನಗೆ ತುಂಬಾ ಆತ್ಮೀಯರು. ವಯಸ್ಸಿನಲ್ಲಿ ಹಿರಿಯರು. ಸರಿ ಸುಮಾರು ನನ್ನ ಅಮ್ಮನ ವಯಸ್ಸಿಗೆ ಚೂರು ಜಾಸ್ತಿಯೇ ಆಗಿರಬಹುದು. ಕಲಾವಿದ. ಕುಸುರಿ ಕೆತ್ತನೆಯಲ್ಲಿ ಎತ್ತಿದ ಕೈ. ಪೆನ್ನು ಸಂಗ್ರಹ ಅವರಲ್ಲಿತ್ತು.ಹಳೆಯ ಪರಿಕರಗಳನ್ನು ಸಂಗ್ರಹಿಸುವುದು ಅವರ ಹವ್ಯಾಸ. ಅವರೇ ಹೇಳುವಂತೆ ನಾನೂ ಅವರೂ ಇಬ್ಬರೂ ಹುಚ್ಚರಂತೆ. ಅವರಿಗೂ ಕುಸುರಿ ಕೆತ್ತನೆ, ಸಂಗ್ರಹ, ಛಾಯಾಗ್ರಹಣ, ಏನಾದರೊಂದು ಹೊಸತನ್ನು ಹುಡುಕುವುದು, ವಿಭಿನ್ನ ರೀತಿಯಲ್ಲಿ ಯೋಚನೆ ಮಾಡುವುದು, ಚಾರಣ ಹೀಗೆ ಹಲವು ಆಸಕ್ತಿ. ನನಗೂ ಅವೆಲ್ಲವೂ ಆಸಕ್ತಿಯ ವಿಚಾರ. ಈ ಕಾರಣಕ್ಕಾಗಿಯೇ ನಾವಿಬ್ಬರೂ ಹುಚ್ಚರಂತೆ!. ಈ ಅಜ್ಜನ ಪತ್ನಿ ನನಗೆ ಟೀಚರ್. ಒಂದನೇ ತರಗತಿಯಿಂದ ಏಳನೇ ತರಗತಿಯ ತನಕವೂ ಇವರು ನನಗೆ ಪಾಠ ಹೇಳಿಕೊಟ್ಟವರು. ನಾನವರನ್ನು ಸಂಬೋಧಿಸುತ್ತಿದ್ದುದು ಅಜ್ಜಿ ಟೀಚರ್ ಎಂದಾಗಿತ್ತು.!

ನನ್ನಜ್ಜ ನಮ್ಮಲ್ಲಿಗೆ ಖಾಯಂ ಭೇಟಿನೀಡುತ್ತಿದ್ದರು. ನಮ್ಮ ಮನೆಗೂ ಅವರ ಮನೆಗೂ ಅದೊಂದು ರೀತಿಯ ಅವಿನಾಭಾವ ಸಂಬಂಧ. ಆತ್ಮೀಯತೆ. ಈ ಅಜ್ಜ ಮರದ ಕೆತ್ತನೆ ಕೆಲಸ ಮಾಡುತ್ತಾರೆ. ಇದು ಅವರ ಹವ್ಯಾಸಗಳಲ್ಲೊಂದು. ಇದೀಗ ಗೆರಟೆಗಳಲ್ಲಿ ವಿವಿಧ ಆಕೃತಿಗಳನ್ನು ಮಾಡಿ ಸೈ ಎನಿಸಿಕೊಂಡವರು. ಮೊನ್ನೆ ಮೊನ್ನೆ ಮಾವನ ಮಗನ ಮದುವೆಯ ದಿನ ಜೊತೆಗೆ ಕುಳಿತು ಊಟಮಾಡುತ್ತಿದ್ದಾಗ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದೆವು. ಗೋಪಿ ಟೀಚರ್ ನಮ್ಮ ಶಾಲೆಯಲ್ಲಿ ಟೀಚರ್ ಆಗಿದ್ದವರು. ನನಗೆ ಟೀಚರ್ ಅಲ್ಲದಿದ್ದರೂ ನನ್ನಕ್ಕ ಅರುಣನಿಗೆ ಅತ್ಯಂತ ಪ್ರಿಯ ಟೀಚರ್. ನನಗೆ ನೀರು ಕೊಟ್ಟ ಪುಣ್ಯಾದಿಗೆತ್ತಿ. ಅತ್ಯಂತ ಪ್ರೀತಿ. ಆ ದಿನಗಳಲ್ಲೇ ಅವರು ಅಜ್ಜಿ ಅಜ್ಜಿಯಾಗಿ ಕಾಣುತ್ತಿದ್ದರು. ಇದೀಗ ಅವರಿಲ್ಲ ಎಂದಾಗ ಎಂತಕೋ ಮನಸ್ಸು ಭಾರವಾಗುತ್ತಿದೆ.

ಅಜ್ಜ ಸಿಕ್ಕಿದೊಡನೆ ಹಲವು ವಿಚಾರಗಳು ಕೆಲವೇ ನಿಮಿಷಗಳಲ್ಲಿ ಹಾದು ಹೋದವು. ಅಲ್ಲಿ ವೀರೋಜಿ ಮಾಸ್ಟರ್ ಬಗೆಗಿನ ಮಾತು, ಸರ್ವೇಶ್ವರ ಮಾಸ್ಟ್ರು, ನಾರಾಯಣ ಮಾಸ್ಟ್ರು, ಬಲ್ಲಾಳ್ ಸಾರ್, ಕುಸುಮಾ ಟೀಚರ್ ಎಲ್ಲಾ ಬಂದು ಹೋದರು. ನನಾಗ ಎರಡನೇ ತರಗತಿ. ನಮಗೆ ವಿಜ್ಞಾನ ಪಾಠವಿತ್ತು. ಅದು ಕಾಸರಗೋಡು ಜಿಲ್ಲೆಯ ಆದೂರು ಸರಕಾರಿ ಶಾಲೆ. ಮಾವಿನ ಮರದ ಬುಡವೇ ನಮ್ಮ ಪಾಠದ ಕ್ಲಾಸ್ ರೂಂ!.


ಮಾವಿನ ಮರದ ಬುಡದಲ್ಲಿ ಮರದ ಕುಚರ್ಿಯಿಟ್ಟು ನಾರಾಯಣ ಮಾಸ್ಟ್ರು ಪಾಠ ಆರಂಭಿಸುತ್ತಾರೆ. ಅದಾಗ ಗಂಟೆ 11 ದಾಟುತ್ತಿತ್ತು. ಇತ್ತ ಅಲ್ಲೇ ಪಕ್ಕದಲ್ಲಿರುವ ಮುಳಿ ಶೆಡ್ ( ಅಂದರೆ ನಮ್ಮ ಕ್ಲಾಸ್ ರೂಂ )ನಲ್ಲಿ ಮಧ್ಯಾಹ್ನ ಬಿಸಿಯೂಟದ ಹೆಸರುಕಾಳು ಪದಾರ್ಥಕ್ಕೆ ಒಗ್ಗರಣೆ ಬೀಳುತ್ತಿರುತ್ತದೆ. ಬೆಳ್ಳುಳ್ಳಿ - ನೀರುಳ್ಳಿ ಎಲ್ಲಾ ಸೇರಿಸಿದ ಆ ಪದಾರ್ಥ ನಿಜಕ್ಕೂ ರುಚಿಯಾಗಿರುತ್ತಿತ್ತು. ಕಾಲುವಾರ್ಷಿಕ ಪರೀಕ್ಷೆ. ಅದರಲ್ಲೊಂದು ಪ್ರಶ್ನೆ. "ಕೀಟ ತಿನ್ನುವ ಗಿಡವಿದೆಯೇ?" ನನ್ನ ಉತ್ತರ ಹೌದು.

ಆದರೆ ನಾರಾಯಣ ಮಾಸ್ಟ್ರು ನನ್ನ ಉತ್ತರವನ್ನು ತಪ್ಪೆಂದು ಮೌಲ್ಯಮಾಪನ ಮಾಡಿದ್ದರು. ನಾನವರಿಗೆ ಪಾಠಪುಸ್ತಕ ತೋರಿಸಿ ಪಠ್ಯದಲ್ಲಿ ಹೀಗಿದೆಯಲ್ಲವೇ...? ಎಂದು ಕೇಳಿದ್ದೆ... ಸದಾ ಕಣ್ಣು ಕೆಂಪಗೆ ಮಾಡಿರುವ ಮಾಸ್ಟ್ರು ಮತ್ತೂ ಕಣ್ಣು ಕೆಂಪಗೆ ಮಾಡಿದರು. ವಿಧಿಯಿಲ್ಲದೆ ತಪ್ಪು ತಿದ್ದಿಕೊಂಡು ಅಂಕ ನೀಡಿದರು... ವೀರೋಜಿ ಮಾಸ್ಟ್ರು ಬರ್ತಾ ಇದ್ದಿದ್ದು ಆಕಾಶ ನೀಲಿ ಬಣ್ಣದ ಲ್ಯಾಂಬಿ ಸ್ಕೂಟರ್ ನಲ್ಲಿ. ಶಾಲೆಯ ಗೋಡೆಗೆ ತಾಗಿಕೊಂಡಂತೇ ಅವರ ಸ್ಕೂಟರ್ ನಿಲ್ಲುತ್ತಿರುತ್ತದೆ. ಇಡೀ ಶಾಲೆಗೆ ವಾಹನದಲ್ಲಿ ಬರ್ತಾ ಇದ್ದಿದ್ದು ಅವರು ಮಾತ್ರ. ನಮಗೆಲ್ಲ ಅದರ ಮೇಲೆ ಹತ್ತುವ ತವಕ.ಅದೊಂದು ದಿನ ನಾನು ಸ್ಟ್ಯಾಂಡ್ ಹಾಕಿಟ್ಟಿದ್ದ ಆ ಸ್ಕೂಟರ್ ಮೇಲೇರಿದೆ. ಸ್ಟ್ಯಾಂಡ್ ತನ್ನಿಂದ ತಾನಾಗಿಯೇ ಕಳಚಿಕೊಂಡಿತು... ನನ್ನ ಕಥೆ...ದೇವರಿಗೇ ಪ್ರಿಯ!

ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ - ಭಾನುವಾರ ಶಾಲೆಗೆ ರಜೆ. ಶುಕ್ರವಾರ ಬಂತೆಂದರೆ ನಮಗೆಲ್ಲಾ ಅದೇನೋ ಒಂದು ರೀತಿಯ ಸಂತೋಷ. ಎರಡು ದಿನಗಳ ರಜೆಯ ಮಜಾ ಅನುಭವಿಸುವ ತಯಾರಿ... ಕುಟ್ಯಪ್ಪನ ಅಂಗಡಿಯಿಂದ ಕಡಲೆ ತರುವುದು, ಪ್ರಭುವಿನ ಅಂಗಡಿಗೆ ಹೋಗಿ ಸಮಾನು ಕೊಂಡು ಕೊಳ್ಳುವುದು ಎಲ್ಲವೂ ನಡೆಯುತ್ತದೆ...ಊಟ ಮುಗಿಯುವ ಹೊತ್ತಿಗೆ ಕಳೆದು ಹೋದ ಬಾಲ್ಯದ ದಿನಗಳ ಮೆಲುಕುಹಾಕಿಯಾಗಿತ್ತು... ಮುಗಿದರೂ ಮುಗಿಯದ ಕಥೆಗಳು ಅವು... ಇನ್ನೂ ಅನೇಕ ವಿಚಾರಗಳು ಮಾತನಾಡಲಿದ್ದವು. ನನಗೆ ಕೆಲಸದ ಒತ್ತಡ. ಬಿಡುವು ಮಾಡಿ ಬರುವ ತಾಕೀತು ಅಜ್ಜನದ್ದು. ಸರಿ ಎಂದು ಹೇಳಿ ಕಾರು ಹತ್ತಿದೆ...

ಎಚ್.ಕೆ.

1 comments:

ANU said...

NICE MEMORABLE MOMENT HARISH ANNA

Post a Comment